ಅನುಪಮ್ ಖೇರ್ ಬಾಲಿವುಡ್ ಚಿತ್ರರಂಗ ಕಂಡ ಪ್ರತಿಭಾನ್ವಿತ ಹಿರಿಯ ನಟರಲ್ಲದೆ ನಿರ್ಮಾಪಕರು ಮತ್ತು ನಿರ್ದೇಶಕರಾಗಿಯು ಜನಪ್ರಿಯತೆಯನ್ನು ಗಳಿಸಿರುವ ಇವರು ಮೂಲತಃ ರಂಗಭೂಮಿ ಕಲಾವಿದರು ಆಗಿರುವರು. ಬಾಲಿವುಡ್ ಚಿತ್ರಗಳಲ್ಲಿ ಅಲ್ಲದೇ ಬೇರೆ ದೇಶಗಳ ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಇವರು ಭಾರತೀಯ ಸೆನ್ಸಾರ್ ಬೋರ್ಡ್ ಛೇರ್ಮನ್ ಆಗಿ ಮತ್ತು ಇಂಡಿಯನ್ ಸ್ಕೂಲ್ ಆಫ್ ಡ್ರಾಮಾದ ಮುಖ್ಯಸ್ಥರಾಗಿಯು ಕಾರ್ಯ ನಿರ್ವಹಿಸಿದ್ದಾರೆ.
ಮಾರ್ಚ್ ೭,೧೯೫೫ ರಂದು ಹಿಮಾಚಲ ಪ್ರದೇಶದ ಶೀಮ್ಲಾದಲ್ಲಿ ಜನಿಸಿದ ಇವರು ಶೀಮ್ಲಾದಲ್ಲಿರುವ ಡಿ.ಎ.ವಿ. ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ್ದಾರೆ. ಆದರೆ ನನಗೆ ಇವರ ತಂದೆ ಮತ್ತು ತಾಯಿಯ ಕುರಿತು ಮತ್ತು ಇವರ ಶಿಕ್ಷಣದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗದ ಕಾರಣ ಇಲ್ಲಿ ಬರೆಯಲು ಸಾಧ್ಯವಾಗಲಿಲ್ಲ. ತಮ್ಮ ಆರಂಭಿಕ ಜೀವನವನ್ನು ನಾಟಕಗಳಲ್ಲಿ ಅಭಿನಯಿಸುವುದರ ಮೂಲಕ ಆರಂಭಿಸಿ ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸಿ ಅಪಾರ ಅನುಭವದೊಂದಿಗೆ ೨೬ ನೇ ವಯಸ್ಸಿನಲ್ಲಿ ಇವರು ೧೯೮೨ ರಲ್ಲಿ ಬಿಡುಗಡೆಯಾದ ಅಗ್ನಾ ಹಿಂದಿ ಚಿತ್ರದಲ್ಲಿ ನಟಿಸುವುದರ ಮೂಲಕ ಬಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಿದರು.
ಎರಡು ವರ್ಷಗಳ ನಂತರ ೧೯೮೪ ರಲ್ಲಿ ಬಿಡುಗಡೆಯಾದ ಸಾರಾಂಶ ಚಿತ್ರದಲ್ಲಿ ಒಬ್ಬ ನಿವೃತ್ತಿ ಹೊಂದಿದ ವ್ಯಕ್ತಿಯ ಪಾತ್ರದಲ್ಲಿ ಮನೋಜ್ಞ ಅಭಿನಯದ ಮೂಲಕ ಇವರು ತಮ್ಮ ನಟನೆಯ ಸಾಮರ್ಥ್ಯವನ್ನು ಪ್ರದರ್ಶಿಸಿದರು.
೧೯೮೬ ರಲ್ಲಿ ಬಿಡುಗಡೆಯಾದ ಕರ್ಮಾ ಚಿತ್ರದಲ್ಲಿ ಡಾ.ಡಾಂಗ್ ರಾಗಿ ಪಾತ್ರದಲ್ಲಿ ಖಳನ ಪಾತ್ರವನ್ನು ನಿರ್ವಹಿಸಿದರು. ಅದೇ ವರ್ಷದಲ್ಲಿ ಬಾಲಿವುಡ್ ನಟಿ ಕಿರಣ್ ಖೇರ್ ರನ್ನು ವಿವಾಹವಾಗಿರುವ ಇವರಿಗೆ ಸಿಕಂದರ್ ಖೇರ್ ಎಂಬ ಮಗನಿದ್ದು ಅವರು ಕೂಡ ನಟರಾಗಿದ್ದಾರೆ. ನಂತರದ ಚಿತ್ರಗಳಲ್ಲಿ ಹಾಸ್ಯ, ಪೋಷಕ ಮತ್ತು ಖಳನ ಪಾತ್ರಗಳಲ್ಲಿ ನಿರ್ವಹಿಸಿರುವ ಅಭಿನಯ ಗಮನಾರ್ಹವಾಗಿದೆ.
ಜುಡ್ವಾ ೨, ತಕದೀರ್ ವಾಲಾ,ವಕ್ತ್ ಹಮಾರಾ ಹೇ,ಬುಡ್ಡಾ ಮರ್ ಗಯಾ, ಡರ್, ಬಡೇಮಿಯಾ ಚೋಟೆಮಿಯಾ, ಹಮ್ ಆಫ್ ಕೆ ಹೇ ಕೌನ್, ಹಸೀನಾ ಮಾನ್ ಜಾಯೇಗಿ, ಜೋಡಿ ನಂ.೧, ಸೂರ್ಯವಂಶ್, ರಾಮಲಖನ್,ಲಮ್ಹೆ ಇತ್ಯಾದಿ ಚಿತ್ರಗಳಲ್ಲಿ ಬಂದ ಬೇರೆ ಬೇರೆ ರೀತಿಯ ಹಾಸ್ಯ ಸನ್ನಿವೇಶಗಳನ್ನು ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ.
( ಮುಂದುವರೆಯುವುದು )