( ಮುಂದುವರೆದ ಭಾಗ )
ಮಾಲಾ ಸಿನ್ಹಾ ಕೇವಲ ನಟಿ ಮಾತ್ರವಲ್ಲ ಗಾಯಕಿಯು ಆಗಿದ್ದಾರೆ. ಆಕಾಶವಾಣಿಯ ( ಏರ್ ಇಂಡಿಯಾ ರೇಡಿಯೋ) ಗಾಗಿ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಆದರೆ ಅವರಿಗೆ ಹಿಂದಿ ಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಹಾಡಲು ಅವಕಾಶಗಳು ಸಿಗಲಿಲ್ಲ. ಆಗಲೇ ಅವರು ಚಿತ್ರರಂಗಕ್ಕೆ ಬಂದು ಐದು ವರ್ಷಗಳ ಮೇಲೆ ಆಗಿತ್ತಲ್ಲದೆ ಉತ್ತಮ ನಟಿಯಾಗಿ ಕೂಡ ಗುರುತಿಸಿಕೊಂಡಿದ್ದರು.
೧೯೫೭ ರಲ್ಲಿ ನಟ – ನಿರ್ದೇಶಕ ಗುರುದತ್ ( ಹಿನ್ನೆಲೆ ಗಾಯಕಿ ಗೀತಾ ದತ್ ಪತಿ) ಪ್ಯಾಸಾ ಎಂಬ ಹಿಂದಿ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರದ ಕಥೆಯೇ ಸ್ವಾರಸ್ಯಕರವಾಗಿದೆ. ಈ ಕಥೆಯಲ್ಲಿ ಒಬ್ಬ ಬಡ ವಿಫಲ ಕವಿ, ಒಬ್ಬ ಶ್ರೀಮಂತ ಮತ್ತು ನಾಯಕಿ ಮೂರು ಪ್ರಮುಖ ಪಾತ್ರಗಳು ಚಿತ್ರದ ಪ್ರಮುಖ ಆಕರ್ಷಣೆ. ಒಬ್ಬ ಬಡ ವಿಫಲ ಕವಿಯ ಬದಲು ಒಬ್ಬ ಶ್ರೀಮಂತ ವ್ಯಕ್ತಿಯನ್ನು ವಿವಾಹವಾಗಲು ನಿರ್ಧರಿಸುವ ಮಹಿಳೆಯ ಮಾರ್ಮಿಕ ಪಾತ್ರಕ್ಕೆ ನಟಿ ಮಧುಬಾಲಾರನ್ನು ಪರಿಗಣಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ನಟಿ ಮಧುಬಾಲಾ ಈ ಪಾತ್ರವನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಈ ಪಾತ್ರವನ್ನು ನಿರ್ವಹಿಸಿದ ಮಾಲಾ ಸಿನ್ಹಾವರ ಜನಪ್ರಿಯತೆ ನಿರೀಕ್ಷೆಗೂ ಮೀರಿ ಬೆಳೆಯಿತು.
ಅಲ್ಲದೇ ಈ ಚಿತ್ರ ಇವರ ವೃತ್ತಿ ಜೀವನದಲ್ಲಿ ಮಹತ್ತರ ತಿರುವು ಪಡೆಯಲು ಕಾರಣ ವಾಯಿತು. ಅನಂತರ ಚಿತ್ರ ರಂಗದಲ್ಲಿ ಆರಂಭವಾದ ಇವರ ಆಟ ಬಹಳ ವರ್ಷಗಳ ಕಾಲ ನಡೆಯಿತು. ಪ್ಯಾಸಾ ಚಿತ್ರದ ಯಶಸ್ಸಿನ ನಂತರ ೧೯೫೯ ರಲ್ಲಿ ಯಶ್ ಚೋಪ್ರಾ ನಿರ್ದೇಶನದಲ್ಲಿ ಮೂಡಿ ಬಂದ ಮೊದಲ ಚಿತ್ರ ಧೂಲ್ ಕಾ ಪೂಲ್ ನಾಟಕದ ಕಥೆಯನ್ನು ಹೊಂದಿದ್ದ ಈ ಚಿತ್ರದಲ್ಲಿ ನಟಿಸಿ ವಿಮರ್ಶಕರಿಂದ ಪ್ರಶಂಸೆಯನ್ನು ಗಳಿಸಿದ್ದರು. ಅಲ್ಲದೇ ಈ ಚಿತ್ರವು ಕೂಡ ಜಯಭೇರಿ ಬಾರಿಸಿತು. ನಂತರ ನಟಿಸಿದ ಪರ್ವರಿಶ್,ಫಿರ್ ಸುಬಹ ಹೋಗಿ,ಲವ್ ಮ್ಯಾರೇಜ್,ಅನ್ ಫಡ್,ದಿಲ್ ತೇರಾ ದೀವಾನಾ ಇತ್ಯಾದಿ ಈ ರೀತಿಯಾಗಿ ಒಂದರ ನಂತರ ಒಂದು ತೆರೆ ಕಂಡ ಚಿತ್ರಗಳು ಭರ್ಜರಿ ಯಶಸ್ಸು ಗಳಿಸಿದವು.
ಈ ಚಿತ್ರಗಳ ಯಶಸ್ಸಿನಿಂದ ಇವರ ತಾರಾ ಮೌಲ್ಯವೂ ಹೆಚ್ಚಾಯಿತು. ಆದರೂ ಚಿತ್ರ ವಿಮರ್ಶಕರ ಪ್ರಕಾರ ಇವರ ಚಿತ್ರ ರಂಗದ ವೃತ್ತಿ ಜೀವನದಲ್ಲಿ ಗುಮ್ ರಾಹ್ ಎಂಬ ಹಿಂದಿ ಚಿತ್ರದಲ್ಲಿ ಇವರ ನಟನೆಯ ಪ್ರತಿಭೆ ಸಾಬೀತಾಗಿದೆ. ೧೯೬೦ ರ ದಶಕದಲ್ಲಿ ನಟಿಸಿದ ಚಿತ್ರಗಳಲ್ಲಿ ನಾಯಕ ನಟರ ಪಾತ್ರಗಳಿಗೆ ಇರುವಷ್ಟು ಪ್ರಾಮುಖ್ಯತೆ ಇವರ ಪಾತ್ರಗಳಿಗೂ ಇರುತ್ತಿತ್ತು. ತಮ್ಮ ಉತ್ತಮ ಪಾತ್ರ ಮತ್ತು ಮೌಲ್ಯದ ದೃಢತೆಯನ್ನು ಹೊಂದಿದ್ದರೂ ಇವರು ಹೊಸ ನಟರೊಂದಿಗೆ ನಟಿಸಲು ಎಂದು ನಿರಾಕರಿಸಲಿಲ್ಲ. ಅವರು ನಟಿಸುವ ಮೊದಲು ತಮ್ಮ ಪಾತ್ರಕ್ಕೆ ಸಮನಾದ ತಾರಾ ಮೌಲ್ಯವಿರುವುದನ್ನು ಖಚಿತ ಪಡಿಸಿಕೊಂಡ ನಂತರವೇ ನಟಿಸುತ್ತಿದ್ದರು.
ಧರ್ಮೆಂದ್ರ, ಸುನಿಲ್ ದತ್,ಸಂಜಯ್ ಖಾನ್ ಮತ್ತು ಅಮಿತಾಭ್ ಬಚ್ಚನ್ ರಂತಹ ನಟರಿಗಷ್ಟೆ ಅಲ್ಲದೆ ತಮ್ಮ ಕಾಲದಲ್ಲಿ ಹೊಸದಾಗಿ ಚಿತ್ರ ರಂಗಕ್ಕೆ ಪ್ರವೇಶಿಸಿದ ಹಲವು ಹೊಸ ನಟರೊಂದಿಗೆ ಕೂಡಾ ನಾಯಕಿಯಾಗಿ ಅಭಿನಯಿಸಿದ್ದಾರೆ. ವಿಶೇಷ ಸಂಗತಿಯೇನೆಂದರೆ ಬಹಳಷ್ಟು ಚಿತ್ರಗಳಲ್ಲಿ ಪರದೆಯ ಮೇಲೆ ನಾಯಕ ನಟರ ಹೆಸರು ಬರುವ ಮೊದಲು ಇವರ ಹೆಸರು ಬರುತ್ತಿತ್ತು.
ಹಿಂದಿ ಚಿತ್ರ ರಂಗದಲ್ಲಿ ಜನಪ್ರಿಯತೆಯ ಉತ್ತಂಗದಲ್ಲಿರುವಾಗಲೇ ಇವರಿಗೆ ನೇಪಾಳಿ ಚಿತ್ರದಲ್ಲಿ ನಟಿಸಲು ಆಹ್ವಾನ ಬಂದಿತು. ೧೯೬೬ ರಲ್ಲಿ ಮೈಲೆಫಿರ್ ಎನ್ನುವ ನೇಪಾಳಿ ಚಿತ್ರದಲ್ಲಿ ನಟಿಸಲು ನೇಪಾಳ ದೇಶಕ್ಕೆ ಹೋದರು. ಆಗ ಇನ್ನೂ ನೇಪಾಳ ಚಿತ್ರ ರಂಗ ಆರಂಭದ ಹಂತದಲ್ಲಿತ್ತು.
