ನಾವಾಡುವ ನುಡಿಯೇ

Kannada Rajyotsava

ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ

ಜಲವೆಂದರೆ ಕೇವಲ ನೀರಲ್ಲ ಅದು ಪಾವನ ತೀರ್ಥ.

ಹೌದು .ಪ್ರಪಂಚದ ಸಾವಿರಾರು ಭಾಷೆಗಳಲ್ಲಿ ಬರೆದದ್ದನ್ನೇ ಓದುವ ಓದಿದ್ದನ್ನೇ ಬರೆಯುವ ಭಾಷೆಗಳು ಬೆರಳೆಣಿಕೆಯಷ್ಟು. ಅದರಲ್ಲಿ ಕನ್ನಡವೂ ಒಂದು. ಕನ್ನಡದ ಗರಿಮೆಯನ್ನು ಅರ್ಥೈಸಿಕೊಳ್ಳಲು ದೊಡ್ಡ ಪಂಡಿತರೇ ಆಗಬೇಕೆಂದೇನಿಲ್ಲ. ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್’ ಎಂದು ನೃಪತುಂಗನೇ ಹೇಳಿಲ್ಲವೇ? ಭಾಷಾಶುದ್ದತೆಯಿಂದ ಕೂಡಿದ ಅತ್ಯುತ್ತಮ ಸಾಹಿತ್ಯವೂ ಕನ್ನಡದಲ್ಲುಂಟು. ಓದು ಬರಹ ಕಲಿಯದ ಜನಪದರ ಸೊಗಡೂ ಇದರಲ್ಲುಂಟು. ಬಸವಣ್ಣ, ಪುರಂದರ ಕನಕರಂತಹ ದಾಸ ಶ್ರೇಷ್ಠರ ವಚನಗಳು ಉಂಟು. ಶಿಶುನಾಳ ಶರೀಫರ ಪದಗಳೂ ಉಂಟು. ಪಂಡಿತರಿಗೂ ಸೈ, ಪಾಮರರಿಗೂ ಸೈ ಅನ್ನುವ ಭಾಷೆಗೆ ಇಂದು ಹಬ್ಬದ ಸಡಗರ.

ಸಿನಿಮಾ ಕ್ಷೇತ್ರಕ್ಕೆ ಬಂದರೆ ನಾಡು ನುಡಿಯ ಅಭಿಮಾನವನ್ನು ಸಾರುವ ಗೀತೆಗಳು ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಬಂದಷ್ಟು ಬಹುಶಃ ವಿಶ್ವದ ಬೇರಾವುದೇ ಭಾಷೆಯಲ್ಲೂ ಬಂದಿಲ್ಲವೇನೋ. ಕಪ್ಪು ಬಿಳುಪು ಚಿತ್ರಗಳಿಂದ ಆರಂಭವಾದ ಈ ಪ್ರಯೋಗ ಇಂದಿಗೂ ಉಂಟು.

1961 ರಲ್ಲಿ ತೆರೆಕಂಡ ವಿಜಯನಗರದ ವೀರಪುತ್ರ  ಚಿತ್ರದ ‘ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯ ನಾಡಿದು’ ಹಾಡು ತೆರೆಯ ಮೇಲೆ ಬಂದು ಇಂದಿಗೆ ಬರೋಬ್ಬರಿ ಐವತ್ತೊಂಭತ್ತು ವರ್ಷಗಳು. ಇಂದಿಗೂ ಆ ಹಾಡಿನ ಸವಿಯನ್ನು ಸವಿಯದ ಕನ್ನಡಿಗನಿಲ್ಲ. ಅದೇ ವರ್ಷ ತೆರೆಕಂಡ ಟಿ ವಿ ಸಿಂಗ್ ಠಾಕೂರ್ ನಿರ್ದೇಶನದ ಕಣ್ತೆರೆದು ನೋಡು ಚಿತ್ರದ ‘ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ’ ಹಾಡಂತೂ ಮಕ್ಕಳಿಗೆ ಕನ್ನಡದ ಅಭಿಮಾನವನ್ನು ಸಾರಿ ಹೇಳುವ ಗೀತೆಯಾಗಿ ಇಂದಿಗೂ ಉಳಿದಿದೆ. 1969 ರ ರಾಜನ್ ನಾಗೇಂದ್ರ ಸಂಗೀತ ನಿರ್ದೇಶನದ ಮೇಯರ್ ಮುತ್ತಣ್ಣ ದ ‘ಒಂದೇ ನಾಡು ಒಂದೇ ಕುಲವು ಒಂದೇ ದೈವವೂ’ ಹಾಡು ಇಂದಿಗೂ ರಾಜ್ಯೋತ್ಸವದ ದಿನ ಮೈಕ್ ಮೇಲೆ ತಪ್ಪದೆ ಕೇಳಿ ಬರುವ ಹಾಡು.

ಆ ನಂತರದ ಸೇರ್ಪಡೆ – 1970 ರಲ್ಲಿ ಪುಟ್ಟಣ್ಣ ನಿರ್ದೇಶನದಲ್ಲಿ ತೆರೆಕಂಡ ಕರುಳಿನ ಕರೆ ಚಿತ್ರದ ‘ಅ ಆ ಇ ಈ ಕನ್ನಡದ ಅಕ್ಷರಮಾಲೆ’ ಹಾಡು. ತದ ನಂತರ 1972 ರಲ್ಲಿ ತೆರೆಕಂಡ ‘ಚಿತ್ರದುರ್ಗದ ಕಲ್ಲಿನ ಕೋಟೆ’ ಎಂದು ಹಾಡುತ್ತಾ ಒನಕೆ ಓಬವ್ವನ ಕೀರ್ತಿಯನ್ನು ವಿಶ್ವಕ್ಕೆ ತಿಳಿಸಿದ ನಾಗರಹಾವು ಹೊಸ ಅಲೆಯನ್ನೇ ಸೃಷ್ಟಿಸಿತು. ಅದಾದ ಒಂದು ವರ್ಷದ ಬಳಿಕ ತೆರೆಕಂಡ ವಿಜಯ್ ನಿರ್ದೇಶನದ ಗಂಧದ ಗುಡಿಯ ‘ನಾವಾಡುವ ನುಡಿಯೇ ಕನ್ನಡ ನುಡಿ’ ಹಾಡಂತೂ ಒಂದು ರೀತಿಯಲ್ಲಿ ಕನ್ನಡದ ಮನೆ ಮನೆಯ ಗೀತೆಯಾಯ್ತು. ನಲ್ವತ್ತು ವರ್ಷಗಳಾದರೂ, ಇಂದಿಗೂ ಗಂಧದ ಗುಡಿಯ ಈ ಹಾಡು ಮೈಕ್ ಮೇಲೆ ಬರಲಿಲ್ಲವೆಂದರೆ ಅದು ಕನ್ನಡ ರಾಜ್ಯೋತ್ಸವ ಸಮಾರಂಭವೇ ಅಲ್ಲವೇನೋ ಎಂಬಂತ ಭಾವನೆ. ತೆರೆಯ ಹಿಂದೆ ಸ್ಟುಡಿಯೋ ನಲ್ಲಿ ಕುಳಿತು ನೂರಾರು ಹಾಡುಗಳಿಗೆ ಜೀವ ನೀಡಿದ್ದ ಎಸ್ಪಿಬಿಯವರು ತೆರೆಯ ಮೇಲೆ ಗಾಯಕರಾಗಿ ಕಾಣಿಸಿಕೊಂಡು – ‘ಇದೇ ಹಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ’ ಎಂದು ಹಾಡಿದ್ದು ತಿರುಗುಬಾಣ ಚಿತ್ರಕ್ಕೆ 1983 ರಲ್ಲಿ.

ಇನ್ನು 1985 ರ ನಂತರ ಬಂದದ್ದೆಲ್ಲಾ ಹೊಸ ಅಲೆಯ ಚಿತ್ರಗಳು. ಹೊಸ ಹೊಸ ಕಲಾವಿದರು, ಸಂಗೀತ ನಿರ್ದೇಶಕರು,  ಹೊಸ ಹೊಸ ಕಥಾವಸ್ತುಗಳು. ಇಷ್ಟೆಲ್ಲ ಮಸಾಲೆ ಚಿತ್ರಗಳು ಬಂದರೂ ತೆರೆಯ ಮೇಲೆ ಕನ್ನಡದ ಅಭಿಮಾನ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಬದಲಿಗೆ ಹೆಚ್ಚುತ್ತಲೇ ಹೋಯಿತು. ರೋಮ್ಯಾಂಟಿಕ್ ಚಿತ್ರಗಳಿಗೆ ಹೊಸ ಸ್ಪರ್ಶ ನೀಡಿದ ಮಾಂತ್ರಿಕ ಕ್ರೇಝಿ ಸ್ಟಾರ್ ರವಿಚಂದ್ರನ್ ರ ‘ಕರುನಾಡ ತಾಯಿ ಸದಾ ಚಿನ್ಮಯಿ’ ಗೀತೆಯಂತೂ ರವಿಚಂದ್ರನ್ ಹಾಗು ಹಂಸಲೇಖರ ಜೋಡಿಯಲ್ಲಿ ಮೂಡಿಬಂದ ಅತ್ಯುತ್ತಮ ನಾಡಗೀತೆಯಾಗಿ ಉಳಿಯಿತು. ಬಹುಶಃ ಅದು ಹಂಸಲೇಖರ ಲೇಖನಿಯಿಂದ ಮೂಡಿಬಂದ ಮೊದಲ ಕನ್ನಡ ಅಭಿಮಾನದ ಹಾಡು. ಸಾಹಿತ್ಯದ ಜೊತೆಗೆ ಆಧುನಿಕ ಸಂಗೀತ ಉಪಕರಣಗಳ ಸ್ಪರ್ಶ ನೀಡಿದ್ದು ಕನ್ನಡಿಗನನ್ನು ಹೊಸ ಲೋಕಕ್ಕೆ ಕೊಂಡೊಯ್ದಿತ್ತು.

ಕನ್ನಡದ ಅಂಗ್ರಿ ಯಂಗ್ ಮ್ಯಾನ್ ರೆಬೆಲ್ ಸ್ಟಾರ್ ಅಂಬರೀಷ್ ಅವರಿಗಾಗಿ 1982 ರಲ್ಲಿ ಹಂಸಲೇಖ ಬರೆದ ಹಾಡು – ಸೋಲಿಲ್ಲದ ಸರದಾರ ಚಿತ್ರದ ‘ಈ ಕನ್ನಡ ನಾಡನು ಮರೀಬೇಡ ಓ ಅಭಿಮಾನಿ’ ಎಂಬ ಗೀತೆ. ಅದೇ ಚಿತ್ರಕ್ಕೆ ಬರೆದ ಇನ್ನೊಂದು ಹಾಡು – ಕನ್ನಡದ ಜೀವನದಿ ‘ಕಾವೇರಮ್ಮ ಕಾಪಾಡಮ್ಮಾ.’ ತಾದಾತ್ಮ್ಯತೆ ತುಂಬಿದ ಅಂಬಿ ಅಭಿನಯವನ್ನು ನೋಡುತ್ತಾ, ಎಸ್ಪಿಬಿ ಅವರ ಕಂಠಸಿರಿಯನ್ನು ಕೇಳುತ್ತಾ ಪ್ರತಿಯೊಬ್ಬ ಕನ್ನಡಿಗನೂ ಕಳೆದೇ ಹೋಗಿಬಿಟ್ಟಿದ್ದ. ಆ ನಂತರ ಅಂಬರೀಷ್ ಯೇಸುದಾಸ್ ಹಂಸಲೇಖ ಜೋಡಿಯಲ್ಲಿ ಅದೇ ವರ್ಷ ಮೂಡಿಬಂದ ಮತ್ತೊಂದು ಹಾಡು – ಮಲ್ಲಿಗೆ ಹೂವೆ ಚಿತ್ರದ ‘ಅಂದವೋ ಅಂದವೋ ಕನ್ನಡ ನಾಡು’ ಗೀತೆ.

 ಹಾಸ್ಯ  ಚಿತ್ರಗಳಾದರೇನಂತೆ? 1992 ರ ಒಂದು ಸಿನಿಮಾ ಕತೆಯ ‘ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ’ ಎನ್ನುವ ಮೂಲಕ ಕನ್ನಡದ ಅಭಿಮಾನ ಗೀತೆಗಳು ಇಲ್ಲಿ ಕೂಡ ಸೈ ಎಂದು ಒಂದು ಪ್ರಯೋಗ ಮಾಡಿಯೇಬಿಟ್ಟರು ಕನ್ನಡ ಚಿತ್ರಗಳ ಹಾಸ್ಯ ಚಿತ್ರಗಳ ಕ್ಯಾಪ್ಟನ್ ಫಣಿ ರಾಮಚಂದ್ರ ಅವರು.

ಆ ನಂತರ 1993 ರಲ್ಲಿ ನಡೆದದ್ದು ಒಂದು ದೊಡ್ಡ ಮ್ಯಾಜಿಕ್. ಆ ಮ್ಯಾಜಿಕ್ ಮಾಡಿದ ಮಾಂತ್ರಿಕ ಜೋಡಿ – ಹಂಸಲೇಖ, ಅಣ್ಣಾವ್ರು ಮತ್ತು ಟಿ ಎಸ್ ನಾಗಾಭರಣ. ಅದೇನೆಂದು ಇಲ್ಲಿ ಬರೆಯುವ ಮೊದಲೇ ನಿಮಗೆಲ್ಲ ಗೊತ್ತಾಗಿರುತ್ತದೆ. ಹೌದು. ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಂಸಲೇಖರ ಲೇಖನಿ – ಅಣ್ಣಾವ್ರ ಕಂಠಸಿರಿಯಲ್ಲಿ ಮೂಡಿಬಂದ ಆ ಹಾಡು ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಮೂಡಿಬಂದ ಕನ್ನಡಪ್ರೇಮದ ಗೀತೆಗಳ ಟಾಪ್ ಲಿಸ್ಟ್ ಅಲ್ಲಿ ಕೂತಿದೆ. ಇನ್ನೂ ಸಾವಿರ ವರ್ಷ ಕಳೆದರೂ ಬಹುಶಃ ಇದೇ ಹಾಡು ಟಾಪ್ ಲಿಸ್ಟ್ ಅಲ್ಲಿರುತ್ತೆ ಕೂಡ. ಹುಟ್ಟಿದರೆ ಕನ್ನಡ ನಾಡಲ್ಲಿ ಹಾಡಿಲ್ಲದೆ ಯಾವುದಾದರೂ ಒಂದು ಕನ್ನಡ ಸಭೆಯೂ ಸಮಾರಂಭವೋ ನಡೆಯುವಂತೆ ಒಮ್ಮೆ ಸುಮ್ಮನೆ ಊಹಿಸಿಕೊಳ್ಳಿ ಸಾಕು. ಆ ರೀತಿ ನಡೆಯಲು ಸಾಧ್ಯವೇ ಇಲ್ಲ ಎಂಬುದು ನಮಗೆ ಅರಿವಾಗುತ್ತದೆ. ರಾಜ್ಯೋತ್ಸವದ ಅಥವಾ ಯಾವುದೇ ಕನ್ನಡ  ಹಬ್ಬವಾಗಿರಲಿ, ಹಾಡೆಂದರೆ ‘ಹುಟ್ಟಿದರೆ ಕನ್ನಡ ನಾಡಲ್ಲಿ’ ಎಂಬಂತಾಗಿದೆ.

ಅದೇ ವರ್ಷ ಎಸ್ ನಾರಾಯಣ್ ಗಾಗಿ ಹಂಸಲೇಖ ಬರೆದು ಸಂಗೀತ ಸಂಯೋಜನೆ ಮಾಡಿದ ಮತ್ತೊಂದು ಮಾಂತ್ರಿಕ ಗೀತೆ – ಬೇವು ಬೆಲ್ಲ ಚಿತ್ರದ ‘ಜನುಮ ನೀಡುತ್ತಾಳೆ ನಮ್ಮ ತಾಯಿ’ ಹಾಡು.

1996 ರಲ್ಲಿ ತೆರೆಕಂಡ ವಿಷ್ಣುವರ್ಧನ್ ಅವರ ನೂರಾ ಐವತ್ತನೇ ಚಿತ್ರ – ಮೋಜುಗರ ಸೊಗಸುಗಾರ. ವಿಷ್ಣುವರ್ಧನ್ ಕಂಠಸಿರಿಯಲ್ಲಿ ಮೂಡಿಬಂದ ಕನ್ನಡವೇ ನಮ್ಮಮ್ಮ ಹಾಡಿಗೆ ಕೂಡ ಮಾಂತ್ರಿಕ ಸ್ಪರ್ಶ ಕೊಟ್ಟಿದ್ದು ಮತ್ತದೇ ಹಂಸಲೇಖ. 1999 ರಲ್ಲಿ ಏಕೆ 47 ಕೈಲಿ ಹಿಡಿದು ‘ನಾನು ಕನ್ನಡದ ಕಂದ’ ಎಂದು ಹಾಡುತ್ತ ಬಂದದ್ದು ಶಿವಣ್ಣ. ಈ ಹಾಡಿನ ಹಿಂದಿನ ಮಾಂತ್ರಿಕ ಕೂಡ ಹಂಸಲೇಖಾರೇ.

ಇನ್ನು ಹೊಸ ಕನ್ನಡ ಚಿತ್ರಗಳ ಅಲೆ. ಡಿಬಾಸ್ ಅಂಬಿ ತೆರೆಯ ಮೇಲೆ ಮೋದಿ ಮಾಡಿದರೆ ಎಸ್ಪಿಬಿ-ಕೆ ಕಲ್ಯಾಣ್-ರಾಜೇಶ್ ರಾಮನಾಥ್ ತೆರೆಯ ಹಿಂದೆ ಮೋಡಿ ಮಾಡಿದ್ದು – ಅಣ್ಣಾವ್ರು ಚಿತ್ರದ ‘ಕನ್ನಡಕ್ಕಾಗಿ  ಜನನ’ ಹಾಡಿನ ಮೂಲಕ. ಅದಾದ ಮೇಲೆ 2011 ರಲ್ಲಿ ‘ಕೈ ಮುಗಿದು ಏರು ಇದು ಕನ್ನಡಿಗನ ತೇರು’ ಎಂದು ಕನ್ನಡ ತಾಯಿಗೆ ಸಾರಥಿಯಾಗಿದ್ದು ಮತ್ತದೇ ಡಿಬಾಸ್.

ಇವೆಲ್ಲಾ ಇಂದಿಗೂ ಪ್ರತಿ ಕನ್ನಡಿಗನೂ ಸದಾ ಕಾಲ ಗುನುಗುವ ಹಾಡುಗಳು. ಇವಿಷ್ಟೇ ಅಲ್ಲದೆ ಕನ್ನಡದ ಸೊಗಡನ್ನು ತೆರೆಯ ಮೇಲೆ ಸಾರಿದ ಹಾಡುಗಳು ಇನ್ನೂ ಲೆಕ್ಕವಿಲ್ಲದಷ್ಟಿವೆ – ಕೃಷ್ಣ ರುಕ್ಮಿಣಿ ಚಿತ್ರದ ‘ಕರ್ನಾಟಕದ ಇತಿಹಾಸದಲಿ ಬಂಗಾರದ ಯುಗದ ಕತೆಯನ್ನು’ ಎಂದು ಹಾಡುತ್ತ ವಿಷ್ಣುವರ್ಧನ್ 1988 ರಲ್ಲಿ ತೆರೆಯ ಮೇಲೆ ಬಂದರೆ, ಅದರ ಮುಂದಿನ ವರ್ಷ ತೆರೆಕಂಡ ಮೊಟ್ಟಮೊದಲ 70 MM ಕನ್ನಡ ಚಿತ್ರ ಶರವೇಗದ ಸರದಾರ ದಲ್ಲಿ ಕುಮಾರ್ ಬಂಗಾರಪ್ಪ ಬಂದದ್ದು ‘ಕನ್ನಡ ನಾಡಿನ ರನ್ನದ ರತುನ’ ಅಂತ ಹಾಡುತ್ತಾ.’ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ’ ಅಂತ ಮಾಲಾಶ್ರೀ ತೆರೆಯ ಮೇಲೆ ಬಂದರೆ, ರಘುವೀರ್ ಬಂದದ್ದು ‘ಕನ್ನಡ ಗಂಗೆಯಲಿ ಮೀಯುವೆ ನಾನೀಗ’ ಎಂದು ಹಾಡುತ್ತಾ. ಅನುರಾಗದ ಅಲೆಗಳು ಚಿತ್ರಕ್ಕಾಗಿ ‘ಕನ್ನಡದ ಕಂದ’ ಎಂದು ರಾಘವೇಂದ್ರ ರಾಜ್ ಕುಮಾರ್ ಹಾಡಿದರೆ, ಶಿವರಾಜ್ ಕುಮಾರ್ ಗಾಗಿ ಅಣ್ಣಾವ್ರು ಹಾಡಿದ್ದು ‘ಕನ್ನಡದ ಮಾತು ಚಂದ’ ಅಂತ ಸಮರ ಚಿತ್ರಕ್ಕೆ.  ಜೀವನದಿ ಚಿತ್ರದ ‘ಕನ್ನಡ ನಾಡಿನ ಜೀವನದಿ ಈ ಕಾವೇರಿ’, ‘ಕನ್ನಡವೇ ನಮ್ಮಮ್ಮ’, ‘ಏನೇ ಕನ್ನಡತಿ ನೀ ಯಾಕೆ ಹಿಂಗ್ ಆಡ್ತಿ’, ‘ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ’ ಎಂದು ವಿಷ್ಣುವರ್ಧನ್ ಹಾಡುತ್ತಾ ಬಂದರೆ ‘ಸಿಂಪಲ್ ಆಗಿ ಹೇಳ್ತೀನಿ ಕೇಳೇ ನಮ್ಮೂರ ಭಾಷೆ’, ‘ಜೀವ ಕನ್ನಡ ದೇಹ ಕನ್ನಡ’ ಎಂದು ಹಾಡುತ್ತ ಪುನೀತ್ ಬಂದರು.

ಹೀಗೆಯೇ ಕನ್ನಡಿಗರ ಕನ್ನಡದ ಮೇಲಿನ ಪ್ರೇಮ ಬರೀ ಬಿಳಿಯ ಹಳೆಯ ಮೇಲೆ ಬರೆದಿಡುವಂತದ್ದಲ್ಲ. ಅದನ್ನು ಅನುಭವಿಸಿಯೇ ಹೇಳಬೇಕು. ಹತ್ತಾರು ಸಂಗೀತ ನಿರ್ದೇಶಕರ, ಸಾಹಿತಿಗಳ, ನಿರ್ದೇಶಕರ, ನಟರ ಮೂಲಕ ಕನ್ನಡದ ಅಭಿಮಾನವನ್ನು ಪ್ರೇಕ್ಷಕ ಸವಿದಿದ್ದಾನೆ.

ಅದರಲ್ಲೂ ಕನ್ನಡ ಅಭಿಮಾನ ಗೀತೆಯ ಬಗ್ಗೆ ಹೇಳುವುದಾದರೆ ಹಂಸಲೇಖರನ್ನು ರಾಜ ಎಂದೇ ಹೇಳಬಹುದೇನೋ. ಹಂಸಲೇಖರ ಲೇಖನಿಯಿಂದ ಮೂಡಿ ಬಂದ ಕನ್ನಡ ಹಾಡುಗಳ ಸವಿಯನ್ನು ಸವಿದವನೇ ಬಲ್ಲ.

ನಾನು ನನ್ನ ಹೆಂಡ್ತಿ ಚಿತ್ರದ ‘ಕರುನಾಡ ತಾಯಿ ಸದಾ ಚಿನ್ಮಯಿ’, ಸೋಲಿಲ್ಲದ ಸರದಾರ ಚಿತ್ರದ ‘ಈ ಕನ್ನಡ ಮಣ್ಣನು ಮರೀಬೇಡ’, ಬೆಳ್ಳಿ ಕಾಲುಂಗುರ ಚಿತ್ರದ ‘ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ’, ಮಲ್ಲಿಗೆ ಹೂವೆ ಚಿತ್ರದ ‘ಅಂದವೋ ಅಂದವೋ ಕನ್ನಡ ನಾಡು’, ಆಕಸ್ಮಿಕ ಚಿತ್ರದ  ‘ಹುಟ್ಟಿದರೆ ಕನ್ನಡ ನಾಡಲಿ’, ಶೃಂಗಾರ ಕಾವ್ಯ ಚಿತ್ರದ ‘ಕನ್ನಡ ಗಂಗೆಯಲಿ ಮೀಯುವೆ ನಾನೀಗ’, ಬೇವು ಬೆಲ್ಲದ ‘ಜನುಮ ನೀಡುತ್ತಾಳೆ ನಮ್ಮ ತಾಯಿ’, ಅನುರಾಗದ ಅಲೆಗಳು ಚಿತ್ರದ ‘ಕನ್ನಡದ ಕಂದ’, ಮೋಜುಗರ ಸೊಗಸುಗಾರ ಚಿತ್ರದ ‘ಕನ್ನಡವೇ ನಮ್ಮಮ್ಮ’, ಸಿಪಾಯಿ ಚಿತ್ರದ ‘ಹೇ ರುಕ್ಕಮ್ಮ ನಮ್ಮ ಊರೇ ಊರಮ್ಮ’, ಪಾಳೇಗಾರ ಚಿತ್ರದ ‘ಇದು ನನ್ನೂರು ಎಲ್ಲರೂ ನನ್ನೋರು’, ಏಕೆ 47 ಚಿತ್ರದ ‘ನಾನು ಕನ್ನಡದ ಕಂದ’, ಸುಗ್ಗಿ ಚಿತ್ರದ ‘ಅಮ್ಮ ಅಮ್ಮ ಅಮ್ಮ’, ವೀರ ಕನ್ನಡಿಗ ಚಿತ್ರದ ‘ಜೀವ ಕನ್ನಡ ದೇಹ ಕನ್ನಡ’, ಕನ್ನಡದ ಕಿರಣ್ ಬೇಡಿ ಚಿತ್ರದ ‘ಅಮೃತ ಕನ್ನಡ’ ಹೀಗೆ ಹಂಸಲೇಖ ಸಂಗೀತ ಸಾಹಿತ್ಯ ನೀಡಿರುವ ಹಾಡುಗಳು ಇನ್ನೂ ಎಷ್ಟೋ. ಲೆಕ್ಕವೇ ಇಲ್ಲ.

ನೂರಾರು ಸಾಹಿತಿಗಳ, ಕಲಾವಿದರ ಬೀಡು ಈ ಕರ್ನಾಟಕ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಇನ್ನೂ ಸಾವಿರಾರು ವರ್ಷ ಇರುತ್ತದೆ ಕೂಡ. ಗಂಗಾವತಿ ಬೀಚಿ ಪ್ರಾಣೇಶ್ ಹೇಳುವಂತೆ ಕರ್ನಾಟಕಲ್ಲೇ ಹತ್ತಾರು ಬಗೆಯ ಕನ್ನಡ ಭಾಷೆ ಬಳಕೆಯಲ್ಲಿದೆ. ಬೆಂಗಳೂರು ಕನ್ನಡ ಒಂದು ರೀತಿಯಾದರೆ, ಮಂಗಳೂರು ಕನ್ನಡವೇ ಬೇರೆ, ಉತ್ತರ ಕನ್ನಡದ ಶೈಲಿ ಒಂದು ರೀತಿಯಾದರೆ, ಮಂಡ್ಯ ಕನ್ನಡವೇ ಬೇರೆ. ಇನ್ನು ತೆಲುಗು ಮಿಶ್ರಿತ ಕನ್ನಡ ಒಂದು ರೀತಿಯಾದರೆ, ಮರಾಠಿ ಮಿಶ್ರಿತ ಕನ್ನಡವೇ ಬೇರೆ. ಶೈಲಿ ಬೇರೆಬೇರೆಯಾದರೂ, ಭಾಷೆ-ಭಾವ ಒಂದೇ. ಈ ರೀತಿ ವಿವಿಧತೆ ಇದ್ದಾಗ್ಯೂ, ಈ ಆಧುನಿಕ ಯುಗದಲ್ಲಿ ಕೂಡ, ಕೋಟ್ಯಂತರ ಜನಗಳನ್ನು ಒಂದು ಭಾಷೆ ಭದ್ರವಾಗಿ ಬೆಸೆದು ನಿಂತಿದೆ ಎಂದರೆ ಅದು ಆ ಭಾಷೆಗಿರುವ ತಾಕತ್ತು.

ಕನ್ನಡದ ದೀಪ ಮನೆ ಮನೆಯಲ್ಲಿ ಬೆಳಗಲಿ. ಸಿರಿಗನ್ನಡಂ ಗೆಲ್ಗೆ.

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply