ಬಾಲಿವುಡ್ ಚಿತ್ರರಂಗದ ಸ್ವಾಭಾವಿಕ ನಟನೆಯ ಜನಕ ಮೋತಿಲಾಲ್ ರಾಜವಂಶ್

   ಸ್ವಾತಂತ್ರ್ಯ ಪೂರ್ವದಲ್ಲಿಯೇ ಬಾಲಿವುಡ್ ಚಿತ್ರರಂಗದಲ್ಲಿ ಮೊದಲ ಬಾರಿಗೆ ಸ್ವಾಭಾವಿಕ ನಟನೆಯನ್ನು ಬೆಳ್ಳಿ ತೆರೆಯ ಮೇಲೆ ತೋರಿಸಿದ ನಟ ಮೋತಿಲಾಲ್ ರಾಜವಂಶ್ ಬಗ್ಗೆ ನನಗೆ ದೊರಕಿರುವ ಅಲ್ಪ ಮಾಹಿತಿಯ ಆಧಾರದ ಮೇಲೆ ತಿಳಿಸಿಕೊಡುವ ಉದ್ದೇಶದಿಂದ ಈ ಲೇಖನವನ್ನು ರಚಿಸಿದ್ದೇನೆ.

      ಮೋತಿಲಾಲ್ ಡಿಸೆಂಬರ್ ೪,೧೯೧೦ ರಂದು ಶೀಮ್ಲಾದಲ್ಲಿ ದಿಲ್ಲಿ ಮೂಲದ ಸುಪ್ರಸಿದ್ದ ರಾಜಕುಟುಂಬದಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಮೋತಿಲಾಲ್ ರಾಜವಂಶ್. ಇವರ ತಂದೆ ಪ್ರಸಿದ್ಧ ಶಿಕ್ಷಣ ತಜ್ಞರು ಆಗಿದ್ದರು. ಆದರೆ ಮನುಷ್ಯನ ದುರಾದೃಷ್ಟ ಯಾವ ರೀತಿ ಇರುತ್ತದರೆಂದರೆ ಎಲ್ಲ ಇದ್ದರೂ ಪ್ರಯೋಜನ ಇಲ್ಲ. ಒಂದು ವರ್ಷದ  ಮಗುವಾಗಿದ್ದಾಗ ಇವರ ತಂದೆ ತೀರಿಕೊಂಡಿದ್ದರು. ಈ ಕಾರಣದಿಂದ ಉತ್ತರ ಪ್ರದೇಶದಲ್ಲಿ ಪ್ರಸಿದ್ಧ ಸಿವಿಲ್ ಸರ್ಜನ್ ರಾಗಿದ್ದ   ತಮ್ಮ ಚಿಕ್ಕಪ್ಪ ನ ಆಶ್ರಯದಲ್ಲಿ ಬೆಳೆದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶೀಮ್ಲಾದ ಶಾಲೆಯಲ್ಲಿ ಆರಂಭಿಸಿ ದಿಲ್ಲಿಯಲ್ಲಿ ಮಾಧ್ಯಮಿಕ ಮತ್ತು ಕಾಲೇಜು ಶಿಕ್ಷಣವನ್ನು ಪೂರೈಸಿದ ಇವರು ನೌಕಾಪಡೆಯಲ್ಲಿ ಕೆಲಸ ನಿರ್ವಹಿಸಬೇಕೆಂಬ ಇಚ್ಛೆಯನ್ನು ಹೊಂದಿದ್ದರಿಂದ ಇದೇ ಕಾರಣಕ್ಕೆ ಮುಂಬಯಿಗೆ ಬಂದಿದ್ದರು.

ಆದರೆ ವಿಧಿಯ ಆಟ ಅನಾರೋಗ್ಯದ ಕಾರಣ ಇವರಿಗೆ ಪ್ರವೇಶ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಉನ್ನತ ದರ್ಜೆಯ ಜೀವನವನ್ನು ನಡೆಸಿದ ಇವರು ಯಾವಾಗಲೂ ಶೋಕಿಯ ಉಡುಪುಗಳನ್ನು ಹೆಚ್ಚು ಧರಿಸುತ್ತಿದ್ದ ಇವರು ಹಾಸ್ಯ ಪ್ರಿಯರು, ವಿನೋದಿಗಳಾಗಿದ್ದರು.  ದೇವರ ಆಟ ಎಂತಹ ವಿಚಿತ್ರ ಅಂದರೆ ಒಂದು ಸಾರಿ ಮುಂಬೈ ನ ಸಾಗರ ಸ್ಟುಡಿಯೋದಲ್ಲಿ ೧೯೩೪ ರಂದು ಹಿಂದಿ ಚಿತ್ರದ ಚಿತ್ರೀಕರಣ ನಡೆದಿತ್ತು. ಇವರು ಕೂಡ ಚಿತ್ರದ ಚಿತ್ರೀಕರಣ ನೋಡಲು ಹೋಗುತ್ತಿದ್ದರು. ಅದೇ ಸಮಯದಲ್ಲಿ ಉಚ್ಛ ಸುಸಂಸ್ಕೃತ ಉಡುಪಿನಲ್ಲಿದ್ದ ಮೋತಿಲಾಲ್ ವರನ್ನು ಗಮನಿಸಿ  ಚಿತ್ರದ ನಿರ್ದೇಶಕರಾಗಿದ್ದ ಕಾಳೀಪ್ರಸಾದ್ ಘೋಷರು ತಮ್ಮ ನೂತನ ಚಿತ್ರ ಶಂಕರ್ ಕಾ ಜಾದು ಚಿತ್ರದಲ್ಲಿ ನಾಯಕನ ಪಾತ್ರವನ್ನು ನೀಡಿದ್ದರು‌.

ಈ ರೀತಿಯಾಗಿ  ಇವರು ಸಾಗರ ಫಿಲಂ ಕಂಪನಿಯ ಮೂಲಕ ಚಿತ್ರ ರಂಗವನ್ನು ಪ್ರವೇಶಿಸಿದರು. ಆಗ ಇವರ ವಯಸ್ಸು ಕೇವಲ ೨೪ ವರ್ಷ.  ೧೯೩೫ ರಲ್ಲಿ ನಟಿ ಸಬಿತಾದೇವಿ ಜೊತೆ ನಟಿಸಿ ಎರಡು ವರ್ಷಗಳ ಬಿಡುವಿನ ನಂತರ ೧೯೩೭ ದಿಲ್ಲಿ ಕುಲವಧು ಚಿತ್ರದಲ್ಲಿ ನಟಿಸಿದ ನಂತರ ಕಾರಣಾಂತರಗಳಿಂದ ಸಾಗರ್ ಫಿಲಂ ಕಂಪನಿಯನ್ನು ತೊರೆದು ರಣಜಿತ್ ಸ್ಟುಡಿಯೋ ಸೇರಿ ಅಲ್ಲಿ ಅದೇ ವರ್ಷ ಅಂದರೆ ೧೯೩೭ ನೇ ಇಸ್ವಿ ಜಾಗೀರ್ದಾರ್, ೧೯೩೮ ಹೋಮ್ ತುಮ್ ಔರ್ ವಂಹ ಚಿತ್ರಗಳಲ್ಲಿ ನಟಿಸಿದ್ದರು. ಚಿತ್ರ ರಂಗ ಪ್ರವೇಶಿಸಿ ಏಳು ವರ್ಷಗಳ ನಂತರ ಇವರು ೧೯೪೧ ರಲ್ಲಿ ಹಿಂದಿ ಚಿತ್ರ ರಂಗಕ್ಕೆ ಮುಕೇಶ್ ಎಂಬ ಹಿನ್ನೆಲೆ ಗಾಯಕರನ್ನು ಪರಿಚಯಿಸಿದರು. ಆದರೆ ಕಾರಣಾಂತರಗಳಿಂದ ಸುಧೀರ್ಘ ನಾಲ್ಕು ವರ್ಷಗಳ ಬಿಡುವಿನ ನಂತರ ೧೯೪೨ ರಲ್ಲಿ ಅರ್ಮಾನ್, ೧೯೪೩ ರಲ್ಲಿ ತಕ್ದೀರ್,ಇದೇ ವರ್ಷದಲ್ಲಿ ಬಂದ ಇವರ ಮೂರ್ತಿ ಚಿತ್ರದಲ್ಲಿ ಮುಕೇಶ್ ಅವರಿಗೆ ಪ್ರಥಮ ಬಾರಿಗೆ ಹಾಡುವ ಅವಕಾಶ ದೊರಕಿತು. ಮತ್ತು ೧೯೪೪ ರಲ್ಲಿ ಕಲಿಯಾಂ ಚಿತ್ರದಲ್ಲಿ ನಟಿಸಿದ್ದರು.

೧೯೪೭ ರಲ್ಲಿ ಇವರ ಅಭಿನಯದಲ್ಲಿ ಮೂಡಿ ಬಂದ ಪೆಹ್ಲಿ ನಜರ್ ಚಿತ್ರದಲ್ಲಿ ಹಿನ್ನೆಲೆ ಗಾಯಕ ಮುಕೇಶ್ ಹಾಡಿದ ದಿಲ್ ಜಲ್ತಾ ಹೈ ತೋ ಜಲ್ನೆದೇ. ಈ ಗೀತೆಯನ್ನು ಇವರಿಗಾಗಿಯೇ ರಚಿಸಲಾಗಿತ್ತು. ನಂತರ ಯಾವ ಯಾವ ಚಿತ್ರಗಳಲ್ಲಿ ನಟಿಸಿದ್ದಾರೆ ಎನ್ನುವ ಮಾಹಿತಿ ನನಗೆ ಲಭ್ಯವಾಗಿಲ್ಲ. ಆರ್.ಕೆ.ನಾರಾಯಣ ಎಂಬ ಲೇಖಕರು ಒಬ್ಬ ನಯವಂಚಕನ ಕುರಿತು ಬರೆದ ಕಾದಂಬರಿ ಮಿ. ಸಂಪತ್  ೫ ವರ್ಷಗಳ ನಂತರ ೧೯೫೨ ರಲ್ಲಿ ಎಸ್.ಎಸ್.ವಾಸನ್ ಇದೇ ಹೆಸರಿನಲ್ಲಿ ಒಂದು ಚಿತ್ರ ನಿರ್ಮಾಣ ಮಾಡಿದರು. ಈ ಚಿತ್ರದಲ್ಲಿ ನಯವಂಚಕನ ಪಾತ್ರ ನಿರ್ವಹಿಸಿದ್ದರು. ಈ ಚಿತ್ರ ಬಿಡುಗಡೆಯಾದ ನಂತರ ಭರ್ಜರಿ ಯಶಸ್ಸು ಕಂಡಿತ್ತಲ್ಲದೆ ಇವರ ಜನಪ್ರಿಯತೆ ನಿರೀಕ್ಷೆಗೂ ಮೀರಿ ಬೆಳೆಯಿತು. ಸಹಜವೆಂಬಂತೆ ಜನರ ಸಂಪರ್ಕ ಹೆಚ್ಚಾಯಿತು. ಅಲ್ಲದೇ ಹಲವಾರು ಬಾರಿ ಜೂಜು ಮತ್ತು ಕುದುರೆ ರೇಸ್ ಗೆ ಹೋಗುತ್ತಿದ್ದರು.

ಮೂರು ವರ್ಷಗಳ ನಂತರ ೧೯೫೫ ರಲ್ಲಿ ಬಿಮಲ್ ರಾಯ್ ನಿರ್ದೇಶನದಲ್ಲಿ ಮೂಡಿ ಬಂದ ದೇವದಾಸ್ ಚಿತ್ರದ ಚುನ್ನಿಲಾಲ್ ಪಾತ್ರ ಇವರಿಗೆ ಉತ್ತಮ ಹೆಸರನ್ನು ತಂದುಕೊಟ್ಟಿತಲ್ಲದೆ ಫಿಲಂ ಫೇರ್ ನ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತು. ೧೯೫೬ ರಲ್ಲಿ ರಾಜಕಪೂರ್ ರ ಜಾಗ್ತೆ ರಹೋ, ೧೯೫೭ ರಲ್ಲಿ ಅಬ್ ದಿಲ್ಲಿ ದೂರ್ ನಹಿ ಮತ್ತು ೧೯೫೯ ರಲ್ಲಿ ಪೈಗಾಮ್ ಚಿತ್ರದಲ್ಲಿ ಕೂಡ ನಟಿಸಿದ್ದರು. ಇದೇ ವರ್ಷ ೧೯೫೯ ರಲ್ಲಿ ಬಂದ ಅನಾಡಿ ಚಿತ್ರದಲ್ಲಿ ಹೊಸ ಯುವನಟಿ ನೂತನಳ ಪೋಷಕನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದರು.  ೧೯೬೦ ರಲ್ಲಿ ಬಂದ ಪಾರಖ್ ಚಿತ್ರದ ನಟನೆಗೆ ಎರಡನೇ ಬಾರಿ ಫಿಲಂಫೇರ್ ಪ್ರಶಸ್ತಿ ಬಂದಿತ್ತು. ಆಗಲೇ ಇವರು ತಮ್ಮ ಖಾಸಗಿ ಜೀವನದಲ್ಲಿ ಜೂಜು ಮತ್ತು ಕುದುರೆ ರೇಸ್ ಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. ಇದಲ್ಲದೆ ತಮ್ಮ ಕೊನೆಯ ದಿನಗಳಲ್ಲಿ ಇವರು  ತಮ್ಮದೇ ಆದ ಒಂದು ರಾಜವಂಶ್ ಪ್ರೊಡಕ್ಷನ್ ಅಡಿಯಲ್ಲಿ ಅದ್ದೂರಿ ವೆಚ್ಚದಲ್ಲಿ ಛೋಟಿ ಛೋಟಿ ಬಾತೇಂ ಎಂಬ ಚಿತ್ರವನ್ನು ನಿರ್ಮಿಸಿದ್ದರು.

ಇಲ್ಲಿ ವಿಚಿತ್ರ ಸಂಗತಿಯೇನೆಂದರೆ ಬಿಡುಗಡೆಯಾದ ನಂತರ ಈ ಚಿತ್ರ ರಾಷ್ಟ್ರ ಪತಿಯ ಪ್ರಶಸ್ತಿಯನ್ನು ಪಡೆದರೂ ಗಲ್ಲಾಪೆಟ್ಟಿಗೆಯಲ್ಲಿ ಹೀನಾಯ ಸೋಲು ಕಾಣುವುದರೊಂದಿಗೆ ತಮ್ಮಲ್ಲಿದ್ದ ಸಂಪತ್ತನ್ನು ಕಳೆದುಕೊಂಡರು. ಆದರೂ ಸತತ ಐದು ವರ್ಷಗಳ ಕಾಲ  ಉತ್ತಮವಲ್ಲದ ಆರ್ಥಿಕ ಸ್ಥಿತಿಯಲ್ಲಿ  ಏಕಾಂಗಿಯಾಗಿ ಬದುಕಿದ್ದರು. ತಮ್ಮಲ್ಲಿದ್ದ ಅಪಾರ ಸಂಪತ್ತನ್ನು ಕಳೆದುಕೊಂಡ ನೋವಿನಲ್ಲಿ  ಜೂನ್ ೧೭, ೧೯೬೫ ರಂದು ಇವರು ತಮ್ಮ ೫೫ ನೇ ವಯಸ್ಸಿನಲ್ಲಿ ನಿಧನರಾದಾಗ ಇವರ ಬಳಿ ಯಾರೂ ಇರಲಿಲ್ಲ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply