ಮಾಸ್ ಸಿನಿಮಾ ಪ್ರಿಯರಿಗೆ ಖಡಕ್ ನಾಟಿ ಮಸಾಲೆ ಊಟ! ಮದಗಜ ಎದುರಾದರೆ ಭಯದ ಓಟ.
ತಾರಾಗಣ:- ಶ್ರೀ ಮುರುಳಿ, ಜಗಪತಿ ಬಾಬು, ದೇವಯಾನಿ, ರಂಗಾಯಣ ರಘು, ಆಶಿಕ ರಂಗನಾಥ್, ಸತ್ಯನಾರಾಯಣ, ರಾಮ್, ಚಿಕ್ಕಣ್ಣ ಮತ್ತು ಶಿವರಾಜ್ ಕೆ.ಆರ್ ಪೇಟೆ.
ನಿರ್ದೇಶನ :- ಮಹೇಶ್.
ಸಂಗೀತ:- ರವಿ ಬಸ್ರೂರ್.
ನಿರ್ಮಾಣ:- ಉಮಾಪತಿ ಶ್ರೀನಿವಾಸ್ ಗೌಡ.
ವಾರಣಾಸಿಯ ಗಂಗಾತೀರದ ಹರಿಶ್ಚಂದ್ರ ಘಾಟಿನಲ್ಲಿ ದಾಂಡಿಗರ ಗುಂಪೊಂದನ್ನ ಸದೆಬಡಿಯುವ ಸನ್ನಿವೇಶದಲ್ಲಿ ನಾಯಕ ಸೂರ್ಯ( ಶ್ರೀ ಮುರುಳಿ) ಪರಿಚಯವಾಗ್ತಾನೆ, ಸುಡುವ ಬೆಂಕಿಗಿಂತ ಘೋರವಾಗಿ, ಕತ್ತಿಗಿಂತಾ ಹರಿತವಾಗಿ, ಯಾವುದನ್ನು ಲೆಕ್ಕಿಸದ ಬಿರುಗಾಳಿಯಂತೆ ತನ್ನ ದೇಹಾ ಮತ್ತು ಜೀವನವನ್ನ ಕಟ್ಟಿಕೊಂದಿರ್ತಾನೆ. ಹೆಣ ಸುಡುವುದಕ್ಕೂ ಸೈ, ಹಣ ವಸೂಲಿಗೂ ಜೈ ಅನ್ನೋದೇ ಇವ್ನ ವೃತ್ತಿಯಾಗಿರುತ್ತೆ ಹೀಗಿರಬೇಕಾದ್ರೆ ಯಾವ್ದೋ ಒಂದು ವಸೂಲಿ ಕೆಲಸದ ಮೇಲೆ ಕರ್ನಾಟಕದ ಗಜೇಂದ್ರಗಡಕ್ಕೆ ಮೊದಲ ಬಾರಿಗೆ ಆಗಮಿಸ್ತಾನೆ, ಇಲ್ಲಿ ಬಂದ ಮೇಲೆ ಆತನ ಬದುಕಿಗೆ ಸಂಭದಿಸಿದ ಹಾಗೆ ಹಲವು ಸತ್ಯಗಳು, ಕುರುಹುಗಳು ಪರಿಚಯವಾಗೋದರ ಜೊತೆಗೆ ಗಜೇಂದ್ರಗಡದಲ್ಲಿರುವ ನರ ರೂಪದ ರಕ್ಕಸರನ್ನ- ಋಣಾಪಾತಕರನ್ನ ಎದುರಿಸಿ ಮಟ್ಟಹಾಕುವ ಅನಿವಾರ್ಯವೂ ಸಂಭವಿಸುತ್ತದೆ. ಇದರ ನಡುವೆಯೇ ಬಾಲ್ಯದಿಂದ ಆತನಿಗೆ ಪರಿಚಯವಿರದ ದಯೆ-ವಾತ್ಸಲ್ಯ ಒಲವು ಎಲ್ಲವು ಒಂದೊಂದು ಪಾತ್ರಗಳ ಮೂಲಕ ವರದಾನವಾಗುತ್ತದೆ. ಸದ್ಭಾವ ತುಂಬುವ ಪಾತ್ರಗಳಾವವು? ಕತ್ತಲು ತುಂಬಿದ ಕುಂಟುಬಕ್ಕೆ, ಗ್ರಹಣ ಅಂಟಿದ ಊರಿಗೆ ಸೂರ್ಯ ಹೇಗೆ ಬೆಳಕಾಕ್ತಾನೆ, ಜನರಿಗೆ ಯಮಯಾತನೆ ನೀಡ್ತಿರೋ ವ್ಯಾಘ್ರರ ಕಥೆ ಹೇಗೆ ಅಂತ್ಯವಾಗುತ್ತೆ ಅನ್ನೋದೇ ದಾಪುಗಾಲು ಹಾಕಿ ಪಯಣಿಸ್ತಿರುವ “ಮದಗಜನ” ಕಥ
ನಿರ್ದೇಶಕ ಮಹೇಶ್ ಸಿನಿಮಾ ಪ್ರಸ್ತುತ ಪಡಿಸುವಲ್ಲಿ ಬಹಳ ನಿಸ್ಸಿಮರು, ಸರಳವಾದ ಕಥೆಯನ್ನ ಅದ್ಭುತವಾದ ಸುಂದರ ಸನ್ನಿವೇಶಗಳೊಂದಿಗೆ, ಭಾವಪೂರ್ಣ ಪ್ರಸಂಗಗಳನ್ನ ತುಂಬಿಸಿ ಮನೋರಂಜನೆ ನೀಡುವ ದೃಶ್ಯ ಕಾವ್ಯ ಸಿದ್ಧಪಡಿಸಿದ್ದಾರೆ, ಛಾಯಾಗ್ರಾಹಕ ನವಿನ್ ಕುಮಾರ್ ಅದಕ್ಕೆ ಬೆನ್ನೆಲುಬಾಗಿದ್ದಾರೆ ಮತ್ತೊಂದೆಡೆ ರವಿ ಬಸ್ರೂರ್ ಸಂಯೋಜಿಸಿರುವ ಚಂಡಮಾರುತದಂತಹ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಸಿನಿಮಾಗೆ ಹೈಲೈಟ್ ಎಂದ್ರೆ ತಪ್ಪಾಗಲಾರದು, ಫೈಟ್ ಮಾಸ್ಟರ್ ಅರ್ಜುನ್ ರಚಿಸಿರುವ 5 ಫೈಟ್ಗಳು ಒಂದಕ್ಕಿಂತ ಒಂದು ಭಿನ್ನ ಮತ್ತು ರೋಚಕ.ಸಿನಿಮಾದ ಉದ್ದಕ್ಕೂ ಸಂಭಾಷಣೆಗಾರ ಚಂದ್ರಮೌಳಿ ತಮ್ಮ ಪ್ರಾಸ ಬದ್ದ ಪಂಚ್ ಡೈಲಾಗಳಿಂದ ಪ್ರೇಕ್ಷಕನಿಗೆ ಕಿಕ್ಕೇರಿಸಿದ್ದಾರೆ
ಶ್ರೀ ಮುರುಳಿ ಪಂಚ್ ಡೈಲಾಗ್ ಹಳ್ತಾ -ಫೈಟ್ ದೃಶ್ಯಗಳಲ್ಲಿ ವಿಲ್ಲನ್ಗಳ ಬೆನ್ನು ಮೂಳೆ ಮುರೀತ, ಭಾವನಾತ್ಮಕ ಸನ್ನಿವೇಶಗಳಲ್ಲಿಯೂ ಪ್ರಚಂಡನಾಗಿ ಕಾಣ್ತಾರೆ, ಪಕ್ಕಾ ಹಳ್ಳಿ ಬೇಡಗಿಯಾಗಿ ಕಾಣಿಸೋ ಆಶಿಕ ರಂಗನಾಥ್ ಪಾತ್ರದ ಆಯಾಮ ಹೆಚ್ಚಿಲ್ಲದಿದ್ದರು ಅಚ್ಚುಕಟ್ಟಾಗಿದೆ. ಇನ್ನು ಭದ್ರನಾಗಿ ಕಾಣಿಸೋ ಜಗಪತಿ ಬಾಬು ಅವರ ಪಾತ್ರ ಸಿನಿಮಾದ ತೂಕವನ್ನು ದುಪ್ಪಟ್ಟಾಗಿಸುತ್ತದೆ, ಜಗಪತಿ ಬಾಬು ಅವರ ಹಾವ ಭಾವ ಪಾತ್ರದ ಏರಿಳಿತ ,ಘಾ0ಭೀರ್ಯ, ಮೌನ, ಭೀಭತ್ಸ ಭರಿತ ನೋಟ ಎಲ್ಲವೂ ಫರ್ಸ್ಟ್ ಕ್ಲಾಸ್, ಅವರ ಇತ್ತಿಚಿಗಿನ ಸಿನಿಮಾಗಳ ನಿರ್ವಹಿಸಿದ ಪಾತ್ರಗಳ ಪೈಕಿ ಇದು ವಿಭಿನ್ನ- ಉನ್ನತ. ಇನ್ನುಳಿದಂತೆ ರಂಗಾಯಣ ರಘು, ದೇವಯಾನಿ ಮತ್ತು ಚಿಕ್ಕಣ್ಣ ಎಲ್ಲರು ತಮ್ಮದೇಯಾದ ವಿಶಿಷ್ಟ ನಟನಾ ವೈಖರಿಯಿಂದ ಮನಗೆಲ್ಲುತ್ತಾರೆ.
ನದಿಯೊಂದು ಹಲವು ಊರುಗಳನ್ನ ದಾಟಿ ಹೋಗುವಾಗ ಪ್ರೀತಿ ಮಮಕಾರವನ್ನ ಹೊತ್ತು ಹರಿದಾಗಲೇ ಎರಡು ಊರ ಜನರ ನಡುವಿನ ಭಾಂಧವ್ಯ ಹಸಿರಾಗಿ ಉಳಿಯಲು ಸಾಧ್ಯ, ಬದಲಿಗೆ ಅದೇ ನದಿಯಲ್ಲಿ ರಕ್ತಕ್ಕೆ ರಕ್ತ ಎಂಬ ಕ್ರೌರ್ಯದ ವಿಷ ಬೀಜ ಬಿತ್ತಿದಾಗ ದ್ವೇಷ ಮತ್ತು ಪ್ರತಿಕಾರ ಬೆರೆತ ಬೃಹತ್ ಮುಳ್ಳಿನ ಜಾಲಿಮರವಾಗುತ್ತೆ ಆದ್ರೆ ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕು ಅನ್ನೋ ಮತ್ತೊಂದು ಮಾತು ಕೂಡ ಇದೆ ಈ ಎರಡು ಭಿನ್ನವಾದ ಮಾತು ಸಿನಿಮಾದಲ್ಲಿ ಗೋಚರಿಸುತ್ತದೆ.