ಬಾಲಿವುಡ್ ಚಿತ್ರರಂಗದ ಕಿಲಾಡಿ ನಟ ಅಕ್ಷಯ್ ಕುಮಾರ್

(Continued)

೧೯೮೭ ರಲ್ಲಿ ತೆರೆ ಕಂಡ ಮಹೇಶ್ ಭಟ್ ನಿರ್ದೇಶನ, ಕುಮಾರ್ ಗೌರವ್ ನಾಯಕನಾಗಿ ನಟಿಸಿದ ಆಜ್ ಚಿತ್ರದಲ್ಲಿ ಹತ್ತು ಸೆಕೆಂಡುಗಳ ಕಾಲ ಬರುವ ಕರಾಟೆ ಇನ್ಸ್ ಟ್ರಕ್ಟರ್ ಪಾತ್ರವನ್ನು ನಿರ್ವಹಿಸುವುದರ ಮೂಲಕ ಬಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಿದರು. ಆದರೆ     ಈ ಸಮಯದಲ್ಲಿ  ಇವರನ್ನು ರಾಜೀವ್ ಭಾಟಿಯಾ ಎಂದೇ ಕರೆಯುತ್ತಿದ್ದರು.  ಇನ್ನೊಂದು   ಆಸಕ್ತಿಕರ ವಿಷಯವೇನೆಂದರೆ ಈ ಚಿತ್ರದಲ್ಲಿ ಕುಮಾರ್ ಗೌರವ್ ನಿರ್ವಹಿಸಿದ ಪಾತ್ರದ ಹೆಸರು ಕೂಡ ಅಕ್ಷಯ್ ಆಗಿತ್ತು. ಈ ಚಿತ್ರವು ತೆರೆ ಕಂಡ ನಾಲ್ಕು ವರ್ಷಗಳ ನಂತರ ೧೯೯೧ ರಲ್ಲಿ ತೆರೆ ಕಂಡ ಸೌಗಂಧ್ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಆ ಸಮಯದಲ್ಲಿ ಇವರು ಮಾಡೆಲಿಂಗ್ ಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಗಳಿಸಿದ್ದರು.

೧೯೯೨ ರಲ್ಲಿ ತೆರೆ ಕಂಡ ಪ್ರಮೋದ್ ಚಕ್ರವರ್ತಿ ನಿರ್ದೇಶನದಲ್ಲಿ ಮೂಡಿ ಬಂದ ದೀದಾರ್ ಚಿತ್ರದಲ್ಲಿ ಪ್ರಥಮ ಬಾರಿಗೆ ನಾಯಕನ ಪಾತ್ರವನ್ನು ನಿರ್ವಹಿಸಿದರು. ಅದೇ ವರ್ಷ ತೆರೆ ಕಂಡ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಕಿಲಾಡಿ, ೧೯೯೪ ರಲ್ಲಿ ತೆರೆ ಕಂಡ ಮೈ ಕಿಲಾಡಿ ತೂ ಅನಾಡಿ ಮತ್ತು ಮೊಹ್ರಾ ಎಂಬ ಎರಡು ಯಾಕ್ಷನ್ ಚಿತ್ರಗಳ ಗೆಲುವು ಇವರ ತಾರಾ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿತು. ಇವರು ಚಿತ್ರರಂಗ ಪ್ರವೇಶಿಸಿ ಕೇವಲ ಎರಡು ವರ್ಷಗಳಲ್ಲಿ ತಮ್ಮ ಚಿತ್ರಗಳಲ್ಲಿ ಅಪಾಯಕಾರಿ ಸ್ಟಂಟ್ ಮೂಲಕ ಚಿತ್ರ ಪ್ರೇಮಿಗಳಿಂದ ಯಾಕ್ಷನ್ ಹೀರೊ ಎಂಬ ಬಿರುದನ್ನು ಪಡೆದಿದ್ದರು. ಇಂತಹ ಸಮಯದಲ್ಲಿ ಯಶ್ ಚೋಪ್ರಾ ರ ಯೇ ದಿಲ್ಲಗಿ ಎಂಬ ಚಿತ್ರಕ್ಕೆ ಆಯ್ಕೆಯಾದರು. ಈ ಚಿತ್ರಕ್ಕೆ ಇವರ ಆಯ್ಕೆ ಒಂದು ರೀತಿಯಲ್ಲಿ ಅಚ್ಚರಿ ಉಂಟುಮಾಡಿತ್ತು. ಏಕೆಂದರೆ ಇವರು ನಟಿಸಿದ ಬಹುತೇಕ ಚಿತ್ರಗಳು ಸಾಹಸ ಪ್ರಧಾನ ಚಿತ್ರಗಳಾಗಿದ್ದವು.

ಆದರೆ ಇವರ ಯಾಕ್ಷನ್ ಚಿತ್ರಗಳಿಗೆ ಹೋಲಿಸಿದರೆ ಇದು ಸಂಪೂರ್ಣ ರೋಮ್ಯಾಂಟಿಕ್ ಚಿತ್ರವಾಗಿತ್ತು. ಅಲ್ಲದೇ ಈ ಚಿತ್ರದಲ್ಲಿನ ರೋಮ್ಯಾಂಟಿಕ್ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿ ಎಂತಹ ಪಾತ್ರವನ್ನು ಆದರೂ ನಿರ್ವಹಿಸಬಲ್ಲೆ ಎಂಬುದನ್ನು ತೋರಿಸಿಕೊಟ್ಟರು. ಮತ್ತು  ಪಾತ್ರದ ಉತ್ತಮ ನಿರ್ವಹಣೆಯಿಂದ ಈ ಚಿತ್ರವು ಯಶಸ್ವಿಯಾಯಿತಲ್ಲದೆ ಫಿಲಂ ಫೇರ್ ಮತ್ತು ಸ್ಟಾರ್ ಸ್ಕ್ರೀನ್ ಸಮಾರಂಭದಲ್ಲಿ ಮೊದಲ ಬಾರಿಗೆ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಾಂಕಿತ ಗೊಂಡರು. ಅದೇ ವರ್ಷ ತೆರೆ ಕಂಡ ಸುಹಾಗ್ ಮತ್ತು ಎಲಾನ್ ನಂತಹ ಕಡಿಮೆ ವೆಚ್ಚದ ಚಿತ್ರಗಳಲ್ಲಿ ನಟಿಸಿ ಯಶಸ್ಸನ್ನು ಪಡೆದರಲ್ಲದೆ ಇವರ ಸಾಧನೆಯೇ ಇವರನ್ನು ವರ್ಷದ ಅತೀ ಯಶಸ್ವಿ ನಟರಲ್ಲಿ ಒಬ್ಬರನ್ನಾಗಿ ಗುರುತಿಸಲು ಕಾರಣವಾಯಿತು.

೧೯೯೫ ರಲ್ಲಿ ತೆರೆ ಕಂಡ ಸಬಸೆ ಬಡಾ ಕಿಲಾಡಿ ಮತ್ತು ಮುಂದಿನ ವರ್ಷದಲ್ಲಿ ಕಿಲಾಡಿ ಶೀರ್ಷಿಕೆಯಡಿಯಲ್ಲಿ ತೆರೆ ಕಂಡ ಖಿಲಾಡಿಯೊಂಕಾ  ಕಿಲಾಡಿ ಚಿತ್ರದ ಯಶಸ್ಸಿನೊಂದಿಗೆ ತಾವು ಕಿಲಾಡಿ ಚಿತ್ರಗಳ ಸರದಾರ ಎಂಬುದನ್ನು ಸಾಬೀತು ಪಡಿಸಿದರು. ಅಲ್ಲದೇ ಈ ಚಿತ್ರವು ಕೂಡ ವರ್ಷದ ಅತೀ ಹೆಚ್ಚಿನ ಗಳಿಕೆಯ ಚಿತ್ರಗಳಲ್ಲಿ ಒಂದು ಆಗಿತ್ತು. ೧೯೯೭ ರಲ್ಲಿ ತೆರೆ ಕಂಡ ಶಾರುಖ್ ಖಾನ್ ನಟಿಸಿದ ದಿಲ್ ತೋ ಪಾಗಲ್ ಹೈ ಎಂಬ ಹಿಟ್ ಚಿತ್ರದಲ್ಲಿ ಪೋಷಕ ನಟನ ಪಾತ್ರವನ್ನು ನಿರ್ವಹಿಸಿದರಲ್ಲದೆ ನಟನೆಗಾಗಿ ಇವರು ಫಿಲಂ ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ನಾಮಾಂಕಿತರಾದರು. ಅದೇ ವರ್ಷ ತೆರೆ ಕಂಡ ಕಿಲಾಡಿ ಸರಣಿಯ ಮಿಸ್ಟರ್ ಎಂಡ್ ಮಿಸ್ಟ್ರಸ್ ಕಿಲಾಡಿ ಎಂಬ ಚಿತ್ರದಲ್ಲಿ ಹಾಸ್ಯ ನಾಯಕನ ಪಾತ್ರವನ್ನು ನಿರ್ವಹಿಸಿದರೂ  ಸೋಲನ್ನು ಕಂಡಿತು. ಈ ಚಿತ್ರದ ನಂತರ ಬಂದ ಸರಣಿ ಕಿಲಾಡಿ ಚಿತ್ರಗಳು ಕೂಡ ಹೀನಾಯ ಸೋಲನ್ನು ಕಂಡವು. ೧೯೯೯ ರಲ್ಲಿ ತೆರೆ ಕಂಡ ಸಂಘರ್ಷ್ ಮತ್ತು ಜಾನ್ವರ್ ಚಿತ್ರಗಳಲ್ಲಿ ನಟನೆಗಾಗಿ ಪ್ರಶಂಸೆ ವ್ಯಕ್ತವಾಯಿತಾದರೂ ಸಂಘರ್ಷ್ ಚಿತ್ರವು ಗಳಿಕೆಯಲ್ಲಿ ಲಾಭವನ್ನು ತಂದು ಕೊಡಲಿಲ್ಲ. ಆದರೆ ಜಾನ್ವರ್ ಚಿತ್ರವು ಯಶಸ್ವಿಯಾಯಿತು.


    ೨೦೦೦ ನೇ ಇಸ್ವಿಯಲ್ಲಿ ತೆರೆ ಕಂಡ ಹೇರಾ ಫೇರಿ ಎಂಬ ಹಾಸ್ಯ ಪ್ರಧಾನ ಚಿತ್ರದಲ್ಲಿ ನಟಿಸಿದರು. ಆದರೆ ಈ ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ಇದೇ ವರ್ಷ ತೆರೆ ಕಂಡ ಸುನೀಲ್ ಶೆಟ್ಟಿ ಮತ್ತು ಶಿಲ್ಪಾ ಶೆಟ್ಟಿ ಜೊತೆ ಧಡ್ಕನ್ ಎಂಬ ರೋಮ್ಯಾಂಟಿಕ್ ಚಿತ್ರದಲ್ಲಿ ನಟಿಸಿದರು. ಈ ಚಿತ್ರವು ಮೆಚ್ಚುಗೆಯನ್ನು ಪಡೆಯಿತಾದರೂ ಗಳಿಕೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸನ್ನು ಪಡೆಯಲಿಲ್ಲ.

(to be continued)


   


 

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply