ಬಾಲಿವುಡ್ ಚಿತ್ರರಂಗದ ದುರಂತ ನಾಯಕ ನಟ ದಿಲೀಪ್ ಕುಮಾರ್

ಚಿತ್ರ ರಂಗದ ಯಾವುದೇ ಹಿನ್ನಲೆಯಿಲ್ಲದೆ ಚಿತ್ರ ರಂಗ ಪ್ರವೇಶಿಸಿ ಬಾಲಿವುಡ್ ಚಿತ್ರರಂಗದ ದುರಂತ ನಾಯಕ ಎಂದು ಬಿರುದು ಪಡೆದಿರುವ ನಟ ದಿಲೀಪ್ ಕುಮಾರ್ ಅಲಿಯಾಸ್ ಮಹಮದ್ ಯುಸುಫ್ ಖಾನ್ ತಮ್ಮ ೫೨ ವರ್ಷಗಳ ಬಣ್ಣದ.

ಬದುಕಿನಲ್ಲಿ ಕೇವಲ ೬೨ ಚಿತ್ರಗಳಲ್ಲಿ ನಟಿಸಿರುವ ಇವರು ಚಿತ್ರ ರಂಗದಲ್ಲಿ ನಿರ್ಮಾಪಕರಾಗಿಯು ಗುರುತಿಸಿಕೊಂಡಿದ್ದಾರೆ. ತಮ್ಮ ವಿಭಿನ್ನ ಶೈಲಿಯ ನಟನೆಯಿಂದ ತಮ್ಮದೇಯಾದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಇವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು ತಮ್ಮ ಖಾಸಗಿ ಜೀವನದಲ್ಲಿ  ರಾಜಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದು ಉತ್ತಮ ವ್ಯಕ್ತಿತ್ವ ಹೊಂದಿರುವ ಇವರ ಬಗ್ಗೆ ತಿಳಿಸಬೇಕು ಎಂಬ ಉದ್ದೇಶದಿಂದ ಈ ಲೇಖನವನ್ನು ರಚಿಸಿದ್ದೇನೆ.

      ಡಿಸೆಂಬರ್ ೧೧, ೧೯೨೨ ರಂದು ಈಗಿನ ಪಾಕಿಸ್ತಾನ ದೇಶದಲ್ಲಿರುವ ಪೇಶಾವರದ ಕಿಸ್ಸಾಬ್ವಾನಿ ಬಜಾರಿನ ಮೊಹಲ್ಲಾ ಬುದಾದದಲ್ಲಿ ಜನಿಸಿದ ಇವರ ಮೊದಲ ಹೆಸರು ಮಹಮದ್ ಯುಸುಫ್ ಖಾನ್. ಇವರ ತಂದೆ ಹೆಸರು ಲಾಲಾಘುಲಾಮ್ ಸರ್ವಾರ್ ಹಣ್ಣಿನ ಬೆಳೆಗಾರರು ಮತ್ತು ವ್ಯಾಪಾರಿಯು ಆಗಿದ್ದರು. ಮಹಾರಾಷ್ಟ್ರ ರಾಜ್ಯದ ನಾಸಿಕ್ ಬಳಿಯ ದೇವಲಾಲಿ ಎಂಬಲ್ಲಿ ಇವರ ಹಣ್ಣಿನ ತೋಟಗಳಿದ್ದವು. ಆರು ಗಂಡು ಮತ್ತು ಆರು ಹೆಣ್ಣು ಮಕ್ಕಳ ಒಂದು ದೊಡ್ಡ ಕುಟುಂಬ ಇವರದ್ದಾಗಿದೆ.

