ಭೋಜಪುರಿ ಚಿತ್ರರಂಗ

ಸುಮಾರು ಐವತ್ತು ವರ್ಷಕ್ಕೂ ಅಧಿಕ ಇತಿಹಾಸವನ್ನು ಹೊಂದಿರುವ ಭೋಜಪುರಿ ಚಿತ್ರರಂಗವು ಚಿಕ್ಕ ಉದ್ಯಮವಾದರೂ ಅದು ನಿರ್ಮಿಸಿದ ಚಿತ್ರಗಳ ಕ್ಷಿಪ್ರ ಯಶಸ್ಸು ಸಾಮಾನ್ಯವಾಗಿಲ್ಲ. ಅತೀ ಕಡಿಮೆ ಬಜೆಟ್ ನಲ್ಲಿ ಚಿತ್ರಗಳನ್ನು ನಿರ್ಮಿಸಿ ಅದರ ಹತ್ತು ಪಟ್ಟು ಲಾಭವನ್ನು ಗಳಿಸಿರುವ ಉದಾಹರಣೆಗಳು ಕೂಡ ಇವೆ.

೧೯೬೨ ರಲ್ಲಿ ತೆರೆ ಕಂಡ ಕುಂದನ್ ಕುಮಾರ್ ನಿರ್ದೇಶನದ ಗಂಗಾಮಯ್ಯಾ ತೂಹೆ ಫಿಯಾರಿ ಚಡಾಯ್ಬೋ ಚಿತ್ರದೊಂದಿಗೆ ಭೋಜಪುರಿ ಚಿತ್ರರಂಗವು ತನ್ನ ಪಯಣವನ್ನು ಆರಂಭಿಸಿತು. ಈ ಚಿತ್ರ ತೆರೆ ಕಂಡ ನಂತರ ಹತ್ತು ವರ್ಷಗಳಲ್ಲಿ  ರಭಸದ ಕಾರ್ಯಚಟುವಟಿಕೆಯಲ್ಲಿ ಚಿತ್ರಗಳು ನಿರ್ಮಾಣಗೊಂಡವು. ಅದರಲ್ಲೂ ೧೯೬೩ ರಲ್ಲಿ ತೆರೆ ಕಂಡ ಎಸ್.ಎನ್.ತ್ರಿಪಾಠಿ ನಿರ್ದೇಶನದ ಬಿದೇಸಿಯಾ,೧೯೬೫ ರಲ್ಲಿ ತೆರೆ ಕಂಡ ಕುಂದನ್ ಕುಮಾರ್ ನಿರ್ದೇಶನದ ಗಂಗಾ ಚಿತ್ರವು ಜನಪ್ರಿಯತೆಯನ್ನು ಮತ್ತು ಹಣಗಳಿಕೆಯಲ್ಲಿ ಲಾಭವನ್ನು ಕಂಡಿತ್ತು. ಆದರೆ ಕಾರಣಾಂತರಗಳಿಂದ ೧೯೬೦ ಮತ್ತು ೧೯೭೦ ರ ದಶಕದಲ್ಲಿ  ಭೋಜಪುರಿ ಚಿತ್ರರಂಗದಲ್ಲಿ ಯಾವ ಚಿತ್ರವು ನಿರ್ಮಾಣವಾಗಲಿಲ್ಲ.

ಪರಿಣಾಮವಾಗಿ ಭೋಜಪುರಿ ಚಿತ್ರರಂಗದ ವೇಗವು ಕುಂಠಿತಗೊಂಡಿತು. ೩೦ ವರ್ಷಗಳ ನಂತರ ೨೦೦೧ ರಲ್ಲಿ ತೆರೆ ಕಂಡ ಮೋಹನ್ ಪ್ರಸಾಢ್ ನಿರ್ದೇಶನದ ಸೈಯ್ಯಾಂ ಹಮಾರ್ ಚಿತ್ರವು ಪಡೆದ ಅದ್ಭುತ ಯಶಸ್ಸು ಭೋಜಪುರಿ ಚಿತ್ರರಂಗದ ಪುರ್ನಜನ್ಮಕ್ಕೆ ಕಾರಣವಾಯಿತು. ಅಲ್ಲದೇ ಈ ಚಿತ್ರದ ಮೂಲಕ ನಟ ರವಿ ಕಿಶನ್ ಗೆ ಸೂಪರ್ ಸ್ಟಾರ್ ಪಟ್ಟ ಲಭಿಸಿತು. ಈ ಚಿತ್ರದ ಗೆಲುವಿನಿಂದ ಭೋಜಪುರಿ ಚಿತ್ರರಂಗದಲ್ಲಿ ಕ್ಷಿಪ್ರವಾಗಿ ಹಲವಾರು ಚಿತ್ರಗಳು ನಿರ್ಮಾಣಗೊಂಡವು. ೨೦೦೫ ರಲ್ಲಿ ತೆರೆ ಕಂಡ ಮೋಹನ್ ಪ್ರಸಾಢ್ ನಿರ್ದೇಶನದ ಪಂಡಿತ್ ಬತಾಯಿ ನಾ ಬಿಯಾಹ್ ಕಬ್ ಹೋಯಿ ಮತ್ತು ಸಸುರಾ ಬಡಾ ಪೈಸಾ ವಾಲಾ ಚಿತ್ರಗಳು ಯಶಸ್ವಿ ಚಿತ್ರಗಳ ಪಟ್ಟಿಯಲ್ಲಿ ಸೇರಿದ್ದವಲ್ಲದೆ ಭೋಜಪುರಿ ಚಿತ್ರರಂಗದ ಏಳಿಗೆಗೂ ಕಾರಣವಾದ ಚಿತ್ರಗಳಾಗಿವೆ. ಉತ್ತರ ಪ್ರದೇಶ ಮತ್ತು ಬಿಹಾರ್ ರಾಜ್ಯಗಳಲ್ಲಿ ಯಶಸ್ವಿ ಬಾಲಿವುಡ್ ಚಿತ್ರಗಳಿಗಿಂತ ಹೆಚ್ಚು ವ್ಯವಹಾರವನ್ನು ಮಾಡಿದ್ದವು ಮತ್ತು ಅತೀ ಕಡಿಮೆ ಬಜೆಟ್ ನಲ್ಲಿ ನಿರ್ಮಾಣಗೊಂಡ ಈ ಎರಡು ಚಿತ್ರಗಳು ಹತ್ತು ಪಟ್ಟು ಹೆಚ್ಚು ಹಣವನ್ನು ಗಳಿಸಿದ್ದವು.

ಪ್ರಸ್ತುತ ದೆಹಲಿ ಮತ್ತು ಮುಂಬೈ ಯ ಮೆಟ್ರೋ ನಗರಗಳಿಗೆ ಭೋಜಪುರಿ ಭಾಷೆಯ ಜನರು ವಲಸೆ ಬಂದಿರುವುದರಿಂದ ಈ ನಗರಗಳಲ್ಲಿ ಭೋಜಪುರಿ ಚಿತ್ರಗಳಿಗೂ ಪ್ರೇಕ್ಷಕರ ದೊಡ್ಡ ಸಮೂಹವೇ ಇದೆ. ನಮ್ಮ ದೇಶದಲ್ಲಿ ಮಾತ್ರವಲ್ಲದೆ ವೆಸ್ಟ್ ಇಂಡೀಸ್, ಓಷಿನೀಯಾ  ದಕ್ಷಿಣ ಅಮೇರಿಕ ಮತ್ತು ಭೋಜಪುರಿ ಭಾಷೆಯ ಬಳಕೆಯಿರುವ ದೇಶಗಳಲ್ಲಿಯೂ ಈ ಚಲನಚಿತ್ರಗಳಿಗೆ ಒಂದು ದೊಡ್ಡ ಮಾರುಕಟ್ಟೆಯೇ ಇದೆ. ಭೋಜಪುರಿ ಚಿತ್ರಗಳು ವಿಶ್ವದಲ್ಲಿಯೇ ಒಂದು ವೈಶಿಷ್ಟ್ಯ ಪೂರ್ಣ ಹೆಸರನ್ನು ಹೊಂದಿವೆ.

ಬಾಲಿವುಡ್ ಚಿತ್ರರಂಗದ ಬಿಗ್ ಬಿ ನಟ ಅಮಿತಾಬ್ ಬಚ್ಚನ್,ಅಜಯ್ ದೇವಗನ್, ನಗ್ಮಾ, ಮಿಥುನ್ ಚಕ್ರವರ್ತಿ ಮುಂತಾದ ಬಾಲಿವುಡ್ ಚಿತ್ರರಂಗದ ಜನಪ್ರಿಯ ಕಲಾವಿದರು ಹಲವಾರು ಭೋಜಪುರಿ ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಈ ಭೋಜಪುರಿ ಚಿತ್ರರಂಗವನ್ನು ಬೆಂಬಲಿಸಿದ್ದಾರೆ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply