ನಾ ಕಂಡಂತೆ ರಾಜಣ್ಣ….

ರಾಜ್ಕುಮಾರ್

ಡಾ . ರಾಜಕುಮಾರ್ …! ಈ ಹೆಸರನ್ನ ಕನ್ನಡ ನಾಡಿನಲ್ಲಿ ಕೇಳದವರು ವಿರಳ . ಇವರು ಸರಳರು , ಸಜ್ಜನರು , ಜೀವನ ಪೂರ್ತಿ ಬೇರೆ ಭಾಷೆಗಳಲ್ಲಿ ಅವಕಾಶ ಬಂದರೂ ಹಣಕ್ಕೆ ಆಸೆ ಪಡದೆ ಕೇವಲ ಕನ್ನಡ ಚಿತ್ರದಲ್ಲಿ ಮಾತ್ರ ನಟಿಸಿದವರು . ಅದು ನಟನೆ ಎನ್ನುವುದಕ್ಕಿಂತ ಸಹಜ ಬದುಕು ಅನ್ನಬಹದು . ತಾನೊಬ್ಬ ಮಹಾನ್ ನಟ , ಪ್ರಸಿದ್ಧ ವ್ಯಕ್ತಿ ಎನ್ನುವ ಹಮ್ಮು ಇಲ್ಲದೆ ಎಲ್ಲರೊಂದಿಗೆ ಒಂದಾಗಿ ಬೆರೆತದ್ದು ಅವರನ್ನ ಜನ ಇಂದಿಗೂ ನೆನಪಿಸಿಕೊಳ್ಳಲು ಕಾರಣ ಎಂದು ನನ್ನ ಭಾವನೆ . ನಾವ್ಯಾರೆ ಆಗಿರಲಿ , ಎಷ್ಟೇ ಪ್ರಸಿದ್ದಿ , ವಿದ್ಯೆ , ಹಣ ಅಂತಸ್ತು ನಮ್ಮಲ್ಲಿರಲಿ ವಿನಯವಿಲ್ಲದಿದ್ದರೆ ಜನ ಮಾನಸದಲ್ಲಿ ಬಹಳ ದಿನಗಳ ಕಾಲ ಉಳಿಯಲು ಸಾಧ್ಯವಿಲ್ಲ . ಆ ಅರ್ಥದಲ್ಲಿ ನೋಡುವುದಾದರೆ ಡಾ . ರಾಜ್ ತುಂಬಿದ ಕೊಡ . ಇಂತಹ ಮಹಾನ್ ಚೇತನವನ್ನ ಒಮ್ಮೆಯಾದರೂ ಭೇಟಿ ಮಾಡಬೇಕೆನ್ನುವ ನನ್ನ ಕನಸು ನನಸಾಗಿಯೇ ಉಳಿಯಿತು .

ಕೆಲಸ -ಹವ್ಯಾಸದ ಸಲುವಾಗಿ ಅರವತ್ತಕ್ಕೂ ಹೆಚ್ಚು ದೇಶಗಳನ್ನ ಭೇಟಿ ಮಾಡುವ ಸೌಭಾಗ್ಯ ನನ್ನದಾಗಿತ್ತು . ಆ ವೇಳೆಯಲ್ಲಿ ಬಹಳಷ್ಟು ಜನ ಪ್ರಸಿದ್ಧರನ್ನ ವಿಮಾನ ನಿಲ್ದಾಣದಲ್ಲಿ ಭೇಟಿಯಾಗುವ ಒಂದೆರೆಡು ನಿಮಿಷ ಮಾತನಾಡುವ ಮತ್ತು ಕೆಲವೊರೊಂದಿಗೆ ನಾಲ್ಕಾರು ತಾಸು ಒಟ್ಟಿಗೆ ಪ್ರಯಾಣ ಮಾಡುವ ಅವಕಾಶ ಕೂಡ ಸಿಕ್ಕಿತ್ತು . ಅವರ ಜೊತೆ ಫೋಟೋ ತೆಗೆಸಿಕೊಳ್ಳಬೇಕು ಅಂತಲೋ ಅಥವಾ ವಾಹ್ ಇಂತವರನ್ನ ಭೇಟಿ ಮಾಡಿದೆ ಎನ್ನುವ ಅಂಶ ನನ್ನಲ್ಲಿ ಹುಟ್ಟಲಿಲ್ಲ . ಭಕ್ತ ಕುಂಬಾರ ಚಿತ್ರವನ್ನ ನೋಡಿದ ನಂತರ ಡಾ . ರಾಜ್ ಅಭಿಮಾನಿಯಾದೆ . ಆ ನಂತರ ರಾಜ್ ಅವರ ಬಹುತೇಕ ಚಿತ್ರಗಳನ್ನ ನೋಡಿದ್ದೇನೆ . ಅವೆಲ್ಲ ಒಂದಕ್ಕಿಂತ ಒಂದು ಮುತ್ತುಗಳು . ಇನ್ನೊಂದು ಅಚ್ಚಳಿಯದೆ ಉಳಿದ ಚಿತ್ರ ದಿವಂಗತ ಶ್ರೀ ಶಂಕರ್ ನಾಗ್ ಅವರ ಜೊತೆಗಿನ ಅಪೂರ್ವ ಸಂಗಮ ಚಿತ್ರ . ರಾಜ್ ನಂತರ ನಾನು ಹೆಚ್ಚು ಇಷ್ಟಪಟ್ಟ ಮತ್ತೊಬ್ಬ ಕನ್ನಡ ನಟ ಶಂಕರನಾಗ್ . ಇಂತಹ ಮಹಾನ್ ಆತ್ಮಗಳು ಮತ್ತೆ ಕನ್ನಡ ನಾಡಿನಲ್ಲಿ ಹುಟ್ಟಿಬರಲಿ ಎನ್ನುವುದು ಆಶಯ . ಡಾ . ರಾಜ್ ಎಂದೆದಿಗೂ ನಮ್ಮ ಮನಸ್ಸಿನಲ್ಲಿ ಇದ್ದೆ ಇರುತ್ತಾರೆ . ದೈಹಿಕವಾಗಿ ನೀವು ನಮ್ಮೊಂದಿಗಿಲ್ಲ ಎನ್ನುವುದು ಬಿಟ್ಟರೆ ಬೇರೆಲ್ಲ ಇದೆ . ಹುಟ್ಟು ಹಬ್ಬದ ಶುಭಾಶಯಗಳು .

ಲೇಖಕರು:
ರಂಗಸ್ವಾಮಿ ಮೂಕನಹಳ್ಳಿ
ಅಂಕಣಕಾರರು

ರಂಗಸ್ವಾಮಿ ಮೂಕನಹಳ್ಳಿ

ರಂಗಸ್ವಾಮಿ ಮೂಕನಹಳ್ಳಿ

ರಂಗಸ್ವಾಮಿ ಮೂಕನಹಳ್ಳಿ ವೃತ್ತಿಯಿಂದ ಹಣಕಾಸು ಸಲಹೆಗಾರರು , ಹೂಡಿಕೆದಾರರು ಹಾಗೂ ಉದ್ಯಮಿ . ಪ್ರವೃತ್ತಿಯಿಂದ ಬರಹಗಾರ . ಕನ್ನಡದ ಎಲ್ಲಾ ನಿಯತಕಾಲಿಕೆಗಳಲ್ಲಿ ಲೇಖನಗಳನ್ನ ಬರೆದಿದ್ದಾರೆ . ಇಲ್ಲಿಯವರೆಗೆ ೭೫೦ ಪ್ರಕಟಿತ ಬರಹ , ೮ ಪುಸ್ತಕ , ೩೫ ಯೌಟ್ಯೂಬ್ ವಿಡಿಯೋ ಇವರ ಹೆಸರಲ್ಲಿವೆ . ವೃತ್ತಿ -ಪ್ರವೃತ್ತಿಯ ಸಲುವಾಗಿ ೬೦ ಕ್ಕೂ ಹೆಚ್ಚು ದೇಶಗಳನ್ನ ಸುತ್ತಿದ್ದಾರೆ . ಬಿ ಸ್ಕೂಲ್ , ಮತ್ತು ಆಕಾಶವಾಣಿಯಲ್ಲಿ ಉಪನ್ಯಾಸ ನೀಡುತ್ತಿದ್ದಾರೆ . ಸ್ಪೇನ್, ದುಬೈ ಮತ್ತು ಅಮೆರಿಕಾ ಮತ್ತು ಸಿಂಗಪೂರ್ ನಲ್ಲಿ ಗ್ರಾಹಕರನ್ನ ಹೊಂದಿದ್ದಾರೆ . ಇವರ ಲೇಖನಗಳು, ಅಂಕಣಗಳು www.hanaclasu.com ಬ್ಲಾಗಲ್ಲಿ ಲಭ್ಯ.

Leave a Reply