ಕಿಲಾಡಿ ಚಿತ್ರಗಳ ಸರದಾರ ಎಂದ ತಕ್ಷಣವೇ ಚಿತ್ರ ಪ್ರೇಮಿಗಳ ಕಣ್ಣಿನ ಮುಂದೆ ಬರುವ ಮೊದಲೇ ಹೆಸರೇ ನಟ ಅಕ್ಷಯ್ ಕುಮಾರ್ ಅವರದಾಗಿರುತ್ತದೆ. ಚಿತ್ರ ರಂಗದ ಯಾವುದೇ ಹಿನ್ನೆಲೆಯಿಲ್ಲದೆ ಬಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಿ ೧೦೦ ಕ್ಕೂ ಅಧಿಕ ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಅಸಂಖ್ಯ ಚಿತ್ರ ಪ್ರೇಮಿಗಳ ಮನಸ್ಸನ್ನು ಗೆದ್ದಿರುವುದಲ್ಲದೆ ತಮ್ಮ ಅಭಿಮಾನಿಗಳಿಂದ ಬಾಲಿವುಡ್ ಚಿತ್ರರಂಗದ ಕಿಲಾಡಿ ಎಂಬ ಬಿರುದನ್ನು ಪಡೆದಿದ್ದಾರೆ. ತಮ್ಮ ಖಾಸಗಿ ಜೀವನದಲ್ಲಿ ಅನೇಕ ಸಮಾಜ ಮುಖಿ ಕೆಲಸಗಳನ್ನು ಮಾಡಿದ್ದು ಚಿತ್ರ ಪ್ರೇಮಿಗಳ, ಅಭಿಮಾನಿಗಳ ಪಾಲಿಗೆ ಕಲಿಯುಗದ ಕರ್ಣ ಕೂಡ ಆಗಿದ್ದಾರೆ.
ಸೆಪ್ಟೆಂಬರ್ ೯, ೧೯೬೭ ರಂದು ಪಂಜಾಬ್ ರಾಜ್ಯದ ಅಮೃತಸರದಲ್ಲಿ ಪಂಜಾಬಿ ಕುಟುಂಬದಲ್ಲಿ ಹರಿ ಓಂ ಭಾಟಿಯಾ ಮತ್ತು ಅರುನಾ ಭಾಟಿಯಾ ದಂಪತಿಯ ಮಗನಾಗಿ ಜನಿಸಿದ ಇವರ ಮೊದಲ ಹೆಸರು ರಾಜೀವ್ ಹರಿ ಓಂ ಭಾಟಿಯಾ. ಇವರ ತಂದೆ ಹರಿ ಓಂ ಭಾಟಿಯಾ ವೃತ್ತಿಯಲ್ಲಿ ಸರ್ಕಾರಿ ನೌಕರರಾಗಿದ್ದರು. ಚಿಕ್ಕ ವಯಸ್ಸಿನಲ್ಲಿ ನಟನೆಯಲ್ಲಿ ಪಳಗಿದ್ದರೂ ಮುಖ್ಯವಾಗಿ ನೃತ್ಯ ಪಟುವಾಗಿ ಗುರ್ತಿಸಿಕೊಂಡರು. ಆರಂಭದಲ್ಲಿ ತಮ್ಮ ಬಾಲ್ಯದ ಜೀವನವನ್ನು ದೆಹಲಿಯ ಚಾಂದಿನಿ ಚೌಕ್ ಎಂಬ ಪ್ರದೇಶದಲ್ಲಿ ಕಳೆದ ನಂತರ ತಮ್ಮ ಕುಟುಂಬದೊಡನೆ ಮುಂಬಯಿಗೆ ಸ್ಥಳಾಂತರಗೊಂಡ ಇವರು ಅಲ್ಲಿ ಪಂಜಾಬಿ ಪ್ರಾಬಲ್ಯವನ್ನು ಹೊಂದಿದ್ದ ಕೋಳಿವಾಡ ಎಂಬ ಪ್ರದೇಶದಲ್ಲಿ ವಾಸ್ತವ್ಯವನ್ನು ಹೂಡಿದರು. ತಮ್ಮ ಆರಂಭಿಕ ಹಂತದ ಶಿಕ್ಷಣವನ್ನು ಡಾನ್ ಭಾಸ್ಕೊ ಶಾಲೆಯಲ್ಲಿ ನಡೆದ ನಂತರ ಕಿಂಗ್ ಸರ್ಕಲ್ ನಲ್ಲಿರುವ ಗುರು ನಾನಾಕ್ ಬಾಲ್ಸಾ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಲ್ಲದೆ ಅಲ್ಲಿ ಜನಪಾಲ್ ಸಿಂಗ್ ಎಂಬುವರೊಡನೆ ಕ್ರೀಡೆಯಲ್ಲಿ ಕೂಡ ಭಾಗವಹಿಸಿದ್ದರು. ಆದರೆ ಇವರ ಪ್ರತಿಭೆ ಇಷ್ಟಕ್ಕೆ ಸೀಮಿತವಾಗಿಲ್ಲ. ಬ್ಯಾಂಕಾಕ್ ನಲ್ಲಿ ಕದನ ಕಲೆಯನ್ನು ಕರಗತ ಮಾಡಿಕೊಂಡಿದ್ದಾರಲ್ಲದೆ ಬಾಣಿಸಗನಾಗಿಯು ಕೂಡ ಕೆಲಸವನ್ನು ನಿರ್ವಹಿಸಿದ್ದಾರೆ. ಕೆಲವು ವರ್ಷಗಳ ಕಾಲ ಅಲ್ಲಿಯೇ ಕೆಲಸವನ್ನು ನಿರ್ವಹಿಸಿದ ನಂತರ ಹಲವಾರು ಯೋಜನೆಗಳೊಂದಿಗೆ ಭಾರತ ದೇಶಕ್ಕೆ ಹಿಂತಿರುಗಿದರು. ಆದರೆ ವಿಧ ಲಿಖಿತವೇ ಬೇರೆಯಾಗಿತ್ತು. ಬ್ಯಾಂಕಾಕ್ ನಿಂದ ಹಿಂತಿರುಗಿ ಬಂದ ನಂತರ ಕರಾಟೆ ಶಾಲೆಯೊಂದನ್ನು ಸ್ಥಾಪಿಸಿ ಆತ್ಮರಕ್ಷಣೆಗಾಗಿ ವಿದ್ಯಾರ್ಥಿಗಳಿಗೆ ಕದನ ಕಲೆಯ ಶಿಕ್ಷಣವನ್ನು ಕೊಡುತ್ತಿದ್ದರು. ಆ ಸಮಯದಲ್ಲಿ ಇವರ ಬಳಿ ಅಸಂಖ್ಯಾತ ವಿದ್ಯಾರ್ಥಿಗಳು ಕದನ ಕಲೆಯ ಶಿಕ್ಷಣವನ್ನು ಪಡೆಯುತ್ತಿದ್ದರು. ಈ ವಿದ್ಯಾರ್ಥಿ ಬಳಗದಲ್ಲಿದ್ದ ಒಬ್ಬ ಪೋಟೋ ಗ್ರಾಫರ್ ಇವರನ್ನು ಗಮನಿಸುತ್ತಲೇ ಇದ್ದು ಒಂದು ದಿನ ಇವರಿಗೆ ಮಾಡೆಲಿಂಗ್ ವೃತ್ತಿಯನ್ನು ಕೈಗೊಳ್ಳಲು ಶಿಫಾರಸ್ಸು ಮಾಡಿ ಚಿಕ್ಕ ಕಂಪನಿಯಲ್ಲಿ ಮಾಡೆಲಿಂಗ್ ಕೆಲಸವನ್ನು ನೀಡಿದರು. ಇದಕ್ಕೂ ಮೊದಲು ಇವರು ತಿಂಗಳಿಗೆ ನಾಲ್ಕು ಸಾವಿರ ರೂ ಸಂಬಳವನ್ನು ಪಡೆಯುತ್ತಿದ್ದರು ಎನ್ನುವ ಸಂಗತಿ ಇದುವರೆಗೂ ಬಹಳಷ್ಟು ಜನರಿಗೆ ಸರಿಯಾಗಿ ತಿಳಿದಿಲ್ಲ. ಆದರೆ ಇದಕ್ಕೆ ಹೋಲಿಸಿದರೆ ಈ ಕ್ಯಾಮರಾ ಎದುರಿಗೆ ನಿಲ್ಲುವ ಎರಡು ಗಂಟೆಗಳ ಕೆಲಸಕ್ಕೆ ಐದು ಸಾವಿರ ರೂಪಾಯಿಗಳನ್ನು ಗಳಿಸಿದ ಪರಿಣಾಮ ಕೂಡ ಇವರು ಮಾಡೆಲಿಂಗ್ ವೃತ್ತಿಯನ್ನು ಕೈಗೊಳ್ಳಲು ಪ್ರಮುಖ ಕಾರಣವಾಗಿತ್ತು. ಇನ್ನು ಇವರು ಯಾವ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಿದರು ಎನ್ನುವುದರ ಕುರಿತು ಕೂಡ ಬಹಳಷ್ಟು ಜನರಿಗೆ ಸರಿಯಾದ ಮಾಹಿತಿ ತಿಳಿದಿಲ್ಲ.
(to be countinue)