ಇತ್ತೀಚೆಗೆ ಭಾರತೀಯ ಚಿತ್ರರಂಗದ ತುಂಬಾ ದಕ್ಷಿಣದ ಸಿನಿಮಾಗಳದ್ದೇ ಸದ್ದು. ದಕ್ಷಿಣದ ಸಿನಿಮಾಗಳೆಂದರೆ ಮೂಗು ಮುರಿಯುತ್ತಿದ್ದ ಬಾಲಿವುಡ್ ಮಂದಿ ಇಂದು ದಕ್ಷಿಣದ ಚಿತ್ರಗಳನ್ನು ನೋಡಿ ವಾಹ್ ಎನ್ನುತ್ತಿದ್ದಾರೆ. ಒಂದೆಡೆ ಬಾಲಿವುಡ್ ಸಿನಿಮಾಗಳು ಸೋತು ಸುಣ್ಣವಾಗಿ ಮಕಾಡೆ ಮಲಗುತ್ತಿದ್ದರೆ, ಮತ್ತೊಂದೆಡೆ ಪುಷ್ಪ, ಆರ್.ಆರ್.ಆರ್., ಕೆ.ಜಿ.ಎಫ್ ನಂತಹ ಚಿತ್ರಗಳು ಆ ಗಾಯದ ಮೇಲೆ ಮತ್ತಷ್ಟು ಬರೆ ಹಾಕುತ್ತಿವೆ. ಚೇತರಿಸಿಕೊಳ್ಳಲು ಕೂಡ ಆಗದ ರೀತಿಯಲ್ಲಿ ಬಾಲಿವುಡ್ ಗೆ ಏಟುಗಳು ಬೀಳುತ್ತಲೇ ಇದೆ. ಆ ಗಾಯದ ಮೇಲೆ ಮತ್ತಷ್ಟು ಉಪ್ಪು ಸುರಿಯಲು ಮತ್ತೊಂದು ದಕ್ಷಿಣದ ಪ್ಯಾನ್ ಇಂಡಿಯಾ ಸಿನಿಮಾ ಸೈಲೆಂಟಾಗಿ ತಯಾರಾಗುತ್ತಿದೆ. ಅದುವೇ ಪೊನ್ನಿಯನ್ ಸೆಲ್ವನ್ – 1. ಪೊನ್ನಿಯನ್ ಸೆಲ್ವನ್ ತಮಿಳರಿಗೆ ಚಿರಪರಿಚಿತ ಹೆಸರು. ಕನ್ನಡಕ್ಕೆ ಮಯೂರವರ್ಮ ರಿದ್ದಂತೆ ತಮಿಳರಿಗೆ ಪನ್ನಿಯನ್ ಸೆಲ್ವನ್. ಇಂತಹ ಪಾತ್ರವನ್ನು ತನ್ನದೇ ಆದ ಶೈಲಿಯಲ್ಲಿ ದೇಶಕ್ಕೆ ಪರಿಚಸಹೊರಟಿದ್ದಾರೆ ಮಣಿರತ್ನಂ.
ಬಾಂಬೆ, ರೋಜಾ, ನಾಯಗನ್, ದಳಪತಿಗಳಂತಹ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟವರು ಮಣಿರತ್ನಂ. ಒಂದರ್ಥದಲ್ಲಿ ದೇಶದ ನಂ. 1 ನಿರ್ದೇಶಕರೆಂದೇ ಹೆಸರಾದವರು. ಸಿನಿಮಾ ಶುರುವಿನ ಟೈಟಲ್ ಕಾರ್ಡಿನಿಂದ ಹಿಡಿದು ಶುಭಂ ಕಾರ್ಡಿನವರೆಗೂ ಪ್ರತಿ ಫ್ರೆಮನ್ನೂ ತನ್ನದೇ ಆದ ಶೈಲಿಯಲ್ಲಿ ಕ್ಯಾಮರಾದಲ್ಲಿ ಸೆರೆ ಹಿಡಿಯುವ ಮಣಿರತ್ನಂ ರ ತಂತ್ರಗಾರಿಕೆಗೆ ಅವರೇ ಸಾಟಿ. ಕೆಲವು ದಿನಗಳ ಹಿಂದಷ್ಟೇ ಹೃದಯ ಕಾಯಿಲೆಯಿಂದ ಆಸ್ಪತ್ರೆ ಸೇರಿದ್ದ ಮಣಿರತ್ನಂ ಈಗ ನಮ್ಮಗಳ ಹೃದಯಕ್ಕೆ ಈ ಸಿನಿಮಾ ಮೂಲಕ ಲಗ್ಗೆಯಿಡಲು ಬರುತ್ತಿದ್ದಾರೆ. ವಿಕ್ರಂ, ಕಾರ್ತಿ, ತ್ರಿಷಾ, ಜಯಂ ರವಿ, ಐಶ್ವರ್ಯ ರಾಯ್ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿ ತುಂಬಿದೆ. ಕಣ್ಣಿಗೆ ಮುದ ನೀಡುವ ಜವಾಬ್ದಾರಿಯನ್ನು ರವಿ ವರ್ಮನ್ ರವರಿಗೂ, ಕಿವಿಗಳಿಗೆ ಹಿತ ನೀಡುವ ಜವಾಬ್ದಾರಿಯನ್ನು ಎ. ಆರ್. ರೆಹ್ಮಾನರಿಗೂ ವಹಿಸಲಾಗಿದೆ.
1950 ರಲ್ಲಿ ತಮಿಳುನಾಡಿನಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟುಹಾಕಿದ ಕಾದಂಬರಿ ಪೊನ್ನಿಯನ್ ಸೆಲ್ವನ್. ಚೋಳರಾಜರ ಆಳ್ವಿಕೆ, ಅವರ ರಾಜವೈಭವ, ಒಳಸಂಚುಗಳನ್ನು ಅಕ್ಷರರೂಪದಲ್ಲಿ ಪೋಣಿಸಿ ಈ ಕಾದಂಬರಿಯನ್ನು ಸೃಷ್ಟಿಸಿದ್ದರು ತಮಿಳಿನ ಖ್ಯಾತ ಲೇಖಕ ಕಲ್ಕಿ ಕೃಷ್ಣಮೂರ್ತಿಯವರು. ಸುಮಾರು 2000 ಪುಟಗಳಿಗಿಂತ ದೊಡ್ಡದಾದ ಬೃಹತ್ ಕಾದಂಬರಿ ಇದು. ತಮಿಳು ಸಾಹಿತ್ಯದ ಸರ್ವಶ್ರೇಷ್ಠ ಕಾದಂಬರಿ ಇದು ಎಂಬ ಮಾತೂ ಇದೆ. ಅರುಲ್ಮೋಳಿವರ್ಮನ್ ಅವರ ಕತೆಯನ್ನು ಈ ಕಾದಂಬರಿ ಹೊಂದಿದೆ. ಅರುಲ್ಮೋಳಿವರ್ಮನ್ ಎಂದರೆ ನಮಗೆ ಗೊತ್ತಿಲ್ಲದಿರಬಹುದು. ಆದರೆ ರಾಜ ರಾಜ ಚೋಳ ಎಂಬ ಹೆಸರಂತೂ ನಮಗೆ ಖಂಡಿತ ಪರಿಚಿತ. ಹೌದು! ಅರುಲ್ಮೋಳಿವರ್ಮನ್ ಅವರನ್ನೇ ನಾವು ರಾಜ ರಾಜ ಚೋಳ ೧ ಎಂದು ಕರೆಯುವುದು. ತಮಿಳುನಾಡಷ್ಟೇ ಅಲ್ಲದೆ ಶ್ರೀಲಂಕಾದವರೆಗೂ ಚೋಳರ ಸಾಮ್ರಾಜ್ಯ ಹಬ್ಬಿತ್ತು ಎಂದು ಇತಿಹಾಸ ಹೇಳುತ್ತದೆ. ಹಾಗಾಗಿ ಕಾದಂಬರಿಗೆ ಬೇಕಾದ ವಸ್ತುವನ್ನು ಸಂಪಾದಿಸಲು ಲೇಖಕರೇ ಸ್ವತಃ ಶ್ರೀಲಂಕಾಕ್ಕೆ ಭೇಟಿ ಕೊಟ್ಟು, ಕತೆಗೆ ಬೇಕಾದ ಇತಿಹಾಸದ ಚಿತ್ರಣವನ್ನು ಸಂಪಾದಿಸಿದ್ದರಂತೆ. ಅಂತಹ ಸರ್ವಶ್ರೇಷ್ಠ ಕಾದಂಬರಿಯೊಂದಕ್ಕೆ ದೃಶ್ಯರೂಪ ಕೊಡಲು ಈ ಮುಂಚೆ ಹಲವು ನಿರ್ದೇಶಕರು ಪ್ರಯತ್ನಿಸಿ ಹಿಂದೆ ಸರಿದಿದ್ದರು. ಈಗ ಮಣಿರತ್ನಂ ರವರು ಅಂತಹ ಒಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಎರಡು ಭಾಗಗಳಲ್ಲಿ ಬರಲಿರುವ ಈ ಚಿತ್ರದಲ್ಲಿ ಸಂಪೂರ್ಣವಾಗಿ ಚೋಳರ ಕಾಲದ ಆಡುಭಾಷೆಯನ್ನೇ ಬಳಸಲಾಗಿದೆಯಂತೆ. ಆ ಕಾಲವನ್ನೇ ನೆನಪಿಸುವ ಬಟ್ಟೆಗಳು, ನಗರಗಳು, ಅರಮನೆಯನ್ನು ಭವ್ಯ ಸೆಟ್ ನಲ್ಲಿ ನಿರ್ಮಿಸಲಾಗಿದೆ.
ಚಿತ್ರತಂಡ ಮೊನ್ನೆಯಷ್ಟೇ ಬೆಂಗಳೂರಿಗೆ ಪ್ರಚಾರದ ಅಂಗವಾಗಿ ಪತ್ರಿಕಾಗೋಷ್ಠಿಗೆ ಬಂದಿದ್ದರು. ಚಿತ್ರತಂಡದ ಪ್ರತಿಯೊಬ್ಬರೂ ಕರ್ನಾಟಕದ ಸಂಸ್ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ತಿ ಅವರಂತೂ ಬೆಂಗಳೂರು ನನಗೆ ಅಮೆರಿಕಾದ ನ್ಯೂಯಾರ್ಕ್ ಸಿಟಿಯಂತೆ ಭಾಸವಾಗುತ್ತದೆ ಎಂದದ್ದು ಕನ್ನಡಿಗರಾದ ನಮಗೆ ಹೆಮ್ಮೆ. ಈ ಚಿತ್ರದಲ್ಲಿನ ಪಾತ್ರಗಳು ಕೇವಲ ಪಾತ್ರಗಳಂತೆ ಕಾಣುವುದಿಲ್ಲ. ಬದಲಾಗಿ ಚೋಳರಾಜರೇ ನಮ್ಮ ಮುಂದೆ ಬಂದಂತೆ ಭಾಸವಾಗುತ್ತದೆ ಎಂಬ ಮಾತನ್ನು ಕಾರ್ತಿ ಹೇಳಿದರು. ಇದರ ಮೂಲದಿಂದ ಈ ಚಿತ್ರ ಅದೆಷ್ಟು ರಿಚ್ ಆಗಿ ಮೂಡಿಬಂದಿರಬಹುದು ಎಂಬ ಊಹೆ ನಿಮಗೇ ಬಿಟ್ಟಿದ್ದು. ಚೋಳರ ಸಾಮ್ರಾಜ್ಯದ ಗತವೈಭವವನ್ನು ನಮ್ಮೆದುರು ಬಿಚ್ಚಿಕೊಟ್ಟರು ಚಿಯಾನ್ ವಿಕ್ರಂ. ಕುಂದುವಯ್ ಎಂಬ ಚೋಳರ ಕಾಲದ ವೈದ್ಯೆ, ಆಡಳಿತಾಧಿಕಾರಿಯ ಪಾತ್ರದ ಬಗ್ಗೆ ಮಾತನಾಡಿದರು. ಪ್ರಸ್ತುತ ತ್ರಿಷಾ ಈ ಪಾತ್ರಕ್ಕೆ ಬಣ್ಣ ತುಂಬಿದ್ದಾರೆ. ಗ್ಲಾಮರ್ ಬೊಂಬೆಯಾಗಿ ಈವರೆಗೂ ತೆರೆಯ ಮೇಲೆ ಕಾಣಿಸಿದ್ದ ತ್ರಿಷಾ ಮೊದಲಬಾರಿಗೆ ಐತಿಹಾಸಿಕ ಸ್ತ್ರೀ ಪಾತ್ರವಾಗಿ ಮಿಂಚಲಿದ್ದಾರೆ. ಈಮುಂಚೆ ರಾವಣ್ ಎಂಬ ಸಿನಿಮಾದಲ್ಲಿ ವಿಕ್ರಂ ಮತ್ತು ಐಶ್ವರ್ಯ ಜೋಡಿಯಾಗಿ ನಟಿಸಿದ್ದರು. ಆ ಚಿತ್ರದಲ್ಲಿ ಐಶ್ವರ್ಯ ರೈ ವಿಕ್ರಂ ಗೆ ಗಗನಕುಸುಮವಾಗಿಯೇ ಉಳಿಯುತ್ತಾರೆ. ಹಾಗಾಗಿ ಈ ಸಿನಿಮಾದ ಬಗ್ಗೆ ವಿಕ್ರಂ ಅವರನ್ನು ಕೇಳಿದಾಗ, ಈ ಸಿನಿಮಾದಲ್ಲಿ ಕೂಡ ಐಶ್ವರ್ಯ ರೈ ನನಗೆ ಸಿಗುವುದೇ ಇಲ್ಲ;ಇನ್ನು ಮುಂದೆ ಐಶ್ವರ್ಯ ರೈ ನನಗೆ ಸಿಗುವಂತಹ ಕತೆ ಇದ್ದಾರೆ ಮಾತ್ರ ಸಿನಿಮಾ ಮಾಡ್ತೀನಿ ಎಂದು ನಕ್ಕರು. ಇನ್ನು ನಿರ್ದೇಶಕ ಮಣಿರತ್ನಂ ಅವರ ಹಾರ್ಡ್ ವರ್ಕ್ ಬಗ್ಗೆ ಇಡೀ ಚಿತ್ರತಂಡ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಭಾರತೀಯ ರಾಜರ, ಸಾಮ್ರಾಜ್ಯಗಳ ಬಗ್ಗೆ ಜಗತ್ತಿಗೇ ತಿಳಿಸಬೇಕೆಂಬ ಇವರ ನಿರ್ಧಾರ ನಿಜಕ್ಕೂ ಮೆಚ್ಚಬೇಕಾದ್ದೇ. ಭಾರತೀಯ ನಾರಿಯರು ಕೇವಲ ನಾರಿಯರಷ್ಟೇ ಅಲ್ಲ; ಶೌರ್ಯ, ಪರಾಕ್ರಮ, ತ್ಯಾಗಗಳ ಪ್ರತೀಕ ಎಂಬುದನ್ನು ಚಿತ್ರದ ಸ್ತ್ರೀ ಪಾತ್ರಗಳ ಮೂಲಕ ತೋರಿಸಿದ್ದಾರೆ ಮಣಿರತ್ನಂ. ತಮಿಳಿನ ಖ್ಯಾತ ಲೇಖಕರಾದ ಕಲ್ಕಿ ಕೃಷ್ಣಮೂರ್ತಿಯವರ ಅದ್ಭುತ ಕಾದಂಬರಿ “ಪೊನ್ನಿಯನ್ ಸೆಲ್ವನ್” ಆಧಾರಿತ ಈ ಚಿತ್ರ ಐತಿಹಾಸಿಕ ಚಿತ್ರವಾಗಿದ್ದು, ದೇಶಾದ್ಯಂತ ಜಯಭೇರಿ ಬಾರಿಸುವ ವಿಶ್ವಾಸ ಚಿತ್ರ ತಂಡಕ್ಕಿದೆ. ಈ ಚಿತ್ರ ತಂಡಕ್ಕೆ ನಮ್ಮ ಕಡೆಯಿಂದ ಒಂದು ಆಲ್ ದಿ ಬೆಸ್ಟ್.