ಮಾನಗರಂ ಎಂದರೆ ಮಹಾನಗರ ಎಂದರ್ಥ.
ಮಹಾನಗರ ‘ಮಹಾನ್‘ ಆಗಿರುತ್ತದೆ ಅಂತ ನಾವು ತಿಳಿದುಕೊಳ್ಳುತ್ತೇವೆ. ಆದರೆ ಈ ಮಹಾನಗರ “ಏನ್ಮಹಾ”ನಗರವಾಗಿರುವುದು ವಿಪರ್ಯಾಸ. ಹಳ್ಳಿಯಿಂದ ನಗರಕ್ಕೆ ವಲಸೆ ಬರುವವರು ಈ ಸಿನೆಮಾ ನೋಡಿದರೆ ಜಪ್ಪಯ್ಯ ಅಂದ್ರೂ ಹಳ್ಳಿ ಬಿಟ್ಟು ಬರೋಲ್ಲ. ‘ನಿಮ್ ಮಾನಗರವನ್ನ ನೀವೇ ಇಟ್ಕೊಳ್ಳಿ ಸ್ವಾಮಿ’ ಅಂತ ಕೈಮುಗಿದು ಹಳ್ಳಿಯಲ್ಲಿಯೇ ಉಳಿದುಕೊಂಡುಬಿಡ್ತಾರೆ.
ಅವರಿಗೆ ಇರಲು ಅಥವಾ ನಗರದಿಂದ ವಾಪಸ್ ಹೋಗಲು ಹಳ್ಳಿಯಾದರೂ ಇದೆ… ಆದರೆ ನಗರವಾಸಿಗಳಿಗೆ ಆ ಆಯ್ಕೆಯೂ ಇಲ್ಲ. ಅವರುಗಳು ಏನೇ ಕಷ್ಟ ಬಂದರೂ ಈ ಮಹಾನಗರದಲ್ಲಿಯೇ ಬದುಕಬೇಕು, ಇಲ್ಲಿಯೇ ಸಾಯಬೇಕು. ಹೆಚ್ಚುಕಡಿಮೆಯಾದರೆ ಹಣೆಬರಹ ಅಂತ ತಿಳಿದು ಸುಮ್ಮನಾಗಬೇಕು.
ಅಷ್ಟೊಂದು ಹೆದರುವಂಥದ್ದೇನಿದೆ ಇದರಲ್ಲಿ ಅಂತೀರಾ?
ಈ ಸಿನೆಮಾದಲ್ಲಿ ಒಂದೇ ಒಂದು ರಾತ್ರಿಯಲ್ಲಿ ನಡೆಯುವ ಘಟನೆಯನ್ನು ನೋಡಿದರೆ ನಮ್ಮ ಎದೆ ನಡುಗುವುದು ಗ್ಯಾರಂಟಿ. ಯಾರೋ ಮಾಡಿದ ತಪ್ಪಿಗೆ ಮತ್ಯಾರಿಗೋ ಶಿಕ್ಷೆ…. ಅಮಾಯಕರೆಲ್ಲಾ ತಮಗರಿವಿಲ್ಲದೇ ಈ ಜಾಲದೊಳಗೆ ಸಿಕ್ಕು ಒದ್ದಾಡುತ್ತಾರೆ…. ಒಬ್ಬರಿಗೊಬ್ಬರು ಸಂಬಂಧ ಇರದಿದ್ದರೂ ಈ ಒಬ್ಬರಿಂದ ಮತ್ತೊಬ್ಬರು ಸಂಕಷ್ಟ ಅನುಭವಿಸುತ್ತಾರೆ….
ಇದರಲ್ಲಿ ರೌಡಿಸಂ ಇದೆ. ಯಾರನ್ನೇ ಆಗಲಿ ಮುಖ-ಮೂತಿ ನೋಡದೇ ಚಚ್ಚುವ ಕ್ರೂರತ್ವವಿದೆ. ಅಮಾಯಕರ ಅಸಹಾಯಕತೆ ಇದೆ. ಯಾವ ತಪ್ಪೂ ಮಾಡದೇ ರೌಡಿಗಳಿಂದ ಚಚ್ಚಿಸಿಕೊಂಡ ಅವರ ನಿಟ್ಟುಸಿರಿದೆ. ಅಪಹರಣವಿದೆ. ಬ್ಲಾಕ್ಮೇಲ್ ಇದೆ. ದುಡ್ಡಿದೆ. ಆ ದುಡ್ಡಿಗಾಗಿ ಬಾಯ್ಬಿಡುವ ಪೊಲೀಸರೂ ಸಹ ಇದ್ದಾರೆ.
ಆದರೆ ಅದೇ ಸಮಯದಲ್ಲಿ…
ಈ ನಗರದಲ್ಲಿ ಸಹೃದಯವಂತರೂ ಇದ್ದಾರೆ. ಅಮಾಯಕನೊಬ್ಬ ಅರಿಯದೇ ಈ ಅಪರಾಧದ ಜಾಲದೊಳಗೆ ಪ್ರವೇಶಿಸಿದಾಗ ಆತನನ್ನು ಬಂಧಿಸದೇ ಬಿಟ್ಟುಬಿಡುವ ಕನಿಕರದ ಪೊಲೀಸರೂ ಇದ್ದಾರೆ. ಯುವಕನೋರ್ವ ಕಳೆದುಕೊಂಡ ಒರಿಜಿನಲ್ ಡಿಗ್ರೀ ಮಾರ್ಕ್ಸ್ ಕಾರ್ಡುಗಳನ್ನು ಆತನ ಅಡ್ರೆಸ್ಸಿಗೇ ಕೊರಿಯರ್ ಮಾಡುವ ಪ್ರಾಮಾಣಿಕ ಅಧಿಕಾರಿಯೂ ಇದ್ದಾರೆ.
ಈ ನಗರ ಎಲ್ಲರನ್ನೂ ಒಳಗೊಂಡಿದೆ..
ರೌಡಿಗಳು ಮತ್ತು ಹೃದಯವಂತರು. ಈಗ ಇಲ್ಲಿ ಇರಬೇಕೋ ಬೇಡವೋ ಎಂಬ ಆಯ್ಕೆ ನಮ್ಮದು. ಮಹಾನಗರದೊಳಗೆ ಹಾಸುಹೊಕ್ಕಾಗಿರುವ ಒಳ್ಳೆಯತನ ಮತ್ತು ದುಷ್ಟತನಗಳಲ್ಲಿ ನಮಗೆ ಯಾವುದು ಬೇಕೋ ಅದನ್ನು ಆರಿಸಿಕೊಂಡು ಮುನ್ನಡೆಯಬೇಕು.
ಏಕೆಂದರೆ, ಸಿನೆಮಾದ ಒಂದು ಪಾತ್ರವೇ ಹೇಳಿದಂತೆ….
‘ಮಹಾನಗರ ನಮಗೆ ಅನ್ನ ಹಾಕಿ ಸಾಕುತ್ತದೆ. ಅನ್ನ ಕೊಟ್ಟ ಊರನ್ನು ಬೈಯ್ಯಬಾರದು. ಅಲ್ಲದೇ ಹಾಗೆ ಬೈಯ್ಯುವವರು ಯಾರೂ ಈ ಊರನ್ನು ಬಿಟ್ಟು ಹೋಗುವುದೂ ಇಲ್ಲ….’
ಸಿನೆಮಾ ಯೂಟ್ಯೂಬಿನಲ್ಲಿದೆ.
Good review of the movie.
Understood vthe concept of the movie.