ನಾ ನಿನ್ನ ಮರೆಯಲಾರೆ

1976ರ ಈ ವಿಜಯ್ ನಿರ್ದೇಶನದ ಚಿತ್ರ ಎರಡು ಸಿಹಿ ಸುಳ್ಳು ಕಂಬಗಳ ಮೇಲೆ ಕಟ್ಟಿದ ಕಹಿ ಸತ್ಯದ ಮಂಟಪ.
ಆನಂದ್ ಅವರ ಕಥೆ ನಾನೂ ನೀನೂ ಜೋಡಿ ಆಧಾರಿತ ಈ ಶಕ್ತಿಯುತ ಚಿತ್ರಕಥೆಯನ್ನು ದಿ ಎವರ್ ಗ್ರೇಟ್ ಸ್ಕ್ರೀನ್ ಪ್ಲೇ ರೈಟರ್ ಚಿ ಉದಯಶಂಕರ್ ಬರೆದಿದ್ದಾರೆ.


ಚಿತ್ರ ಬಿಡುಗಡೆ ಆದಾಗ ನಾಯಕಿಯ ಬಗ್ಗೆ ಪೇಪರಿನಲ್ಲಿ ಚಿತ್ರ ವಿಮರ್ಶಕ ಬರೆಯುತ್ತಾ ಲಕ್ಷ್ಮಿಯ ಬಿಸ್ಕೆಟ್‌ನಂತಹ ಗರಿಮುರಿ ಸೌಂದರ್ಯ ಎಂದಿದ್ದು ನೆನಪಿದೆ. ಮಲಯಾಳಂ ಜೂಲಿ, ತಮಿಳು ನಾನ್ ಅವನಿಲ್ಲೈ ಮತ್ತು ಕನ್ನಡದ ಈ ಚಿತ್ರ ನೋಡಿ ಲಕ್ಷ್ಮಿಗೆ ಫುಲ್ ಫಿದಾ ಆದವನು ನಾನು. ತನ್ನ ಮೊದಲ ಚಿತ್ರ ಗೋವಾದಲ್ಲಿ ಸಿಐಡಿ 999ರಲ್ಲಿಯೇ ತನ್ನ ಮಾತುಗಳನ್ನು ತಾನೇ ಆಡಿದ್ದ ಲಕ್ಷ್ಮಿ, ಈ ಚಿತ್ರದಲ್ಲಿ ಕೂಡ ತಮ್ಮ ಸಿಂಗ್ ಸಾಂಗ್ ವಾಯ್ಸ್‌ನಲ್ಲಿ ಡಬ್ ಮಾಡಿದ್ದಾರೆ. ಗರಿಮುರಿ ಯಾಕೆಂದರೆ ಸ್ಕರ್ಟ್, ಮೊಣಕಾಲ ಮೇಲೆ ಫ್ರಾಕ್, ಬೆಲ್ ಬಾಟಂ ಧರಿಸಿದ್ದಾರೆ ಪ್ರಥಮಾರ್ಧದಲ್ಲಿ. ಆದರೆ ಚಂದ ನಟನೆ ಎರಡನೇ ಅರ್ಧದಲ್ಲೂ ಇದೆ. ತಾನು ಸುಳ್ಳು ಹೇಳುವಾಗ ಒಂದು ರೀತಿ ಆರ್ಟಿಫಿಶಿಯಲ್ ನಗೆಯೊಂದಿಗೆ ‘ಎರಡು ಮಕ್ಕಳ ತಾಯಾದ ಮೇಲೂ 16 ವರ್ಷದ ಹುಡುಗಿಯ ಹಾಗೆ ಇರೋಕ್ಕಾಗುತ್ತೇನು’ ಎನ್ನುವ ಡಯಲಾಗನ್ನು ನಾನು 43 ವರ್ಷಗಳಾದರೂ ಮರೆತಿರಲಿಲ್ಲ. ತನ್ನ ಪ್ರೇಮಿ ಆನಂದನಿಗೆ ಶುಕ್ರವಾರ ಹಾಫ್ ಡೇ ಇಲ್ವಾ ಎಂದು ಕೇಳುವ ಡಯಲಾಗ್ ಇಂದಿಗೂ ಹಚ್ಚ ಹಸಿರು.


ಅಣ್ಣಾವ್ರು ಬಹಳ ಚೆನ್ನಾಗಿ ನಟಿಸಿದ್ದಾರೆ ಎಂದರೆ ಸವಕಲು ಮಾತಾದೀತು. ನಟನೆಯಲ್ಲಿ ಕೋಪ ಪ್ರೇಮ ನಿಸ್ಸಹಾಯಕತೆ ಪ್ರೇಮಿಯನ್ನು ಮರಳಿ ಪಡೆಯಲು ಹರಸಾಹಸ, ಬೈಕ್ ರೇಸ್, ಬೈಕ್‌ನಲ್ಲಿ ರೈಲು ಛೇಸ್, ಫೈಟ್ ವಾಹ್… ಅಣ್ಣಾವ್ರೇ… ನಿಮ್ಮ ರೇಂಜಿಗೆ ಹ್ಯಾಟ್ಸ್ ಆಫ್..!

ಬಾಲಕೃಷ್ಣ (ಒಳ್ಳೆಯವನ ಪಾತ್ರ), ವಾದಿರಾಜ್, ಶ್ರೀಲಲಿತಾ, ಅಂಕಲ್ ಲೋಕನಾಥ್, ಶುಭಾ (ಪೂಂಜಾ ಅಲ್ಲ… ವಿಷ್ಣುವರ್ಧನ್ ನಾಗರಹಾವು ಮಾರ್ಗರೆಟ್), ಸಂಪತ್, ಹನುಮಂತಾಚಾರ್, ಪ್ರಮೀಳಾ ಜೋಷಾಯಿ ನಾನು ಗುರುತಿಸಿದ ನಟರು. ನಿರ್ಮಾಪಕ ಎನ್ ವೀರಾಸ್ವಾಮಿಯವರು ಬೈಕ್ ರೇಸಿನಲ್ಲಿ ಗೆದ್ದ ಅಣ್ಣಾವ್ರಿಗೆ ಕಪ್ ಕೊಡುತ್ತಾರೆ.
ದರ್ಪದಿಂದ ಮಾತಾಡುವ, ಮಗಳನ್ನು ಹಂಟರಿನಲ್ಲಿ ಹೊಡೆಯುವ, ಸಮಯಕ್ಕೆ ಸರಿಯಾಗಿ ಸೌಮ್ಯತೆಯ ನಾಟಕ ಆಡುವ ಶ್ರೀಮಂತೆಯ ಪಾತ್ರ ಲೀಲಾವತಿಯವರದು. ರಾಜ್ಯ ಪ್ರಶಸ್ತಿ ಪಡೆದ ಪಾತ್ರ ಇದು.


ರಾಜನ್ ನಾಗೇಂದ್ರ ಅವರ ನೇಪಥ್ಯ ಸಂಗೀತ ಚಂದವಿದೆ. ಹಾಡುಗಳ ಬಗ್ಗೆ ಪೇಪರಿನಲ್ಲಿ ಆ್ಯಡ್ ಬರುತ್ತಿತ್ತು ಆಗ. ಸಿನಿಮಾ ನೋಡುವ ಮುಂಚೆ ಹಾಡುಗಳು ಯಾರು ಯಾರಿಗೆ ಎಂದು ಊಹಿಸಿದ್ದೆವು. ಆದರೆ ಎಲ್ಲ ತಪ್ಪು. ರಾಜ್ ಜಾನಕಿಯಮ್ಮನವರ ಎಲ್ಲೆಲ್ಲಿ ನೋಡಲಿ ರಾಜ್ ಕನಸು. ಶೃಂಗಾರಮಯ ನನ್ನಾಸೆಯ ಹೂವೆ (ರಾಜ್‍ಕುಮಾರ್ ಮತ್ತು ಜಾನಕಿಯಮ್ಮನವರ ಕೇವಲ ಹಮ್ಮಿಂಗ್) ಲಕ್ಷ್ಮಿಯ ಕನಸು. ರಾಜ್ ವಾಣಿ ಜಯರಾಂ ನಿನ್ನ ಮರೆಯಲಾರೆ ಮತ್ತು ಪಿಬಿಎಸ್ ಮತ್ತು ಮಗುವಿನ ಧ್ವನಿಯಲ್ಲಿ ಜಾನಕಿಯಮ್ಮ ಸಿಹಿ ಮುತ್ತು ಸಿಹಿ ಮುತ್ತು ಇಂದಿಗೂ ಜನಪ್ರಿಯ ಗೀತೆಗಳು. ಜನ ಅವನ್ನು ಗುನುಗುತ್ತಾರೆ..

ಲೇಖಕರು: ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply