ಈ ಚಿತ್ರ ಬಂದಿದ್ದು 1965ರಲ್ಲಿ. ಆದರೆ ಕಥೆ… 1872ರದ್ದು! ಅಂದರೆ ಗಾಂಧೀಜಿಗೆ ಮೂರುವರ್ಷ ಆದಾಗಿನದು!
ರಾಜು (ರಾಜ್‍ಕುಮಾರ್) ಹೇರ್‍ಸ್ಟೈಲ್ ಚಂದ. ಕಿವಿಯಲ್ಲಿ ಉಂಗುರಗಳು. ನೋಡಲು ಕೂಡ ದಷ್ಟಪುಷ್ಟವಾಗಿ ಕಾಣಿಸ್ತಾರೆ.
ಭೈರವ (ಉದಯಕುಮಾರ್) ಒಬ್ಬ ಕೊಳ್ಳೆಕಾರ. ಅವನ ಕಾಲಿಗೆ ಗುಂಡು ಹೊಡೆದಿರುತ್ತಾನೆ ಈಶ್ವರಯ್ಯ(ಕೆ.ಎಸ್. ಅಶ್ವತ್ಥ್) ಮತ್ತು ಅವನು ಸತ್ತಿದ್ದಾನೆ ಎಂದುಕೊಂಡಿರುತ್ತಾನೆ. ಭೈರವನ ಗರ್ಭಿಣಿ ಪತ್ನಿಯೂ ಗುಂಡೇಟಿನಲ್ಲಿ ಸತ್ತಿರುತ್ತಾಳೆ. ಅವನ ಮಗುವೂ ಸತ್ತಿದೆ ಎಂದುಕೊಂಡು ಭೈರವ ಸೇಡಿಗಾಗಿ ಈಶ್ವರಯ್ಯನ ಪತ್ನಿ ಪಂಢರೀಬಾಯಿಯನ್ನೂ, ಮಗ ರಾಜುವನ್ನೂ ಕದ್ದು ತಂದಿರುತ್ತಾನೆ. ಈಶ್ವರಯ್ಯ ತನ್ನ ಪತ್ನಿ ಮತ್ತು ಮಗ ಸತ್ತಿದ್ದಾರೆ ಎಂದುಕೊಂಡಿರುತ್ತಾನೆ.
ಆದರೆ ಭೈರವ ಪಂಢರೀಬಾಯಿಯನ್ನು ರಾಜುವಿಗೆ ತನ್ನ ತಂಗಿಯೆಂದೂ, ತಾನು ರಾಜುವಿನ ಅಪ್ಪನೆಂದು ಹೇಳಿರುತ್ತಾನೆ. ಒಮ್ಮೆ ಭೈರವನ ಸಹಾಯಕ ಎಂ.ಪಿ. ಶಂಕರ್ ಜೊತೆ ವಿಪರೀತ ಹೊಡೆದಾಡಿ ಗೆದ್ದ ರಾಜುವನ್ನು ಬೆಟ್ಟದ ಹುಲಿ ಎಂದು ಕರೆದದ್ದೂ ಅಲ್ಲದೇ ಅವನನ್ನು ಕೊಳ್ಳೆ ಹೊಡೆಯಲು ಕಳಿಸುತ್ತಾನೆ ಭೈರವ. ದರೋಡೆ ಮಾಡದಿದ್ದರೆ ಚಾವಟಿಯಿಂದ ಹೊಡೆಯುತ್ತಾನೆ. ಅದನ್ನು ನೋಡಿ ಪಂಢರೀಬಾಯಿ ಅಳುತ್ತಾಳೆ. ಆದರೆ ಅಮ್ಮ ಎಂದು ಹೇಳಿಕೊಳ್ಳಲಾರಳು. ಹಾಗೆ ಹೇಳಿದರೆ ರಾಜುವನ್ನು ಕೊಲ್ಲುವೆನೆಂದಿರುತ್ತಾನೆ ಭೈರವ. ಅತ್ತೆ ಅತ್ತೆ ಎಂದು ರಾಜು ತನ್ನನ್ನು ಕರೆದಾಗಲೆಲ್ಲಾ ಪಂಢರೀಬಾಯಿಯ ಕರುಳು ಕಿತ್ತುಕೊಂಡು ಬರುತ್ತಿರುತ್ತದೆ.
ಈಶ್ವರಯ್ಯ ಭೈರವನ ಮಗಳನ್ನು (ಜಯಂತಿ) ಬೆಳೆಸುತ್ತಿರುತ್ತಾನೆ. ಒಮ್ಮೆ ರಾಜು, ಜಯಂತಿ ಭೇಟಿ ಆಗುತ್ತಾರೆ. ಪ್ರೇಮ ಆಸ್ ಯೂಷುವಲ್.
ನರಸಿಂಹರಾಜು, ಜಯ ಜೋಡಿ ಇದೆ. ನರಸಿಂಹರಾಜುವಿನ ಬಳಿ ಮಾತಾಡುವ ಕತ್ತೆಯೊಂದಿರುತ್ತದೆ! ದಿನೇಶ್ ನ್ಯಾಯಾಧೀಶನಾಗಿ ಕಾಣಿಸಿಕೊಂಡಿದ್ದಾರೆ.
ಏನೇನೋ ಆಗಿ ಕೊನೆಗೆ ಶುಭಂ.
ರಾಜ್ ಕತ್ತಿ, ಕೋಲು, ಭರ್ಜಿ, ಕವೆ, ಕೈ, ಕಾಲು ಎಲ್ಲದರಲ್ಲಿಯೂ ಫೈಟ್ ಬೇಕಾದಷ್ಟು ಮಾಡಿದ್ದಾರೆ. ಜಯಂತಿ ಸ್ಟೈಲೋ ಸ್ಟೈಲು. ಆಕೆಯ ಮಾತಿನ ಶೈಲಿಯೇ ಸಂಗೀತಮಯ.
ಆಡುತಿರುವ ಮೋಡಗಳೇ – ಪಿಬಿಎಸ್, ಆಕಾಶದ ಲೋಕದೆ ದೂರ – ಜಾನಕಿ, ಪಿಬಿಎಸ್, ಮದುಮಗಳು ನಾನಾಗಿ ಮತ್ತು ಏಕೋ ಈ ದಿನ ಏನೋ ತಲ್ಲಣ – ಎಸ್.ಜಾನಕಿ, ಎಲ್ ಆರ್ ಈಶ್ವರಿ ಮತ್ತು ಎಸ್‍ಜಾನಕಿ – ಅತ್ತೆಯ ಮಗಳೇ ಏತಕೆ ರಗಳೆ ಹಾಡುಗಳಷ್ಟೂ ಜನಪ್ರಿಯ.
ಒಬ್ಬ ಸುಂದರಿಯ ಹಾಡಿಲ್ಲದ ನೃತ್ಯವಿದೆ. ಇದಕ್ಕೆ ಟಿ.ಜಿ.ಲಿಂಗಪ್ಪ ಅವರ ಸಂಗೀತ ನೇಪಥ್ಯ ಸೂಪರ್ಬ್.