ಇವರು ಜನಿಸಿದ ೮ ವರ್ಷಗಳ ನಂತರ ೧೯೩೦ ರಲ್ಲಿ ಇವರು ಕುಟುಂಬ ಸಮೇತ ಮುಂಬಯಿಗೆ ವಲಸೆ ಬಂದರು. ಇಲ್ಲಿಯೇ ಬೆಳೆದ ಹಿಂದಿ ಹರೆಯದ ಯುವಕ ಮಹಮದ್ ಯುಸುಫ್ ಖಾನ್ ಪುಣೆಯಲ್ಲಿ  ತಮ್ಮದೇ ಆದ ಒಂದು ಹೊಸ ಕ್ಯಾಂಟೀನ್ ಉದ್ದಿಮೆಯನ್ನು ಆರಂಭಿಸಿದ್ದಲ್ಲದೆ ಜೊತೆಯಲ್ಲಿ ಒಣ ಹಣ್ಣುಗಳ ಸರಬರಾಜಿನ ವ್ಯಾಪಾರವನ್ನು ಆರಂಭಿಸಿದರು. ಆದರೆ ನನಗೆ  ಇವರ ತಾಯಿಯ ಹೆಸರಾಗಲಿ,ಇವರ ಶಿಕ್ಷಣದ ಬಗ್ಗೆ  ಯಾವುದೇ ಮಾಹಿತಿಯು ಲಭ್ಯವಾಗದ ಕಾರಣ ಬರೆಯಲು ಸಾದ್ಯವಾಗಿಲ್ಲ.

ಈ ನಮ್ಮ ಭಾರತ ಚಿತ್ರರಂಗದಲ್ಲಿ ಪ್ರತಿ ನಟನ ಪ್ರವೇಶ ವಿಶೇಷವಾಗಿರುತ್ತದೆ. ಇದೇ ರೀತಿ ಇವರ ಚಿತ್ರ ರಂಗದ ಪ್ರವೇಶ ಹೇಗಾಯಿತು ಎಂದು ತಿಳಿದಿದಿಯೇ? ಇವರಿಗೆ ಹಿಂದಿ ಚಿತ್ರ ರಂಗವನ್ನು ಪ್ರವೇಶಿಸಲು ‌ಹಿಂದಿ ಚಿತ್ರ ರಂಗದ ಯಶಸ್ವಿ ನಿರ್ಮಾಪಕರು ಮತ್ತು ಬಾಂಬೆ ಟಾಕೀಸ್ ಮಾಲೀಕರಾಗಿದ್ದ ಹಿಮಾಂಶು ರಾಯ್ ಧರ್ಮಪತ್ನಿ ದೇವಿಕಾ ರಾಣಿ ಮಾಡಿದ ಸಹಾಯವನ್ನು ಇಂದಿಗೂ ಮರೆತಿಲ್ಲ. ಇವರ ಸಹಾಯದಿಂದ ಅಂದಿನ ನಿರ್ಮಾಪಕರು ಭಗವತೆ ಚರಣ ವರ್ಮಾ ೧೯೪೪  ರಲ್ಲಿ ಇವರ ನಿರ್ಮಾಣದಲ್ಲಿ ಬಂದ ಜ್ವಾರಾ ಭಾಭಾ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಲು ಅವಕಾಶ ಕಲ್ಪಿಸುವುದರೊಂದಿಗೆ ಇವರ ಚಿತ್ರ ರಂಗದ ಪ್ರವೇಶಕ್ಕೆ ಕಾರಣರಾದರು. ಅಲ್ಲದೇ ಈ ಸಮಯದಲ್ಲಿ ಮಹಮದ್ ಯುಸುಫ್ ಖಾನ್ ಬದಲಾಗಿ ದಿಲೀಪ್ ಕುಮಾರ್ ಎಂದು ಮರುನಾಮಕರಣವಾಗುವುದೊಂದಿಗೆ ಇಂದಿಗೂ ಇದೇ ಹೆಸರಿನಲ್ಲಿ ಭಾರತ ಚಿತ್ರರಂಗದಲ್ಲಿ  ಗುರುತಿಸಲ್ಪಟ್ಟಿದ್ದಾರೆ.

ಅಮಿತಾ ಚಕ್ರವರ್ತಿ ನಿರ್ದೇಶನದ ಆನಂದ ಬಿಸ್ವಾಸ್ ಸಂಗೀತ ನಿರ್ದೇಶನ ಮತ್ತು ಮೃದಲಾ,ಆಗಾ, ಮುಮ್ತಾಜ್ ಅಲಿ ಯಂತಹ ನಟ ಸಮೂಹವಿದ್ದರೂ ಇವರ ಮೊದಲ ಚಿತ್ರ ಬಿಡುಗಡೆ ನಂತರ ಅಷ್ಟು ಯಶಸ್ಸನ್ನು  ಪಡೆಯಲಿಲ್ಲ. ಮೂರು ವರ್ಷಗಳ ನಂತರ ೧೯೪೭ ರಲ್ಲಿ ಬಿಡುಗಡೆಯಾದ ಜುಗ್ನಿ ಚಿತ್ರದಿಂದ ಇವರ ಗೆಲುವಿನ ಓಟ ಆರಂಭವಾಯಿತು. ಬಳಿಕ ಬಂದ ಅಂದಾಜ್ (೧೯೪೯), ದೀದಾರ್ ( ೧೯೫೧), ಆಜಾದ್ (೧೯೫೫), ದೇವದಾಸ್ (೧೯೫೫), ಮಧುಮತಿ ( ೧೯೫೮) ಮತ್ತು ೧೯೬೦ ರಲ್ಲಿ ಬಿಡುಗಡೆಯಾದ ಐತಿಹಾಸಿಕ ಚಿತ್ರ ಮೊಘಲ್ ಇ ಅಜಮ್  ಸೇರಿ ಅನೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡಿದ್ದವು.

ಈ ಚಿತ್ರಗಳ ಯಶಸ್ಸಿನಿಂದ ಇವರು ಹಿಂದಿ ಚಿತ್ರ ರಂಗದಲ್ಲಿ ಯಾರು ನಿರೀಕ್ಷಿಸದ ರೀತಿ ಉನ್ನತ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದರು. ಇವರು ನಟಿಸಿದ ಅಂದಾಜ್, ದೀದಾರ್, ದೇವದಾಸ್ ಮತ್ತು ಮಧುಮತಿಯಂತಹ ಅನೇಕ ಚಿತ್ರಗಳು ಶೋಕಭರಿತ ಚಿತ್ರಗಳಾಗಿದ್ದರಿಂದ ಇವರಿಗೆ ದುರಂತ ನಾಯಕ ಎಂದು ಬಿರುದು ಬಂದಿತು. ಭಾರತದ ಮೊಘಲ್ ಇತಿಹಾಸದಿಂದ ಆರಿಸಿಕೊಂಡ ಕಥೆ ೧೯೬೦ ರಲ್ಲಿ ಬಿಡುಗಡೆಯಾದ ಶ್ರೀ ಮಂತ ಚಿತ್ರ ಮೊಘಲ್ ಇ ಅಜಮ್ ಕಪ್ಪು ಬಿಳುಪು ಚಿತ್ರ ಭರ್ಜರಿ ಯಶಸ್ಸು ಗಳಿಸಿ ಇತಿಹಾಸವನ್ನು ನಿರ್ಮಿಸಿತ್ತು. 

ಬಾಲಿವುಡ್ ಚಿತ್ರರಂಗದ ಹರಿಕಾರ ಪ್ರಥ್ವಿ ರಾಜ್ ಕಪೂರ್ ಈ ಚಿತ್ರದಲ್ಲಿ ಅಕ್ಬರ್ ಪಾತ್ರವನ್ನು ನಿರ್ವಹಿಸಿದ್ದರು. ಇದೇ ಚಿತ್ರ ಕಂಪ್ಯೂಟರ್ ಸಹಾಯದಿಂದ ವರ್ಣರಂಜಿತ ಚಿತ್ರವಾಗಿ ೨೦೦೮ ರಲ್ಲಿ ಪುನಃ ತೆರೆ ಕಂಡು ಭರ್ಜರಿ ಯಶಸ್ಸು ಕಂಡಿತ್ತು. ೧೯೬೧ ರಲ್ಲಿ ಗಂಗಾ ಜಮುನಾ ಚಿತ್ರವನ್ನು ನಿರ್ಮಿಸಿ ನಟಿಸುವ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡೆದರು. ಇದು ಇವರ ಮೊದಲ ವರ್ಣ ರಂಜಿತ ಚಿತ್ರ. ಇವರ ಸಹೋದರ ನಾಸೀರ್ ಖಾನ್ ಈ ಚಿತ್ರದಲ್ಲಿ ಇವರ ಸಹೋದರನ ಪಾತ್ರವನ್ನು ನಿರ್ವಹಿಸಿದ್ದರು.

ಇವರು ಚಿತ್ರರಂಗ ಪ್ರವೇಶಿಸಿದ ೨೨ ವರ್ಷಗಳ ನಂತರ ೧೯೬೬ ರಲ್ಲಿ ತಮ್ಮ ೪೪ ನೇ ವಯಸ್ಸಿನಲ್ಲಿ ಹಿಂದಿ ಚಿತ್ರ ರಂಗದ ಅಂದಿನ ೨೨ ವರ್ಷ ವಯಸ್ಸಿನ ಸುಂದರ ನಟಿ ಸಾಯಿರಾ ಬಾನುವರನ್ನು ವಿವಾಹವಾದರು. ೧೯೪೪ ರಿಂದ ೧೯೭೬ ವರೆಗೆ ಅನೇಕ ಚಿತ್ರಗಳಲ್ಲಿ ನಟಿಸಿದ ನಂತರ ವೈಯಕ್ತಿಕ ಕಾರಣದಿಂದ ಐದು ವರ್ಷಗಳ ಕಾಲ ಯಾವ ಚಿತ್ರಗಳಲ್ಲಿ ನಟಿಸಲಿಲ್ಲ. ೧೯೮೧ ರಲ್ಲಿ  ಕ್ರಾಂತಿ ಚಿತ್ರದಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸುವುದರ ಮೂಲಕ ಪುನಃ ತಮ್ಮ ಬಣ್ಣದ ಬದುಕನ್ನು ಆರಂಭಿಸಿದರು.

ಮೊದಲ ವಿವಾಹವಾಗಿ ೧೪ ವರ್ಷಗಳ ನಂತರ ಅಂದರೆ ೧೯೮೧ ರಲ್ಲಿ ಆಸ್ಮಾ ಎಂಬುವರ ಜೊತೆ ಎರಡನೇ ವಿವಾಹವಾದರು. ಆದರೆ ಈ ದಾಂಪತ್ಯ ಬಹಳ ಕಾಲ ಉಳಿಯದೇ ವಿಚ್ಛೇದನ ಪಡೆಯಿತು. ಅನಂತರ ಇವರ ಪೋಷಕ ಪಾತ್ರಗಳಲ್ಲಿ ಬಂದ ಶಕ್ತಿ,ವಿಧಾತಾ, ಮಶಾಲ್, ಕರ್ಮ ಮತ್ತು ಸೌದಾಗರ್ ಚಿತ್ರಗಳು ಬಿಡುಗಡೆಗೊಂಡು ಭರ್ಜರಿ ಯಶಸ್ಸು ಗಳಿಸಿದವು. ಆದರೆ ೧೯೯೬ ನೇ ಇಸ್ವಿಯಲ್ಲಿ ಇವರ ನಟನೆಯಲ್ಲಿ ಮೂಡಿ ಬಂದ ಕೊನೆಯ ಚಿತ್ರ ಕಿಲಾ ಚಿತ್ರ ಬಿಡುಗಡೆ ನಂತರ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ. ನಂತರ ಮಿತಿ ಮೀರಿದ ವಯಸ್ಸಿನ ಕಾರಣ ಚಿತ್ರರಂಗದಿಂದ ದೂರವಾಗಿ ಪ್ರಸ್ತುತ ನಿವೃತ್ತಿ ಜೀವನ ನಡೆಸುತ್ತಿರುವ  ಇವರು ಸುಸಂಸ್ಕೃತ ವ್ಯಕ್ತಿ. ಮತ್ತು ಎಲ್ಲರೊಂದಿಗೆ ಗೌರವದಿಂದ ವರ್ತಿಸುವರಲ್ಲದೆ ಅಚ್ಚು ಕಟ್ಟಾದ ಉಡುಪಿನಲ್ಲಿ ಕಾಣಿಸಿಕೊಳ್ಳುವ ನಾಗರಿಕ ಎಂದರೆ ತಪ್ಪಾಗಲಾರದು.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply