೨೦೨೦, ಭಾರತ ಚಿತ್ರರಂಗದ ಪಾಲಿಗೆ ಮಾತ್ರವಲ್ಲದೆ ಇಡೀ ಪ್ರಪಂಚಕ್ಕೆ ಕರಾಳ ವರ್ಷವಾಗಿದ್ದು ಕೆಲವು ಅಹಿತಕರ ಘಟನೆಗಳಿಗೆ ಕೂಡ ಸಾಕ್ಷಿಯಾಗಿದೆ. ಈ ಸಂದರ್ಭದಲ್ಲಿ ನಮ್ಮ ದೇಶದ ಚಿತ್ರರಂಗಕ್ಕೆ ಆದ ತೊಂದರೆ ಮತ್ತು ನಷ್ಟವನ್ನು ತಿಳಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಈ ಲೇಖನವನ್ನು ರಚಿಸಿದ್ದೇನೆ. ಮತ್ತು ಇದು ನನ್ನ ರಚನೆಯ ೭೫ ನೇ ಲೇಖನವಾಗಿದೆ.
೨೦೨೦, ಭಾರತ ಚಿತ್ರರಂಗದ ಪಾಲಿಗೆ ಮಾತ್ರವಲ್ಲದೆ ಇಡೀ ಪ್ರಪಂಚಕ್ಕೆ ಕರಾಳ ವರ್ಷವಾಗಿದ್ದು ಕೆಲವು ಅಹಿತಕರ ಘಟನೆಗಳಿಗೆ ಕೂಡ ಸಾಕ್ಷಿಯಾಗಿದೆ. ಕಾರಣ ಪ್ರಪಂಚಾದ್ಯಂತ ವ್ಯಾಪಿಸಿಕೊಂಡಿರುವ ಈ ಕರೋನಾ ಎಂಬ ವೈರಸ್. ಈ ಅನಿರೀಕ್ಷಿತ ವೈರಸ್ ದಾಳಿಯಿಂದ ಆದ ತೊಂದರೆ, ನಷ್ಟ ಅಷ್ಟಿಷ್ಟಲ್ಲ. ಸುಗಮವಾಗಿ ನಡೆಯುತ್ತಿದ್ದ ದೈನಂದಿನ ಚಟುವಟಿಕೆಗಳು, ವ್ಯವಹಾರಗಳು ಈ ವೈರಸ್ ದಾಳಿಯಿಂದ ತತ್ತರಿಸಿ ಸ್ತಬ್ಧಗೊಂಡ ಪರಿಣಾಮ ದೇಶದ ಆರ್ಥಿಕ ಪರಿಸ್ಥಿತಿಯೇ ಅಲ್ಲೋಲ ಕಲ್ಲೋಲವಾಯಿತು. ಪ್ರತಿ ಉದ್ಯಮದಲ್ಲಿ ಆದ ನಷ್ಟವನ್ನು ಲೆಕ್ಕವಿಡಲು ಸಾಧ್ಯವಾಗುತ್ತಿಲ್ಲ.
ಅದರಲ್ಲೂ ನಿರೀಕ್ಷೆಗೂ ಮೀರಿ ನಷ್ಟವನ್ನು ಅನುಭವಿಸಿದ ಉದ್ಯಮವೆಂದರೆ ನಮ್ಮ ಚಲನ ಚಿತ್ರರಂಗ.
ಹಲವಾರು ನಿರೀಕ್ಷೆ, ಆಕಾಂಕ್ಷೆ ಮತ್ತು ಯೋಜನೆಯೊಂದಿಗೆ ೨೦೨೦ ನೇ ಇಸ್ವಿಯನ್ನು ಪ್ರವೇಶಿಸಿದ ನಮ್ಮ ಚಲನ ಚಿತ್ರ ರಂಗ ಆರಂಭದ ಎರಡುವರೆ ತಿಂಗಳುಗಳ ಕಾಲ ಯಾವುದೇ ಆತಂಕವಿಲ್ಲದೆ ತನ್ನ ಚಟುವಟಿಕೆಗಳಲ್ಲಿ ತಲ್ಲೀನವಾಗಿತ್ತು. ಆಗಲೇ ಚಿಕ್ಕದಾಗಿ ತನ್ನ ಆಟವನ್ನು ಆರಂಭಿಸಿದ್ದ ಈ ವೈರಸ್ ಮಾರ್ಚ್ ೧೦ ರಂದು ಕಲ್ಬುರ್ಗಿಯಲ್ಲಿ ಮೊದಲ ಬಾರಿಗೆ ವೃದ್ಧರೊಬ್ಬರನ್ನು ಬಲಿ ಪಡೆಯುವುದರೊಂದಿಗೆ ತನ್ನ ಮುಂದಿನ ಭೀಕರ ಆಟದ ಮೂನ್ಸೂಚನೆಯ ಆರಂಭ ಎಂಬ ಸಂದೇಶವನ್ನು ನೀಡಿತು.
ಈ ವೈರಸ್ ನ ಭೀಕರತೆಯನ್ನು ತಿಳಿದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಭೆಯಲ್ಲಿ ಚರ್ಚಿಸಿ ಈ ವೈರಸ್ ನಿಯಂತ್ರಣಕ್ಕೆ ಪ್ರಯೋಗಾರ್ಥವಾಗಿ ಒಂದು ವಾರದ ಮಟ್ಟಿಗೆ ದೇಶಾದ್ಯಂತ ಇರುವ ಚಾಲನೆ ಚಿತ್ರ ಮಂದಿರಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿತು. ಈ ಬಂದ್ ನ ಪರಿಣಾಮ ಚಿತ್ರ ಮಂದಿರಗಳಲ್ಲಿ ಪ್ರದರ್ಶಿಸಲ್ಪಡುತ್ತಿದ್ದ ಚಿತ್ರಗಳ ಪ್ರದರ್ಶನವು ಸ್ತಬ್ಧವಾಯಿತು.
ಒಂದು ವಾರ ಕಳೆದು ನಂತರ ಕೂಡ ವೈರಸ್ ನ ಹಾವಳಿ ಹೆಚ್ಚಿತೇ ಹೊರತು ಕಡಿಮೆಯಾಗಲಿಲ್ಲ.
( ಮುಂದುವರೆಯುವುದು )