ಬಾಲಿವುಡ್ ಚಿತ್ರರಂಗದ ಹಿರಿಯ ನಟಿ ದೇವಿಕಾ ರಾಣಿ

ಭಾರತೀಯ ಚಿತ್ರರಂಗದ ಪ್ರಥಮ ಸಾಲಿನ ಮಹಿಳೆಯರಲ್ಲಿ ಶಾಶ್ವತ ಹೆಸರನ್ನು ಪಡೆದಿದ್ದ ನಟಿ ದೇವಿಕಾ ರಾಣಿಯವರು ಚಿತ್ರರಂಗದಲ್ಲಿ ಕೊಡುವ ಪ್ರತಿಷ್ಠಿತ ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದ ಮೊಟ್ಟ ಮೊದಲ ನಟಿ ಎಂಬ ಖ್ಯಾತಿಯನ್ನು ಪಡೆದಿದ್ದರು. ಅಲ್ಲದೇ ಮುಂಬಯಿ ಟಾಕೀಸ್ ಚಿತ್ರ ನಿರ್ಮಾಣ ಸಂಸ್ಥೆಯ ಮೂಲಕ ಅನೇಕ ಶ್ರೇಷ್ಠ  ಚಿತ್ರಗಳನ್ನು ನಿರ್ಮಿಸಿ ಭಾರತ ದೇಶವಲ್ಲದೇ ವಿದೇಶಗಳಲ್ಲಿ ಕೂಡ ಪ್ರಸಿದ್ಧಿಯನ್ನು ಪಡೆದಿದ್ದರು.
          ಮಾರ್ಚ್ 30, 1908 ರಂದು ವಿಶಾಖಪಟ್ಟಣದ ವಾಲ್ಟೇರ್ ಎಂಬಲ್ಲಿ ಎಂ.ಎನ್.ಚೌಧರಿ ಮತ್ತು ಲೀಲಾ ದಂಪತಿಯ ಮಗಳಾಗಿ ಜನಿಸಿದ ಇವರು ಮೂಲತಃ ರಬೀಂದ್ರನಾಥ್ ಠಾಗೂರ್ ವಂಶದವರಾಗಿದ್ದರು. ಅಲ್ಲದೇ ಇವರ ತಂದೆ ಎಂ.ಎನ್.ಚೌಧರಿಯವರು ಮದ್ರಾಸ್ ರಾಜ್ಯದ ಪ್ರಥಮ ಜನರಲ್ ಸರ್ಜನ್ ಎಂದೇ ಪ್ರಸಿದ್ಧಿ ಪಡೆದಿದ್ದರು.
    20 ರ ದಶಕದಲ್ಲಿ ತಮ್ಮ ಆರಂಭದ ಶಿಕ್ಷಣವನ್ನು ಪಡೆದಿದ್ದ ಇವರು ನಂತರ ರಾಯಲ್ ಅಕಾಡೆಮಿ ಆಫ್ ಮ್ಯೂಸಿಕ್ ಸಂಸ್ಥೆಗಳಲ್ಲಿ ವಿದ್ಯಾರ್ಥಿವೇತನವನ್ನು ಪಡೆದು ರಂಗಭೂಮಿಯ ಶಿಕ್ಷಣವನ್ನು ಪಡೆದಿದ್ದರು. ಅಧ್ಯಯನದ ಜೊತೆಗೆ ಆರ್ಕಿಟೆಕ್ಚರ್, ಟೆಕ್ಟೈ ಲ್ಸ್ ಮತ್ತು ಡೆಕೂರ್ ಡಿಸೈನ್ ಸೇರಿ ಅನೇಕ ಕ್ಷೇತ್ರಗಳಲ್ಲಿ ಪರಿಣಿತಿಯನ್ನು ಪಡೆದಿದ್ದ ಇವರು ಎಲಿಜಬೆತ್ ಆರ್ಡನ್ ಅವರ ಮಾರ್ಗದರ್ಶನವನ್ನು ಪಡೆದಿದ್ದರಲ್ಲದೆ ಬ್ರಹ್ಮ ಸಮಾಜದ ಚಟುವಟಿಕೆಗಳಲ್ಲಿ ಪರಿಚಿತರಾಗಿದ್ದ ನಿರಂಜನ್ ಪಾಲ್ ಅವರು ಮುಂದೆ ಇವರಿಗಾಗಿ ಚಲನಚಿತ್ರದಲ್ಲಿ ಪಾತ್ರಗಳನ್ನು ಸೃಷ್ಟಿಸುತ್ತಿದ್ದರು.


