1971ರ ಕೌಬಾಯ್ ಶೈಲಿಯ ಈ ಸಿನಿಮಾ ದೊರೆ ಭಗವಾನ್ ನಿರ್ದೇಶನದ್ದು. ದೊರೆಯವರು ಬಿ. ದೊರೆರಾಜ್ ಹೆಸರಿನಲ್ಲಿ ಅನೇಕ ಸಿನಿಮಾಗಳ ಛಾಯಾಗ್ರಾಹಕರು. ಎಸ್.ಕೆ.ಭಗವಾನ್ ಮೊದಲು ಸಹಾಯಕ ನಿರ್ದೇಶಕರಾಗಿ, ನಟರಾಗಿ ನಂತರ ನಿರ್ದೇಶಕರಾದರು.
ಈ ಜೋಡಿ ಲಕ್ಷ್ಮೀ ಅನಂತನಾಗ್ ಜೋಡಿಯ ತರಾಸು ಕಾದಂಬರಿ ಆಧಾರಿತ ಚಿತ್ರಗಳನ್ನು ಕೊಡುವ ಮೊದಲು ಕನ್ನಡಕ್ಕೆ ಮೊಟ್ಟಮೊದಲು ಬಾಂಡ್ ಶೈಲಿ ಚಿತ್ರಗಳನ್ನು ತಂದ ಹೆಗ್ಗಳಿಕೆ ಉಳ್ಳವರು.
ಡ್ರೈವರ್ ರಂಗಯ್ಯನಿಗೆ ಹೆಂಡತಿ, ಇಬ್ಬರು ಪುಟ್ಟ ಗಂಡು ಮಕ್ಕಳು, ಒಬ್ಬ ಮಗಳು, ಅವಳಿಗೊಬ್ಬ ಮಗಳು ಇರುತ್ತಾರೆ. ಅವನ ಮಾಲೀಕ ಭೂಷಣ್ (ದಿನೇಶ್) ಕಳ್ಳಸಾಗಾಣಿಕೆದಾರ ಎಂದು ತಿಳಿದೊಡನೆ ಅವನನ್ನು ಬಿಟ್ಟುಬಿಡುವೆನೆಂದು ಹೇಳಿ ಮನೆಗೆ ಬರುತ್ತಾನೆ. ಭೂಷಣ್ ಮತ್ತು ಅವನ ಗೆಳೆಯ ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಗಂಡ, ಹೆಂಡತಿಯರನ್ನು ಶೂಟ್ ಮಾಡಿ, ಮಗಳನ್ನು ಅತ್ಯಾಚಾರ ಮಾಡಲು ಹೋಗಿ ನಂತರ ಕೊಲ್ಲುತ್ತಾರೆ. ಮೂರೂ ಮಕ್ಕಳು ಬಚಾಯಿಸಿಕೊಳ್ಳುತ್ತಾರೆ. ಭೂಷಣ್ ಕಣ್ಣಡಿಯಲ್ಲಿನ ಬಿದಿಗೆ ಚಂದ್ರನಂತಹ ಕಪ್ಪು ಗುರುತನ್ನು ಅಣ್ಣ ತಮ್ದೀರು ನೆನಪಿಟ್ಕೋತಾರೆ. (1973ರ ಅಮಿತಾಭ್ ಝಂಜೀರ್‍ನಲ್ಲಿ ಇಂತಹದ್ದೇ ದೃಶ್ಯ ಕಂಡುಬರುತ್ತದೆ. ಇಲ್ಲಿ ಅಜಿತ್ ಕೈಯಲ್ಲಿನ ಕುದುರೆ ಇದ್ದ ಒಂದು ಬ್ರೇಸ್‍ಲೆಟ್ ಅಮಿತಾಭ್‍ನನ್ನು ಕನಸಿನಲ್ಲಿ ಕಾಡುತ್ತಿರುತ್ತದೆ).
ದೊಡ್ಡ ಹುಡುಗ ಆನಂದ್ (ರಾಜೇಶ್) ಅನಾಥಾಶ್ರಮದಿಂದ ತಪ್ಪಿಸಿಕೊಂಡು ಕೂಲಿನಾಲಿ ಮಾಡಿ ಭೂಷಣ್‍ನನ್ನು ಹುಡುಕುತ್ತಿರುತ್ತಾನೆ – ಸೇಡಿಗೆ. ಚಿಕ್ಕವನು ಅಶೋಕ್(ರಾಜ್‍ಕುಮಾರ್) ಚೆನ್ನಾಗಿ ಓದಿ ಪೊಲೀಸ್ ಇನ್ಸ್‍ಪೆಕ್ಟರ್ ಆಗಿರುತ್ತಾನೆ. ಅವನೂ ಭೂಷಣ್‍ನನ್ನು ಹುಡುಕುತ್ತಿರುತ್ತಾನೆ. ಅಕ್ಕನ ಮಗಳನ್ನು ಭೂಷಣ್‍ನ ಹೆಂಡತಿ (ಪಂಢರೀಬಾಯಿ) ಎತ್ತಿಕೊಂಡು ಹೋಗಿ ಸಾಕುತ್ತಾಳೆ. ಅವಳು ದೊಡ್ಡವಳಾಗಿ ಉಷಾ(ಆರತಿ) ಆಗುತ್ತಾಳೆ.
ಈಗ ಅಶೋಕ, ಉಷಾ ಪ್ರೇಮಿಸುತ್ತಾರೆ. ಏಕೋ ಏನೋ ಹಾಡುವ ಆಸೆ ಎಂದು ಪಿಬಿಎಸ್ ವಾಯ್ಸ್‌ನಲ್ಲಿ ಸಾತನೂರ್ ಡ್ಯಾಮ್‍ನಲ್ಲಿ ಹಾಡುತ್ತಾರೆ ಅಶೋಕ್, ಉಷಾ.
ಸಿನಿಮಾದ ಶುರುವಿನಲ್ಲಿರುವ ‘ಮರೆಯದಿರೂ ಸ್ನೇಹ’ (ಪಿಬಿಎಸ್) ಹಾಡು ತತ್ವಪದದಂತಿದೆ, ಆದರೆ ಕುದುರೆ, ಕೌಬಾಯ್ ಹ್ಯಾಟ್‍ನಲ್ಲಿ ರಾಜ್ ಸೂಪರ್.
ಪಿಬಿಎಸ್ ಎಸ್‍ಜಾನಕಿ ‘ಸರಿ ನಾ ಹೋಗಿ ಬರುವೆ’ ಹಾಡು ಆಗಿನ ಕಾಲದ ಬಹಳ ಜನಪ್ರಿಯ ‘ಅಚ್ಛಾತೊ ಹಂ ಚಲ್‍ತೇ ಹೈ’(ರಾಜೇಶ್‍ಖನ್ನನ ಆನ್ ಮಿಲೋ ಸಜನಾ) ಧಾಟಿಯಲ್ಲಿದೆ.
ಆನಂದ್ ಅಶೋಕ್‍ನನ್ನು ಕೊಲ್ಲಲು ಬಂದು ಅವನ ಮತ್ತು ಅಶೋಕನ ಪಟ ನೋಡಿ ಆಘಾತಗೊಂಡು ಕೊಲ್ಲದೇ ಹೋಗಲು ನೋಡುತ್ತಾನೆ. (ವಖ್ತ್ ಸಿನಿಮಾದಲ್ಲಿ ಸುನಿಲ್‍ದತ್‍ನನ್ನು ಕೊಲ್ಲಲು ಬಂದ ರಾಜ್‍ಕುಮಾರ್ [ಹಿಂದಿ ನಟ] ಹೀಗೇ ತಮ್ಮನ ಪಟ ನೋಡಿ ಹೊರಟುಹೋಗುತ್ತಾನೆ)
ಅಶೋಕ್ ಆನಂದ್ ಫೈಟ್ ಇದೆ. ಅದರಲ್ಲಿ ಆನಂದ್ ತನ್ನ ಕೈಯಿಂದ ಮೂಗು ಸವರಿಕೊಳ್ಳುವ ಒಂದು ಶೈಲಿ ನೋಡಿ ಅಶೋಕ್‍ಗೆ ಆನಂದ್ ತನ್ನಣ್ಣನೆಂದು ತಿಳಿಯುತ್ತದೆ. ಇದು ‘ಜಾನಿ ಮೇರಾ ನಾಂ’ ಹಿಂದಿ ಚಿತ್ರದ ಪ್ರಾಣ್ ಮತ್ತು ದೇವ್ ಆನಂದ್ ಎಂಬ ಅಣ್ತಮ್ಮರ ಫೈಟ್ ನೆನಪಿಸುತ್ತದೆ. ಮುಂದೆ ಇದು ಕನ್ನಡದಲ್ಲಿ ‘ಅಪೂರ್ವ ಸಂಗಮ’ ಆದಾಗ ಅಣ್ಣಾವ್ರು ಅಣ್ಣ ಮತ್ತು ಶಂಕರಣ್ಣ ತಮ್ಮ ಆಗಿದ್ದರು.
ಬಾಲಕೃಷ್ಣ, ನರಸಿಂಹರಾಜು ಇಬ್ಬರೂ ಸೀನಿಯರ್ ಜ್ಯೂನಿಯರ್ ಪೊಲೀಸ್ ಕಾನ್ಸ್‌ಟೇಬಲ್ಲುಗಳು. ಬಾಲಣ್ಣನ ಅಳಿಯ ನರಸಯ್ಯ. ಮಗಳು ರಾಧಾಳನ್ನು (ಆರ್.ಟಿ.ರಮಾ)ಬಾಲಣ್ಣ ಅಳಿಯ ನರಸಯ್ಯನ ಬಳಿ ಬಿಡುವುದಿಲ್ಲ. ಹತ್ತು ಸಾವಿರ ರೂಪಾಯಿ ವಧುದಕ್ಷಿಣೆ ಮುಟ್ಟಿರುವುದಿಲ್ಲವೆಂದು ಮಗಳನ್ನು ಮುಟ್ಟಲು ಅಳಿಯನನ್ನು ಬಿಡುವುದಿಲ್ಲ ಮಾವ. ಅವರದೇ ಒಂದು ಟ್ರ್ಯಾಕ್ ಇದೆ ಇಡೀ ಸಿನಿಮಾದಲ್ಲಿ. ಟೈಗರ್ ಪ್ರಭಾಕರ್ ದಿನೇಶ್ ಬಲಗೈ. ಅಣ್ಣಾವ್ರ ಜೊತೆಗೆ ಫೈಟ್ ಮಾಡಿ ಬೆಟ್ಟದಿಂದ ಉರುಳಿ ಹೋಗುವ ಪಾತ್ರ.
ರಾಜ್ ಫೈಟ್ಸ್ ಸೂಪರ್. ಹೆಗಲ ಮೇಲೆ ಇಬ್ಬಿಬ್ಬರನ್ನು ಆ ಗ್ರಾಫಿಕ್ಸ್ ಇಲ್ಲದ ಕಾಲದಲ್ಲಿ ನಿಜವಾಗಿಯೂ ಹೊತ್ತಿದ್ದಾರೆ. ಪ್ರೇಮ, ಕೋಪ ಎಲ್ಲವೂ ಚೆನ್ನ. ನೋಡಲೂ ಸೂಪರ್ ಆಗಿದ್ದಾರೆ. ಒಮ್ಮೆ ಹೆಣ್ಣು ವೇಷ ಧರಿಸಿದಾಗಲೂ ಮುದ್ದು!
ರಾಜೇಶ್ ಕೋಪವನ್ನೇ ಮುಖ್ಯವಾಗಿ ಪ್ರದರ್ಶಿಸಿದ್ದಾರೆ. ಆರತಿಯವರ ಡಯಲಾಗ್ ಡೆಲಿವರಿಯನ್ನು ನೀವು ನೋಡಿಯೇ ಖುಷಿ ಪಡಬೇಕು. ಚೆನ್ನಾಗಿ ನಟಿಸಿದ್ದಾರೆ. ಆಗಿನ್ನೂ ಹೊಸ ನಟಿ! ಜಿ.ಕೆ. ವೆಂಕಟೇಶ್ ನೇಪಥ್ಯ ಸಂಗೀತ ಕೂಡ ಬಹಳ ಚೆನ್ನಾಗಿದೆ.