ಸುಮಾರು ೮೦ ವರ್ಷಗಳಿಗಿಂತಲೂ ಹೆಚ್ಚು ಇತಿಹಾಸವನ್ನು ಹೊಂದಿರುವ ಕನ್ನಡ ಚಿತ್ರರಂಗ ಮೂಲತಃ ರಂಗಭೂಮಿಯನ್ನು ಅವಲಂಬಿಸುವುದರ ಮೂಲಕ ಪ್ರಾರಂಭವಾಯಿತು. ಇಷ್ಟು ಸುದೀರ್ಘ ಇತಿಹಾಸ ಹೊಂದಿರುವ ಕನ್ನಡ ಚಿತ್ರರಂಗದಲ್ಲಿ ಮುವತ್ತು ವರ್ಷಗಳಿಗೂ ಹೆಚ್ಚು ಕಾಲ ವಿಜ್ರಂಭಿಸಿ ಇಂದಿಗೂ ಸಾಮಾನ್ಯ ಜನರ ಹೃದಯದಲ್ಲಿ ಚಿರಂಜೀವಿಗಳಾಗಿರುವ ಕಲಾವಿದರ ಸಂಖ್ಯೆಗೆ ಕೊನೆಯೆಂಬುದಿಲ್ಲ ಮತ್ತು ವರ್ಣಿಸಲು ಪದಗಳೇ ಸಾಲದಷ್ಟು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದ ಅವರ ಖಾಸಗಿ ಜೀವನವು ಯಾವ ರೀತಿ ಸಾಗುತ್ತಿತ್ತು ಎಂಬುದು ಬಹಳಷ್ಟು ಜನರಿಗೆ ಸರಿಯಾಗಿ ತಿಳಿದಿಲ್ಲ. ಹಳೆಯ ಕಲಾವಿದರ ಖಾಸಗಿ ಜೀವನ ಯಾವ ರೀತಿ ಸಾಗುತ್ತಿತ್ತು ಎಂಬುದನ್ನು ಇಂದಿನ ಪೀಳಿಗೆಗೆ ಮತ್ತು ಮುಂದೆ ಬರುವ ಪೀಳಿಗೆಗೆ ತಿಳಿಸಿಕೊಡುವ ಉದ್ದೇಶದಿಂದ ಈ ಒಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಈ ಪ್ರಯತ್ನ ಫಲಿಸಬೇಕು ಎನ್ನುವ ಉದ್ದೇಶದಿಂದ ಕನ್ನಡ ಚಿತ್ರರಂಗದಲ್ಲಿ ಯಾವ ಹಿನ್ನೆಲೆಯು ಇಲ್ಲದೆ ವಿಶಿಷ್ಟ ನಟನೆಯಿಂದ ನಟ ಭಯಂಕರ, ನಟಭೈರವ ಎಂದೇ ಖ್ಯಾತರಾಗಿರುವ ನಟ ವಜ್ರಮುನಿಯವರ ಖಾಸಗಿ ಜೀವನದ ಬಗ್ಗೆ ನನಗೆ ಸಿಕ್ಕ ಅಲ್ಪ ಮಾಹಿತಿಯ ಆಧಾರದ ಮೇಲೆ ಇಲ್ಲಿ ನನ್ನ ಮೊದಲ ಲೇಖನವನ್ನು ರಚಿಸಿದ್ದೇನೆ.
ವಜ್ರಮುನಿಯವರು ಮೇ ೧೦,೧೯೪೪ ರಂದು ಬೆಂಗಳೂರಿನ ಕನಕನಪಾಳ್ಯದಲ್ಲಿ ಜನಿಸಿದರು. ಇವರ ಮೊದಲ ಹೆಸರು ಸದಾನಂದ ಸಾಗರ. ಇವರ ಕುಟುಂಬದ ಸದಸ್ಯರು ಕುಲ ದೈವ ವಜ್ರಮುನೇಶ್ವರನ ಆರಾಧಕರಾಗಿದ್ದರಿಂದ ಇವರಿಗೆ ವಜ್ರಮುನೇಶ್ವರ ಎಂದು ನಾಮಕರಣ ಮಾಡಿದರು. ಇವರ ತಂದೆ ಹೆಸರು ವಜ್ರಪ್ಪ ಬೆಂಗಳೂರು ನಗರ ಸಭೆ ಕಾರ್ಪೋರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ನನಗೆ ಸಿಕ್ಕ ಮಾಹಿತಿಯಲ್ಲಿ ಇವರ ತಾಯಿಯ ಹೆಸರು ಕಂಡಿಲ್ಲವಾದ್ದರಿಂದ ಇಲ್ಲಿ ಅವರ ಹೆಸರನ್ನು ನಮೂದಿಸಿಲ್ಲ.
ಚಿಕ್ಕಂದಿನಲೂ ಕೀಟಲೆ ಸ್ವಭಾವದ ಹುಡುಗನಾಗಿ ಬೆಳೆದು ಕಾಲೇಜು ಮೆಟ್ಟಿಲೇರಿದರೂ ವಿದ್ಯಾಭ್ಯಾಸದ ಕಡೆ ಗಮನವು ಅಷ್ಟಾಗಿ ಇರಲಿಲ್ಲ. ವಿಧಿ ಲಿಖಿತವೋ, ದೈವ ನಿರ್ಣಯವೋ ತಿಳಿಯದು ಇವರ ಗಮನವೆಲ್ಲಾ ನಾಟಕ ರಂಗದ ಕಡೆಯೇ ಇತ್ತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಕಲಾದೇವಿಯು ಇವರ ಆಗಮನದ ನಿರೀಕ್ಷೆಯಲ್ಲಿದ್ದಳು. ವಿಧಿ ಲಿಖಿತವನ್ನು ತಿದ್ದಲು ಸಾಧ್ಯವೇ? ಕಲಾದೇವಿಯ ನಿರೀಕ್ಷೆ ಹುಸಿಯಾಗಲಿಲ್ಲ. ನಿರ್ಣಯಿಸಿದ ಅವರ ಮನಸ್ಸು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಚಲನಚಿತ್ರ ಛಾಯಾಗ್ರಹಣದಲ್ಲಿ ಪದವಿಯನ್ನು ಪಡೆದು ನೀನಾಸಂನಲ್ಲಿ ನಟನೆಯ ತರಬೇತಿಯನ್ನು ಪಡೆದರು. ನಂತರ ಚಲನಚಿತ್ರಗಳಲ್ಲಿ ಅವಕಾಶ ಪಡೆಯುವುದಕ್ಕೆ ತನ್ನ ಸ್ನೇಹಿತನ ಜೊತೆಯಲ್ಲಿ ಮುಂಬಯಿಗೆ ಪ್ರಯಾಣ ಮಾಡಿದರು. ಅವಕಾಶಗಳ ನಿರೀಕ್ಷೆಯಲ್ಲಿದ್ದಾಗ ಅವರನ್ನು ಮೊದಲು ನಾಟಕರಂಗವೇ ಸ್ವಾಗತಿಸಿತು. ಅಲ್ಲಿಯು ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ಅಲ್ಲಿಯೇ ಪ್ರಭಾಕರ ಶಾಸ್ತ್ರಿ ನಿರ್ದೇಶನದಲ್ಲಿ ತಯಾರಾದ ಪ್ರಚಂಡ ರಾವಣ ನಾಟಕದ ರಾವಣನ ಪಾತ್ರದಲ್ಲಿ ಮಿಂಚಿದರ ಫಲ ಸಮಾಜಕ್ಕೆ ಇವರೊಳಗೆ ಇದ್ದ ಕಲಾವಿದನ ಪರಿಚಯವಾಯಿತಲ್ಲದೆ ಮುಂದೆ ಇದೇ ಸಿನಿ ಪಯಣಕ್ಕೆ ನಾಂದಿಯಾಯಿತು. ರಾವಣನ ಪಾತ್ರ ಮೇರು ನಿರ್ದೇಶಕನೆನಿಸಿಕೊಂಡಂತಹ ಪುಟ್ಟಣ ಕಣಗಾಲ್ ಮನಸ್ಸನ್ನೇ ಗೆದ್ದಿತ್ತಂದರೆ ಆ ಪಾತ್ರದ ಪರಕಾಯ ಪ್ರವೇಶ ಎಷ್ಟು ಶಕ್ತಿಯುತವಾಗಿತ್ತೆಂಬುದು ನೀವೇ ಊಹಿಸಿಕೊಳ್ಳಬಹುದು. ೧೯೬೭ ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಾವಿರ ಮೆಟ್ಟಿಲು ಚಿತ್ರದಲ್ಲಿ ನಟಿಸುವುದರ ಮೂಲಕ ಸಿನಿಪಯಣ ಆರಂಭವಾಯಿತಾದರೂ ವಿಧಿಯ ಏರಿಳಿತ ಆಟದ ಫಲ ಕಾರಣಾಂತರಗಳಿಂದ ಮೊದಲ ಚಿತ್ರವೇ ಅರ್ಧಕ್ಕೆ ನಿಂತಿತು. ಆದರೂ ೧೯೬೯ ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ತಯಾರಾದ ಮಲ್ಲಮ್ಮನ ಪವಾಡ ಚಿತ್ರದಲ್ಲಿ ಖಳನ ಪಾತ್ರದಲ್ಲಿ ನಟಿಸುವುದರ ಮೂಲಕ ಅಧಿಕೃತವಾಗಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದೆ ಎಂದೂ ಹಿಂತಿರುಗಿ ನೋಡಲಿಲ್ಲ. ಇವರು ಚಿತ್ರ ರಂಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಡಾ.ರಾಜಕುಮಾರ್, ಉದಯಕುಮಾರ್, ಕಲ್ಯಾಣ ಕುಮಾರ್, ಬಾಲಕೃಷ್ಣ, ನರಸಿಂಹರಾಜರಂತರ ಕಲಾವಿದರ ಕಾಲವಾಗಿತ್ತು. ಆಗಿನ ಕಾಲದಲ್ಲಿ ಪೈಪೋಟಿಯಲ್ಲಿ ನಟಿಸುವುದು ಅಷ್ಟು ಸುಲಭವಾಗಿರಲಿಲ್ಲ. ಡಾ.ರಾಜಕುಮಾರ್ ಬಹುತೇಕ ಚಲನಚಿತ್ರಗಳಲ್ಲಿ ಅಷ್ಟೇ ಮಹತ್ವದ ಪಾತ್ರಗಳು ಇವರಿಗೆ ಮೀಸಲಾಗಿದ್ದವು. ವಿಷ್ಣುವರ್ಧನ್, ಅಂಬರೀಷ್, ರವಿಚಂದ್ರನ್,ಈ ರೀತಿಯಾಗಿ ಕನ್ನಡ ಚಿತ್ರರಂಗದ ಹಲವಾರು ನಟರ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ನಟಿಸಿದ ಚಿತ್ರಗಳು ಒಂದೇ,ಎರಡೇ ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ವಿವಿಧ ಪಾತ್ರಗಳಲ್ಲಿ ನಟಿಸುವುದು ಅಷ್ಟು ಸುಲಭವಾಗಿರಲಿಲ್ಲ. ಒಂದು ಪಾತ್ರದಿಂದ ಇನ್ನೊಂದು ಪಾತ್ರಕ್ಕೆ ಹೊಂದಿಕೊಂಡು ನಟಿಸುವುದು ಸಾಧಾರಣ ವಿಷಯವಲ್ಲ. ಯಾಕೆಂದರೆ ಈಗಿನಷ್ಟು ತಾಂತ್ರಿಕತೆ ಆಗಿರಲಿಲ್ಲ. ಒಂದು ಚಿತ್ರ ನಿರ್ಮಾಣ ಮಾಡಬೇಕಾದರೆ ಆಗುತ್ತಿದ್ದ ಕಷ್ಟ ಅಷ್ಟಿಷ್ಟಲ್ಲ. ಬಿಡುವಿಲ್ಲದೆ ಚಿತ್ರೀಕರಣದಲ್ಲಿ ಭಾಗವಹಿಸುವುದು,ಪಾತ್ರಗಳ ತಯಾರಿ, ಚಿತ್ರೀಕರಣಕ್ಕೆ ದಿನಗಳನ್ನು ಹೊಂದಿಸುವುದು, ತಮ್ಮ ಕುಟುಂಬದ ಜವಾಬ್ದಾರಿ,ಸಮಾಜ ಕಾರ್ಯದಲ್ಲಿ ಭಾಗವಹಿಸುವುದು. ಕೆಲಸ ಒಂದೇ ಎರಡೇ? ಇಷ್ಟು ಒತ್ತಡದಲ್ಲಿ ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಲಕ್ಷಾಂತರ ಅಭಿಮಾನಿಗಳ ಅಭಿಮಾನ, ಪ್ರೀತಿಯನ್ನು ಸಂಪಾದಿಸುವುದು ಎಂದರೆ ಸಾಧಾರಣ ವಿಷಯವಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಯಶಸ್ಸುಗಳಿಸಿದ್ದಾರೆಂದರೆ ಅವರ ಕಾರ್ಯದಕ್ಷತೆ ಹೇಗಿತ್ತು? ಹೇಗಿತ್ತೆಂದರೆ ಅವರು ತಮ್ಮ ಕೆಲಸವನ್ನು ಪ್ರೀತಿಸುತ್ತಿದ್ದರು. ಅವರು ತಮ್ಮ ಕೆಲಸವನ್ನು ಕಷ್ಟ ಅನ್ನುವುದಕ್ಕಿಂತಲೂ ಇಷ್ಟ ಪಟ್ಟು ಮಾಡಿ ಯಶಸ್ಸು ಪಡೆದು ಅಭಿಮಾನಿಗಳ ಮನಸ್ಸಿನಲ್ಲಿ ಇಂದಿಗೂ ಚಿರಂಜೀವಿಯಾಗಿದ್ದಾರೆ. ಇವರು ಚಲನಚಿತ್ರಗಳಲ್ಲಿ ಎಷ್ಟು ಕಠೋರ ಪಾತ್ರಗಳನ್ನು ನಿರ್ವಹಿಸುತ್ತಿದ್ದರೋ ತಮ್ಮ ನಿಜ ಜೀವನದಲ್ಲಿ ಅಷ್ಟೇ ಮೃದು ಸ್ವಭಾವದವರಾಗಿದ್ದರು. ಯಾರ ಮನಸ್ಸಿಗೂ ನೋಯುವಂತೆ ವರ್ತಿಸಲಿಲ್ಲ. ಅವರು ಮಾಡದ ಸಮಾಜ ಕಾರ್ಯಗಳಿಲ್ಲ, ಮಾಡಿದ ದಾನ ಧರ್ಮಗಳ ಲೆಕ್ಕವಿಲ್ಲ. ಅವರೊಬ್ಬ ಪರಿಣಾಮಕಾರಿ ನಟ ಎನ್ನುವುದಕ್ಕೆ ಉದಾಹರಣೆಯೆಂದರೆ ಚಿತ್ರ ಮಂದಿರದಲ್ಲಿ ಪರದೆಯ ಮೇಲೆ ಅವರ ಪ್ರವೇಶ ನೋಡಿ ಪ್ರೇಕ್ಷಕರೇ ಹೆದರುತ್ತಿದ್ದರು, ರಸ್ತೆಯಲ್ಲಿ ಇವರು ಕಾಣಿಸಿಕೊಂಡರೆ ಎಷ್ಟೋ ಹೆಣ್ಣು ಮಕ್ಕಳು,ಮಹಿಳೆಯರು ಹೆದರಿ ತಮ್ಮ ಮನೆ ಬಾಗಿಲು ಹಾಕಿಕೊಂಡ ಉದಾಹರಣೆಗಳಿವೆ. ಅಂದರೆ ಅವರು ಪಾತ್ರ ಜನ ಸಾಮಾನ್ಯರ ಮೇಲೆ ಎಷ್ಟು ಗಾಢವಾದ ಪ್ರಭಾವ ಬೀರಿತ್ತು? ಎಂಬುದನ್ನು ನಾವೇ ಅರ್ಥ ಮಾಡಿಕೊಳ್ಳಬೇಕು. ಸಂಪತ್ತಿಗೆ ಸವಾಲ್, ಗೆಜ್ಜೆ ಪೂಜೆ, ನಾಗರಹಾವು, ಉಪಾಸನೆ,ಮಯೂರ, ಬಹದ್ದೂರ್ ಗಂಡು, ಭರ್ಜರಿ ಬೇಟೆ ಇನ್ನೂ ಹಲವು ಚಿತ್ರಗಳು ಅವರಿಗೆ ಉತ್ತಮ ಪ್ರಶಂಸೆಯನ್ನು ತಂದು ಕೊಟ್ಟಿವೆ.
ಖಳನಟ, ಪೋಷಕ ಪಾತ್ರಗಳಲ್ಲಿ ಅಭಿನಯಿಸಿದಲ್ಲದೆ ತಾಯಿಗಿಂತ ದೇವರಿಲ್ಲ, ಬ್ರಹ್ಮಾಸ್ತ್ರ,ಗಂಡ ಭೇರುಂಡ ಇನ್ನೂ ಕೆಲವು ಚಿತ್ರಗಳನ್ನು ನಿರ್ಮಿಸಿದ್ದರು. ರಾಜಕೀಯ ಹಿನ್ನೆಲೆಯಿದ್ದ ವಜ್ರಮುನಿಯವರಿಗೆ ರಾಜಕೀಯ ಕ್ಷೇತ್ರದಿಂದಲೂ ಆಹ್ವಾನ ಬಂದಿತ್ತು. ಇದಕ್ಕಿಂತಲೂ ಆಶ್ಚರ್ಯಕರ ವಿಷಯವೇನೆಂದರೆ ಮೃದು ಸ್ವಭಾವದವರಾಗಿದ್ದ ಇವರು ತಮ್ಮ ಚಿತ್ರಗಳ ಅತ್ಯಾಚಾರ ದೃಶ್ಯಗಳಲ್ಲಿ ನಟಿಸುವ ಮುನ್ನ ಆ ದೃಶ್ಯದಲ್ಲಿ ನಟಿಸುವ ಯುವತಿಯ ಕಾಲಿಗೆ ನಮಸ್ಕರಿಸಿ ಇದು ನನ್ನ ವೃತ್ತಿ ಧರ್ಮ, ದಯವಿಟ್ಟು ಕ್ಷಮಿಸಿ ಎಂದು ಕೇಳುತ್ತಿದ್ದರೆಂದರೆ ಅವರು ಎಂತಹ ವ್ಯಕ್ತಿತ್ವವನ್ನು ಹೊಂದಿದ್ದರು ಎನ್ನುವುದು ಅರ್ಥವಾಗುತ್ತದೆ. ಅಜಾತಶತ್ರು, ದೈತ್ಯ ಪ್ರತಿಭೆ ಹೊಂದಿದ್ದು ಇವರು ಅನಾರೋಗ್ಯ ಸಮಯದಲ್ಲಿಯು ಎದೆಗುಂದದೆ ಬದುಕುತ್ತಿದ್ದರೂ ಚಿಕಿತ್ಸೆ ಸಮಯದಲ್ಲಿ ಅವರು ಪಡುತ್ತಿದ್ದ ಸಂಕಟ, ನೋವು ಅಷ್ಟಿಷ್ಟಲ್ಲ. ಆದರೂ ಅನಾರೋಗ್ಯದಲ್ಲಿದ್ದಾಗ ಅವರು ೨೦೦೪ ರಲ್ಲಿ ಟೀವಿಯಲ್ಲಿ ನಡೆಸಿದ ಸಂದರ್ಶನದಲ್ಲಿ ರಾವಣನ ಪಾತ್ರದ ಸಂಭಾಷಣೆಗಳನ್ನು ಹೇಳಿದ್ದರು. ಮೂರು ದಶಕಗಳ ಸಿನಿಮಾ ಪ್ರಯಾಣದಲ್ಲಿ ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ಜನೆವರಿ ೦೫,೩೦೦೬ ರಂದು ಮೂತ್ರ ಪಿಂಡಗಳ ವೈಫಲ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮರಣ ಹೊಂದಿದರು. ಅವರ ಜೀವಮಾನ ಸಾಧನೆಗಾಗಿ ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಅವರ ನೆನಪುಗಳಿಗೆ ಸಾಧನೆಗಳಿಗೆ ಎಂದು ಮರಣವಿಲ್ಲ. ಇಂದು ಇವರು ಭೌತಿಕವಾಗಿ ಇಲ್ಲದಿದ್ದರೂ ಮಾನಸಿಕವಾಗಿ ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಇಂದಿಗೂ ಬದುಕಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ವಜ್ರಮುನಿಗೆ ವಜ್ರಮುನಿಯೇ ಸಾಟಿ. ಇದುವರೆಗೂ ಇವರ ಸ್ಥಾನವನ್ನು ಯಾರಿಗೂ ತುಂಬಲು ಸಾಧ್ಯವಾಗಲಿಲ್ಲ. ಇಂತಹ ಅಪ್ಪಟ ಕನ್ನಡ ಪ್ರತಿಭೆಗೆ ಜನ್ಮ ಕೊಟ್ಟ ಇವರ ತಂದೆ – ತಾಯಿಗಿಂತ ಅದೃಷ್ಟವಂತರು ಯಾರು ಇರಲು ಸಾಧ್ಯವಿಲ್ಲ ಎಂದು ಹೇಳಲು ಇಚ್ಚಿಸುತ್ತ ನನ್ನ ಮೊದಲ ಸಿನಿಮಾ ಲೇಖನದ ರಚನೆಯನ್ನು ಮುಗಿಸುತ್ತಿದ್ದೇನೆ.