ಭಾರತ ಭೂಷಣ ಟೈಗರ್ ಜಯರಾಮಣ್ಣ

ಯೋಧರಿಗೊಂದು ನಮನ ಸಂಚಿಕೆಯ ಇಂದಿನ ಹೀರೋ ಜಯರಾಮ್ ಕೃಷ್ಣಪ್ಪ. ಯೋಧರಿಗೆ ಸಹಾಯ ಮಾಡುವ, ಯೋಧರ ಸಾಹಸದ ಬಗ್ಗೆ ತಿಳಿಹೇಳುವ ನೂರಾರು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿರುವ ಇವರು ಟೈಗರ್ ಜಯರಾಮಣ್ಣ ಎಂದೇ ಪ್ರಸಿದ್ಧಿ. 1990 ರ ಆಸುಪಾಸು. ಸಾಮಾನ್ಯವಾಗಿ ಕೊಡಗಿನವರೇ ಹೆಚ್ಚಾಗಿ ಸೈನ್ಯ ಸೇರುತ್ತಿದ್ದ ಕಾಲ. ಬಯಲುಸೀಮೆಯ ಪ್ರಾಂತ್ಯದ ಎಷ್ಟೋ ಮಂದಿಗೆ ಮಿಲಿಟರಿ ಸೇರುವ ಆಲೋಚನೆಯೂ ಇರಲಾರದು. ಇಂತಹ ಪರಿಸ್ಥಿತಿಯಲ್ಲಿ 1993 ರಲ್ಲಿ ಸುತ್ತಮುತ್ತ ಹಳ್ಳಿಗಳ ಪೈಕಿ ಸೈನ್ಯ ಸೇರಿದ ಮೊದಲ ಸೈನಿಕನೆಂಬ ಹೆಗ್ಗಳಿಕೆ ಇವರದ್ದು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಕುರುಬರಹಳ್ಳಿಯಲ್ಲಿ ಕೃಷ್ಣಪ್ಪ ಮತ್ತು ಚಿನ್ನಮ್ಮ ಎಂಬ ಬಡ ಕೂಲಿಕಾರ ದಂಪತಿಗಳ 4 ಜನ ಗಂಡುಮಕ್ಕಳು ಇಬ್ಬರು ಹೆಣ್ಣು ಮಕ್ಕಳ ಪೈಕಿ ಹಿರಿಯ ಮಗನಾಗಿ 04/04/1973 ರಲ್ಲಿ ಜನಿಸಿದ ಜಯರಾಮಣ್ಣ ತನ್ನ ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿಯಲ್ಲಿ ಮಾಧ್ಯಮಿಕ ಹಾಗು ನಂತರ ಸೂಲಿಬೆಲೆಯ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು. ನಂತರ 1992 ರಲ್ಲಿ ಚಿಕ್ಕಬಳ್ಳಾಪುರದ ಸರ್ಕಾರೀ ಕಾಲೇಜಿನಲ್ಲಿ ಪಿಯು ವಿದ್ಯಾಭ್ಯಾಸ ಮುಗಿಸಿದ ತಕ್ಷಣವೇ ಗಡಿ ಭದ್ರತಾ ಪಡೆಯ ಯೋಧನಾಗಿ ಟ್ರೈನಿಂಗಿಗೆಂದು ಮಧ್ಯಪ್ರದೇಶದ ಇಂದೋರ್ ಕಡೆಗೆ ಪಯಣಿಸಿದ್ದರು.

ಇವರು ಸೈನ್ಯಕ್ಕೆ ಸೇರಿದ್ದರ ಹಿಂದೆಯೂ ಒಂದು ಇಂಟೆರೆಸ್ಟಿಂಗ್ ಸ್ಟೋರಿ ಇದೆ. ಚಿಕ್ಕಂದಿನಿಂದಲೂ ಇವರಿಗೆ ಸೈನಿಕನಾಗುವ ಆಸೆ. ಬಹುಶಃ ಮೂರೋ ಅಥವಾ ನಾಲ್ಕನೆಯ ತರಗತಿಯಲ್ಲಿದ್ದಾಗಲೋ ಒಮ್ಮೆ ಶಾಲೆಗೆ ತಪಾಸಣೆಗೆ ಬಂದ ಶಾಲಾ ಇನ್ಸ್ಪೆಕ್ಟರ್ ಒಬ್ಬರು ವಿದ್ಯಾರ್ಥಿಗಳನ್ನು ಕುರಿತು “ನೀವು ದೊಡ್ಡವರಾದ ಮೇಲೆ ಏನಾಗಬೇಕು?” ಎಂದು ಕೇಳಿದರಂತೆ. ಡಾಕ್ಟರ್, ಇಂಜಿನಿಯರ್ ಹೀಗೆ ಒಬ್ಬಬ್ಬರು ಒಂದೊಂದು ಉತ್ತರ ಕೊಡುತ್ತಿದ್ದರೆ, “ನಾನು ಸೈನ್ಯಕ್ಕೆ ಸೇರಬೇಕು” ಎಂದು ಈ ಹುಡುಗ ಹೇಳಿದ್ದನಂತೆ. ನನ್ನ ಸರ್ವಿಸ್ ನಲ್ಲಿಯೇ ಸೈನ್ಯ ಸೇರಿ ಸೈನಿಕನಾಗಬೇಕು ಎಂದು ಹೇಳಿದ ಮೊದಲ ವಿದ್ಯಾರ್ಥಿ ನೀನೇ ಕಣಪ್ಪಾ ಎಂದು ಶಾಲಾ ಇನ್ಸ್ಪೆಕ್ಟರ್ ಅವರೇ ಖುಷಿಪಟ್ಟಿದ್ದರಂತೆ. ಇನ್ನು ಸೂಲಿಬೆಲೆಯ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಸೂಲಿಬೆಲೆ ಚಕ್ರವರ್ತಿಯವರ ತಂದೆ ಇವರ ಮೇಷ್ಟ್ರಾಗಿದ್ದರಂತೆ. ಪಾಠದ ಜೊತೆಜೊತೆಗೆ ಪ್ರತಿದಿನ ಒಂದಲ್ಲಾ ಒಂದು ದೇಶಭಕ್ತಿಯ, ಸೈನಿಕರ ವೀರಗಾಥೆಯ ಕತೆಗಳನ್ನು ಹೇಳುತ್ತಿದ್ದರಂತೆ. ಮೊದಲೇ ಸೈನಿಕನಾಗಬೇಕೆಂಬ ಹಂಬಲವಿದ್ದ ಹುಡುಗ, ಜೊತೆಗೆ ಇಂತಹ ಮೇಷ್ಟ್ರ ಶಿಷ್ಯನಾದ ಮೇಲೆ ಕೇಳಬೇಕೆ? ಸೈನಿಕನಾಗಿ ದೇಶಸೇವೆ ಮಾಡಬೇಕೆಂಬ ಆಸೆ ಇನ್ನಷ್ಟು ಮತ್ತಷ್ಟು ಹೆಚ್ಚುತ್ತಲೇ ಹೋಯಿತು. ಪಿಯುಸಿ ಓದುತ್ತಿದ್ದಾಗ ಕೂಡ ಮಿಲಿಟರಿ ಸೆಲೆಕ್ಷನ್ ಬಗ್ಗೆ ಅನೇಕ ವಿವರಗಳನ್ನು ಕಲೆಹಾಕಿ ಮಿಲಿಟರಿ ಸೇರುವ ಪ್ರಯತ್ನ ಮಾಡುತ್ತಲೇ ಇದ್ದರಂತೆ. ಕಡೆಗೂ ತಾನಂದುಕೊಂಡಂತೆಯೇ ಪಿಯುಸಿ ಮುಗಿದ ತಕ್ಷಣವೇ ಅತೀ ಚಿಕ್ಕ ವಯಸ್ಸಿನಲ್ಲಿಯೇ ಒಬ್ಬ ಸೈನಿಕನಾಗಿ ಬದಲಾಗಿದ್ದರು.

ಮಿಲಿಟರಿಯ ಮೂಲ ತರಬೇತಿ ಮಧ್ಯಪ್ರದೇಶದ ಇಂದೋರ್ ನಲ್ಲಿ. ಸುಮಾರು ಹನ್ನೊಂದು ತಿಂಗಳ ಆ ಬೇಸಿಕ್ ಟ್ರೈನಿಂಗ್ ಅನ್ನು ಮುಗಿಸಿದ ಕೂಡಲೇ ಮೊದಲ ಪೋಸ್ಟಿಂಗ್ ಜಮ್ಮು ಕಾಶ್ಮೀರಕ್ಕೆ. ಜಮ್ಮು ಕಾಶ್ಮೀರ ಎಂತಹ ಸೂಕ್ಷ್ಮ ಪ್ರದೇಶವೆಂಬುದು ನಮಗೆಲ್ಲಾ ಗೊತ್ತೇ ಇದೆ. ಅತ್ಯುತ್ತಮರಲ್ಲೇ ಅತ್ಯುತ್ತಮರಾದ ಸೈನಿಕರನ್ನೇ ಈ ಪ್ರದೇಶಕ್ಕೆ ನಿಯೋಜಿಸುವುದು. ಅಂತಹುದರಲ್ಲಿ ಈಗ ತಾನೇ ಟ್ರೈನಿಂಗ್ ಮುಗಿಸಿದ ಇನ್ನೂ ಮೀಸೆಯೂ ಬಲಿತಿರದ ಹುಡುಗನನ್ನ ಜಮ್ಮು ಕಾಶ್ಮೀರಕ್ಕೆ ನಿಯೋಜಿಸಿದ್ದರೆಂದರೆ ಆ ಸೈನಿಕನ ಸಾಮರ್ಥ್ಯ ಎಷ್ಟಿರಬಹುದು ಊಹಿಸಿ.

ಸುಮಾರು ಎರಡು ವರ್ಷಗಳ ಕಾಲ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ ಬಳಿಕ ರಾಜಸ್ಥಾನದ ಮರುಭೂಮಿ, ಬಿಸಿಲಿನ ಬೇಗೆಯ ಪಂಜಾಬ್ ಗಳಲ್ಲಿ ಪಾಕಿಸ್ತಾನಕ್ಕೆ ಹೊಂದಿಕೊಂಡ ಭಾರತದ ಗಡಿಭಾಗದ ಸೇವೆ ಸಲ್ಲಿಸಿದರು. ಪಶ್ಚಿಮ ಭಾಗದ ಸೇವೆಯ ನಂತರ ಒಂದಷ್ಟು ವರ್ಷ ಸೀದಾ ಭಾರತದ ಪೂರ್ವ ಭಾಗಕ್ಕೆ ಇವರ ಪಯಣ. ಒಂದಷ್ಟು ವರ್ಷಗಳ ಕಾಲ ತ್ರಿಪುರಾಕ್ಕೆ ಹೊಂದಿಕೊಂಡ ಬಾಂಗ್ಲಾದೇಶ-ಭಾರತ ಗಡಿ ಕಾಯುವ ಕೆಲಸ.

ಪಾದರಸದಂತೆ ಹಗಲಿರುಳೂ ಸೇವೆ ಮಾಡುತ್ತಿದ್ದ ಜಯರಾಮ್ ತನ್ನ ಓಟವನ್ನು ಅಲ್ಲಿಗೆ ನಿಲ್ಲಿಸಲಿಲ್ಲ. ತನ್ನ ಸತತ ಪರಿಶ್ರಮದಿಂದ ಅತೀ ಚಿಕ್ಕ ವಯಸ್ಸಿಗೇ ಅಂದರೆ ಇಪ್ಪತ್ತೇಳು ವರ್ಷದ ವಯಸ್ಸಿಗೇ ಸೈನಿಕರ ದೈಹಿಕ ತರಬೇತುದಾರ ಕೋರ್ಸ್ ಅನ್ನು ಮುಗಿಸಿ ಹೊಸದಾಗಿ ಸೇರುವ ಸೈನಿಕರಿಗೆ ದೈಹಿಕ ತರಬೇತುದಾರರಾಗಿ ನೇಮಕಗೊಂಡು ದೆಹಲಿಗೆ ಪ್ರಯಾಣಿಸುತ್ತಾರೆ. ಸುಮಾರು 2 ವರ್ಷಗಳ ಕಾಲ ದೆಹಲಿಯಲ್ಲಿ ನೂರಾರು ಸೈನಿಕರಿಗೆ ಟ್ರೈನಿಂಗ್ ಕೊಟ್ಟ ಬಳಿಕ ಬೆಂಗಳೂರಿನ ಯಲಹಂಕ ಬಳಿಯಿರುವ ಗಡಿ ಭದ್ರತಾ ಪಡೆಯ ಟ್ರೈನಿಂಗ್ ಸೆಂಟರ್ ಗೆ ವರ್ಗಾವಣೆಗೊಳ್ಳುತ್ತಾರೆ. ಹೀಗೆ ತನ್ನ ಜೀವನದುದ್ದಕ್ಕೂ ನೂರಾರು ಸಮರ್ಥ ಸೈನಿಕರನ್ನು ತಯಾರು ಮಾಡಿರುವ ಫ್ಯಾಕ್ಟರಿ ಜಯರಾಮಣ್ಣ ಎಂದರೆ ತಪ್ಪಾಗಲಾರದು.

ಹೀಗೆ ನೂರಾರು ಸೈನಿಕರನ್ನು ತಯಾರು ಮಾಡಿದ ಮೇಲೆ ಮತ್ತೆ ಪೂರ್ವಭಾಗವಾದ ಮಣಿಪುರ, ಮಿಜೋರಾಂ, ಅಸ್ಸಾಂ ರಾಜ್ಯಗಳಲ್ಲಿ ಭಾರತ-ಬಾಂಗ್ಲಾದೇಶ ಗಡಿಯನ್ನು ಕಾಯುವ ಯೋಧನಾಗಿ ಮತ್ತೆ ನಿಯುಕ್ತಿಗೊಂಡು ಸುಮಾರು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ, ಹತ್ತಾರು ಭಯೋತ್ಪಾದಕರನ್ನು, ಬಂಡುಕೋರರನ್ನು, ಅಕ್ರಮ ನುಸುಳುಕೋರರನ್ನು, ನಾಗಾಲ್ಯಾಂಡ್ ನಲ್ಲಿನ ಪ್ರಬಲ ಮಾವೋವಾದಿ ನಕ್ಸಲೇಟುಗಳನ್ನು ಯಮಪುರಿಗೆ ಅಟ್ಟಿದ್ದಾರೆ. 2014 ಜುಲೈ 31 ರಂದು ಬಾಂಗ್ಲಾಗಡಿಯನ್ನು ಕಾಯುತ್ತಿದ್ದ ಸಂದರ್ಭದಲ್ಲಿ ಸೇನೆಯಿಂದ ನಿವೃತ್ತರಾಗಿ ಬೆಂಗಳೂರಿಗೆ ಹಿಂದಿರುಗಿ ಬರುತ್ತಾರೆ. ಹೀಗೆ ಸುಮಾರು 21 ವರ್ಷಗಳ ಕಾಲ ನಿರಂತರವಾಗಿ ಭಾರತಾಂಬೆಯ ನೆಲವನ್ನು ಕಾಯುತ್ತಿದ್ದ ಈ ಧೀರಯೋಧ ಇಂದಿಗೂ ಅನೇಕ ಸಮಾನ ಮನಸ್ಕ ತಂಡಗಳ ಜೊತೆಗೂಡಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ನಿತ್ಯ ಒಂದಿಲ್ಲೊಂದು ಸಮಾಜಮುಖಿ ಕೆಲಸಗಳನ್ನು ಮಾಡುತ್ತಲೇ ಇದ್ದಾರೆ.

ಪುರುಷನ ಯಶಸ್ಸಿನ ಹಿಂದೆ ಮಹಿಳೆಯ ಪಾಲು ಇರಲೇಬೇಕಲ್ಲ? ಹೌದು. ಜಯರಾಮಣ್ಣನವರ ಏಳುಬೀಳುಗಳಲ್ಲಿ ಜೊತೆಯಲ್ಲಿ ನಿಂತು ಇಂದಿಗೂ ನಿತ್ಯ ಇವರ ಸಮಾಜಮುಖಿ ಕೆಲಸಗಳಿಗೆ ಸಹಕಾರ ನೀಡುತ್ತಿರುವ ಇವರ ಪತ್ನಿ ರಶ್ಮಿ ಪಾಟೀಲ್ ಅವರು ಕನ್ನಡ ಕಹಳೆ ಎಂಬ ಕನ್ನಡ ದಿನಪತ್ರಿಕೆಯ ಸಂಪಾದಕಿ. ಓಂ ಪಾಟೀಲ್ ಮತ್ತು ಪೃಥ್ವಿ ಪಾಟೀಲ್ ಎಂಬ ಇಬ್ಬರು ಮಕ್ಕಳ ಸುಖೀ ಕುಟುಂಬ ಇವರದ್ದು. ಸೇವೆಯಿಂದ ನಿವೃತ್ತರಾಗಿ ಬರುವ ಸೈನಿಕರು, ಸೈನ್ಯ ಸೇರಿದ ಹೊಸ ಸೈನಿಕರು ಸೇರಿದಂತೆ ದೂರದೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಕಷ್ಟಗಳಿಗೆ ನೆರವಾಗುವ ನೂರಾರು ಕಾರ್ಯಗಳನ್ನು ಮಾಡಿದ್ದಾರೆ; ಮಾಡುತ್ತಿದ್ದಾರೆ; ಮಾಡುತ್ತಲೇ ಇರುತ್ತಾರೆ.. ಅನೇಕ ಪತ್ರಿಕೆಗಳು, ಟೀವಿ-ರೇಡಿಯೋ ಕಾರ್ಯಕ್ರಮಗಳಲ್ಲಿ ಇವರ ಸಂದರ್ಶನಗಳು, ಭಾಷಣಗಳು ಪ್ರಸಾರವಾಗಿವೆ. ಕಾಶ್ಮೀರ ಸೈನಿಕರ ಕುರಿತಾದ ಕನ್ನಡ ಚಿತ್ರವೊಂದರಲ್ಲಿ ಸೈನಿಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವರಿಗೆ ಸಂದಿರುವ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಬರೆಯುತ್ತ ಹೋದರೆ ಬಹುಶಃ ಅದೇ ಒಂದು ಲೇಖನಕ್ಕಾಗುವಷ್ಟು ಸರಕಾಗಬಹುದೇನೋ? ನೂರಾರು ಸಂಘಸಂಸ್ಥೆಗಳು, ಪತ್ರಿಕೆಗಳು ಇವರ ಸೇವೆಯನ್ನು ಗೌರವಿಸಿದೆ. ಭಾರತ ಭೂಷಣ, ಶ್ರೀ ಸಿದ್ದಪ್ಪಾಜಿ ದೇಶಹಿತ ಸಂರಕ್ಷಣಾ ಸೇವಾ ರತ್ನ, ಸೈನಿಕ ರತ್ನ ಪ್ರಶಸ್ತಿಗಳು ಸೇರಿದಂತೆ ಹತ್ತಾರು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ. ಯಾವುದೇ ರೀತಿಯ ಪ್ರಶಸ್ತಿ, ಹೊಗಳಿಕೆಗಳಿಗೂ ಅಹಂ ಪಡದೆ, ನೂರಾ ಮೂವತ್ತು ಕೋಟಿ ಭಾರತೀಯರ ಪೈಕಿ ಕೇವಲ ನಾನೊಬ್ಬ ದೇಶದ ಪ್ರಜೆ. ಮಿಲಿಟರಿ ದಾಖಲೆಗಳ ಪ್ರಕಾರ ಮಾತ್ರ ನಾನು ನಿವೃತ್ತ ಯೋಧ. ದೇಶಸೇವೆ ಮಾಡುವ ವಿಷಯದಲ್ಲಿ ನನ್ನ ಕಡೆಯ ಉಸಿರಿರುವವರೆಗೂ ನಾನು ಈ ದೇಶದ ಯೋಧನೇ. ದೇಶಸೇವೆಯ ವಿಚಾರಕ್ಕೆ ಬಂದರೆ ನಾನೊಬ್ಬ ಎಂದೂ ನಿವೃತ್ತಿಯಾಗದ ಯೋಧ ಎಂದು ಹೆಮ್ಮೆಯಿಂದಲೇ ಹೇಳಿಕೊಳ್ಳುವ, ನಿರಂತರವಾಗಿ ನೂರಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಟೈಗರ್ ಜಯರಾಮಣ್ಣನವರಿಗೆ ನಮ್ಮ ಕಡೆಯಿಂದ ಒಂದು ಹೆಮ್ಮೆಯ ಸಲ್ಯೂಟ್.

*ಅಪ್ಪ ಸತ್ತ ಸುದ್ಧಿ ಕೇಳಿದರೂ ಕರ್ತವ್ಯ ಮುಂದುವರೆಸಿದ ಯೋಧ*

ತ್ರಿಪುರಾದ ಬಾಂಗ್ಲಾ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಒಮ್ಮೆ ಮಧ್ಯರಾತ್ರಿ ಸಮಯ. ದೂರದಲ್ಲಿ ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ಬರುತ್ತಿರುವುದು ಜಯರಾಮ್ ಅವರಿಗೆ ಕಾಣುತ್ತದೆ. ಸೀದಾ ಜಯರಾಮ್ ಬಳಿಗೇ ಬಂದ ಆ ಹಿರಿಯ ಅಧಿಕಾರಿ “ಮಿ. ಜಯರಾಮ್. ಈಗ ತಾನೇ ನಿಮ್ಮ ತಂದೆಯವರು ನಿಧನರಾಗಿದ್ದಾರೆಂಬುದಾಗಿ ನಮ್ಮ ಹೆಡ್ ಕ್ವಾರ್ಟರ್ ಗೆ ಮೆಸೇಜ್ ಬಂತು. ನಿಮ್ಮ ಇಂದಿನ ಡ್ಯೂಟಿಯನ್ನು ಮುಗಿಸಿ ನನ್ನ ಜೊತೆ ಬನ್ನಿ. ನಿಮ್ಮ ಡ್ಯೂಟಿಯನ್ನು ಇಲ್ಲಿ ಕಂಟಿನ್ಯೂ ಮಾಡಲು ಬೇರೆಯವರಿಗೆ ಹೇಳಿದ್ದೇವೆ. ಅವರು ನೋಡಿಕೊಳ್ತಾರೆ. ನೀವು ನನ್ನ ಜೊತೆ ಬನ್ನಿ. ನಾಳೆ ಬೆಳಿಗ್ಗೆಯೇ ಬೆಂಗಳೂರಿಗೆ ನಿಮ್ಮನ್ನು ಕಳಿಸಿಕೊಡುವ ವ್ಯವಸ್ಥೆ ಮಾಡಿದ್ದೇವೆ” ಅಂದರಂತೆ.

ತನ್ನ ತಂದೆಯ ನಿಧನದ ವಾರ್ತೆಯನ್ನು ಕೇಳಿ ಇವರಿಗೇ ತಿಳಿಯದಂತೆ ಕಣ್ಣಿನಿಂದ ಧಾರಾಕಾರ ನೀರು ಸುರಿಯಹತ್ತಿತ್ತು. ಕೇವಲ ಎರಡು ನಿಮಿಷ ಅಷ್ಟೇ! ತಕ್ಷಣ ಮನಸ್ಸನ್ನು ಸಹಜಸ್ಥಿತಿಗೆ ತಂದುಕೊಂಡು “ನಾನು ಧೈರ್ಯವಾಗಿದ್ದೇನೆ ಸರ್. ಡ್ಯೂಟಿಯನ್ನು ಅರ್ಧಕ್ಕೆ ಬಿಟ್ಟು ಹೋಗುವುದು ಒಬ್ಬ ಸೈನಿಕನಿಗೆ ತರವಲ್ಲ. ಕಠಿಣ ಪರಿಸ್ಥಿತಿಗಳನ್ನೂ ನಿಭಾಯಿಸುವ ಕಲೆ ಆರ್ಮಿ ನನಗೆ ಕಲಿಸಿದೆ. ನೀವು ಹೋಗಿ ಸರ್. ನಾನು ನನ್ನ ಡ್ಯೂಟಿ ಮುಗಿಸಿ ನಾಲೇ ಬೆಳಿಗ್ಗೆ ಬರ್ತೇನೆ” ಎಂದು ಇವರೇ ಆ ಅಧಿಕಾರಿಗೆ ಧೈರ್ಯ ಹೇಳಿ ಕಳಿಸಿದರಂತೆ. ಅಂದಿನ ನೈಟ್ ಡ್ಯೂಟಿ ಮುಗಿಸಿ ಮಾರನೆ ದಿನ ರೈಲು ಹತ್ತಿ ಮೂರು ದಿನದ ರೈಲು ಪ್ರಯಾಣ ಮುಗಿಸಿ ಬೆಂಗಳೂರಿಗೆ ಬರುವ ಹೊತ್ತಿಗೆ ಅವರ ತಂದೆಯ ಅಂತ್ಯಸಂಸ್ಕಾರವೂ ನಡೆದುಹೋಗಿತ್ತು. ಕಡೆಯಬಾರಿ ತನ್ನ ತಂದೆಯ ಮುಖ ನೋಡುವ ಅವಕಾಶವೂ ಇವರಿಗೆ ಸಿಗಲಿಲ್ಲ.

ಒಬ್ಬ ಯೋಧ ತನ್ನ ದೇಶಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧನಾಗಿರುತ್ತಾನೆಂಬುದಕ್ಕೆ ಇಂತಹ ಅದೆಷ್ಟೋ ದೃಷ್ಟಾಂತಗಳು ನಮ್ಮ ಸೈನಿಕರ ಜೀವನದಲ್ಲಿ ಕಾಣಸಿಗುತ್ತದೆ.

Jai hind

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply