( ಮುಂದುವರೆದ ಭಾಗ )
ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಹಿರಿಯ ನಟ ಕೃಷ್ಣ ಅವರ ಜೊತೆ ಜೇಮ್ಸ್ ಬಾಂಡ್ ೭೭೭, ಮೊನಗಾಡು ವಸ್ತಾಡು ಜಾಗೃತ ಮತ್ತು ಹಂತಕುಲು ದೇವಾಂತಕುಲು ಇತ್ಯಾದಿ ಅನೇಕ ಯಶಸ್ವಿ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲದೇ ಈ ಚಿತ್ರಗಳು ಹಿಂದಿ ಭಾಷೆಯಲ್ಲಿ ಡಬ್ ಆಗಿ ಅಲ್ಲೂ ಯಶಸ್ವಿ ಪ್ರದರ್ಶನವನ್ನು ಕಂಡಿದ್ದವು. ನಮ್ಮ ಕರ್ನಾಟಕದ ಕುಳ್ಳ ಎಂದು ಪ್ರಸಿದ್ಧಿ ಪಡೆದಿರುವ ದ್ವಾರಕೀಶ್ ನಾಯಕರನಾಗಿ ನಟಿಸಿದ ಕುಳ್ಳ ಏಜೆಂಟ್ ೦೦೦ ಮತ್ತು ಕೌಬಾಯ್ ಕುಳ್ಳ ಎಂಬ ಯಶಸ್ವಿ ಚಿತ್ರಗಳಿಗೆ ನಾಯಕಿಯಾಗಿ ನಟಿಸಿದ್ದರು.
ಕುಳ್ಳ ಏಜೆಂಟ್ ೦೦೦ ಚಿತ್ರದ ಆಡು ಆಟ ಆಡು ಮತ್ತು ಕೌಬಾಯ್ ಕುಳ್ಳ ಚಿತ್ರದ ಸಿಂಗಾಪುರದಿಂದ ಬಂದ ಗೀತೆಗಳು ಇಂದಿಗೂ ಜನಪ್ರಿಯ ಗೀತೆಗಳಾಗಿವೆ. ಅಲ್ಲದೇ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಿಗೆ ಡಬ್ ಆದ ಈ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆಯನ್ನು ಕಂಡವು. ಅನೇಕ ಚಿತ್ರಗಳಲ್ಲಿ ಖಳರ ಜೋಡಿಯಾಗಿ ಋಣಾತ್ಮಕ ಪಾತ್ರವನ್ನು ನಿರ್ವಹಿಸಿರುವ ಇವರನ್ನು ದಕ್ಷಿಣ ಭಾರತದ ಹೆಲೆನ್ ಎಂದು ಪ್ರಸಿದ್ಧಿ ಪಡೆದಿದ್ದರು. ೧೯೭೦ ರ ದಶಕದ ಕೊನೆಯಾರ್ಧದಲ್ಲಿ ಇವರ ತಂಗಿ ಜಯಮಾಲಿನಿ ಕ್ಯಾಬರೆ ಡ್ಯಾನ್ಸ್ ನಲ್ಲಿ ಯಶಸ್ವಿಯಾದದ್ದರಿಂದ ಅವಕಾಶಗಳು ಸ್ವಲ್ಪ ಮಟ್ಟಿಗೆ ತಗ್ಗಿದ್ದರೂ ಜನಪ್ರಿಯತೆ ಸ್ವಲ್ಪ ವೂ ಕುಂದಲಿಲ್ಲ ಎನ್ನುವುದಕ್ಕೆ ೧೯೮೦ ರಲ್ಲಿ ತೆರೆ ಕಂಡ ಎನ್.ಟಿ.ಆರ್ ಮತ್ತು ಶ್ರೀ ದೇವಿ ನಟಿಸಿದ ಸರ್ದಾರ್ ಪಾಪಾರಾಯುಡು ಚಿತ್ರವೇ ಸಾಕ್ಷಿ. ಕಾರಣ ತೆರೆ ಕಂಡ ನಂತರ ಈ ಚಿತ್ರವು ಗಳಿಕೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸನ್ನು ಪಡೆಯಲಿಲ್ಲ.
ಇದರಿಂದ ಚಿಂತಿತರಾದ ಚಿತ್ರ ನಿರ್ಮಾಪಕ ದಾಸರಿ ನಾರಾಯಣ್ ರಾವ್ ಇವರು ನಟಿಸಿದ್ದ ಜ್ಯೋತಿ ಲಕ್ಷ್ಮಿ ಚೀರ ಕಟ್ಟಿಂದಿ ಎಂಬ ಗೀತೆಯನ್ನು ಸೇರಿಸಿ ಈ ಚಿತ್ರವನ್ನು ಪುನಃ ಬೆಳ್ಳಿ ತೆರೆಯ ಮೇಲೆ ಬಿಡುಗಡೆ ಮಾಡಿದರು. ದ್ವಿತೀಯ ಬಾರಿಗೆ ತೆರೆ ಕಂಡ ಈ ಚಿತ್ರವು ಅನೇಕ ಚಿತ್ರಮಂದಿರಗಳಲ್ಲಿ ೧೦೦ ದಿನಗಳ ಯಶಸ್ವಿ ಪ್ರದರ್ಶನವನ್ನು ಕಾಣುವುದರ ಮೂಲಕ ಇವರ ಜನಪ್ರಿಯತೆ ಇನ್ನೂ ಬೆಳೆಯಿತು. ಇದೇ ಸಮಯದಲ್ಲಿ ಇವರ ಹೆಸರಿನ ಸೀರೆಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಬೇಡಿಕೆ ಮಟ್ಟದಲ್ಲಿ ಮಾರಾಟವಾಗಿದ್ದವು.
ಮದುವೆಯ ನಂತರ ಕೂಡ ತಮ್ಮ ಬೇಡಿಕೆಯನ್ನು ಉಳಿಸಿಕೊಂಡಿದ್ದ ಇವರು ೧೯೮೦ ರ ದಶಕದಲ್ಲಿ ಸಿಲ್ಕ್ ಸ್ಮಿತಾ, ಅನುರಾಧ ಮತ್ತು ಡಿಸ್ಕೋ ಶಾಂತಿ ಇತ್ಯಾದಿ ಹೆಸರಾಂತ ಕ್ಯಾಬರೆ ನರ್ತಕಿಯರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಇವರು ತಮ್ಮ ತಂಗಿ ಜಯಮಾಲಿನಿ ಮತ್ತು ಮಗಳು ಜ್ಯೋತಿ ಮೀನಾ ಜೊತೆ ಅನೇಕ ಚಿತ್ರಗಳಲ್ಲಿ ನೃತ್ಯವನ್ನು ಮಾಡಿದ್ದರಲ್ಲದೆ ೧೯೭೦ ಮತ್ತು ೮೦ ರ ದಶಕದ ನೃತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದ ಯುವಕ, ಯುವತಿಯರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದರು. ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿಯವರ ಸೊಗಸಾದ ನೃತ್ಯಗಳ ಹಿಂದಿನ ಸ್ಪೂರ್ತಿಯು ಇವರೇ ಆಗಿದ್ದರು ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ ಎಂಬುದು ಕೂಡ ಗಮನಾರ್ಹ ಸಂಗತಿಯಾಗಿದೆ.
೨೦೧೫ ರಲ್ಲಿ ಪುರಿ ಜಗನ್ನಾಥ್ ನಿರ್ದೇಶನದ ಜ್ಯೋತಿ ಲಕ್ಷ್ಮಿ ಚಿತ್ರವು ಬಿಡುಗಡೆಗೆ ಮುನ್ನವೇ ಸಂಚಲನವನ್ನು ಸೃಷ್ಟಿಸಿತ್ತು ಎಂದರೆ ಇವರ ಜನಪ್ರಿಯತೆಗೆ ಇದಕ್ಕಿಂತ ಉತ್ತಮ ಉದಾಹರಣೆಯ ಅಗತ್ಯವಿಲ್ಲ ಎನ್ನುವುದು ನನ್ನ ಅಭಿಪ್ರಾಯ ಕೂಡ ಆಗಿದೆ. ತಮ್ಮ ವೃತ್ತಿ ಜೀವನದ ಕೊನೆಯ ಹಂತದಲ್ಲಿ ಇವರು ಹೆಚ್ಚಾಗಿ ಹಾಸ್ಯ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದರು. ಇವರು ತಮ್ಮ ವೃತ್ತಿ ಜೀವನದಲ್ಲಿ ನಟಿಸಿದ ಕೊನೆಯ ಚಿತ್ರ ಮತ್ತು ೨೦೧೫ ರಲ್ಲಿ ತೆರೆ ಕಂಡ ಚಿತ್ರ ತ್ರಿಶಾ ಇಲ್ಲಾನ ನಯನತಾರಾ.
ಐದು ದಶಕಗಳ ಬಣ್ಣದ ಬದುಕಿನಲ್ಲಿ ಆಕರ್ಷಕ ಉಡುಗೆಗಳನ್ನು ತೊಟ್ಟು ನೃತ್ಯಗಳ ಮೂಲಕ ಚಿತ್ರ ರಸಿಕರ ಮನರಂಜಿಸಿದ ಇವರು ತಮ್ಮ ನೇರವಂತಿಕೆ ಮತ್ತು ಪ್ರತಿಭೆಯಿಂದ ಜನಮಾನಸದಲ್ಲಿ ನೆಲೆ ನಿಂತ ಅಪೂರ್ವ ನಟಿ ಕೂಡ. ದಕ್ಷಿಣ ಭಾರತದ ಎಂ.ಜಿ.ಆರ್., ಎನ್.ಟಿ.ಆರ್.,ಎ.ಎನ್.ಆರ್, ಶಿವಾಜಿ ಗಣೇಶನ್,ಪ್ರೇಮ್ ನಜೀರ್, ಕೃಷ್ಣ ಮತ್ತು ಜೈ ಶಂಕರ್ ಮುಂತಾದ ಸ್ಟಾರ್ ನಟರೊಂದಿಗೆ ನೃತ್ಯವನ್ನು ಮಾಡಿದ್ದ ಇವರು ಟಿ.ಆರ್.ರಾಮಣ್ಣ, ಕೆ.ಎಸ್.ಆರ್.ದಾಸ್ ಸೇರಿ ಹಲವಾರು ನಿರ್ದೇಶಕರೊಂದಿಗೆ ಕೆಲಸವನ್ನು ನಿರ್ವಹಿಸಿದ್ದರು.
ಪ್ರಸಿದ್ಧ ಚಲನಚಿತ್ರ ಛಾಯಾಗ್ರಾಹಕರಾದ ಸಾಯಿಪ್ರಸಾದ್ ಅವರನ್ನು ಪ್ರೀತಿಸಿ ವಿವಾಹವಾಗಿ ಸುಖಕರ ಜೀವನವನ್ನು ನಡೆಸಿದ್ದರು. ಇವರ ಏಕೈಕ ಪುತ್ರಿ ಜ್ಯೋತಿ ಮೀನಾ ಕೂಡ ಕೆಲವು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನರ್ತಕಿಯಾಗಿ ನಟಿಸಿದ್ದಾರೆ. ಹಲವು ತಿಂಗಳುಗಳಿಂದ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇವರು ಪಡೆಯುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೆ ಅಗಸ್ಟ್ ೯,೨೦೧೬ ರಂದು ತಮ್ಮ ೬೮ ನೇ ವಯಸ್ಸಿನಲ್ಲಿ ಚೆನೈ ನಲ್ಲಿ ಮರಣ ಹೊಂದಿದರು.