ಪಂಜಾಬಿ ಚಿತ್ರ ರಂಗ

( ಮುಂದುವರೆದ ಭಾಗ )

೧೯೫೯ ರಲ್ಲಿ ನಿರ್ಮಾಣಗೊಂಡಿದ್ದ ಭಾಂಗ್ರಾ ಚಿತ್ರವನ್ನು ಪುನಃ ಜೆಟ್ಟಿ ಎಂಬ ಹೆಸರಿನಲ್ಲಿ ರಿಮೇಕ್ ಮಾಡಲಾಗಿತ್ತು. ಅಲ್ಲದೇ ಈ ಪರಂಪರೆಯು ನಟ ಜಾನಿ ವಾಕರ್ ನಟನೆಯ ವಿಲಯತಿ ಬಾಬು ಚಿತ್ರದವರೆಗೂ ಮುಂದುವರೆಯಿತು. ೧೯೬೩ ರಲ್ಲಿ ತೆರೆ ಕಂಡ ಸನ್ನಿ ಮತ್ತು ಏಕ್ ಧರ್ತಿ ಪಂಜಾಬಿ ಚಿತ್ರಗಳ ಮೂಲಕ ನಟ ಪ್ರೇಮ್ ಚೋಪ್ರಾ ತಮ್ಮ ನಟನೆಯ ಮೂಲಕ ಪಂಜಾಬಿ ಚಿತ್ರ ರಸಿಕರ ಮನಸ್ಸನ್ನು ಗೆದ್ದಿದ್ದರು.

೧೯೬೪ ರಲ್ಲಿ ತೆರೆ ಕಂಡ ಇಂದಿರಾ ಬಿಲ್ಲಿ, ರವೀಂದ್ರ ಕಪೂರ್ ಅವರೊಂದಿಗೆ ನಟಿಸಿದ ಸಬ್ ಸಾಲಿಯಾ ಮತ್ತು ನಟ ಧಾರಾ ಸಿಂಗ್ ಜೊತೆ ನಟಿಸಿದ ಜಗ್ಗ ಚಿತ್ರವು ವಾಣಿಜ್ಯವಾಗಿ ಯಶಸ್ಸು ಪಡೆದಿತ್ತು. ಈ ದಶಕದಲ್ಲಿ ೧೯೬೪ ರಲ್ಲಿ ತೆರೆ ಕಂಡ ಬಾಲರಾಜ್ ಸಾಹ್ನಿ ಮತ್ತು ನಿಶಿ ನಟಿಸಿದ ಸಟ್ಲಜ್ ದೇ ಕಂದ್ ಚಿತ್ರವು ಬಹಳ ದೊಡ್ಡ ಪ್ರಮಾಣದಲ್ಲಿ ಹೆಸರನ್ನು ಮಾಡಿತ್ತು. ಕಾರಣ ಅಧಿಕ ಬಂಡವಾಳದಲ್ಲಿ ನಿರ್ಮಾಣಗೊಂಡ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅಪಾರ ಯಶಸ್ಸನ್ನು ಪಡೆಯಿತಲ್ಲದೆ ಅತ್ಯುತ್ತಮ ಚಿತ್ರ ಎಂದು ರಾಷ್ಟ್ರ ಪ್ರಶಸ್ತಿಯನ್ನು ಪಡೆದಿತ್ತು.

ಹನ್ಸ್ ರಾಜ್ ಬಹ್ಲ್ ಅವರ ಸಂಗೀತ ನಿರ್ದೇಶನವಿದ್ದ ಈ ಚಿತ್ರವನ್ನು ಪದಮ್ ಪ್ರಕಾಶ್ ಮಹೇಶ್ವರಿ ನಿರ್ದೇಶಿಸಿದ್ದರು. ಈ ಸಂದರ್ಭದಲ್ಲಿ ಸುಂದರ್, ರವೀಂದ್ರ ಕಪೂರ್, ಮನೋಹರ್ ದೀಪಕ್ ಸಿನಿ ಪ್ರೇಕ್ಷಕರನ್ನು ರಂಜಿಸಿದ್ದ ಕಲಾವಿದರಾಗಿದ್ದರು. ಅಲ್ಲದೇ ಇದೇ ಸಮಯದಲ್ಲಿ ಬಾಲಿವುಡ್ ಚಿತ್ರರಂಗದ ಪ್ರಮುಖ ನಟರಾದ ಪ್ರೇಮ್ ಚೋಪ್ರಾ ಮತ್ತು ಮದನ್ ಪುರಿ ಆಗಾಗ ಕೆಲವು ಚಿತ್ರಗಳಲ್ಲಿ ನಟಿಸುವುದರ ಮೂಲಕ ಜನ ಮನ್ನಣೆಯನ್ನು ಗಳಿಸಿದ್ದರು. ೧೯೬೦ ರ ದಶಕದಲ್ಲಿ ಬಹು ಬೇಡಿಕೆಯ ನಟಿಯರಾಗಿದ್ದ ನಿಶಿ ಮತ್ತು ಇಂದಿರಾ ಬಿಲ್ಲಿ ಅನೇಕ ಹಿಂದಿ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಹಲವು ಯಶಸ್ವಿ ಚಿತ್ರಗಳೊಂದಿಗೆ ಸಾಗುತ್ತಿದ್ದ ಈ ಚಿತ್ರರಂಗವು ೧೯೬೯ ನೇ ಇಸ್ವಿಯಲ್ಲಿ ಮಹತ್ತರ ತಿರುವನ್ನು ಪಡೆಯಿತು. ಇಲ್ಲಿಯವರೆಗೂ ಕಪ್ಪು ಬಿಳುಪು ಚಿತ್ರಗಳು ಪ್ರದರ್ಶನ ಕಾಣುತ್ತಿದ್ದ  ಸಮಯದಲ್ಲಿ ಇದೇ ವರ್ಷ ತೆರೆ ಕಂಡ ರಾಮ ಮಹೇಶ್ವರಿ ನಿರ್ದೇಶನದ ಮತ್ತು ಬಾಲಿವುಡ್ ಚಿತ್ರರಂಗದ ಪಿತಾಮಹ ಎಂದು ಪ್ರಸಿದ್ಧಿ ಪಡೆದಿದ್ದ ನಟ ಪ್ರಥ್ವಿ ರಾಜ್ ಕಪೂರ್,ಸೋಮದತ್, ನಿಶಿ,ವಿಮಿ,ವೀಣಾ ಮುಂತಾದ ಜನಪ್ರಿಯ ಕಲಾವಿದರು ನಟಿಸಿದ ನಾನಾಕ್ ಜಹಾಜ್ ಹೈ ಪಂಜಾಬಿ ಭಾಷೆಯಲ್ಲಿ ತಯಾರಾದ ಮೊದಲ ವರ್ಣ ಚಿತ್ರವಾಗಿದೆ.

ಅಲ್ಲದೇ ಭಾರತ ಚಿತ್ರರಂಗದಲ್ಲಿ ಅತಿ ದೊಡ್ಡ ಯಶಸ್ಸನ್ನು ಕಂಡ ಪಂಜಾಬಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮತ್ತು ಈ ಚಿತ್ರವು ರಾಷ್ಟ್ರ ಪ್ರಶಸ್ತ್ರಿಯನ್ನು ಪಡೆದಿದ್ದಲ್ಲದೆ ಇಡೀ ದೇಶವೇ ಪಂಜಾಬಿ ಚಿತ್ರ ರಂಗದ ಕಡೆ ತಿರುಗುವಂತೆ ಮಾಡಿತ್ತು. ಇಲ್ಲಿಯವರೆಗೂ ಕುಂಟುತ್ತ ಸಾಗುತ್ತಿದ್ದ ಈ ಚಿತ್ರರಂಗದ ಚೇತರಿಕೆಗೆ ಕಾರಣವಾಯಿತು. ಈ ಚಿತ್ರದ ಯಶಸ್ಸಿನ ಪ್ರೇರಣೆಯಿಂದ ನಿರ್ಮಾಪಕರು ದೊಡ್ಡ ಸಂಖ್ಯೆಯಲ್ಲಿ ಚಿತ್ರಗಳನ್ನು ನಿರ್ಮಿಸಲು ಸಿದ್ಧವಾದರೆ ಪಂಜಾಬಿ ಮೂಲದ ಹಿಂದಿ ಚಿತ್ರರಂಗದ ಜನಪ್ರಿಯ ನಟರು ಪಂಜಾಬಿ ಚಿತ್ರಗಳ ಕಡೆಗೆ ಆಸಕ್ತಿಯನ್ನು ಹೊಂದುವಂತೆ ಮಾಡಿತ್ತು.

೧೯೭೦ ರಲ್ಲಿ ತೆರೆ ಕಂಡ ನಟ ಧರ್ಮೇಂದ್ರ ಮತ್ತು ಆಶಾ ಪಾರೇಖ್ ನಟಿಸಿದ ಕಂಕಣ್ ದೇ ಓಲೇ, ಧಾರಾ ಸಿಂಗ್ ಮತ್ತು ಬಾಲರಾಜ್ ಸಾಹ್ನಿ ನಟಿಸಿದ ನಾನಕ್ ದುಖಿಯಾ ಸಬ್ ಸಂಸಾರ್, ೧೯೭೨ ರಲ್ಲಿ ತೆರೆ ಕಂಡ ಪ್ರಥ್ವಿ ರಾಜ್ ಕಪೂರ್ ಮತ್ತು ಧಾರಾ ಸಿಂಗ್ ನಟಿಸಿದ ಮಿತ್ರನ್ ದೇ, ೧೯೭೩ ರಲ್ಲಿ ತೆರೆ ಕಂಡ ನಟ ಸುನೀಲ್ ದತ್ ಮತ್ತು ರಾಧಾ ಸಲುಜಾ ನಟಿಸಿದ ಮನ್ ಜೀತೇ ಜಗ್ ಜೀತ್ ಮತ್ತು ೧೯೭೪ ರಲ್ಲಿ ತೆರೆ ಕಂಡ ನಟ ಧರ್ಮೇಂದ್ರ ಹಾಗೂ ರಾಜೇಂದ್ರ ಕುಮಾರ್ ನಟಿಸಿದ ದೋ ಶೇರ್ ಮತ್ತು ರಾಧಾ ಚಿತ್ರವು ಕೂಡ ಯಶಸ್ವಿ ಪ್ರದರ್ಶನ ಕಂಡಿತ್ತು.

( ಮುಂದುವರೆಯುವುದು )

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply