ಮಂಡ್ಯದ ಗಂಡು

ಕಲಿಯುಗದ ಕರ್ಣ, ಮಂಡ್ಯದ ಗಂಡು ನಟ ರೆಬೆಲ್ ಸ್ಟಾರ್ ಡಾ. ಅಂಬರೀಷ್

ಕನ್ನಡ ಚಿತ್ರರಂಗದ ಕಲಿಯುಗದ ಕರ್ಣ ಎಂದು ಬಿರುದು ಪಡೆದಿರುವ ಮಂಡ್ಯದ ಗಂಡು ನಟ ರೆಬೆಲ್ ಸ್ಟಾರ್ ಡಾ.ಅಂಬರೀಷ್ ಇವರ ಬಗ್ಗೆ  ತಿಳಿಯದವರು ಯಾರಾದರೂ ಇದ್ದಾರೆಯೇ? 

ಖಂಡಿತವಾಗಿಯೂ ಇಲ್ಲ.

ಜೀವನದಲ್ಲಿ ಹಣ   ಗಳಿಸಿದ್ದಕ್ಕಿಂತಲೂ ಇವರು ಗಳಿಸಿರುವ ಸ್ನೇಹಕ್ಕೆ ಲೆಕ್ಕವಿಲ್ಲವಾದರೆ ವರ್ಣಿಸಲು ಸಾಧ್ಯವಾಗದಷ್ಟು ಅಭಿಮಾನ ಮತ್ತು ಪ್ರೀತಿಯನ್ನು ಅಭಿಮಾನಿಗಳಿಂದ ಸಂಪಾದಿಸಿರುವ ಇವರು ಕನ್ನಡ ಚಿತ್ರರಂಗದ ಆಸ್ತಿ ಕೂಡ ಹೌದು. ಇವರು ತಮ್ಮ ನಲವತ್ತು ವರ್ಷಗಳ ಬಣ್ಣದ ಬದುಕಿನಲ್ಲಿ ಕನ್ನಡ, ತಮಿಳು,ಹಿಂದಿ ಸೇರಿದಂತೆ ಸುಮಾರು ೨೨೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇವರು ನಟಿಸಿದ ಚಿತ್ರಗಳಲ್ಲಿ ಹಲವಾರು ಪಾತ್ರಗಳನ್ನು  ನಿರ್ವಹಿಸಿದ್ದು ಕೆಲವು ಪಾತ್ರಗಳನ್ನು   ಅಭಿಮಾನಿಗಳು ಇಂದಿಗೂ ಮರೆತಿಲ್ಲ ಮತ್ತು ಮರೆಯಲು ಸಾಧ್ಯವಿಲ್ಲ. ಇವರು ಕೇವಲ ನಟ ಅಲ್ಲದೇ ಜನಪ್ರಿಯ ರಾಜಕಾರಣಿಯಾಗಿ ಜನಸೇವೆ ಮಾಡಿರುವ ಇವರು ತಮ್ಮ ಖಾಸಗಿ ಜೀವನದಲ್ಲಿ ನಿಜವಾದ ಕಲಿಯುಗದ ಕರ್ಣ ಕೂಡ ಆಗಿದ್ದರು.

ನಮ್ಮ ಕರ್ನಾಟಕ ರಾಜ್ಯದಲ್ಲಿ ಸಕ್ಕರೆ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಊರು ಮಂಡ್ಯ, ಇದು ಜಿಲ್ಲೆ ಕೂಡ ಆಗಿದೆ. ಇವರು ಮೇ ೨೯, ೧೯೫೨ ರಂದು ಮಂಡ್ಯ ಜಿಲ್ಲೆಯ ದೊಡ್ಡರಸನ ಕೇರೆ ಗ್ರಾಮದಲ್ಲಿ  ಹುಚ್ಚೇಗೌಡ ಮತ್ತು ಪದ್ದಮ್ಮ ದಂಪತಿಗಳ ಮಗನಾಗಿ ಜನಿಸಿದರು. ಇವರ ಮೊದಲ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್. ಇವರ ತಾತನ ಹೆಸರು ಖ್ಯಾತ ವಿದ್ವಾನ್ ಟಿ.ಚೌಡಯ್ಯ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಂಡ್ಯದಲ್ಲಿ ಆರಂಭಿಸಿ ಪದವಿ ಮೈಸೂರಿನಲ್ಲಿ ಪದವಿ ಶಿಕ್ಷಣವನ್ನು ಪಡೆದರು. ಆದರೆ ಇವರ ಚಿತ್ರ ರಂಗದ ಪ್ರವೇಶವೇ ರೋಚಕವಾಗಿತ್ತು.

ಇತ್ತ ಕಡೆ ೧೯೭೩ ರಲ್ಲಿ ಕನ್ನಡ ಚಿತ್ರರಂಗದ ಶ್ರೇಷ್ಠ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ತರಾಸು ಅವರ ಕಾದಂಬರಿ ಆಧಾರಿತ ನಾಗರಹಾವು ಚಿತ್ರದ ಚಿತ್ರೀಕರಣವನ್ನು ಆರಂಭಿಸಿದ್ದರು. ಈ ಚಿತ್ರಕ್ಕೆ ನಮ್ಮ ಸಾಹಸ ಸಿಂಹ ನಟ ವಿಷ್ಣುವರ್ಧನ್ ಮೊದಲ ಬಾರಿಗೆ ನಾಯಕ ನಟನಾಗಿ ಆಯ್ಕೆಯಾಗಿದ್ದರು. ಈ ಚಿತ್ರದಲ್ಲಿ ನಾಯಕಿಯನ್ನು ಚುಡಾಯಿಸುವ ಜಲೀಲ್ ಎನ್ನುವ ಖಳನ ಪಾತ್ರವಿತ್ತು. ಆದರೆ ಈ ಪಾತ್ರಕ್ಕೆ ಯಾರು ಆಯ್ಕೆ ಆಗಿರಲಿಲ್ಲ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಈ ಜಲೀಲನ ಪಾತ್ರಕ್ಕೆ ಸೂಕ್ತ ವ್ಯಕ್ತಿಯನ್ನು ಹುಡುಕುವುದಕ್ಕೆ ಒಂದು ಆಡಿಷನ್ ಮೂಲಕ ಹಲವಾರು ಯುವ ಪ್ರತಿಭೆಗಳನ್ನು ಸಂದರ್ಶಿಸಿ ಪರೀಕ್ಷಿಸಿದರೂ ಅವರ ಮನಸ್ಸಿಗೆ ಒಪ್ಪುವಂತಹ ಸೂಕ್ತ ವ್ಯಕ್ತಿ ಸಿಗಲಿಲ್ಲ. ನಮ್ಮ ಭಾರತ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಆಗ ಈ ಆಡಿಷನ್ ನಲ್ಲಿ ಭಾಗವಹಿಸಿದ್ದರು. ಆದರೂ ನಿರ್ದೇಶಕ  ಪುಟ್ಟಣ್ಣ ಕಣಗಾಲ್ ಸೂಕ್ತ ವ್ಯಕ್ತಿಯ ಶೋಧದ ಪ್ರಯತ್ನದಲ್ಲಿದ್ದರು. ವಿಷಯ ತಿಳಿದ ಸಂಗ್ರಾಮ್ ಇವರು ಅಂಬರೀಷ್ ಆಪ್ತ ಸ್ನೇಹಿತರು. ಇವರು ತಮ್ಮ ಸ್ನೇಹಿತ ಸಂಗ್ರಾಮ್ ಒತ್ತಾಯದ ಮೇರೆಗೆ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರನ್ನು ಭೇಟಿಯಾಗಲು ಚಿತ್ರೀಕರಣದ ಸ್ಥಳಕ್ಕೆ ಹೋದರು.

ಇವರನ್ನು ನೋಡಿದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಗೆ ಆಗ ಏನು ಅನಿಸಿತೋ ಗೊತ್ತಿಲ್ಲ. ತಮ್ಮ ಚಿತ್ರದ ಜಲೀಲನ ಪಾತ್ರಕ್ಕೆ ಇವರನ್ನು ಆಯ್ಕೆ ಮಾಡಿದರು. ಈ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ಇವರ ಪಾತ್ರ ಒಂದೇ ಟೇಕ್ ನಲ್ಲಿ ಓಕೆ ಆಗಿತ್ತು. ಈ ಚಿತ್ರದಲ್ಲಿ ನಾಯಕಿಯನ್ನು ಚುಡಾಯಿಸುವ ಜಲೀಲ್ ಎನ್ನುವ ಖಳನ ಪಾತ್ರದಲ್ಲಿ ಇವರನ್ನು ಬಿಟ್ಟರೆ ಬೇರೆ ಯಾರನ್ನೂ ಊಹಿಸಲು ಸಾಧ್ಯವಿಲ್ಲ. ಹೇ ಬುಲ್ ಬುಲ್ ಮಾತನಾಡಕಿಲ್ವ ಎಂದು ಇವರು ಹೇಳಿದ ಎವರ್ ಗ್ರೀನ್ ಡೈಲಾಗ್ ಇಂದಿಗೂ ಜನಪ್ರಿಯವಾಗಿದೆ.

ಈ ಚಿತ್ರದ ಮೂಲಕ ವಿಷ್ಣುವರ್ಧನ್ ಎಂಬ ರೋಮ್ಯಾಂಟಿಕ್ ಹೀರೋನ ಪರಿಚಯವಾದರೆ ಅಂಬರೀಷ್ ಎಂಬ ರೆಬೆಲ್ ವಿಲನ್ ಚಿತ್ರ ರಂಗಕ್ಕೆ ಪದಾರ್ಪಣೆ ಮಾಡಿದರು. ಇಲ್ಲಿಂದ ಆರಂಭವಾದ ಇವರಿಬ್ಬರ ಸ್ನೇಹ ಎಷ್ಟು ಗಟ್ಟಿಯಾಗಿತ್ತಂದರೆ ಅಂಬರೀಷ್ ಇಲ್ಲದೇ ವಿಷ್ಣುವರ್ಧನ್ ಯಾವ ಕಾರ್ಯಕ್ರಮಗಳಿಗೂ ಹೋಗುತ್ತಿರಲಿಲ್ಲ. ನಾಗರಹಾವು ಚಿತ್ರದಿಂದ ರಂಗನಾಯಕಿ ಚಿತ್ರದ ವರೆಗೂ ಎಲ್ಲ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿತ್ರ ರಂಗ ಪ್ರವೇಶಿಸಿ ಎಂಟು ವರ್ಷಗಳ ನಂತರ ೧೯೮೧ ರಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿ ಬಂದ ಎಚ್.ಕೆ.ಅನಂತರಾವ್ ಕಾದಂಬರಿ ಆಧಾರಿತ ಅಂತ ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದು ಇವರ ವೃತ್ತಿ ಜೀವನದಲ್ಲಿ ಮಹತ್ತರ ತಿರುವು ನೀಡಿದ್ದಲ್ಲದೆ ಈ ಚಿತ್ರದಲ್ಲಿ ಅನ್ಯಾಯದ ವಿರುದ್ಧ ಹೋರಾಡುವ ಇನ್ಸಪೆಕ್ಟರ್ ಸುಶೀಲ್ ಕುಮಾರ್ ಪಾತ್ರದಿಂದ ರೆಬೆಲ್ ಸ್ಟಾರ್ ಎಂಬ ಬಿರುದು ಬಂದಿತು.

( ಮುಂದುವರೆಯುವುದು )

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply