ನಟನೆಯಲ್ಲಿ ಪೂರ್ಣತ್ವ ಕಂಡು ಕೊಂಡ ಅಪೂರ್ವ ಜೀವಿ ನಟ ಸಂಜೀವ್ ಕುಮಾರ್

  ಸಂಜೀವ್ ಕುಮಾರ್ ಭಾರತ ಚಿತ್ರರಂಗದ ಶ್ರೇಷ್ಠ ಸಹಜ ನಟರಾಗಿದ್ದು ಅಲ್ಪ ಚಿತ್ರಗಳಲ್ಲಿ ನಟಿಸಿದ್ದರೂ ತಮ್ಮ ನಟನೆಯಲ್ಲಿ ಪೂರ್ಣತ್ವ ಕಂಡು ಕೊಂಡ ಅಪೂರ್ವ ಜೀವಿಯಾಗಿದ್ದರು.

       ಜುಲೈ ೯,೧೯೩೮ ರಂದು ಗುಜರಾತಿನ ಸೂರತ್ ನಲ್ಲಿ ಜನಿಸಿದ ಇವರ ಮೊದಲ ಹೆಸರು ಹರಿಭಾಯ್ ಜರಿವಾಲಾ. ೧೯೬೦ ರಲ್ಲಿ ತೆರೆ ಕಂಡ ಹಮ್ ಹಿಂದುಸ್ತಾನಿ ಚಿತ್ರದ ಮೂಲಕ ನಟನಾಗಿ ಬಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಿದರೂ ಐದು ವರ್ಷಗಳ ನಂತರ ೧೯೬೫ ರಲ್ಲಿ ತೆರೆ ಕಂಡ ನಿಶಾನ್ ಚಿತ್ರದ ಮೂಲಕ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದರು.

ಇವರು ಎಂತಹ ಸರಳ ಜೀವಿಯಾಗಿದ್ದರೆಂದರೆ ನಾಯಕ ನಟರಾಗಿದ್ದ ಸಮಯದಲ್ಲಿ ಕೂಡ ಚಿತ್ರದಲ್ಲಿ ನಟಿಸಲು ಸಿಟಿ ಬಸ್ ನಲ್ಲಿ ಬರುತ್ತಿದ್ದರು. ಹೀಗೆಯೇ ಒಂದು ದಿನ ಇವರು ಸ್ಟುಡಿಯೋ ಮುಂದೆ ಬಸ್ಸಿನಿಂದ ಇಳಿಯುತ್ತಿದ್ದನ್ನು  ನೋಡಿದ ಇವರ ಜೊತೆ ಚಿತ್ರದಲ್ಲಿ ನಟಿಸುತ್ತಿದ್ದ ನಾಯಕಿ ಕೋಪಗೊಂಡು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರ ಬಳಿ ಹೋಗಿ ಇಂತಹ ವ್ಯಕ್ತಿಯ ಜೊತೆ ನಾನು ನಟಿಸಲು ಸಿದ್ಧವಿಲ್ಲವೆಂದು ಜಗಳವಾಡಿದ್ದನ್ನು ಸ್ವತಃ ಇವರೇ ಟೀವಿಯಲ್ಲಿ ನಡೆಸಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

೧೯೬೮ ರಲ್ಲಿ ಹಿಂದಿ ಚಿತ್ರ ರಂಗದ ದುರಂತ ಚಿತ್ರಗಳ ನಾಯಕ ಎಂದು ಪ್ರಸಿದ್ಧಿ ಪಡೆದಿರುವ ನಟ ದಿಲೀಪ್ ಕುಮಾರ್ ಜೊತೆ ಸಂಘರ್ಷ ಎಂಬ ಚಿತ್ರದಲ್ಲಿ ನಟಿಸಿದ್ದರು. ಆದರೆ ಇವರ ನಟನೆಯ ಪ್ರತಿಭೆಯನ್ನು ಯಾರು ಗುರ್ತಿಸಿ ಲಿಲ್ಲ. ಎರಡು ವರ್ಷಗಳ ನಂತರ ೧೯೭೦ ರಲ್ಲಿ ತೆರೆ ಕಂಡ ಕಿಲೋನಾ ಚಿತ್ರದ ಮೂಲಕ ಪ್ರಸಿದ್ಧ ನಟರಾಗಿ ಗುರ್ತಿಸಿ ಕೊಂಡಿದ್ದರು.

ಚಿತ್ರ ರಂಗ ಪ್ರವೇಶಿಸಿ ೧೦ ವರ್ಷಗಳಲ್ಲಿ ಕೆಲವೇ ಚಿತ್ರಗಳಲ್ಲಿ ನಟಿಸಿದ್ದರೂ ಆಗಲೇ ನಟನೆಯಲ್ಲಿ ಪೂರ್ಣತ್ವವನ್ನು ಪಡೆದಿದ್ದರು. ಸೀತಾ ಔರ್ ಗೀತಾ ಮತ್ತು ಮಂಚಲಿ ಚಿತ್ರದಲ್ಲಿನ ಪಾತ್ರವನ್ನು ನೀರು ಕುಡಿದಷ್ಟು ಲೀಲಾಜಾಲವಾಗಿ ನಟಿಸಿದ್ದರು. ನಂತರ ನಟಿ ಜಯಬಾಧುರಿ ಜೊತೆ  ಕೋಶಿಶ್ ಚಿತ್ರದಲ್ಲಿ ಕಿವುಡ ಮತ್ತು ಮೂಕನ ಪಾತ್ರವನ್ನು ನಿರ್ವಹಿಸಿದ್ದ ರೀತಿ ಅಂದಿನ ದಿನಗಳಲ್ಲಿ ಮನೆ ಮಾತಾಗಿದ್ದರೂ ಅಭಿಮಾನಿಗಳು ಇಂದಿಗೂ ಈ ಪಾತ್ರವನ್ನು ಮರೆತಿಲ್ಲ.

ಇವರು ಪ್ರಸಿದ್ಧ ನಿರ್ದೇಶಕ ಗುಲ್ಜಾರ್ ಅವರ ನೆಚ್ಚಿನ ನಟರಾಗಿದ್ದು ಅಂಧಿ, ಮೌಸಂ,ಅಂಗೂರ್,ನಮೀನ್ ಒಳಗೊಂಡು ಅವರ ನಿರ್ದೇಶನದಲ್ಲಿ ಒಂಬತ್ತು ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದ್ದರು. ಭಾರತ ಚಿತ್ರರಂಗದ ದಾಖಲೆಯ ಸೂಪರ್ ಹಿಟ್ ಶೋಲೆ ಚಿತ್ರದಲ್ಲಿಯ ಠಾಕೂರ್ ಪಾತ್ರ ಪೂರ್ಣ ಚಿತ್ರಕ್ಕೆ ಒಂದು ಕಳೆಯಾಗಿತ್ತು.

ನಯಾ ದಿನ್ ನಯಾ ರಾತ್ರಿ ಚಿತ್ರದಲ್ಲಿ ಒಂಬತ್ತು ವಿಭಿನ್ನ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದರು.

ಅಂದಿನ ಸ್ಟಾರ್ ನಿರ್ದೇಶಕ ಸತ್ಯಜಿತ್ ರೇ ಇವರ ನಟನೆಗೆ ಮನಸೋತು ತಮ್ಮ ಮುಂದಿನ ಚಿತ್ರ ಶತರಂಜ್ ಕಿ.ಕಿಲಾಡಿಯಲ್ಲಿ ಮಹತ್ವ ಪೂರ್ಣ ಪಾತ್ರವನ್ನು ನಿರ್ವಹಿಸಲು ಅವಕಾಶ ಕೊಟ್ಟರು. ಇಟ್ಟ ನಂಬಿಕೆಗೆ ಇವರ ಚಿತ್ರದಲ್ಲಿ ಪಾತ್ರವನ್ನು ಲೀಲಾಜಾಲವಾಗಿ ನಟಿಸಿ ಚಿತ್ರಕ್ಕೆ ಯಶಸ್ಸು ದೊರಕಲು ಕಾರಣವಾಗಿದ್ದರು. ಪ್ರಾರಂಭದ ದಿನಗಳಲ್ಲಿ ಸುಂದರ ಯುವಕನಾಗಿ ಕಾಣುತ್ತಿದ್ದರಿಂದ ಚಿತ್ರಗಳಲ್ಲಿ ಸತ್ವಯುತ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿದ್ದರು. ಎಂತಹ ಕಠಿಣ ಪಾತ್ರವಿದ್ದರೂ ಸಹಜ ನಟನೆಯನ್ನು ಲೀಲಾಜಾಲವಾಗಿ ಮಾಡಿ ತೋರಿಸುತ್ತಿದ್ದ ಇವರ ಕೌಶಲ್ಯಕ್ಕೆ ಎಂತಹವರಾದರು ಬೆರಗಾಗುತ್ತಿದ್ದರು. ಆದರೆ ದುರದೃಷ್ಟವಶಾತ್ ಇಂತಹ ಅಸಾಧಾರಣ ಪ್ರತಿಭೆಯನ್ನು ಹೊಂದಿದ್ದ ಇವರು ತಮ್ಮ ಖಾಸಗಿ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಳ್ಳದೆ ಕುಡಿತದ ಚಟಕ್ಕೆ ದಾಸರಾಗಿ ತಮ್ಮ ತನವನ್ನು ಕಳೆದುಕೊಂಡರು.

ಹಲವು ಸಹ ನಟಿಯರನ್ನು ವಿವಾಹವಾಗಲು ಬಯಸಿದರೂ ಯಾವ ಪ್ರೀತಿಯು ದಕ್ಕದ ಕಾರಣ ಕೇವಲ ೪೭ ನೇ ವಯಸ್ಸಿನಲ್ಲಿ ನವೆಂಬರ್ ೬,೧೯೮೫ ರಂದು ಮುಂಬೈನಲ್ಲಿ ಇಹಲೋಕ ತ್ಯಜಿಸಿದ ಇವರು ತಮ್ಮ ಖಾಸಗಿ ಜೀವನದಲ್ಲಿ ವೃಧ್ಯಾಪವನ್ನು ನೋಡಲಿಲ್ಲ. ಆದರೆ ವೃದ್ಧರಾಗಿ ನಟಿಸಿದ್ದರು ಕೆಲವು ಚಿತ್ರಗಳ ಪಾತ್ರಗಳು ಇಂದಿಗೂ ಜನಮನದಲ್ಲಿ ಉಳಿದುಕೊಂಡಿವೆ. ಈ ರೀತಿಯಾಗಿ ತಮ್ಮ ನಟನೆಯಲ್ಲಿ ಪೂರ್ಣತ್ವವನ್ನು ಕಂಡು ಕೊಂಡ ಅಪೂರ್ವ ಜೀವಿ ಹಿಂದಿ ಚಿತ್ರರಂಗದಲ್ಲಿ ಇನ್ಯಾರು ಇಲ್ಲ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply