ಕನ್ನಡ ಹಾರರ್ ಮೂವಿ ಹುಡುಕುತ್ತಾ ಹೋದವಳಿಗೆ ಸಿಕ್ಕಿದ್ದು “ರಿಕ್ಕಿ” ಸಿನೆಮಾ. ಹೆಚ್ಚು ಕಡಿಮೆ ಕಾಲು ಭಾಗ ನೋಡುವವರೆಗೂ ದೆವ್ವ ಬರುತ್ತೆ ದೆವ್ವ ಬರುತ್ತೆ ಅಂತ ಕಾಯುವುದೇ ಆಯ್ತು. ನಂತರ ಅದು ಭಯಾನಕವಷ್ಟೇ ದೆವ್ವದ್ದಲ್ಲ ಅಂತ ಗೊತ್ತಾದರೂ ಸಿನೆಮಾ ಆಸಕ್ತಿದಾಯಕವಾದ್ದರಿಂದ ನೋಡುವುದನ್ನು ಮುಂದುವರೆಸಿದೆ. ಬಹಳ ಇಷ್ಟವಾದದ್ದು ರಕ್ಷಿತ್ ಶೆಟ್ಟಿಯ ಸಹಜ ನಟನೆ. ಏನ್ ಚಂದ ಮಾಡ್ತಾನಲ್ರೀ ಅನ್ನುತ್ತಲೇ ಹರಿಪ್ರಿಯಾ ಚೆಲುವಿನಲ್ಲಿ ಕಳೆದು ಹೋದೆ.
ಆದರೆ ಇದು ನಕ್ಸಲ್ ಸಿನೆಮಾ. ಬಹುಶಃ ಹೀರೋಯಿನ್ ನಕ್ಸಲ್ ಜೊತೆ ಸೇರಬಹುದು ಅಂತ ಊಹೆ ಬಂದಿತು. ಬಹುಶಃ ಸಿನೆಮಾ ರಿಲೀಸ್ ಆದಾಗ ವಿಮರ್ಶೆ ಓದಿದ ಪರಿಣಾಮ ಇರಬಹುದು. ಹೌದು. ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡ ಹರಿಪ್ರಿಯಾ ನಕ್ಸಲ್ ಜೊತೆಗೆ ಕಾಡು ಸೇರುತ್ತಾಳೆ. ಅವಳನ್ನು ಹುಡುಕುತ್ತಾ ರಕ್ಷಿತ್ ಶೆಟ್ಟಿಯೂ ಕಾಡಿಗೆ ಬರುತ್ತಾನೆ.
ಏನೇ ಹೇಳಿ.. ಹರಿಪ್ರಿಯಾ ಜೀವನದಲ್ಲಿ ಕಳೆದುಕೊಂಡದ್ದನ್ನು ಕಣ್ಣು ಮುಚ್ಚದೇ ನೋಡಲು ಎಂಟೆದೆ ಬೇಕು. ಅಷ್ಟು ಭೀಭತ್ಸವಾಗಿದೆ. ಅಪ್ಪ ಸಾಯೋದು, ಅಮ್ಮ ಸಾಯೋದು, ಒಂಟಿಯಾದ ಹುಡುಗಿ ಅಂತಲೂ ನೋಡದೇ ಮನೆ ಕೆಡವುವುದು.. ಅಬ್ಬಬ್ಬ.. ಇಷ್ಟು ಭಯಾನಕ ತೋರಿಸಬಾರದಿತ್ತು.. ಇದು ಸಿನೆಮಾ ಮುಂದುವರೆಸಲು ಒಂದು ತೊಡಕಾಗಿ ಕಾಣುತ್ತದೆ.. ಅಳು ಬರಲಿ ಅಂತ ಹಾಗೆ ಮಾಡಿರಬಹುದು.. ಆದರೆ ಈ ದೃಶ್ಯ ಕರುಣೆ ಹುಟ್ಟಿಸುವ ಬದಲು ಜಿಗುಪ್ಸೆ ತರಿಸುತ್ತದೆ..
ನಕ್ಸಲ್ ಕಥೆ ತೆಗೆದುಕೊಂಡಾಗಲೇ ನಿರ್ದೇಶಕರಿಗೆ ಗೊತ್ತಾಗಿರುತ್ತದೆ ಕೊನೆಯಲ್ಲಿ ನಾಯಕ ನಾಯಕಿ ಉಳಿಯುವಂತಿಲ್ಲ ಅಂತ. ಇಷ್ಟೆಲ್ಲಾ ಸಿನೆಮಾ ನೋಡಿರುವ ನಾವೂ ಸಹ ಇದನ್ನು ಊಹಿಸಿರುತ್ತೇವೆ. ಅದರಂತೆಯೇ ಕೊನೆಯಲ್ಲಿ ಇಬ್ಬರೂ ಸಾಯುತ್ತಾರೆ. ಆಗ ಒಂದು ಚೂರು ಕನಿಕರ ಎನಿಸುತ್ತದೆ..
ಅದು ಬಿಟ್ಟರೆ ರಕ್ಷಿತ್ ಶೆಟ್ಟಿ ತನ್ನ ಪ್ರಾಜೆಕ್ಟಿಗಾಗಿ ಹಿಮಾಲಯಕ್ಕೆ ಹೋಗುವ ಶೂಟಿಂಗ್ ದುಬಾರಿಯಾಗಿದೆಯೇ ಹೊರತು ಅದರಿಂದ ಅಂತಹ ಉಪಯೋಗವೇನಿಲ್ಲ. ಕೊನೆಯಲ್ಲಿ ಕಾಡಿನೊಳಗೆ ನಕ್ಸಲ್ ಟ್ರಾಕ್ ಹುಡುಕಲು ಅವನ ಪ್ರಾಜೆಕ್ಟ್ ಹೆಲ್ಪ್ ಮಾಡುತ್ತದೆಯಾದ್ದರಿಂದ ಪರವಾಗಿಲ್ಲ ಎನ್ನಬಹುದು. ಆದರೂ ಹಿಮಾಲಯದ ಶೂಟಿಂಗ್ ದುಡ್ಡು ದಂಡ ಎನ್ನಿಸದಿರದು.
ಇತ್ತ ಕಡೆ ಪೊಲೀಸ್ ಸರಿಯೋ ಅಥವಾ ಅತ್ತ ಕಡೆ ನಕ್ಸಲ್ ಸರಿಯೋ ತೀರ್ಮಾನ ಮಾಡಲಾಗದೇ ಮನಸು ಮುದುಡುತ್ತದೆ.. ಒಂದು ಬಾರಿ ಮನಸು ಅತ್ತ ವಾಲಿದರೆ ಮಗದೊಮ್ಮೆ ಇತ್ತ ವಾಲಿಕೊಂಡು ಕನ್ಫ್ಯೂಸ್ ಮಾಡುತ್ತದೆ..
ಇಂತಹಾ ಸಬ್ಜೆಕ್ಟಿನ ಕೊನೆ ಮೊದಲೇ ಗೊತ್ತಾಗುವುದರಿಂದ ಇನ್ನು ಸ್ವಲ್ಪ ಕೇರ್ ಫುಲ್ ಆಗಿ ಕಥೆ ಹೆಣೆಯಬೇಕಿತ್ತು. ರಕ್ಷಿತ್ ಶೆಟ್ಟಿ ನಟನೆ ಕೇಳುವುದೇ ಬೇಡ. ಅಷ್ಟು ಚಂದ.. ಅವರಿಬ್ಬರ ಪ್ರೀತಿ ಮತ್ತಷ್ಟು ಗಟ್ಟಿ ಎಂದು ತೋರಿಸಬೇಕಿತ್ತು..
ಆದರೂ ಸಿನೆಮಾ ಬಹಳ ಹಿಡಿಸಿತು