ಮುರಿಯದ ಮನೆ

ನಮ್ಮ ಹಿಂದಿನ ಕಾಲದ ಸಿನಿಮಾಗಳಲ್ಲಿ ಕೇವಲ ಕಪ್ಪು ಬಿಳುಪು. ಚಿತ್ರದ ಬಣ್ಣ ಅಲ್ಲ, ಪಾತ್ರಗಳ ಗುಣ ನಾನಿಲ್ಲಿ ಹೇಳ್ತಿರೋದು.

ಒಂದು ಸುಂದರ ಕುಟುಂಬ. ಅಣ್ಣ ಅತ್ತಿಗೆಗೆ ಮಕ್ಕಳಿಲ್ಲ. ಅತ್ತಿಗೆಯ ಬಾಯಿ ಜೋರು. ಅಣ್ಣನಿಗೆ ಅವನ ತಮ್ಮ ಎಂದರೆ ಪ್ರಾಣ. ಆ ತಮ್ಮನಿಗೆ ಇಬ್ಬರು ಗಂಡು ಮಕ್ಕಳು, ಸಾಧ್ವಿ ಹೆಂಡತಿ. ಈ ಸಾಧ್ವಿ ಹೆಂಡತಿಯ ಅಣ್ಣ, ಅತ್ತಿಗೆ ತೀರಿಕೊಂಡಾಗ ಅವರ ಸುಗುಣೆ ಮಗಳನ್ನು ತನ್ನ ಮನೆಗೆ ಕರೆತರುತ್ತಾಳೆ… ಅದು ಕಥೆಯ ಆರಂಭ.

ಈ ತಮ್ಮನ ಎರಡು ಮಕ್ಕಳಲ್ಲಿ  ಮೊದಲನೆಯ ಹುಡುಗ ತನ್ನ ಏಳನೇ ವಯಸ್ಸಿನಲ್ಲಿ ಗಾಳಿಪಟ ತೆಗೆಯಲು ಲೈಟು ಕಂಬ ಹತ್ತಿ ಕರೆಂಟ್ ಹೊಡೆಸಿಕೊಂಡು ಅವನ ಕಾಲೊಂದು ಕುಂಟು, ಅವನ ಎಡಗೈ ಸೊಟ್ಟಂಪಟ್ಟ ಆಗಿರುತ್ತದೆ. ಅವನ ತಮ್ಮ ಪಟ್ಟಣದಾಗೆ ಓದಿ ಪದವೀಧರ ಆಗಿರುತ್ತಾನೆ.

ಈ ಕೈ ಸೊಟ್ಟ ಯುವಕ ನ್ಯಾಯ ನೀತಿ ಮಾತಾಡ್ಕೊಂಡು ದೊಡ್ಡಮ್ಮನೊಂದಿಗೆ ಸದಾ ಜಗಳ. ದೊಡ್ಡಪ್ಪನ ಪೆಟ್ ಇವನು.

ಎಲ್ಲರೂ ವ್ಹೈಟ್ ಪಾತ್ರಗಳೇ. ದೊಡ್ಡಮ್ಮ ಒಬ್ಬಳು ಬ್ಲ್ಯಾಕ್.

ಈ ಸುಂದರ ಸಂಸಾರಕ್ಕೆ ಕಪ್ಪು ಪಾತ್ರವೊಂದರ ಆಗಮನವಾಗುತ್ತದೆ. ದೊಡ್ಡಮ್ಮನ ಅಣ್ಣನ ಮಗ. ಅವನೊಂದಿಗೆ ಅವನ ತಂಗಿ. ಒಬ್ಬ ಬಟ್ಲರ್ ಬಂದಿರುತ್ತಾರೆ.

ಅವನು ತನ್ನ ಸೋದರತ್ತೆ ಉರ್ಫ್ ಸೊಟ್ಟ ಕೈಯಿನವನ ದೊಡ್ಡಮ್ಮನಿಗೆ ಮೋಡಿ ಮಾಡಿ ಅವಳ ಹಣ ಲಪಟಾಯಿಸಿ, ಸೊಟ್ಟ ಕೈಯಿನವನ ತಮ್ಮನನ್ನು ತನ್ನ ತಂಗಿಗೆ ಮದುವೆ ಮಾಡಿಸಿ, ಈ ಮುರಿಯದ ಮನೆಯ ನಡುವೆ ಗೋಡೆ ಎಬ್ಬಿಸಿ ರಾದ್ಧಾಂತ ಮಾಡುತ್ತಾನೆ.

ಮುರಿಯದ ಮನೆ ಮುರಿದುಹೋಗುತ್ತದೆ. ಆದರೆ ಆಗಿನ ಕಾಲದ ಸಿನಿಮಾಗಳಲ್ಲಿ ಕೆಟ್ಟವರು ಜೈಲಿಗೆ ಹೋದರು. ಒಳ್ಳೆಯವರು ಮತ್ತೆ ಗ್ರೂಪ್ ಸಾಂಗ್ ಹಾಡುತ್ತಾರೆ ಎನ್ನುವ ಸಿದ್ಧಾಂತದ ಸಿನಿಮಾಗಳು. ಸೊಟ್ಟಂಪಟ್ಟ ಕೈ ಸರಿಹೋಗುತ್ತದೆ. ಹೆಂಗೆ? ನೋಡ್ರಲಾ ಸಿನಿಮಾನ.

ರಾಜ್‍ಕುಮಾರ್ ಬಲು ಲವಲವಿಕೆಯಿಂದ ನಟಿಸಿದ್ದಾರೆ. ಇಡೀ ಸಿನಿಮಾದಲ್ಲಿ ಅವರಿಗೆ ದೈಹಿಕ ಊನವಿದ್ದರೂ (ಕೈ ಸೊಟ್ಟ, ಕಾಲು ಕುಂಟು) ಅದನ್ನು ಮೀರಿ ನಟಿಸಿದ್ದಾರೆ.

ಬಾಲಕೃಷ್ಣ ಆ ಮನೆಮುರುಕ. ಅವನ ಸೋದರತ್ತೆ ಪಾಪಮ್ಮ. ಅವಳ ಗಂಡ ಕೆ.ಎಸ್. ಅಶ್ವತ್ಥ್. ಅವನ ತಮ್ಮ ಉದಯಕುಮಾರ್. ಅವನ ಹೆಂಡತಿ ಪಂಢರೀಬಾಯಿ. ಅವರ ಮಕ್ಕಳು ರಾಜ್‍ಕುಮಾರ್ (ಸೊಟ್ಟಂಪಟ್ಟ ಕೈ) ಮತ್ತು ಶ್ರೀಕಂಠಸ್ವಾಮಿ. ಜಯಂತಿ ಪಂಢರೀಬಾಯಿ ಅಣ್ಣನ ಮಗಳು. ವಾಣಿಶ್ರೀ (ಹ್ಞಾಂ… ಮುಂದೆ ಕೆಲವು ಕಾಲ ತೆಲುಗು ಸಿನಿಮಾಗಳ ಅನಭಿಷಿಕ್ತ ರಾಣಿ ಆದಾಕಿ). ನರಸಿಂಹರಾಜು ಬಟ್ಲರ್ ಪಾತ್ರದಲ್ಲಿ.   ಕ್ಲಬ್ ಸಾಂಗ್ಸ್ ಕೂಡ ಇವೆ.

ಅಂದಚಂದವೇತಕೆ ಅಂತರಂಗ ದೈವಕೆ ಪಿ. ಸುಶೀಲ ಹಾಡು, ಪಿಬಿಎಸ್ ಪಿಸುಶೀಲಾ ಹಾಡು ನಮ್ಮೂರ ಚೆನ್ನಯ್ಯ ಮತ್ತು ಮತಿಹೀನ ನಾನಾದೆ ಎನ್ನುವ ಹಾಡು ಮನೆ ಇಬ್ಭಾಗವಾಗುವಾಗ.

ನಮ್ಮ ಮಕ್ಕಳು ಚಿಕ್ಕಂದಿನಲ್ಲಿ ನಾವು ಸಿನಿಮಾ ನೋಡುವಾಗ ಬಂದು, ಒಂದು ಪಾತ್ರವನ್ನು ತೋರಿಸಿ, ಇದು ಗುಡ್ ಅಂಕಲ್ಲಾ ಬ್ಯಾಡ್ ಅಂಕಲ್ಲಾ ಗುಡ್ ಆಂಟೀನಾ ಬ್ಯಾಡ್ ಆಂಟೀನಾ ಅಂತ ಕೇಳ್ತಿದ್ರು.

ಈ ಸಿನಿಮಾದಲ್ಲಿ ಅವೇ ಇರೋದು. ಗುಡ್ ಮತ್ತು ಬ್ಯಾಡ್.  1964ರ ಸಿನಿಮಾ ಮುರಿಯದ ಮನೆ. 

ಲೇಖಕರು: ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply