ದಕ್ಷಿಣ ಭಾರತದ ಪಂಚ ಭಾಷೆಯ ಜನಪ್ರಿಯ ನಟಿ ಎಂದೇ ಗುರುತಿಸಿಕೊಂಡಿದ್ದ ನಟಿ ಜ್ಯೋತಿ ಲಕ್ಷ್ಮಿ ತಮ್ಮ ವೃತ್ತಿ ಜೀವನದಲ್ಲಿ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಯ ಹಲವಾರು ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ. ಮುಖ್ಯವಾಗಿ ಹಲವು ಮಹಿಳಾ ಸಾಹಸ ಪ್ರಧಾನ ಚಿತ್ರಗಳಲ್ಲಿ ನಾಯಕಿಯಾಗಿ ವಿಜ್ರಂಭಿಸಿದ್ದ ಇವರನ್ನು ಅಭಿಮಾನಿಗಳು ಮತ್ತು ಚಿತ್ರ ಪ್ರೇಮಿಗಳು ಇಂದಿಗೂ ಲೇಡಿ ಜೇಮ್ಸ್ ಬಾಂಡ್ ಎಂದೇ ನೆನಪಿಸಿಕೊಳ್ಳುತ್ತಿದ್ದಾರೆ.
೧೯೪೮, ನವೆಂಬರ್ ೨, ರಂದು ತಮಿಳು ನಾಡು, ಮದ್ರಾಸ್ ಪ್ರಾಂತ್ಯದ ತಂಜಾವೂರಿನಲ್ಲಿ ಟಿ.ಕೆ.ರಾಮರಾಜನ್ ಮತ್ತು ಶಾಂತವಿ ದಂಪತಿಯ ಮಗಳಾಗಿ ಜನಿಸಿದ್ದ ಇವರ ಮೂಲ ಹೆಸರು ಜ್ಯೋತಿ. ಇವರಿಗೆ ಮೂವರು ಸಹೋದರರು ಮತ್ತು ನಾಲ್ವರು ಸಹೋದರಿಯರಿದ್ದು ತಂದೆ ಟಿ.ಕೆ. ರಾಮರಾಜನ್ ತಮಿಳು ಚಿತ್ರರಂಗ ಕಂಡ ಹೆಸರಾಂತ ನಿರ್ಮಾಪಕರಾಗಿದ್ದರು.
ತಮಿಳಿನ ಜನಪ್ರಿಯ ನಿರ್ಮಾಪಕ, ನಿರ್ದೇಶಕರಾಗಿದ್ದ ಟಿ.ಆರ್.ರಾಮಣ್ಣ ಹಾಗೂ ಅಂದಿನ ಪ್ರಸಿದ್ಧ ಕಲಾವಿದರಾಗಿದ್ದ ಟಿ.ಆರ್.ರಾಜಕುಮಾರಿ ಮತ್ತು ಇ.ವಿ.ಸರೋಜ ಇವರ ಹತ್ತಿರದ ಸಂಬಂಧಿ ಕೂಡ ಆಗಿರುವರು. ಮನೆಯಲ್ಲಿ ಚಿತ್ರರಂಗದ ವಾತಾವರಣವಿದ್ದು ದ್ದರಿಂದ ಸಹಜವಾಗಿ ಬಣ್ಣದ ಬದುಕಿಗೆ ಆಕರ್ಷಿತರಾಗಿದ್ದ ಇವರು ತಮ್ಮ ಐದನೇಯ ವಯಸ್ಸಿನಲ್ಲಿ ೧೯೫೪ ರಲ್ಲಿ ತೆರೆ ಕಂಡ ಟಿ.ಆರ್.ರಾಮಣ್ಣ ನಿರ್ದೇಶನದಲ್ಲಿ ನಟ ಎಂ.ಜಿ.ಆರ್ ಮತ್ತು ನಟ ಶಿವಾಜಿ ಗಣೇಶನ್ ನಟಿಸಿದ್ದ ಕೊಂಡುಕ್ಕಿಳ್ಳಿ ಎಂಬ ತಮಿಳು ಚಿತ್ರದ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಬಾಲನಟಿಯಾಗಿ ತಮಿಳು ಚಿತ್ರರಂಗವನ್ನು ಪ್ರವೇಶಿಸಿದರು. ತಮ್ಮ ಚಿಕ್ಕ ವಯಸ್ಸಿನಲ್ಲೇ ಭರತನಾಟ್ಯವನ್ನು ಕಲಿತಿದ್ದು ಇವರು ಬಾಲನಟಿಯಾಗಿ ಕೆಲವೇ ಚಿತ್ರಗಳಲ್ಲಿ ನಟಿಸಿದ್ದರು.
ಸುಮಾರು ಒಂಬತ್ತು ವರ್ಷಗಳ ನಂತರ ತಮ್ಮ ೧೫ ನೇ ವಯಸ್ಸಿನಲ್ಲಿ ೧೯೬೩ ರಲ್ಲಿ ತೆರೆ ಕಂಡ ಟಿ.ಆರ್.ರಾಮಣ್ಣ ನಿರ್ದೇಶನದ ಅಂದಿನ ಪ್ರಸಿದ್ಧ ಹಾಸ್ಯ ನಟ ನಾಗೇಶ್ ಜೊತೆ ಪೆರಿಯ ಇಡತು ಪೆಗ್ ಚಿತ್ರದಲ್ಲಿ ನಟಿಸುವುದರ ಮೂಲಕ ಮೊದಲ ಚಿತ್ರದಲ್ಲಿ ಜನಪ್ರಿಯತೆಯನ್ನು ಪಡೆದಿದ್ದ ಇವರು ನಂತರ ತಮಿಳು ಚಿತ್ರರಂಗದಲ್ಲಿ ಬಹಳ ಬೇಡಿಕೆಯ ನಟಿಯರಾಗಿದ್ದರು. ಈ ಚಿತ್ರದಲ್ಲಿನ ಇವರ ನಟನೆಯನ್ನು ಅಂದಿನ ಹೆಸರಾಂತ ನಟ ಎಂ.ಜಿ.ಆರ್ ಕೂಡ ಮೆಚ್ಚಿದ್ದರು. ಭಗವಂತನು ಮನುಷ್ಯನ ಬದುಕನ್ನು ಯಾವ ಸಮಯದಲ್ಲಿ ಬದಲಿಸುತ್ತಾನೆ ಎನ್ನುವುದಕ್ಕೆ ಈ ನಟಿ ಪ್ರತ್ಯಕ್ಷ ಉದಾಹರಣೆ ಎಂದು ಹೇಳಲು ಅಡ್ಡಿಯಿಲ್ಲ. ಏಕೆಂದರೆ ಇದೇ ಸಮಯದಲ್ಲಿ ನಟ ಎಂ.ಜಿ.ಆರ್. ಮಲೆಯಾಳಂ ಭಾಷೆಯಲ್ಲಿ ನಟಿಸಲಿರುವ ಹೊಸ ಚಿತ್ರದ ಕುರಿತು ಘೋಷಣೆ ಮಾಡಿದ್ದರು. ಮತ್ತು ಕಲಾವಿದರ ಆಯ್ಕೆಯು ಆಗಿದ್ದರೂ ಮುಖ್ಯವಾಗಿ ನಾಯಕಿಯ ಆಯ್ಕೆಯಾಗಿರಲಿಲ್ಲ.
ಈ ನಾಯಕಿಯ ಪಾತ್ರಕ್ಕೆ ಸೂಕ್ತ ಪ್ರತಿಭೆಯ ಹುಡುಕಾಟದಲ್ಲಿದ್ದ ಮಲೆಯಾಳಂ ಚಿತ್ರರಂಗದ ಅಂದಿನ ಪ್ರಸಿದ್ಧ ನಿರ್ದೇಶಕ ಎಂ.ವಿನ್ಸೆಂಟ್ ನಟ ಎಂ.ಜಿ.ಆರ್ ಮೂಲಕ ಈ ನಟಿಯ ಕುರಿತು ತಿಳಿದುಕೊಂಡು ತಮ್ಮ ಹೊಸ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದರು. ಕೇವಲ ಒಂದು ಚಿತ್ರದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದ್ದ ಇವರು ೧೯೬೫ ರಲ್ಲಿ ತೆರೆ ಕಂಡ ನಟ ಮುರಪ್ಪಣ್ಣು ಎಂಬ ಕಾದಂಬರಿ ಆಧಾರಿತ ಮಲೆಯಾಳಿ ಚಿತ್ರದಲ್ಲಿ ನಟಿಸುವ ಮೂಲಕ ಮಲೆಯಾಳಂ ಚಿತ್ರರಂಗವನ್ನು ಪ್ರವೇಶಿಸಿದ್ದರು. ತಮ್ಮ ಮೊದಲ ಚಿತ್ರದಲ್ಲಿ ಆತ್ಮೀಯ ಗೆಳತಿಗಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡುವ ಪಾತ್ರದಲ್ಲಿ ನೀಡಿದ ಅಮೋಘ ಅಭಿನಯದ ಪರಿಣಾಮ ಗಲ್ಲಾಪೆಟ್ಟಿಗೆಯಲ್ಲಿ ಅದ್ಭುತ ಗಳಿಕೆ, ಯಶಸ್ಸನ್ನು ಕಂಡಿತ್ತಲ್ಲದೆ ಚಿತ್ರ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿತ್ತು. ಮತ್ತು ೧೯೬೫ ರ ಸಾಲಿನ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಈ ಚಿತ್ರವು ಪಡೆದಿತ್ತು.
೧೯೬೭ ರಲ್ಲಿ ತೆರೆ ಕಂಡ ಐತಿಹಾಸಿಕ ಹಿನ್ನೆಲೆಯ ಕಥೆಯನ್ನು ಹೊಂದಿದ್ದ ಕುಂಜಲಿ ಮರಕ್ಕರ್ ಚಿತ್ರದಲ್ಲಿ ಮೋಹಕ ಪಾತ್ರದಲ್ಲಿ ನಟಿಸಿದ್ದ ಇವರು ಅದೇ ವರ್ಷ ತೆರೆ ಕಂಡ ಜ್ಞಾನ ಪೀಠ ಪ್ರಶಸ್ತಿ ವಿಜೇತ ಶ್ರೇಷ್ಠ ಮಲೆಯಾಳಂ ಸಾಹಿತಿ ಎಂ.ಟಿ.ವಾಸುದೇವನ್ ನಾಯರ್ ಅವರ ಕಥೆಯನ್ನು ಆಧರಿಸಿದ್ದ ನಗರಮೆ ನಂದಿ ಚಿತ್ರದಲ್ಲಿ ನಾಯಕನ ತಂಗಿಯ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ಇವರ ಆಟ ಕೇವಲ ತಮಿಳು, ಮಲೆಯಾಳಂ ಚಿತ್ರರಂಗಕ್ಕೆ ಸೀಮಿತವಾಗಿರಲಿಲ್ಲ. ಕ್ರಮೇಣ ತೆಲುಗು, ಹಿಂದಿ ಮತ್ತು ಕನ್ನಡ ಚಿತ್ರರಂಗಕ್ಕೂ ವ್ಯಾಪಿಸಿತು.
೧೯೬೭ ರಲ್ಲಿ ತೆರೆ ಕಂಡ ನಟ ಹರಿನಾಥ್ ಜೊತೆ ಪೆದ್ದಕ್ಕಯ್ಯ ಚಿತ್ರದಲ್ಲಿ ನೃತ್ಯದಲ್ಲಿ ನಟಿಸುವುದರ ಮೂಲಕ ತೆಲುಗು ಚಿತ್ರರಂಗವನ್ನು ಪ್ರವೇಶಿಸಿದರು. ಅದೇ ವರ್ಷ ತೆರೆ ಕಂಡ ಪುಣ್ಯವತಿ ಎಂಬ ಸಾಂಸಾರಿಕ ಪ್ರಧಾನ ಚಿತ್ರದಲ್ಲಿ ಶ್ರೀಮಂತ ಮುಗ್ಧ ಹುಡುಗಿಯ ಪಾತ್ರದಲ್ಲಿ ಗಮನಾರ್ಹ ನಟನೆಯನ್ನು ಮಾಡಿದ್ದರು. ತೆರೆ ಕಂಡ ನಂತರ ಅಭೂತಪೂರ್ವ ಯಶಸ್ಸನ್ನು ಪಡೆದ ಈ ಚಿತ್ರವನ್ನು ಪೂವಮ್ಮ ಪೊಟ್ಟಮ್ಮ ಹೆಸರಿನಲ್ಲಿ ರಿಮೇಕ್ ಮಾಡಲಾಗಿತ್ತು. ಈ ರಿಮೇಕ್ ಚಿತ್ರದಲ್ಲಿ ಕೂಡ ಇವರೇ ಪಾತ್ರವನ್ನು ನಿರ್ವಹಿಸಿದ್ದರು.
ಮುಂದುವರಿಯುವುದು