1964ರ ಈ ಚಿತ್ರ ಸ್ವಲ್ಪ ಸ್ಲೋ ಎನಿಸಿದರೂ ಬಹಳವೇ ಪರಿಣಾಮಕಾರಿ. ಪುಟ್ಟ ಊರಿನ ಮೇಷ್ಟರು ಮೂರ್ತಿ(ರಾಜ್‍ಕುಮಾರ್). ಆತನ ಹೆಂಡತಿ ನಿರ್ಮಲ(ಕಲ್ಪನಾ). ಮೊದಲ ದಿನ ಮೈಸೂರು ಪೇಟ ಧರಿಸಿ ಹೋದವನಿಗೆ ಮರುದಿನ ಕಪ್ಪು ಟೋಪಿ ಹಾಕಿಕೊಂಡು ಹೋಗಿ ಎನ್ನುತ್ತಾಳೆ ನಿರ್ಮಲ!
ಪಕ್ಕದ ಮನೆಯ ಗೋಪಾಲ್(ದಿನೇಶ್ ಮೊದಲ ಚಿತ್ರ). ಅವನ ತಮ್ಮ ಪ್ರಾಣೇಶ(ವಾದಿರಾಜ್). ಶಾಲೆಯಲ್ಲಿ ಹನುಮಂತಾಚಾರ್, ಬಾಲಕೃಷ್ಣ ಮೇಷ್ಟ್ರುಗಳು. ಬಾಲಕೃಷ್ಣನಿಗೆ ಹನ್ನೆರಡು ಮಕ್ಕಳು. ಯಾರು ಕಂಡರೂ 5 ರೂಪಾಯಿ ಸಾಲ ಕೇಳುವ ಜಾಯಮಾನದ ಪಾತ್ರ.
ಹೆರಿಗೆಯಲ್ಲಿ ನಿರ್ಮಲ ಸಾಯುತ್ತಾಳೆ. ಹುಟ್ಟಿದ ಗಂಡು ಮಗು ಜ್ವರ ಬಂದು ಕಿವುಡಾಗುತ್ತದೆ. ಪಕ್ಕದ ಮನೆಯ ಜಯಶ್ರೀ ನೋಡಿಕೊಳ್ಳುತ್ತಿದ್ದಾಕೆ, ಗಂಡನಿಗೆ ವರ್ಗವಾದಾಗ ಹೊರಟುಹೋಗುತ್ತಾಳೆ. ಈ ಕಡೆಯ ಮನೆ ಆರ್.ಟಿ.ರಮಾ ಜಗಳಗಂಟಿ.
ವಿಧಿಯಿಲ್ಲದೇ ಹಿಂದೊಮ್ಮೆ ಕಂಡಿದ್ದ ಕಿವಿ ಕೇಳದ, ಮಾತು ಬಾರದ ಗಂಗಾಳನ್ನು (ಹರಿಣಿ) ಮದುವೆಯಾಗುತ್ತಾನೆ ಮೂರ್ತಿ. ವಿಧಿ ಅವರ ಬಾಳಿನಲ್ಲಿ ಆಟವಾಡಿ, ಏನೇನೋ ಕಳೆದುಕೊಂಡು ಕೊನೆಗೆ ಎಲ್ಲವೂ ಶುಭಂ.
ವಿಜಯಭಾಸ್ಕರ್ ಹಾಡುಗಳು ಚೆನ್ನ. ಅನೇಕ ಕಡೆ ಅವರು ಬಳಸಿರುವ ಸಿತಾರ್ ಬಲು ಪರಿಣಾಮಕಾರಿ.
ಮೂರ್ತಿ ತಾನೇ ಒಂದು ಕಿವುಡ ಮೂಕರ ಶಾಲೆ ತೆರೆಯುವುದು ಶ್ಲಾಘನೀಯ. ಉದಯಕುಮಾರ್ ಒಂದು ಅತಿಥಿ ಪಾತ್ರದಲ್ಲಿ ಬರುತ್ತಾರೆ. ಶಾಂತಮ್ಮ ಹರಿಣಿಯ ತಾಯಿಯ ಪಾತ್ರದಲ್ಲಿದ್ದಾರೆ.
ಉಡುಗೊರೆಯೊಂದ ತಂದ – ಎಸ್ ಜಾನಕಿ, ಚಂದ್ರಮುಖೀ ಪ್ರಾಣಸಖೀ – ಮಾಲಖೌಂಸ್ ರಾಗದ ಸುಂದರ ಶಾಸ್ತ್ರೀಯ ಗೀತೆ (ಎಸ್ ಜಾನಕಿ, ಬೆಂಗಳೂರು ಲತಾ), ಹಾಡೊಂದ ಹಾಡುವೆ ನೀ ಕೇಳು ಮಗುವೆ – ಪಿ.ಬಿ.ಎಸ್ ಇವು ಅತ್ಯಂತ ಜನಪ್ರಿಯ ಗೀತೆಗಳು. ಇವಲ್ಲದೇ ನಮ್ಮ ತಾಯಿ ಭಾರತಿ – ಪಿಬಿಎಸ್, ಹೃದಯ ಮಂದಿರ ಎಂಬ ಪುಟ್ಟ ಗೀತೆ – ಎಸ್ ಜಾನಕಿ, ನಮ್ಮ ಪಾಪ ಪುಟ್ಟ ಹೆಜ್ಜೆ – ಎಲ್ ಆರ್ ಈಶ್ವರಿ ಹಾಡಿದೆ. ಪುಣ್ಯಕೋಟಿಯ ಕಥೆಯನ್ನು ಹೋಲುವ ಜಿಂಕೆಯ ಕತೆಯ ಸತ್ಯಕೆ ಎಂದಿಗೂ ಜಯ ಎನ್ನುವ ನೃತ್ಯ ನಾಟಕದ ಹಾಡು ಪಿಬಿಎಸ್, ಎಸ್ ಜಾನಕಿ ಹಾಡಿದ್ದಾರೆ.
ರಾಜ್, ಕಲ್ಪನಾ, ಹರಿಣಿ ಮೂವರದೂ ಅಮೋಘ ಅಭಿನಯ. ಮಾತು ಕಲಿಯುವ ಮೂಕಿಯ ಪಾತ್ರದಲ್ಲಿ ಹರಿಣಿ, ಪ್ರೀತಿಯ ಪತ್ನಿಯಾಗಿ ಕಲ್ಪನಾ.
ರಾಜ್ ಅಂತೂ ಅನೇಕ ರೀತಿಯ ಎಮೋಷನ್‍ಗಳನ್ನು ನಮಗೆ ತೆರೆದಿಡುತ್ತಾರೆ. ಎನ್.ಲಕ್ಷ್ಮೀನಾರಾಯಣ್ ಅವರ ಕಥೆ, ಚಿತ್ರಕಥೆ, ನಿರ್ದೇಶನದ ಚಿತ್ರವಿದು.
ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟ ಮೊದಲ ಚಿತ್ರವಿದೆಂಬ ಹೆಗ್ಗಳಿಕೆ ಇದೆ.