ದೊಡ್ಡ ತೋಟದ ಮಾಲೀಕ ಸಿ.ಪಿ.ಲೋಹಾನಿ ಈ ಚಿತ್ರದ ನಾಯಕ ನಟರಾಗಿದ್ದರು. ಚಿತ್ರದ ಚಿತ್ರೀಕರಣ ನಂತರ ಮಾಲಾ ಸಿನ್ಹಾ ತಮ್ಮ ಹೆತ್ತವರ ಒಪ್ಪಿಗೆಯನ್ನು ಪಡೆದು ಆಶೀರ್ವಾದದೊಂದಿಗೆ ಸಿ.ಪಿ.ಲೋಹಾನಿಯನ್ನು ವಿವಾಹವಾದರು. ಇವರ ವಿವಾಹದ ನಂತರವೂ ಈ ಜೋಡಿಯದು ಅತೀ ದೂರದ ಬದುಕಾಗಿತ್ತು. ಪತಿ ಲೋಹಾನಿ ಕಾಟ್ಮಂಡು ವಿನಲ್ಲಿದ್ದು ತಮ್ಮ ಉದ್ದಿಮೆ ಮತ್ತು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರೆ ಇತ್ತ ಕಡೆ ಪತ್ನಿ ಮಾಲಾ ಸಿನ್ಹಾ ಚಿತ್ರಗಳಲ್ಲಿ ಅಭಿನಯಿಸುತ್ತ ತಮ್ಮ ಮಗಳು ಪ್ರತಿಭಾ ಸಿನ್ಹಾ ಜೊತೆ ಮುಂಬೈನಲ್ಲಿ ವಾಸವಾಗಿದ್ದರು. ನೇಪಾಳಿ ಮತ್ತು ಬಂಗಾಳಿ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ ಮಾಲಾ ಸಿನ್ಹಾ ನಟ ರಂಜಿತ್ ಮಲ್ಲಿಕ್ ಮತ್ತು ನಟ ಕಮಲಹಾಸನ್ ಜೊತೆ ನಟಿಸಿ ೧೯೭೭ ರಲ್ಲಿ ಬಿಡುಗಡೆಯಾದ ಕಬಿತಾ ಕೊನೆಯ ಬಂಗಾಳಿ ಚಿತ್ರವಾಗುವುದರೊಂದಿಗೆ ಬಂಗಾಳಿ ಚಿತ್ರ ರಂಗದ ಪ್ರಯಾಣವನ್ನು ಮುಗಿಸಿದರು. ನಂತರ ಕೂಡ ತಮ್ಮ ಖಾಸಗಿ ಜೀವನದಲ್ಲಿ ಮಹಿಳೆಯರ ಪರ ಪ್ರಬಲ ವಿಚಾರಗಳನ್ನು ಮಂಡಿಸುತ್ತಿದ್ದರೂ ತಮ್ಮ ಚಿತ್ರಗಳಲ್ಲಿ ಸೌಂದರ್ಯ ಮನಮೋಹಕ ಪಾತ್ರದಲ್ಲಿ ಅಭಿನಯಿಸುತ್ತಿದ್ದರು.
ಇವರು ನಟಿಸಿದ ಧೂಲ್ ಕಾ ಪೂಲ್,ಅನ್ ಫಡ್,ದಿಲ್ ತೇರಾ ದೀವಾನಾ ಸೇರಿದಂತೆ ಇನ್ನೂ ಅನೇಕ ಹಿಂದಿ ಚಿತ್ರಗಳು ಭರ್ಜರಿ ಯಶಸ್ಸು ಗಳಿಸಿದ್ದವು. ಇವರು ವೈವಿಧ್ಯ ಕಥಾವಸ್ತು ಹೊಂದಿದ ಅನೇಕ ಚಿತ್ರಗಳಲ್ಲಿ ನಟಿಸಿದ್ದು ಇದರಲ್ಲಿ ೧೯೬೪ ರಲ್ಲಿ ತೆರೆ ಕಂಡ ಜಹಂ ಆರಾ ಎಂಬ ಹಿಂದಿ ಚಿತ್ರ ಇವರ ಮೆಚ್ಚಿನ ಚಿತ್ರವಾಗಿದೆ. ಪೌರಾಣಿಕ ಹಿನ್ನೆಲೆ ಹೊಂದಿದ್ದ ಈ ಚಿತ್ರದ ಪ್ರಮುಖ ಪಾತ್ರಕ್ಕೆ ಮೊದಲು ಅಂದಿನ ಕಾಲದ ಜನಪ್ರಿಯ ನಟಿ ಮೀನಾ ಕುಮಾರಿಯನ್ನು ಆಯ್ಕೆ ಮಾಡಲಾಗಿತ್ತು. ಆದರೆ ಕಥೆ ಕೇಳಿದ ನಟಿ ಮೀನಾ ಕುಮಾರಿ ತಾನು ಈ ಪಾತ್ರಕ್ಕೆ ಸೂಕ್ತವೇ ಎನ್ನುವ ಆಲೋಚನೆಯಲ್ಲಿದ್ದರು. ಆಲೋಚಿಸಿದ ನಂತರ ನಟಿ ಮೀನಾ ಕುಮಾರಿ ಈ ಪಾತ್ರಕ್ಕೆ ಮಾಲಾ ಸಿನ್ಹಾ ಸೂಕ್ತವೆಂದು ನಿರ್ಧರಿಸಿ ಅವರಿಗೆ ಅವಕಾಶ ಕೊಡಿಸಿದರು. ಆದರೆ ಮುಮ್ತಾಜ್ ಮಹಲ್ಲರ ಜೇಷ್ಠ ಪುತ್ರಿಯ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಲು ಪೂರ್ವ ತಯಾರಿಯ ಅಗತ್ಯವಿತ್ತು.
ದೊರೆತ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಿಕೊಂಡ ಮಾಲಾ ಸಿನ್ಹಾ ಬಹಳ ಕಷ್ಟಕರವಾದ ಉರ್ದು ಭಾಷೆ ಕಲಿತರಲ್ಲದೆ ರಾಜಮನೆತನದ ತಹಜಿಲ್ ನ್ನು ಕೂಡ ಕಲಿತರು. ರಣಜಿತ್ ಸ್ಟುಡಿಯೋದಲ್ಲಿ ನಿರ್ಮಿಸಲಾದ ವೈಭವೋಪೇತ ಸೆಟ್ ವಿನ್ಯಾಸಗಳಲ್ಲಿ ಅಧಿಕವಾದ ತಾಪಮಾನವಿತ್ತು. ಆದರೆ ಈ ಚಿತ್ರಕ್ಕೆ ಮದನ್ ಮೋಹನ್ ರ ಇಂಪಾದ ಸಂಗೀತ ಮತ್ತು ಹಲವು ಭಾವಗೀತೆ ಸಾಹಿತ್ಯದ ಪೂರಕ ಸನ್ನಿವೇಶಗಳಿಂದ ಕೂಡಿದ ಈ ಚಿತ್ರ ತೆರೆ ಕಂಡ ನಂತರ ಭರ್ಜರಿ ಯಶಸ್ಸು ಕಂಡಿತ್ತು. ಆದರೆ ಕಾಲಕ್ಕೆ ತಕ್ಕಂತೆ ಮಾಲಾ ಸಿನ್ಹಾ ರ ವಯಸ್ಸು ಹೆಚ್ಚಾದ ನಂತರ ಹಲವು ಚಿತ್ರಗಳಲ್ಲಿ ತಮ್ಮ ವಯಸ್ಸಿಗೆ ಸರಿ ಹೊಂದುವ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು.
ಕೆಲವು ವರ್ಷಗಳ ನಂತರ ೧೯೯೪ ರಲ್ಲಿ ಬಿಡುಗಡೆಯಾದ ಝಿದ್ದಿ ಹಿಂದಿ ಚಿತ್ರದಲ್ಲಿ ಕಡೆಯ ಬಾರಿಗೆ ನಟಿಸಿದ ಮಾಲಾ ಸಿನ್ಹಾ ಅನಂತರ ಇದುವರೆಗೂ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ ಮಾಲಾ ಸಿನ್ಹಾ ತಮ್ಮ ಚಿತ್ರರಂಗದ ವೃತ್ತಿಯಲ್ಲಿ ತೋರಿಸಿದ ಆಸಕ್ತಿಯನ್ನು ಇವರ ಪುತ್ರಿ ಪ್ರತಿಭಾ ಸಿನ್ಹಾ ಅವರು ತಮ್ಮ ಚಿತ್ರ ರಂಗದ ವೃತ್ತಿಯಲ್ಲಿ ತೋರಿಸಿದರೂ ನಿರೀಕ್ಷಿಸಿದಷ್ಟು ಯಶಸ್ಸು ಕಾಣಲಿಲ್ಲ. ಪ್ರಸ್ತುತ ಮಾಲಾ ಸಿನ್ಹಾ ತಮ್ಮ ನಿವೃತ್ತ ಪತಿ ಸಿ.ಪಿ.ಲೋಹಿಯಾ ಹಾಗೂ ಪುತ್ರಿ ಬಾಲಿವುಡ್ ನಟಿ ಪ್ರತಿಭಾ ಸಿನ್ಹಾ ಅವರೊಂದಿಗೆ ಮುಂಬಯಿಯಲ್ಲಿ ವಾಸವಾಗಿದ್ದಾರೆ.