ರಂಗಣ್ಣನವರಿಗೆ ರಂಗಣ್ಣನವರೇ ಸಾಟಿ.

Public tv ranganath in Weekend with ramesh

ಪಬ್ಲಿಕ್ ಟಿ.ವಿ.ಯ ಎಚ್.ಆರ್. ರಂಗನಾಥ್ ಗೊತ್ತಲ್ಲ?
ಇವರ್ಯಾಕೆ ಈ ರೀತಿ ಕಿರುಚಾಡ್ತಾರೆ … ಎದುರಿಗೆ ಕುಳಿತ ವ್ಯಕ್ತಿಗೆ ಮಾತಾಡಲು ಅವಕಾಶವೇ ಕೊಡೋದಿಲ್ಲ… ಫೋನ್ ಮಾಡಿದವರ ಜೊತೆ ಇನ್ನಷ್ಟು ಸಂಯಮದಿಂದ ವರ್ತಿಸಬಹುದಿತ್ತು… ಹೀಗೆ ಒಂದಿಷ್ಟು ಸಣ್ಣ ಅಸಮಾಧಾನಗಳು ಅವರ ಬಗ್ಗೆ ಹೊರಹೊಮ್ಮುವುದು ನಿಜ. ಆದರೂ ಸಹ…
ರಂಗಣ್ಣನವರಿಗೆ ರಂಗಣ್ಣನವರೇ ಸಾಟಿ. 
ಕನ್ನಡ ಸುದ್ದಿ ವಾಹಿನಿಗಳ ಮಟ್ಟಿಗಂತೂ ಎಚ್.ಆರ್. ರಂಗನಾಥ್ ಅವರಷ್ಟು ಜನಮನ್ನಣೆ ಪಡೆದ ಇನ್ನೊಬ್ಬರು ಸಿಗುವುದಿಲ್ಲ. ನಮ್ಮಲ್ಲಿಯ ಅಸಂಖ್ಯ ಜನರ ರಾತ್ರಿ ಒಂಬತ್ತರಿಂದ ಹತ್ತು ಗಂಟೆಯ ಸಮಯವನ್ನು ಅವರಿಗೇ ಗೊತ್ತಾಗದಂತೆ ಕದ್ದು, ತಮ್ಮ ಜೇಬಿಗಿಳಿಸಿಕೊಂಡ ವ್ಯಕ್ತಿ ಅವರು. 

H.R.Ranganath

ರಂಗನಾಥ್ ಅವರು ಮುದ್ರಣ ಮಾಧ್ಯಮದ ಹಿನ್ನೆಲೆಯಿಂದ ಬಂದವರು. ಅಲ್ಲೂ ಸಹ ಸಾಕಷ್ಟು ಯಶಸ್ಸು ನೋಡಿದವರು. ಅದರಲ್ಲೂ ಮುಖ್ಯವಾಗಿ ಆ ಕಾಲದ ಮುದ್ರಣ ಮಾಧ್ಯಮ ಬಹಳ ಆಳವಾಗಿತ್ತು. ಪ್ರತಿಯೊಂದು ವಿಷಯವನ್ನೂ ಅಧ್ಯಯನದೊಂದಿಗೇ ಪ್ರಸ್ತುತಪಡಿಸುತ್ತಿದ್ದ ಕಾಲವದು. ಆದ್ದರಿಂದ ಸಹಜವಾಗಿಯೇ ವಿಷಯ ಜ್ಞಾನ ಹಾಗೂ ವಿಮರ್ಶಾ ಪ್ರಾವೀಣ್ಯತೆ ಅವರಲ್ಲಿ ಹೇರಳವಾಗಿ ಅಡಕವಾಗಿದೆ. ಆದರೆ ದೃಶ್ಯ ಮಾಧ್ಯಮ ಬೇರೆಯೇ ರೀತಿಯದ್ದು. ಇಲ್ಲಿ ವಿಷಯ ಜ್ಞಾನಕ್ಕಿಂತ ನಿರೂಪಣೆ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಸಾಮಾನ್ಯವಾಗಿ ವಿಷಯ ಜ್ಞಾನ ಹಾಗೂ ನಿರೂಪಣಾ ಶೈಲಿ ಎರಡೂ ಒಬ್ಬರಲ್ಲೇ ಸಿಗುವುದು ಅತಿ ವಿರಳ. ಅಪಾರ ವಿಷಯ ಜ್ಞಾನ, ವಿಮರ್ಶಾ ಗುಣ ಹಾಗೂ ಆಕರ್ಷಕ ನಿರೂಪಣೆ ಈ ಮೂರೂ ಒಬ್ಬರಲ್ಲೇ ಸಿಕ್ಕರೆ ಅದೊಂಥರಾ ಜಾಮೂನಿನ ಮೇಲೆ ಐಸ್ ಕ್ರೀಂ ಇಟ್ಟು, ಮಿಲ್ಕ್ ಶೇಕ್ ಜೊತೆ ಕೊಟ್ಟ ಹಾಗೆ !
ಈ ಎಲ್ಲ ಗುಣಗಳೂ ರಂಗಣ್ಣನವರಲ್ಲಿ ಹದವಾಗಿ ಬೆರೆತಿವೆ. ಮುದ್ರಣ ಮಾಧ್ಯಮದ ಗಂಭೀರತೆ ಮತ್ತು ದೃಶ್ಯ ಮಾಧ್ಯಮದ ಸರಳತೆ ಎರಡನ್ನೂ ಹದವಾಗಿ ಬೆರೆಸಿ, ಅವರು ವಿಷಯಗಳನ್ನು ಪ್ರಸ್ತುತಪಡಿಸುತ್ತಾರೆ. ಭಾಷೆಯ ಮೇಲಿರುವ ಅವರಿಗಿರುವ ಅಪಾರ ಹಿಡಿತ, ವಿಷಯ ಪಾಂಡಿತ್ಯ, ನಿರರ್ಗಳವಾಗಿ ಮಾತಾಡುವ ಶೈಲಿ, ವಿಷಯಗಳನ್ನು ವಿಮರ್ಶೆ ಮಾಡುವ ರೀತಿ, ಇವೆಲ್ಲ ಸೇರಿ ಇಂದು ಅವರನ್ನು ಸುದ್ದಿ ವಾಹಿನಿಗಳ ಸೂಪರ್ ಸ್ಟಾರ್ ಮಾಡಿದೆ. ಜೊತೆಗೆ ಯಾವುದೇ ವಿಷಯವಿರಲಿ, ಅದನ್ನು ಜನಪರ ದೃಷ್ಟಿಕೋನದಿಂದ ಹೇಗೆ ವಿಮರ್ಶಿಸಬೇಕು ಎನ್ನುವುದು ಅವರಿಗೆ ಗೊತ್ತಿದೆ. ಏನಾದರೊಂದು ಘಟನೆ ನಡೆದರೆ ಅದರ ಬಗ್ಗೆ ಯಾರೂ ಆಲೋಚಿಸದ ರೀತಿಯಲ್ಲಿ ಪ್ರಸ್ತುತ ಪಡಿಸುವುದು ಅವರ ವಿಶೇಷತ

ಉದಾಹರಣೆಗೆ ಯಾವುದಾದರೊಂದು ದೊಡ್ಡ ಘಟನೆ ನಡೆದರೆ ಅದರ ಬಗ್ಗೆಯೇ ಇಡೀ ದಿನ ಎಲ್ಲಾ ವಾಹಿನಿಗಳೂ ಸುದ್ದಿಗಳನ್ನು ತೋರಿಸಿರುತ್ತಾರೆ. ಬೇರೆ ಬೇರೆ ರೀತಿಯಿಂದ ವಿಮರ್ಶೆ ಮಾಡಿರುತ್ತಾರೆ. ಆದರೆ ನಾವು ರಾತ್ರಿ ಒಂಬತ್ತು ಗಂಟೆಗೆ ಪಬ್ಲಿಕ್ ಟಿ.ವಿ. ಹಾಕಿದಾಗ ರಂಗನಾಥ್ ಅವರ ವಿಮರ್ಶೆ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ‘ಹೌದಲ್ಲ… ಈ ವಿಷಯವನ್ನು ಹೀಗೂ ನೋಡಬಹುದಲ್ಲ…’ ಎನ್ನುವ ಆಶ್ಚರ್ಯ ನಮ್ಮಲ್ಲಿ ಮೂಡುವಂತೆ ಅದು ಮಾಡುತ್ತದೆ.  
ಜನರಿಗೆ ಇಷ್ಟವಾಗುವುದು ಬೇರೆ. ಅಡಿಕ್ಟ್ ಆಗುವುದು ಬೇರೆ. ಒಬ್ಬ ವ್ಯಕ್ತಿಯನ್ನು ನಾವು ಮೆಚ್ಚಿ, ಅವನಿಗೆ ಅಡಿಕ್ಟ್ ಆಗಲು ಸುಧಿರ್ಘ ಸಮಯ ಬೇಕು. ಮುಖ್ಯವಾಗಿ ಆ ವ್ಯಕ್ತಿಯಲ್ಲಿ ವಿವರಿಸಲಾಗದ ಆಕರ್ಷಣೆ ಇರಬೇಕು. ಇಂದು ಹಲವು ಜನರಿಗೆ ರಂಗಣ್ಣ ಒಂಥರಾ ಅಡಿಕ್ಷನ್ ಆಗಿಬಿಟ್ಟಿದ್ದಾರೆ. ಒಂಬತ್ತು ಗಂಟೆ ಆಗುತ್ತಿದ್ದಂತೆ ಅವರ ಕೈಯಲ್ಲಿರುವ ರಿಮೋಟ್ ಅನಾಯಾಸವಾಗಿ ಪಬ್ಲಿಕ್ ಟಿ.ವಿ. ಹಾಕುತ್ತದೆ.  ಧಾರಾವಾಹಿ, ಸಿನೆಮಾಗಳಂತಹ ಮನೋರಂಜನಾ ಕಾರ್ಯಕ್ರಮಗಳಿಗೆ ಈ ರೀತಿಯ ಅಡಿಕ್ಷನ್ ಇರುವುದು ಸಹಜ. ಆದರೆ ಒಂದು ವಾರ್ತಾ ಕಾರ್ಯಕ್ರಮಕ್ಕೆ ಈ ರೀತಿಯ ಅಡಿಕ್ಷನ್ ಒಂಥರಾ ವಿಶೇಷವೇ. 
ಇನ್ನೊಂದು ವಿಶೇಷವೆಂದರೆ, ರಂಗಣ್ಣ ಯಾರ ಎಣಿಕೆಗೂ ಸಿಗದ ವ್ಯಕ್ತಿ. ನಮ್ಮ ಪರ ಮಾತಾಡಿದ್ದಾರೆ ಎಂದು ಬಿ.ಜೆ.ಪಿ. ಬೆಂಬಲಿಸುವವರು ಖುಷಿ ಪಡುವಷ್ಟರಲ್ಲಿ ಬಿ.ಜೆ.ಪಿ.ಯನ್ನು ಬೈದಿರುತ್ತಾರೆ. ರಂಗಣ್ಣ ನಮ್ಮವರು ಎಂದು ಕಾಂಗ್ರೆಸ್ ಬೆಂಬಲಿಗರು ಅಂದುಕೊಂಡ ಮರುಕ್ಷಣವೇ ಕಾಂಗ್ರೆಸ್ ಬಗ್ಗೆ ಹಿಗ್ಗಾಮುಗ್ಗಾ ಬೈದಿರುತ್ತಾರೆ. ಹಾಗೆ ನೋಡಿದರೆ ಇದನ್ನೇ ವಿಷಯಾಧಾರಿತ ಚರ್ಚೆ ಎನ್ನುವುದು. ಮೊದಲೆಲ್ಲ ಇಂತಹ ಚರ್ಚೆಗಳೇ ಹೆಚ್ಚು ನಡೆಯುತ್ತಿದ್ದವು. ಆದರೆ ಈಗ ಹೆಚ್ಚಿನ ಚರ್ಚೆಗಳು ವ್ಯಕ್ತಿ ಆಧಾರಿತ ಹಾಗೂ ಪಕ್ಷ ಆಧಾರಿತವಾಗಿ ಮಾರ್ಪಾಡಾಗುತ್ತಿವೆ. 

ಎಚ್.ಆರ್. ರಂಗನಾಥ್ ಅವರಿಗೆ ಎಷ್ಟು ಪ್ರಮಾಣದಲ್ಲಿ ಅಭಿಮಾನಿಗಳು ಇದ್ದಾರೋ, ಅಷ್ಟೇ ಪ್ರಮಾಣದಲ್ಲಿ ದ್ವೇಷಿಸುವವರೂ ಇದ್ದಾರೆ. ಅಗ್ರೆಸ್ಸಿವ್ ನಡುವಳಿಕೆ ಇರುವ ವ್ಯಕ್ತಿಗಳಿಗೆ ವಿರೋಧಿಗಳು ಸರ್ವೇ ಸಾಮಾನ್ಯ. ಯಾವ ಜನಪ್ರಿಯ ಯಶಸ್ವಿ ವ್ಯಕ್ತಿಗೆ ವಿರೋಧಿಗಳು ಇಲ್ಲ ಹೇಳಿ? ಆದರೆ, ತನ್ನನ್ನು ದ್ವೇಷಿಸುವವರನ್ನು, ಅವಹೇಳನ ಮಾಡುವವರನ್ನು ನಿಭಾಯಿಸುವಷ್ಟು ಹಾಗೂ ನಿರ್ಲಕ್ಷಿಸುವಷ್ಟು ಪ್ರೌಢಿಮೆ ಅವರಿಗಿದೆ. ಇಂಟರೆಸ್ಟಿಂಗ್ ಎಂದರೆ, ಹಲವರು ರಾತ್ರಿ 8.50 ಕ್ಕೆ ಅವರನ್ನು ದ್ವೇಷಿಸುವ ಪೋಸ್ಟ್ ಒಂದನ್ನು ಫೇಸ್ ಬುಕ್ ನಲ್ಲಿ ಹಾಕಿ, 8.55 ಕ್ಕೆ ಅವರನ್ನು ಗೇಲಿ ಮಾಡುವ ಮೆಸೇಜೊಂದನ್ನು ವಾಟ್ಸಾಪ್ ನಲ್ಲಿ ಪಾರ್ವರ್ಡ್ ಮಾಡಿ, ಒಂಬತ್ತು ಗಂಟೆ ಆಗುತ್ತಿದ್ದಂತೆ ಪಬ್ಲಿಕ್ ಟಿ.ವಿ. ಹಾಕುತ್ತಾರೆ !  
ಗಮನಿಸಿ, ಕಂಪ್ಯೂಟರ್ ಮುಂದೆ ಅಥವಾ ಮೊಬೈಲ್ ಮುಂದೆ ಕುಳಿತು ಯಾರೋ ಕಂಡು ಹಿಡಿದ ಫೇಸ್ ಬುಕ್ ವ್ಯಾಟ್ಸಾಪ್ ಗಳಲ್ಲಿ ಪೋಸ್ಟ್ ಮಾಡುವುದು, ಕಮೆಂಟ್ ಮಾಡುವುದು ಸುಲಭ. ಅಥವಾ, ಎದುರಿಗೊಂದು ಮೊಬೈಲ್ ಹಿಡಿದುಕೊಂಡು ಒಂದಿಷ್ಟು ಕಿರುಚಾಡಿ, ಆ ವಿಡಿಯೋವನ್ನು ಹರಿಬಿಡುವುದು ಅಥವಾ ಯೂ ಟ್ಯೂಬ್ ಚಾನೆಲ್ ಮಾಡುವುದೂ ಸಹ ಸುಲಭ. ಅದಕ್ಕೂ ಸಹ ಒಂದಿಷ್ಟು ಅಭಿಮಾನಿಗಳು ಸಿಕ್ಕೇ ಸಿಗುತ್ತಾರೆ. ಆದರೆ, 30-40 ವರ್ಷ ಊರೆಲ್ಲಾ ಓಡಾಡಿ, ಅಧ್ಯಯನ ಮಾಡಿ, ಜ್ಞಾನ ಬೆಳೆಸಿಕೊಂಡು, ಬೃಹತ್ ಸಂಸ್ಥೆಯೊಂದನ್ನು ಕಟ್ಟಿ, ಯಶಸ್ವಿಗೊಳಿಸುವುದು ಖಂಡಿತ ಸುಲಭದ ಮಾತಲ್ಲ.  

H.R. Ranganath

Disclaimer : ಇಲ್ಲಿ ವ್ಯಕ್ತಪಡಿಸಿರುವ ಎಲ್ಲಾ ಅಭಿಪ್ರಾಯಗಳೂ ಕೇವಲ ಎಚ್.ಆರ್.ರಂಗನಾಥ್ ಅವರಿಗೆ ಮತ್ತು ಅವರು ನಡೆಸಿಕೊಡುವ ಒಂಬತ್ತು ಗಂಟೆಯ ಬಿಗ್ ಬುಲೆಟಿನ್ ಗೆ ಸಂಬಂಧಪಟ್ಟದ್ದು. ಪಬ್ಲಿಕ್ ಟಿ.ವಿ. ಬಿತ್ತರಿಸುವ ಉಳಿದ ಕಾರ್ಯಕ್ರಮಗಳಿಗೆ ಈ ಅಭಿಪ್ರಾಯ ಅನ್ವಯಿಸುವುದಿಲ್ಲ.

Vinay Bhat

Vinay Bhat

ವಿನಯ್ ಭಟ್, ಮೂಲ ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗಾರು ಎನ್ನುವ ಪುಟ್ಟ ಹಳ್ಳಿ. ಈಗ ವಾಸವಾಗಿರುವುದು ಬೆಂಗಳೂರಿನಲ್ಲಿ. ಸಾಕ್ಷ್ಯಚಿತ್ರ, ಕಿರುಚಿತ್ರ, ಜಾಹೀರಾತುಗಳನ್ನು ತಯಾರಿಸುವುದು ಕೈ ಹಿಡಿದು ನಡೆಸುತ್ತಿರುವ ವೃತ್ತಿ. ಸುಮಾರು 200ಕ್ಕೂ ಹೆಚ್ಚು ವಿಡಿಯೋ ಫಿಲ್ಮ್‍ಗಳ ತಯಾರಿಕೆ. ಮನದ ಸಂತೋಷಕ್ಕಾಗಿ ಬರವಣಿಗೆ. ಕನ್ನಡದ ಅನೇಕ ಪತ್ರಿಕೆಗಳಿಗೆ, ದೃಶ್ಯ ಮಾಧ್ಯಮದ ಕಾರ್ಯಕ್ರಮಗಳಿಗೆ, ಜಾಹೀರಾತು ಮತ್ತು ಸಂವಹನ ಸಾಮಗ್ರಿಗಳಿಗೆ ಮತ್ತು ವೆಬ್‌ಸೈಟ್‌ಗಳಿಗೆ ಹಲವಾರು ವರ್ಷಗಳಿಂದ ನಿರಂತರ ಬರವಣಿಗೆ. ಜೊತೆಗೆ ಭಾಷಾನುವಾದ, ಸಂಘ ಸಂಸ್ಥೆಗಳಿಗೆ ಕಿರುಪುಸ್ತಕಗಳನ್ನು ತಯಾರಿಸಿಕೊಡುವುದು, ಜಾಹಿರಾತು ಮತ್ತು ಸಂವಹನ ಸಾಮಗ್ರಿಗಳನ್ನು ತಯಾರಿಸುವುದು ಹೀಗೆ ಅಕ್ಷರಕ್ಕೆ ಸಂಬಂಧಿಸಿದ ಏನೇನೋ ಕೆಲಸಗಳು. ಇದುವರೆಗೆ 6 ಪ್ರಿಂಟ್ ಪುಸ್ತಕಗಳು ಮತ್ತು 7 ಇ-ಪುಸ್ತಕಗಳು ಪ್ರಕಟವಾಗಿವೆ

Leave a Reply