ಭರತ್ ಎಂಬ ಗಾನಕೋಗಿಲೆ

Bharath Rhythms

ಭರತ್ ರಿಥಮ್ಸ್ ಎಂಬ ತಂಡದ ಹೆಸರನ್ನು ಖಂಡಿತಾ ನೀವೆಲ್ಲಾ ಕೇಳಿಯೇ ಇರುತ್ತೀರಿ. ಯಾವುದೇ ವೃತ್ತಿನಿರತ ಹಾಡುಗಾರರ ತಂಡಕ್ಕೂ ಚಾಲೆಂಜ್ ಹಾಕಬಲ್ಲಂತಹ ಪ್ರತಿಭಾನ್ವಿತ ಹಾಡುಗಾರರಿರುವ ಈ ತಂಡದ ಯಶಸ್ಸಿನ ಶ್ರೇಯಸ್ಸಿನ ಹಿಂದಿರುವ ಹೆಸರೇ ಭರತ್. ಹೌದು! ಅಣ್ಣಾವ್ರ ಜ್ವಾಲಾಮುಖಿ ಸಿನಿಮಾದ “ಏಕೋ ಏನೋ ಈ ನನ್ನ ಮನವು” ಎಂಬ ಹಾಡಿನಿಂದ ಪ್ರಸಿದ್ಧರಾದ ಭರತ್ ಅವರ ಕಂಠವನ್ನು ಸ್ವತಃ ಅಣ್ಣಾವ್ರೇ ಮೆಚ್ಚಿ ಹೊಗಳಿದ್ದರಂತೆ. ಅಣ್ಣಾವ್ರೇ ಮೆಚ್ಚಿದ ಮೇಲೆ ಇನ್ನೇನು ಬೇಕು ಅಲ್ಲವೇ? ತಮ್ಮಲ್ಲಿ ಅವಿತಿದ್ದ ಗಾಯಕನಿಗೆ ನೀರೆರೆದು ಪೋಷಿಸಿದರು. ಬರುಬರುತ್ತಾ ಇವರ ಕಂಠ ರಾಜ್ಯದೆಲ್ಲೆಡೆ ಪ್ರಸಿದ್ಧವಾಗತೊಡಗಿತು. ಅಂದಿನಿಂದ ಶುರುವಾದ ಇವರ ಗಾಯನದ ಪಯಣ ಇಲ್ಲಿಯವೆರೆಗೆ ನಡೆಯುತ್ತಾ ಬಂದಿದೆ. ರಾಜ್ಯಾದ್ಯಂತ, ದೇಶಾದ್ಯಂತ ಇದುವರೆಗೆ ಭರತ್ ಅವರು ಕೊಟ್ಟಿರುವ ಕಾರ್ಯಕ್ರಮಗಳ ಸಂಖ್ಯೆ ಮೂರು ಸಾವಿರಕ್ಕೂ ಹೆಚ್ಚು ಎಂದರೆ ಆ ಗಾಯನದಲ್ಲಿರುವ ಮಾಧುರ್ಯದ ಅರಿವಾಗುತ್ತದೆ. ಇಂತಿಪ್ಪ ಭರತ್ ಅವರು ಚಿತ್ರೋದ್ಯಮ.ಕಾಂ ಗೆ ಮಾತಿಗೆ ಸಿಕ್ಕರು. ಸಿಕ್ಕ ಸ್ವಲ್ಪ ಸಮಯದಲ್ಲಿ ಭರತ್ ಅವರು ಸವೆಸಿದ ಹಾದಿಯ ಮೈಲಿಗಳಲ್ಲನ್ನು ಹಿಡಿದುಡುವ ಪ್ರಯತ್ನ ಮಾಡಿದ್ದಾರೆ ಚಿತ್ರೋದ್ಯಮ.ಕಾಂ ನ ಕವಿತಾ. ಸಂಗೀತ, ವೆಬ್ ಸೀರೀಸ್, ಶಾರ್ಟ್ ಫಿಲಂ, ರಾಜಕೀಯ – ಎಂಬ ಹತ್ತಾರು ರಂಗಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ಬಿಡುವಿಲ್ಲದೆ ಕಲಾಸೇವೆ ಮಾಡುತ್ತಿರುವ ಭರತ್ ಅವರ ಸಂದರ್ಶನ ಮೂರು ಕಂತುಗಳಲ್ಲಿ ಚಿತ್ರೋದ್ಯಮ.ಕಾಂ ನಲ್ಲಿ ಪ್ರಕಟವಾಗಲಿದೆ. ಭರತ್ ರಿಥಮ್ಸ್ ತಂಡಕ್ಕೆ ಹಾಗು ವಿಶೇಷವಾಗಿ ಭರತ್ ಅವರ ಸಂಗೀತ ಪ್ರೇಮಕ್ಕೆ ನಿಮ್ಮ ಮೆಚ್ಚುಗೆಯಿರಲಿ

ಚಿತ್ರೋದ್ಯಮ: ನಿಮ್ಮ ಆರಂಭದ ಗಾಯನ ದಿನಗಳ ಬಗ್ಗೆ ಹೇಳುವಿರಾ ಸಾರ್?
ಭರತ್: ಎಂಭತ್ತರ ದಶಕದಲ್ಲಿ ಆರ್ಕೆಸ್ಟ್ರಾಗಳ ಮೂಲಕ ದಿನಾ ಒಂದಿಲ್ಲೊಂದು ಊರನ್ನು ಸುತ್ತುತ್ತಾ ಸಾವಿರಾರು ಕಾರ್ಯಕ್ರಮಗಳನ್ನು ಕೊಡುತ್ತಿದ್ದೆ. ಕಾಲಕ್ರಮೇಣ ಆರ್ಕೆಸ್ಟ್ರಾಗಳಲ್ಲಿ ಕೂಡ ಬದಲಾವಣೆಯ ಗಾಳಿ ಬೀಸತೊಡಗಿತು. ಮುಂಚೆ ಆರ್ಕೆಸ್ಟ್ರಾಗಳಲ್ಲಿ ಕೀ ಬೋರ್ಡ್, ಗಿಟಾರ್, ಕೊಳಲು ಮುಂತಾದ ಸಂಗೀತ ಉಪಕರಣಗಳನ್ನು ಲೈವ್ ಆಗಿ ನುಡಿಸುವ ಪದ್ಧತಿ ಇತ್ತು. ಬರುಬರುತ್ತಾ ಆ ಪದ್ಧತಿ ಮಾಯವಾಗಿ ಕರೋಕೆ ಸಂಸ್ಕೃತಿ ಶುರುವಾಯ್ತು. ಆ ನಂತರ ನಾನು ನನ್ನ ಕೆಲಸಗಳಲ್ಲಿ ಬಿಜಿಯಾಗಿದ್ದರಿಂದ ಗಾಯನಕ್ಕೆ ಪೂರ್ತಿ ಸಮಯ ಕೊಡಲಾಗದಿದ್ದರೂ, ಆಗೊಮ್ಮೆ ಈಗೊಮ್ಮೆ ಸಮಯ ಸಿಕ್ಕಾಗ ಹಾಡುವುದನ್ನು ಮಾತ್ರ ನಿಲ್ಲಿಸಲಿಲ್ಲ. ಇತ್ತೀಚಿಗೆ ಕೊರೋನಾ ಶುರುವಾದಾಗಿನಿಂದ ಅಂದರೆ 2018 ರಿಂದ ನಮ್ಮದೇ ಆದ ತಂಡವೊಂದನ್ನು ಕಟ್ಟಿಕೊಂಡು ತಿಂಗಳಿಗೊಂದರಂತೆ ಕಾರ್ಯಕ್ರಮವನ್ನು ಕೊಡುತ್ತಾ ಬಂದಿದ್ದೇವೆ.

ಚಿತ್ರೋದ್ಯಮ : ನಿಮ್ಮ ತಂಡದ ಹಾಡುಗಾರರ ಬಗ್ಗೆ ಕಿರು ಪರಿಚಯ ನೀಡಲು ಆಗುತ್ತಾ ಸಾರ್?
ಭರತ್ : ಖಂಡಿತ. ಇದು ಪ್ರೊಫೆಷನಲ್ ಆರ್ಕೆಸ್ಟ್ರಾ ಎನ್ನುವುದಕ್ಕಿಂತ ಸಂಗೀತವನ್ನು ಉಸಿರಾಗಿ ಪ್ರೀತಿಸುವಅಭಿರುಚಿಯುಳ್ಳ, ಸಮಾನ ಮನಸ್ಕರ ಗಾಯಕರ ತಂಡ ಎಂದು ಹೇಳಬಹುದು. ನಿಮಗೆ ಗೊತ್ತಿರುವ ಹಾಗೆ ವೃತ್ತಿಯಲ್ಲಿ ನಾನು ರಾಜಕೀಯದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದೇನೆ. ನನ್ನ ರಾಜಕೀಯದ ಜೀವನ ಕೂಡ ಒಂದು ಇಂಟರೆಸ್ಟಿಂಗ್ ಸ್ಟೋರಿ. ಅದರ ಬಗ್ಗೆ ಆಮೇಲೆ ಡೇಟೈಲಾಗಿ ಹೇಳ್ತೀನಿ. ನನ್ನ ಜೊತೆ ವೋಲ್ವೋ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ನಾಗರಾಜು, ಮೈಕ್ರೊಲ್ಯಾಬ್ಸ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವವರ ಶ್ರೀಮತಿ ನಂದಿನಿ, ಚಂದನ ಟಿಟಿವಿಯ ವರ್ತವಾಚಕರಾದ ಕೃಷ್ಣಮೂರ್ತಿ, ವೃತ್ತಿಯಿಂದ ಲೆಕ್ಕ ಪರಿಶೋಧಕರಾಗಿರುವ ಅನಿಲ್, ರಂತಹ ಸಮಾನ ಮನಸ್ಕ ಸಂಗೀತ ಪ್ರೇಮಿಗಳು ಇರುವ ತಂಡ ಇದು. ಯಾವುದೇ ಪ್ರಯೋಜಕರಿಗೋಸ್ಕರ ಕಾಯದೇ, ನಮ್ಮದೇ ಸ್ವಂತ ಖರ್ಚಿನಿಂದ ತಿಂಗಳಿಗೊಂದರಂತೆ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದೇವೆ. ಈ ಮೂಲಕ ಸಂಗೀತ ದೇವಿಯ ಉಪಾಸನೆಗಾಗಿ ಅಳಿಲಿನಷ್ಟಾದರೂ ಸೇವೆ ಸಲ್ಲಿಸಿದ್ದೇವೆಂಬ ಸಾರ್ಥಕ ಭಾವ ನಮ್ಮದು. ಅದರಲ್ಲೂ ವಿಶೇಷವಾಗಿ ಮಲ್ಲೇಶ್ವರಂ ನ ಸೇವಾಸದನ ವಂತೂ ನಮ್ಮ ಕಾರ್ಯಸ್ಥಾನವೆಂದರೆ ಬಹುಶಃ ತಪ್ಪಾಗಲಾರದು. ಇದುವರೆಗೂ ಸುಮಾರು ೪೫ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ಆ ದಿಶೆಯಲ್ಲಿ ಕೆಲಸಮಾಡುತ್ತಿದ್ದೇವೆ. ಇದುವರೆಗೂ ಸಾವಿರಾರು ಜನರು ನಮ್ಮ ಹಾಡುಗಳಿಗೆ ಕಿವಿಯಾಗಿದ್ದಾರೆ. ರಾಜ್ಯಾದ್ಯಂತ, ದೇಶಾದ್ಯಂತ ನಿರಂತರವಾಗಿ ಸಂಗೀತ ಕಾರ್ಯಕ್ರಮಗಳನ್ನು ನೀಡುವ ಸಂಕಲ್ಪ ತೊಟ್ಟಿದ್ದೇವೆ. ಮಲೇಷಿಯಾ, ಸಿಂಗಪೂರ್ ಸೇರಿದಂತೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಾಡುವ ಅವಕಾಶ ಕೂಡ ಇಷ್ಟರಲ್ಲೇ ಬರಲಿದೆ. ಈ ಮೂಲಕ ವಿಶ್ವಾದ್ಯಂತ ಕನ್ನಡ ಹಾಡುಗಳನ್ನು ಪಸರಿಸಬೇಕೆಂಬ ಆಸೆ ನಮ್ಮದು.


ಚಿತ್ರೋದ್ಯಮ: ರಾಜಕೀಯ, ಸಂಗೀತ ಕ್ಶೆತ್ರವಷ್ಟೇ ಅಲ್ಲದೆ ಮತ್ತೊಂದು ಹೊಸ ಕ್ಷೇತ್ರಕ್ಕೆ ಕೈಹಾದ್ದೀರಿ ಎಂದು ಕೇಳಲ್ಪಟ್ಟೆ. ಅದರ ಬಗ್ಗೆ ತಿಳಿಸಿಕೊಡುವಿರಾ?
ಭರತ್: ಹೌದು! ಇತ್ತೀಚೆಗಷ್ಟೇ ಅಂದರೆ ಕಳೆದ ನವಂಬರ್ ತಿಂಗಳಲ್ಲಿ ಶುರುವಾದ ಹೊಸ ಆಲೋಚನೆ ಅದು. ಸಂಗೀತ ಕ್ಷೇತ್ರಕ್ಕೆ ಬಹಳವೇ ಹತ್ತಿರವಿರುವ ಉದ್ದಿಮೆಯ ಪಾಲುದಾರಿಕೆ ಮೊನ್ನೆಯಷ್ಟೇ ಆರಂಭವಾಯಿತು. ದಿನ ಬೆಳಗಾದರೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಹೊಸ ಪ್ರತಿಭೆಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಅದ್ಭುತವಾದ ಪ್ರತಿಭೆ ಇದ್ದರೂ ಕೂಡ ಸರಿಯಾದ ವೇದಿಕೆ ಸಿಗದೇ ಆ ಪ್ರತಿಭೆಗಳು ಎಲೆಮರೆಯ ಕಾಯಿಯ ಹಾಗೆಯೆ ಉಳಿದುಹೋಗುವುದು ಕೂಡ ನಮಗೆ ಗೊತ್ತಿರುವ ಸಂಗತಿಯೇ. ಹಾಗಾಗಿ ಸಾಧ್ಯವಾದಸ್ತೂ ಇಂತಹ ಪ್ರತಿಭೆಗಳನ್ನು ಪರಿಚಯಿಸುವ ಪ್ರಯತ್ನ ಮಾಡೋಣವೆಂಬ ಆಲೋಚನೆಯೇ ಈ ಹೊಸ ಪ್ರಯತ್ನ. ಶಾರ್ಟ್ ಫಿಲಂ, ಮಾಡೆಲಿಂಗ್, ಕ್ಯಾಲೆಂಡರ್ ಶೂಟ್, ವೆಬ್ ಸೀರೀಸ್, ಫ್ಯಾಶನ್ ಷೋ ಗಳಂತಹ ವೇದಿಕೆಗಳ ಮೂಲಕ ಹೊಸ ಹೆಜ್ಜೆ ಇಡಬೇಕೆಂದು ನಾನು ಮತ್ತು ನನ್ನ ಗೆಳೆಯ ಸಂಜಯ್ ಕುಮಾರ್ ರವರು ಹೊಸ ಸಾಹಸಕ್ಕೆ ಕೈ ಹಾಕಿದ್ದೇವೆ. ಆ ದೇವರು ಇದರಲ್ಲಿ ಕೂಡ ಯಶಸ್ಸು ಕೊಡುತ್ತಾನೆಂಬ ನಂಬಿಕೆ ನಮ್ಮದು. ಈ ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗಷ್ಟೇ ಮಲ್ಲೇಶ್ವರಂ ನ ಮಂತ್ರಿಮಾಲ್ ನಲ್ಲಿ ಒಂದು ಫ್ಯಾಶನ್ ಷೋ ನಡೆಯಿತು ಕೂಡ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಯತ್ನ ಮಾಡುತ್ತಿದ್ದೇವೆ.

(ಮುಂದುವರೆಯುವುದು)

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply