ಹುಬ್ಬಳ್ಳಿಯ ಕರ್ನಾಟಕ ಚಲನಚಿತ್ರ ಮತ್ತು ಕಿರುಚಿತ್ರ ಕಲಾವಿದರ ಕ್ಷೇಮಾಭಿವೃದ್ಧಿ ಮಂಡಳಿಯು ಚೇತನಾ ಫೌಂಡೇಶನ್ ಸಹಯೋಗದೊಂದಿಗೆ ಧಾರವಾಡದ ರಂಗಾಯಣದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಅದ್ಧೂರಿ ಕರ್ನಾಟಕ ಚಲನಚಿತ್ರೋತ್ನವಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಬೇಂದ್ರೆಯವರ ನಾಡು ಎಂದಮೇಲೆ ಕಲೆ-ಸಾಹಿತ್ಯ ಪ್ರಿಯರ ನಾಡು ಎಂದು ಬೇರೆ ಹೇಳಬೇಕಿಲ್ಲ. ಮಾರ್ಚ್ 17,18,19 ಮೂರು ದಿನವೂ ರಂಗಾಯಣವು ಸಿನಿಪ್ರಿಯರ ಸ್ವರ್ಗವಾಗಿ ಮಾರ್ಪಟ್ಟಿತ್ತು.
ಸಾಮಾನ್ಯವಾಗಿ ಚಿತ್ರೋತ್ಸವಗಳ ಪಾಲಿಗೆ ಬೆಂಗಳೂರು ಅನಿವಾರ್ಯ ಆಯ್ಕೆ ಎಂಬಂತಿದೆ. ಕಮರ್ಷಿಯಲ್ ದೃಷ್ಟಿಯಿಂದ ಹಾಗು ಕಲಾವಿದರ ದೃಷ್ಟಿಯಿಂದಲೂ ಬಹುತೇಕ ಚಿತ್ರೋತ್ಸವಗಳು ಬೆಂಗಳೂರಿನಲ್ಲೇ ನಡೆಯುವುದು ಸಹಜ. ಹೀಗಾಗಿ ಉತ್ತರಕರ್ನಾಟಕ ಭಾಗದ ಕಲಾವಿದರಿಗೆ ಚಿತ್ರೋತ್ಸವ ವೇದಿಕೆಗಳು ಗಗನಕುಸುಮವೆಂದೇ ಹೇಳಬಹುದು. ಹೀಗಾಗಿ ಅದ್ಭುತ ಪ್ರತಿಭೆಗಳಿದ್ದರೂ ಅದನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಸಿಗುವುದು ಕೊಂಚ ಕಷ್ಟವೇ. ಅದನ್ನು ಮನಗಂಡ ಕಾರ್ಯಕ್ರಮದ ಆಯೋಜಕರು ಹಟಕ್ಕೆ ಬಿದ್ದವರಂತೆ ಧಾರವಾಡದಲ್ಲಿ ಚಿತ್ರೋತ್ಸವವನ್ನು ಏರ್ಪಡಿಸಿದ್ದೂ ಅಲ್ಲದೆ ಗೆದ್ದು ತೋರಿಸಿದ್ದಾರೆ ಕೂಡ. ರಾಜ್ಯದ ಮೂಲೆಮೂಲೆಯಿಂದ (ಅದರಲ್ಲೂ ವಿಶೇಷವಾಗಿ ಉತ್ತರಕರ್ನಾಟಕ ಭಾಗದಿಂದ) ಪ್ರತಿಭೆಗಳನ್ನು ಹುಡುಕಿ ತಂದು ಈ ವೇದಿಕೆಯ ಮೂಲಕ ಅವರನ್ನು ರಾಜ್ಯಕ್ಕೆ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಅದಕ್ಕಾಗಿ ಆಯೋಜಕರು ಪಟ್ಟ ಶ್ರಮವನ್ನು ಹೇಳುತ್ತಾ ಹೋದರೆ ಅದೇ ಒಂದ ದೊಡ್ಡ ಕತೆಯಾಗಬಹುದೇನೋ? ಕನ್ನಡ ಸಿನಿಮಾರಂಗದ ಖ್ಯಾತ ಕಲಾವಿದರ ದಂಡೇ ಧಾರವಾಡಕ್ಕೆ ಬಂದಿತ್ತು. ಉದ್ಘಾಟನೆಯಿಂದ ಹಿಡಿದು ವಂದನಾರ್ಪಣೆಯ ತನಕ ನಿರಂತರ ಮೂರುದಿನಗಳ ಕಾಲ ಸಿನಿಪ್ರಿಯರಿಗೆ ಈ ಚಿತ್ರೋತ್ಸವ ಭರ್ಜರಿ ರಸದೌತಣ ಒದಗಿಸಿದ್ದಂತೂ ದಿಟ. ಸ್ಥಳೀಯ ಹಾಡುಗಾರರು, ನೃತ್ಯಗಾರರು, ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ಈ ಕಾರ್ಯಕ್ರಮ ಒದಗಿಸಿತ್ತು. ಚಂದ್ರಶೇಖರ ಮೂಡಲಗೇರಿಯವರು ಈ ಕಾರ್ಯಕ್ರಮದ ಯಶಸ್ಸಿನ ಹಿಂದಿನ ಒನ್ ಮ್ಯಾನ್ ಶೋ ಎಂದರೂ ಬಹುಶಃ ತಪ್ಪಿಲ್ಲ. ಅನೇಕ ಚಿತ್ರಗಳು, ಕಿರುಚಿತ್ರಗಳು ಈ ಕಾರ್ಯಕ್ರಮದಲ್ಲಿ ಪ್ರಸಾರವಾಗಿ ಹುಬ್ಬಳ್ಳಿ-ಧಾರವಾಡ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿತ್ತು. ಉತ್ತರಕರ್ನಾಟಕ ಪ್ರತಿಭೆಗಳ ಅವಕಾಶದ ಬಾಗಿಲು ತೆರೆಯುವತ್ತ ಇಂತಹ ಮತ್ತಷ್ಟು ಕಾರ್ಯಕ್ರಮಗಳು ಮೂಡಿಬರಲು ಈ ಕಾರ್ಯಕ್ರಮ ನಾಂದಿಯಾಗಬಲ್ಲದು ಎಂಬುದಂತೂ ಖರೆ.