ಲಕ್ಷಾಧೀಶ್ವರ ಸಂಪತ್ ಮಗ ಮೋಹನ್ (ರಾಜ್‍ಕುಮಾರ್) ಮತ್ತು ಸಂಪತ್ ತಮ್ಮನ ಮಗ ಜಯಣ್ಣ (ನಾಗಪ್ಪ) ಹಣದ ಉಪಯೋಗದ ಸಂಗತಿಯಲ್ಲಿ ಘರ್ಷಣೆ ಮಾಡುತ್ತಿರುತ್ತಾರೆ. ಮೋಹನ್ ಪರೋಪಕಾರಿ ಎಂಬ ಬಿರುದು ಹೊಂದುವಷ್ಟು ಪರೋಪಕಾರ ಮಾಡುತ್ತಿರುತ್ತಾನೆ. ತಂದೆಗೆ ಹಾಕಿದ ಸವಾಲ್‍ನಂತೆ 25 ಸಾವಿರ ರೂಪಾಯಿಗಳನ್ನು 365 ದಿನಗಳಲ್ಲಿ ಸಂಪಾದಿಸಲು ಮನೆಯಿಂದ ಹೊರಡುತ್ತಾನೆ.
ಒಂದು ಟ್ರಕ್ ಬೆಂಗಳೂರಿಗೆ ತಲುಪಿಸಲು ಹೋಗುವಾಗ ಅವನ ಟ್ರಕ್ ಹತ್ತುತ್ತಾನೆ(ಳೆ) ಶ್ಯಾಮಿ. ಅವಳನ್ನು ಅವಳ ಅಜ್ಜಿ ಯಾರೋ ಮುದುಕನಿಗೆ ಮಾರುವುದರಲ್ಲಿರುತ್ತಾಳೆ. ಹುಡುಗನ ವೇಷ ಧರಿಸಿದ ಶ್ಯಾಮಿ (ಜಯಂತಿ)ಯನ್ನು ನೀರಿಗೆಸೆದ ಮೋಹನ್‍ಗೆ ಅವಳು ಹುಡುಗಿ ಎಂದು ತಿಳಿಯುತ್ತದೆ.
ರಾಜ್ ಜಯಂತಿ ಮಾತಿನ ಚಕಮತಿ ಬಹಳ ಚೆಂದ ಈ ಸಿನಿಮಾದಲ್ಲಿ. ಇಡೀ ಸಿನಿಮಾದಲ್ಲಿ ಅತ್ಯಂತ ಲವಲವಿಕೆಯ ಸಂಭಾಷಣೆ ಇದೆ ಈ ಚಿತ್ರದಲ್ಲಿ.
ರಾಜ್ ಬೆಂಗಳೂರಿಗೆ ಬಂದಾಗ ಒಂದು ಘಟನೆ ನಡೆಯುತ್ತದೆ. ರಾಮಣ್ಣ (ಮತ್ತೆ ರಾಜ್‍ಕುಮಾರ್) ಬೀಡಿ ಸೇದುತ್ತಾ ಟ್ಯಾಕ್ಸಿ ಓಡಿಸುವಾಗ ಆ ಟ್ಯಾಕ್ಸಿಯ ಪಯಣಿಗ ಮತ್ತು ರಾಮಣ್ಣ ಇಬ್ಬರೂ ಒಬ್ಬ ದುರುಳನಿಂದಾಗಿ ಸಾವನ್ನಪ್ಪುತ್ತಾರೆ.
ಮೋಹನನನ್ನು ರಾಮಣ್ಣ ಎಂದು ಪೊಲೀಸರು ಠಾಣೆಗೆ ಕರೆತಂದು, ಅವನಲ್ಲವೆಂದು ತಿಳಿದ ನಂತರವೂ ಪೊಲೀಸರಿಗೆ ಸಹಾಯ ಮಾಡಿ, 5 ಸಾವಿರ ರೂ ಬಹುಮಾನ ಪಡೆಯುತ್ತಾನೆ. ಆದರೆ ಅದನ್ನು ರಾಮಣ್ಣನ ತಂಗಿಯ ಮದುವೆಗೆ ಖರ್ಚು ಮಾಡುತ್ತಾನೆ. ಪಾಪಮ್ಮ ಮತ್ತು ಕಲಾ ಅವನ ತಾಯಿ ಮತ್ತು ತಂಗಿಯ ಪಾತ್ರಗಳಲ್ಲಿದ್ದಾರೆ.
ಯಶ್‍ರಾಜ್ ಜೊತೆ ಬಾಕ್ಸಿಂಗ್ ಮಾಡಿ (ಆಮೇಲೆ ಮತ್ತೆ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಬಾಕ್ಸಿಂಗ್) ಹಣ ಗೆಲ್ಲುತ್ತಾನೆ. ಯಾರೋ ಅಂಗಡಿಯಾತನ ಸಾಲಕ್ಕೆ ಕೊಡುತ್ತಾನೆ.
ಹೀಗೇ…ನಡೆಯುತ್ತಲೇ ಇರುತ್ತದೆ. ಅವನಿಗೂ ಜಯಂತಿಗೂ ಪ್ರೇಮ ಉಂಟಾಗುತ್ತದೆ.
ಕೊನೆಗೂ ಹಣ ಗೆದ್ದು ಮನೆಗೆ ಬರುವ ವೇಳೆಗೆ… ಬೇಡಬಿಡಿ.
ಹಾಡುಗಳೆಲ್ಲವೂ ಬಹಳವೇ ಜನಪ್ರಿಯ. ಗುಟ್ಟೊಂದ ಹೇಳುವೆ ಪುಟಾಣಿ ಮಕ್ಕಳೆ (ಪಿ.ಬಿ.ಎಸ್), ಹೋದರೆ ಹೋಗು ನನಗೇನು (ಪಿಬಿಎಸ್ ಜಾನಕಿ) ಇದರಲ್ಲಿ ಪಿಬಿಎಸ್ ಓ ಕಿಶೋರ್ ಕುಮಾರ್ ಎಂದು ಜಯಂತಿ ಹಾಡುವಾಗ ಯೋಡ್ಲಿಂಗ್ ಮಾಡುತ್ತಾರೆ. ಕಣ್ಣು ರೆಪ್ಪೆ ಒಂದನೊಂದು ಮರೆವುದೇ ಬಹಳ ಮಧುರ ಮಧುರ ಯುಗಳ ಗೀತೆ. ಪಿಬಿಎಸ್ ಎಸ್‍ಜೆ. ಐಸ್‍ಕ್ರೀಂ ಬೇಕೆ ಐಸ್‍ಕ್ರೀಂ ಪಿಬಿಎಸ್ ಹಾಡಿನಲ್ಲಿ ರಾಜ್ ಅತ್ಯಂತ ವಿಗರಸ್ ಆಗಿ ಕುಣಿದಾಡಿದ್ದಾರೆ. ಅದರಲ್ಲೂ ಪಿಬಿಎಸ್ ಕಿಶೋರ್‍ಕುಮಾರ್‍ನಂತೆ ಯೋಡ್ಲಿಂಗ್ ಮಾಡಿದ್ದಾರೆ.
ಕೆ.ಜಿ.ಎಫ್ ಚಿತ್ರದಲ್ಲಿ ‘ಅಣ್ತಮ್ಮ’ ತಮ್ ಅನ್ನಾ ಜೊತೆ ಕುಣಿದಿ(ಯಲಿ)ರುವ ಎಲ್ ಆರ್ ಈಶ್ವರಿ ಹಾಡಿರುವ ಗೀತೆ ವಿಜಯಲಲಿತಾ ನೃತ್ಯ ಜೋಕೆ ನಾನು ಬಳ್ಳಿಯ ಮಿಂಚು, ಈಶ್ವರಿ ಅವರ ಆಲ್ ಟೈಮ್ ಹಿಟ್ಸ್‍ನಲ್ಲಿ ಒಂದು.
ಬೆಂಗಳೂರು, ಮೈಸೂರುಗಳನ್ನು ಪ್ರತಿ ಸಿನಿಮಾದಲ್ಲೂ ಗಮನವಿಟ್ಟು ನೋಡಿ ಆಗಿನ ಕಾಲದ ನಗರಗಳು ಹೇಗಿದ್ದವೆಂಬುದನ್ನು ಕಂಡುಕೊಳ್ಳಲು ಯತ್ನಿಸುತ್ತಿದ್ದೇನೆ. ಈ ಸಿನಿಮಾ 1970ರದ್ದು.
ಕಮೆಡಿಯನ್ ಟ್ರ್ಯಾಕ್ ಇಲ್ಲ. ನಾಯಕ ನಾಯಕಿ ಇಬ್ಬರ ಡಯಲಾಗುಗಳೇ ಸಾಕಷ್ಟು ನಗಿಸುತ್ತವೆ.
ನಾಗಪ್ಪ ಒಳ್ಳೆಯ ನಟ. ಬಹಳ ಒಳ್ಳೆಯ ಡಿಕ್ಷನ್ ಇದೆ ಕನ್ನಡ ಭಾಷೆಯದು.