      1929 ರಂದು ತಮ್ಮ 21 ನೇ ವಯಸ್ಸಿನಲ್ಲಿ ಅಂದಿನ ಪ್ರಸಿದ್ಧ ಚಿತ್ರ ನಿರ್ಮಾಪಕ ಹಿಮಾಂಶು ರೇ ಅವರನ್ನು ವಿವಾಹವಾದರು. ಹಿಮಾಂಶು ರೇ ಅವರು ಆಗಿನ ಕಾಲದಲ್ಲಿ ದಿ ಲೈಟ್ ಆಫ್ ಏಷಿಯಾ, ಶಿರಾಜ್ ಮತ್ತು ಎ ಥ್ರೋ ಆಫ್ ಡೈಸ್ ಸೇರಿ ಅನೇಕ ಚಿತ್ರಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯ ಮಟ್ಟದಲ್ಲಿ ನಿರ್ಮಿಸಿದ್ದರು. ತಮ್ಮ ವಿವಾಹವಾಧ ನಂತರ ಪತಿ ಹಿಮಾಂಶು ರೇ ಅವರೊಂದಿಗೆ ಕೆಲವು ವರ್ಷಗಳ ಕಾಲ ಜರ್ಮನಿಯಲ್ಲಿ ನೆಲೆಸಿದ್ದ ಇವರು ಅಲ್ಲಿ ಚಲನಚಿತ್ರ ರಂಗದ ವಿವಿಧ ಭಾಗಗಳಲ್ಲಿ ಕೆಲಸವನ್ನು ನಿರ್ವಹಿಸಿ ಬಹಳಷ್ಟು ಅನುಭವವನ್ನು ಪಡೆದಿದ್ದರು. ನಂತರ ಈ ದಂಪತಿ ಜೊತೆಯಾಗಿ ನಟಿಸಿದ್ದ ರಂಗ ಪ್ರಯೋಗಗಳು ಸ್ವಿಟ್ಜರ್ಲೆಂಡ್ ಮತ್ತು ಸ್ಕಾಂಡಿನೇವಿಯನ್ ದೇಶದಲ್ಲಿ ಕೂಡ ಇವರು ಪ್ರಖ್ಯಾತಿಯನ್ನು ಪಡೆಯಲು ಕಾರಣವಾಗಿದ್ದವು. 
          1933 ರಲ್ಲಿ ಈ ದಂಪತಿ ಕರ್ಮ ಎಂಬ ಚಿತ್ರವನ್ನು ನಿರ್ಮಿಸಿದ್ದರಲ್ಲದೇ ಈ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು.ಆ ಕಾಲದಲ್ಲಿ ನಮ್ಮ ದೇಶದಲ್ಲಿ ಮಡಿವಂತಿಕೆಯು ಹೆಚ್ಚು ಚಾಲನೆಯಲ್ಲಿತ್ತಲ್ಲದೆ ಹಲವಾರು ಕಠಿಣ ನಿಯಮಗಳು ಜಾರಿಯಲ್ಲಿದ್ದವು. ಆದರೆ ಅದೇ ಸಮಯದಲ್ಲಿ ತೆರೆ ಕಂಡ ಈ ಚಿತ್ರದಲ್ಲಿದ್ದ ಚುಂಬನಯುಕ್ತ ಪ್ರೇಮ ದೃಶ್ಯಗಳು ದೊಡ್ಡ ಸುದ್ದಿಯನ್ನು ಮಾಡಿದ್ದವು. ನಂತರ ಈ ದಂಪತಿ ಜಂಟಿಯಾಗಿ ಮುಂಬಯಿ ಟಾಕೀಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದರಲ್ಲದೆ ಆಗ ಇವರ ಜೊತೆ ನಿರಂಜನ್ ಪೈ ಮತ್ತು ಫ್ರಾನ್ ಆಸ್ಟನ್ ಕೂಡ ಇದ್ದರು.
       ಆದರೆ ಇವರ ಮುಂಬಯಿ ಟಾಕೀಸ್ ಚಿತ್ರ ನಿರ್ಮಾಣ ಸಂಸ್ಥೆ ನೀಡಿದ ಕೊಡುಗೆಗಳಲ್ಲಿ ನಟ ಅಶೋಕ್ ಕುಮಾರ್ ಮತ್ತು ನಟಿ ಮಧುಬಾಲಾ ಪ್ರಮುಖರಾಗಿದ್ದರು. ಆ ಕಾಲದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಅಶೋಕ್ ಕುಮಾರ್ ಮತ್ತು ದೇವಿಕಾ ರಾಣಿ ಜೋಡಿ ಪ್ರಸಿದ್ಧಿಯನ್ನು ಪಡೆದಿತ್ತಲ್ಲದೆ 1936 ರಲ್ಲಿ ತೆರೆ ಕಂಡ ಅಛೂತ ಕನ್ಯಾ ಎಂಬ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಮುಖ್ಯವಾಗಿ ಈ ಚಿತ್ರವು ಜಾತಿಪದ್ಧತಿಯನ್ನು ಪ್ರಶ್ನಿಸುವ ಧೈರ್ಯವನ್ನು ತೋರಿತ್ತು. ನಂತರ ಇವರು ಜವಾನಿ ಕಾ ಹವಾ, ಜೀವನ್ ನಯಾ, ಸಾವಿತ್ರಿ, ಜೀವನ್ ಪ್ರಭಾತ್, ದುರ್ಗಾ, ವಚನ್, ನಿರ್ಮಲ್ ಮತ್ತು ಇಜ್ಜತ್ ಸೇರಿ ಅನೇಕ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಇವರ ಸಂತೋಷದ ಜೀವನವನ್ನು ನೋಡಿ ವಿಧಿಗೆ ಸಹಿಸಲು ಆಗಲಿಲ್ಲ.

ಪತಿ ಹಿಮಾಂಶು ರೇ ಅಕಾಲಿಕ ಮರಣ ಇವರಿಗೆ ಜೀವನದಲ್ಲಿ ದೊಡ್ಡ ಆಘಾತವನ್ನುಂಟು ಮಾಡಿತ್ತು. ಆದರೂ ಇಂತಹ ದುಃಖಕರ ಸಂದರ್ಭದಲ್ಲಿ ಕೂಡ ಮುಂಬಯಿ ಟಾಕೀಸ್ ನ ಮುಖ್ಯಸ್ಥರಾಗಿ ಪುರ್ನಮಿಲನ್, ಕಂಗನ್,ಬಂಧನ್, ಕಿಸ್ಮತ್ ಮತ್ತು ಹಮಾರಿ ಬಾತ್ ಸೇರಿ ಅನೇಕ ಗುಣಮಟ್ಟದ ಚಿತ್ರಗಳನ್ನು ನಿರ್ಮಿಸಿದ್ದರು. ಆ ಕಾಲದಲ್ಲಿ ಇವರ ಸಹಕಾರದಿಂದ ಲೀಲಾ ಚಿಟ್ನೀಸ್, ದಿಲೀಪ್ ಕುಮಾರ್, ಮಧುಬಾಲಾ, ಮುಮ್ತಾಜ್, ಶಾಂತಿ ಸೇರಿ ಮುಂಬೈನ ಅನೇಕ ತಾರೆಯರ ಪರಿಚಯವಾಯಿತಲ್ಲದೆ ಹಲವಾರು ಶ್ರೇಷ್ಠ ತಂತ್ರಜ್ಞರು, ಬರಹಗಾರರು ಸೇರಿ ಅನೇಕ ಅಸಾಮಾನ್ಯ ಪ್ರತಿಭೆಗಳು ಬೆಳಕಿಗೆ ಬಂದಿದ್ದವು. ಆದರೆ ಮುಂದಿನ ದಿನಗಳಲ್ಲಿ ಬಾಂಬೆ ಟಾಕೀಸ್ ಮಾಲೀಕತ್ವದಲ್ಲಿ ಮುಂದುವರೆಯಲು ಶಶಧರ್ ಮುಖರ್ಜಿಯೊಂದಿಗೆ ಹೋರಾಟ ನಡೆಸಬೇಕಾಯಿತು. ಅದೇ ಸಮಯದಲ್ಲಿ ಇವರ ಚಿತ್ರ ತಂಡದಲ್ಲಿ ಕಾಣಿಸಿದ ಒಡಕಿನ ಪರಿಣಾಮ 1943 ರಲ್ಲಿ ಶಶಧರ್ ಮುಖರ್ಜಿ, ಅಶೋಕ್ ಕುಮಾರ್ ಸೇರಿ ಅನೇಕ ಪ್ರಮುಖ ಕಲಾವಿದರು ಮುಂಬಯಿ ಟಾಕೀಸ್ ನಿಂದ ಹೊರಗೆ ಬಂದು ತಮ್ಮದೇ ಆದ ಫಿಲಂಸ್ಥಾನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ತೀವ್ರ ಗೊಂಡ ಪೈಪೋಟಿ ಕಾರಣ ಮುಂಬಯಿ ಟಾಕೀಸ್ ನೇಪಥ್ಯಕ್ಕೆ ಸರಿಯಿತು. ಅಲ್ಲಿಯವರೆಗೂ ಏಕಾಂಗಿಯಾಗಿ ಜೀವನವನ್ನು ಮುಂದುವರೆಸಿದ ಇವರು 1945 ರಲ್ಲಿ  ತಮ್ಮ 37 ನೇ ವಯಸ್ಸಿನಲ್ಲಿ  ರಷ್ಯಾದ ಪ್ರಸಿದ್ಧ ಚಿತ್ರಕಾರ ಸ್ವೇವೆಟ್ಸಲೋ ರೋರೀಚ್ ರನ್ನು  ವಿವಾಹವಾದರು. ಅಲ್ಲದೇ ಚಿತ್ರ ರಂಗವನ್ನು ತೊರೆದು ತಮ್ಮ ಪತಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು.

ಇಂತಹ ಅನೇಕ ಸಾಧನೆಗಳನ್ನು ಮಾಡಿದ್ದ ಇವರಿಗೆ 1958 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. 1969 ನೇ ಇಸ್ವಿಯು ಭಾರತೀಯ ಚಿತ್ರರಂಗದ ಪಾಲಿಗೆ ಮರೆಯಲಾಗದ ವರ್ಷ ಕೂಡ ಆಗಿದೆ. ಕಾರಣ ಸ್ಥಾಪನೆಯಾದ ವರ್ಷವೇ ಪ್ರಪ್ರಥಮ ಬಾರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ ಮೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಕೂಡ ಇವರಿಗೆ ಸಂದಿದೆ. 1989 ನೇ ಇಸ್ವಿಯಲ್ಲಿ ಇವರಿಗೆ ಸೋವಿಯತ್ ಲ್ಯಾಂಡ್ ಪ್ರಶಸ್ತಿಯು ಲಭಿಸಿತ್ತು.
ಇಂತಹ ಮಹಾನ್ ಸಾಧನೆಗಳನ್ನು ಮಾಡಿದ್ದ ಮಹಾನ್ ಸಾಧಕಿ ದೇವಿಕಾ ರಾಣಿ 1994 ಮಾರ್ಚ್ 9 ರಂದು ತಮ್ಮ 86 ನೇ ವಯಸ್ಸಿನಲ್ಲಿ ತಮ್ಮ ಮೆಚ್ಚಿನ ತಾತಗುಣಿ ಎಸ್ಟೇಟ್ ನಲ್ಲಿ ಮರಣಹೊಂದಿದರು.
ಆದರೆ ರೋರಿಚ್, ದೇವಿಕಾ ರಾಣಿಯಂತಹ ಕಲಾವಿದರು ಸೃಷ್ಟಿಸಿದ್ದ ಕಲೆಯನ್ನು ಈ ವಿಶ್ವಕ್ಕೆ ಸೃಷ್ಟಿಸಲು ಸಾಧ್ಯವಾಗದೇ ಇವರು ನಿರ್ಮಿಸಿದ ಅಪಾರ ಶ್ರೀಮಂತಿಕೆಗಾಗಿ ಕಿತ್ತಾಟ ಮಾಡುತ್ತ ಹೊಸ ಇತಿಹಾಸವನ್ನು ಬರೆಯತೊಡಗಿತು.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply