( ಮುಂದುವರೆದ ಭಾಗ )
ಜನಪ್ರಿಯ ನಟ ವೀರೇಂದ್ರ ನಟಿಸಿದ ೧೯೮೧ ರಲ್ಲಿ ತೆರೆ ಕಂಡ ಬಲ್ಜೀರೋ ಭಾಯಿ, ೧೯೮೪ ಯಾರಿ ಜಟ್ಟಿ ದೀ,೧೯೮೫ ಸರಪಂಚ್, ವೈರಿ ಮತ್ತು ೧೯೮೭ ರಲ್ಲಿ ತೆರೆ ಕಂಡ ಪಚೋಲಾ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಪಡೆದಿದ್ದವು. ೧೯೮೫ ರಲ್ಲಿ ತೆರೆ ಕಂಡ ಭಕ್ತಿ ಪ್ರಧಾನ ಚಿತ್ರ ಉಚಾ ಧರ್ ಬಬೆ ನಾನಕ್ ದಾ ಚಿತ್ರವು ಗಾಯಕ ಮತ್ತು ನಟ ಗುರ್ದಾಸ್ ಮನ್ ವೃತ್ತಿ ಬದುಕಿಗೆ ಮಹತ್ತರ ತಿರುವನ್ನು ನೀಡಿತ್ತು.
ಗುರ್ದಾಸ್ ನಟ ರಾಜ್ ಬಬ್ಬರ್ ಮತ್ತು ಓಂ ಪುರಿ ಜೊತೆ ನಟಿಸಿದ ಮತ್ತು ೧೯೮೬ ರಲ್ಲಿ ತೆರೆ ಕಂಡ ಚಿತ್ರ ಲೋಂಗ್ ಯಾ ಲಷ್ಯಾರ್ ವಾಣಿಜ್ಯವಾಗಿ ಯಶಸ್ಸು ಪಡೆದಿತ್ತು. ೧೯೮೮ ನೇ ಇಸ್ವಿಯು ಪಂಜಾಬಿ ಚಿತ್ರ ರಂಗಕ್ಕೆ ಕರಾಳ ವರ್ಷ ಕೂಡ ಆಗಿದೆ. ಇದೇ ವರ್ಷ ಜಟ್ ತೇ ಜಮೀನ್ ಚಿತ್ರದ ಚಿತ್ರೀಕರಣ ಸಮಯದಲ್ಲಿ ಜನಪ್ರಿಯ ನಟಿ ವೀರೇಂದ್ರ ಹತ್ಯೆಗೊಳಗಾಗಿದ್ದು ಈ ಚಿತ್ರ ರಂಗಕ್ಕೆ ತುಂಬಲಾರದ ನಷ್ಟವಾಯಿತು. ಈ ಕಾರಣದಿಂದ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ನಟ ಯೋಗರಾಜ್ ಸಿಂಗ್ ಮತ್ತು ಗುಗ್ಗು ಗಿಲ್ ನಾಯಕ ನಟರಾಗಿ ಬಡ್ತಿಯನ್ನು ಪಡೆದಿದ್ದರು.
೧೯೮೯ ರಲ್ಲಿ ತೆರೆ ಕಂಡ ನಟ ರಾಜ್ ಬಬ್ಬರ್ ಮತ್ತು ದೀಪ್ತಿ ನೆವೆಲ್ ನಟಿಸಿದ ಮಾಹ್ರಿ ದಾ ದೀವಾ ಚಿತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ೧೯೮೦ ರ ದಶಕದಲ್ಲಿ ರಾಜ್ ಬಬ್ಬರ್, ವೀರೇಂದ್ರ, ಸತೀಶ್ ಕೌಲ್,ರಾಜ್ ಮುರಾದ್ ಮತ್ತು ಗುರ್ದಾಸ್ ಮನ್ ಸೇರಿ ಅನೇಕ ನಟರು ಬೇಡಿಕೆಯಿದ್ದ ಸಮಯದಲ್ಲಿ ದಲ್ಜಿತ್ ಕೌರ್, ಪ್ರೀತಿ ಸರ್ಪು,ಭಾವನಾ ಭಟ್ಟ ಮತ್ತು ಅಪರ್ಣಾ ಚೌಧರಿ ನಾಯಕಿಯರಾಗಿ ಉತ್ತಂಗದಲ್ಲಿದ್ದರು. ಜನಪ್ರಿಯ ನಟಿ ಪ್ರೀತಿ ಸರ್ಪು ನಿರ್ದೇಶಿಸಿ ನಟ ಧರ್ಮೇಂದ್ರ, ರಾಜ್ ಬಬ್ಬರ್ ,ಗುಗ್ಗು ಗಿಲ್ ಮತ್ತು ಯೋಗರಾಜ್ ಸಿಂಗ್ ಜೊತೆ ನಟಿಸಿದ ೧೯೯೦ ರಲ್ಲಿ ತೆರೆ ಕಂಡ ಕುರ್ಭಾನಿ ಜಟ್ ದಿ ಚಿತ್ರವು ವಾಣಿಜ್ಯದ ದೃಷ್ಟಿಯಿಂದ ಮಾತ್ರ ಯಶಸ್ವಿಯಾಗಲು ಸಾಧ್ಯವಾಯಿತು.
ಇದೇ ವರ್ಷ ತೆರೆ ಕಂಡ ದುಷ್ಮನಿ ದಿ ಅಗ್ ಚಿತ್ರವು ನಟ ವೀರೇಂದ್ರ ನಟಿಸಿದ ಕೊನೆಯ ಚಿತ್ರ. ದಲ್ಜಿತ್ ಕೌರ್ ಮತ್ತು ಗುಗ್ಗು ಗಿಲ್ ನಟಿಸಿದ ಆಂಖ್ ಜಟ್ಟನ್ ದೀ ಚಿತ್ರವು ಸಾಧಾರಣ ಯಶಸ್ಸು ಪಡೆದಿದ್ದರೂ ೧೯೯೧ ರಲ್ಲಿ ತೆರೆ ಕಂಡ ಗುಗ್ಗು ಗಿಲ್ ನಟಿಸಿದ ಬದ್ಲಾ ಜಟ್ಟಿ ದಾ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿತ್ತು. ೧೯೯೦ ರಲ್ಲಿ ತೆರೆ ಕಂಡ ಉಡೀಕನ್ ಸೌ ದಿಯಾ ಮತ್ತು ೧೯೯೧ ರಲ್ಲಿ ತೆರೆ ಕಂಡ ವೈಸಾಕಿ ಚಿತ್ರಗಳು ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆದರೂ ಹಣ ಗಳಿಕೆಯಲ್ಲಿ ಹೀನಾಯ ಸೋಲನ್ನು ಕಂಡವು.
೧೯೯೩ ರಲ್ಲಿ ತೆರೆ ಕಂಡ ನಟ ಯೋಗರಾಜ್ ಸಿಂಗ್ ಮತ್ತು ನೀನಾ ಸಿಂಧು ನಟಿಸಿದ ಜಟ್ಟ ಸಚ್ಛಾ ಸಿಂಗ್ ಸೂರ್ಮ್ ಮತ್ತು ಗುಗ್ಗು ಗಿಲ್ ನಟಿಸಿದ ಮಿರ್ಜಾ ಸಾಹೀಬಾ ಸಾಧಾರಣ ಯಶಸ್ಸನ್ನು ಗಳಿಸಿದರೆ ಪ್ರೀತಿ ಸರ್ಪು ಅವರ ಮೆಹಂದಿ ಶಗ್ಗನ್ ದಿ ಚಿತ್ರವು ಹೀನಾಯ ಸೋಲನ್ನು ಕಂಡಿತ್ತು. ೧೯೯೪ ರಲ್ಲಿ ತೆರೆ ಕಂಡ ನಟ ಗುರ್ದಾಸ್ ಮನ್ ನಟಿಸಿದ ಕಛೇರಿ ಚಿತ್ರವು ಹಣ ಗಳಿಕೆಯ ಯಶಸ್ಸಿನೊಂದಿಗೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದರೆ ೧೯೯೫ ರಲ್ಲಿ ತೆರೆ ಕಂಡ ಕಿಮಿ ವರ್ಮಾ ನಟಿಸಿದ ನಸೀಬು ಚಿತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಕೂಡ ವ್ಯಾವಹಾರಿಕವಾಗಿ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ. ಇದೇ ವರ್ಷ ತೆರೆ ಕಂಡ ನಟ ಗುಗ್ಗು ಗಿಲ್,ಗುರ್ದಾಸ್ ಮನ್, ಪ್ರೀತಿ ಸರ್ಪು ಮತ್ತು ಧಾರಾ ಸಿಂಗ್ ನಟಿಸಿದ ಪ್ರತಿಗ್ಯಾ ಚಿತ್ರವು ಕೂಡ ಯಶಸ್ಸನ್ನು ಕಂಡಿತ್ತು. ಆದರೆ ೧೯೯೦ ರ ದಶಕದ ಕೊನೆಯಾರ್ಧ ಭಾಗದಲ್ಲಿ ತೆರೆ ಕಂಡ ಬಹುತೇಕ ಚಿತ್ರಗಳು ಸತತವಾಗಿ ಹೀನಾಯ ಸೋಲನ್ನು ಕಂಡ ಪರಿಣಾಮ ಈ ಚಿತ್ರರಂಗವು ಅವನತಿಯ ಕಡೆ ಸಾಗಿತ್ತು.
ಈ ಸಮಯದಲ್ಲಿ ೧೯೯೮ ರಲ್ಲಿ ತೆರೆ ಕಂಡ ಮಹೋಲ್ ಠೀಕ್ ಹೈ , ೧೯೯೯ ರಲ್ಲಿ ತೆರೆ ಕಂಡ ಶಾಹೀದ್ ಎ ಮೊಹಬ್ಬತ್ ಬೂಟಾ ಸಿಂಗ್ ಮತ್ತು ಶಹೀದ್ ಉದ್ಧವ್ ಸಿಂಗ್ ನಂತಹ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಯಶಸ್ಸನ್ನು ಪಡೆದಿದ್ದವಲ್ಲದೆ ೧೯೯೦ ರ ದಶಕದಲ್ಲಿ ಯೋಗರಾಜ್ ಸಿಂಗ್, ಗುಗ್ಗು ಗಿಲ್,ನೀನಾ ಸಿಂಧು ಮತ್ತು ಉಪಾಸನಾ ಸಿಂಗ್ ಜನಪ್ರಿಯ ಕಲಾವಿದರಾಗಿದ್ದರು.
( ಮುಂದುವರೆಯುವುದು )