ಈ ಸಿನೆಮಾದಲ್ಲಿ ಇಬ್ಬರು ನಾಯಕರು.
ರಾಮಪ್ರಸಾದ್ ಮತ್ತು ಲಕ್ಷ್ಮಣ ಪ್ರಸಾದ್ ಎಂಬ ಅಣ್ಣತಮ್ಮಂದಿರು. ರಾಮ-ಲಕ್ಷ್ಮಣ ಎಂದು ಹೆಸರಿಟ್ಟುಕೊಂಡಿರುವ ಇವರು ನಿಜವಾದ ರಾಮ-ಲಕ್ಷ್ಮಣರಂತೆಯೇ ಇದ್ದಾರೆಯೇ? ಅಂತ ಯೋಚಿಸಿದರೆ ತಪ್ಪಾಗುತ್ತದೆ. ಏಕೆಂದರೆ ಈ ಅಣ್ಣತಮ್ಮಂದಿರಿಗೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರುವುದಿಲ್ಲ.
ರಾಮ ಚೆನ್ನಾಗಿ ಓದಿ ಎಸಿಪಿಯಾದರೆ, ಲಕ್ಕಿ ಏನೂ ಓದದೇ ಸುಮ್ಮನೆ ತಿರುಗಾಡಿಕೊಂಡಿರುತ್ತಾನೆ. ಪರಸ್ಪರ ಕಾಲೆಳೆಯುವುದು, ಸದಾ ಜಗಳ ಮಾಡುವುದು ಇವರಿಬ್ಬರ ಹವ್ಯಾಸ. ಎಷ್ಟು ದೊಡ್ಡವರಾದರೂ ಈ ಜಗಳ ನಿಂತಿರುವುದಿಲ್ಲ.
ತಂದೆ-ತಾಯಿಗೆ ಇದೇ ದೊಡ್ಡ ತಲೆನೋವಾಗಿರುತ್ತದೆ.
ಇವರಿಬ್ಬರು ಯಾಕೆ ಉತ್ತರ-ದಕ್ಷಿಣ ಧೃವಗಳಂತಿದ್ದಾರೆ….? ಎಂದಿಗೆ ಇವರು ಸರಿ ಹೋಗಬಹುದು….? ಎಂದಿಗೆ ಇವರು ಒಂದಾಗಬಹುದು…? ಅಂತ ತಾಯಿ ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾಳೆ.
ಸಿನೆಮಾದಲ್ಲಿ ಒಂದು ನೆಗೇಟೀವ್ ಪಾತ್ರ ಸಹ ಇದೆ.
ಅವನು ಸಿನೆಮಾದ ವಿಲನ್ ಮಾಧವ ಶಿವಾರೆಡ್ಡಿ. ದೊಡ್ಡ ರೌಡಿಯಾಗಿದ್ದವನು ರಾಜಕೀಯಕ್ಕಾಗಿ ರೌಡಿಸಂ ಬಿಟ್ಟು ಎಂ.ಎಲ್.ಎ ಟಿಕೆಟ್ಟಿಗಾಗಿ ಜನಸೇವೆ (!) ಮಾಡುತ್ತಿರುತ್ತಾನೆ. ಎಂ.ಎಲ್.ಎ ಆಗಿ ಮಂತ್ರಿಯಾಗಿ ನಂತರ ಮುಖ್ಯಮಂತ್ರಿ ಆಗಬೇಕು ಅನ್ನುವುದು ಅವನ ಕನಸು.
ಎಸಿಪಿ ರಾಮನಿಗೆ ಈ ಮಾಧವ ಶಿವಾರೆಡ್ಡಿಯನ್ನು ಸೆರೆ ಹಿಡಿಯಬೇಕು ಅಂತಾಸೆ.
ಆದರೆ ಈ ವಿಷಯ ಹೇಗೋ ತಿಳಿದ ಶಿವಾರೆಡ್ಡಿ ರಾಮನನ್ನು ಸಾಯಿಸಲು ಜನರನ್ನು ಕಳಿಸುತ್ತಾನೆ. ಆದರೆ ರಾಮ ಅದೃಷ್ಟವಶಾತ್ ಬದುಕುಳಿಯುತ್ತಾನೆ. ನಂತರ ನಾಧವ ಶಿವಾರೆಡ್ಡಿ ತನ್ನೆಲ್ಲಾ ಪ್ರಭಾವ ಬಳಸಿ ರಾಮನ ವ್ಯಕ್ತಿತ್ವ ನಾಶ ಪಡಿಸಿ, ಆತನನ್ನು ಕೆಲಸದಿಂದ ಅಮಾನತ್ತುಗೊಳಿಸಿ, ಆತ ತನ್ನ ಕುಟುಂಬದವರೊಡನೆ ಬೀದಿಗೆ ಬೀಳುವಂತೆ ಮಾಡುತ್ತಾನೆ.
ರಾಮ ಒಬ್ಬ ಪ್ರಾಮಾಣಿಕ ವ್ಯಕ್ತಿಯಾಗಿದ್ದು ನೇರವಾದ ದಾರಿಯಲ್ಲಿ ಶಿವಾರೆಡ್ಡಿಯನ್ನು ಸೆರೆ ಹಿಡಿಯಲಾಗದೇ ವೈಫಲ್ಯ ಅನುಭವಿಸುತ್ತಾನೆ. ಈಗ ಆತನ ಪದವಿ- ಅಧಿಕಾರವೂ ಕೈಬಿಟ್ಟು ಹೋಗಿದ್ದು, ಶಿವಾರೆಡ್ಡಿ ಎಂತಹಾ ವ್ಯಕ್ತಿ ಎಂದು ತಿಳಿದರೂ ಸಹ ಏನೂ ಮಾಡಲಾಗದೇ ಕೈ ಕೈ ಹಿಸುಕಿಕೊಳ್ಳುತ್ತಿರುತ್ತಾನೆ.
ಅಂತಹಾ ಶಿವಾರೆಡ್ಡಿಗೆ ಲಕ್ಕಿ ತನ್ನದೇ ಭಾಷೆಯಲ್ಲಿ ಬುದ್ಧಿ ಕಲಿಸುತ್ತಾನೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅನ್ನುವುದು ಲಕ್ಕಿಯ ನಂಬಿಕೆ. ರಾಮ ನೇರವಾಗಿ ಮಾಡಲಾಗದ್ದನ್ನು, ಲಕ್ಕಿ ಬೇರೆ ದಾರಿಯಿಂದ ಶಿವಾರೆಡ್ಡಿಯನ್ನು ಧೂಳಿಪಟ ಮಾಡುತ್ತಾನೆ.
ಅದ್ಯಾವ ದಾರಿ? ತಿಳಿಯಬೇಕೇ??
ಅದಕ್ಕಾಗಿ ಸಿನೆಮಾ ನೋಡಿಯೇ ಎಂಜಾಯ್ ಮಾಡಬೇಕು. ಹಿನ್ನಲೆ ಸಂಗೀತವಾಗಲಿ ಅಥವಾ ಸ್ಪೆಷಲ್ ಆಫೀಸರ್ ಕಿಲ್ ಬಿಲ್ ಪಾಂಡೆಯಾಗಲೀ ಅದ್ಭುತ ಮನರಂಜನೆ ನೀಡುತ್ತಾರೆ.
ಹೋಗಲಿ… ಕಡೆಗಾದರೂ ಅಣ್ಣ-ತಮ್ಮಂದಿರು ಒಂದಾಗುತ್ತಾರಾ?? ಸಿನೆಮಾ ನೋಡಿ.
Nice review.wish to watch when free.your review makes me to watch movies