“ವಿಜೇತ” (ತೆಲುಗು)

ಈವರೆಗೂ ಸಿನೆಮಾ ಎಂದರೆ ಕೇವಲ ಪ್ರೀತಿ-ಪ್ರೇಮದ ಕುರಿತಾದದ್ದು ಅಂತ ಅಂದುಕೊಳ್ಳುತ್ತಿದ್ದೆವು. ಆದರೆ ಬದಲಾಗುತ್ತಿರುವ ಜಗತ್ತಿನ ಜೊತೆ ಸಿನೆಮಾ ರಂಗವೂ ಬದಲಾಗುತ್ತಿದೆ. ಈಗ ಪರಿಚಯಿಸುತ್ತಿರುವ ತೆಲುಗು ಸಿನೆಮಾ ತಂದೆ-ಮಗನ ಬಾಂಧವ್ಯದ ಬಗ್ಗೆ ಹೇಳುತ್ತದೆ. ಸಿನೆಮಾ ಮುಗಿಯುವಷ್ಟರಲ್ಲಿ ಕಣ್ಣಿನಿಂದ ಆನಂದ ಭಾಷ್ಪ ಉದುರದಿದ್ದರೆ ನೋಡಿ…

ನಾನು ಸಿನೆಮಾ ನೋಡಿದ್ದು ಹಿಂದಿಯಲ್ಲಿ.

ಶ್ರೀನಿವಾಸ ರಾವ್ ಎಂಬಾತನಿಗೆ ಚಿಕ್ಕಂದಿನಿಂದಲೂ ಫೋಟೋಗ್ರಫಿ ಹುಚ್ಚು. ಬಹಳ ಆಸಕ್ತಿಯಿಂದ ಫೋಟೋ ತೆಗೆದು ವಿವಿಧ ಪತ್ರಿಕೆಗಳಿಗೆ ಕಳಿಸುತ್ತಿರುತ್ತಾನೆ. ಅವನು ತೆಗೆದ ಫೋಟೋಗಳನ್ನು ಮೆಚ್ಚುವ National Geographic ಮ್ಯಾಗಜೀನ್ ನವರು ಆತನನ್ನು ದೆಹಲಿಗೆ ಬರಲು ಹೇಳುತ್ತಾರೆ. ಅವನೂ ಸಂತಸದಿಂದಲೇ ಹೊರಡಲು ತಯಾರಾಗುತ್ತಾನೆ.

ಆದರೆ ಅಷ್ಟರಲ್ಲೇ ನಡೆಯುವ ಪುಟ್ಟ ಅಪಘಾತದಲ್ಲಿ ಆತನ ಮಗನಿಗೆ ಗಂಭೀರ ಗಾಯವಾಗುತ್ತದೆ. ಆಪರೇಷನ್ನಿಗೆ ಲಕ್ಷಾಂತರ ಖರ್ಚಾಗುತ್ತದೆ. ಅದಕ್ಕಾಗಿ ಶ್ರೀನಿವಾಸ್ ರಾವ್ ತನ್ನ ಹವ್ಯಾಸವನ್ನು ಮೊಟಕುಗೊಳಿಸಿ ಕುಟುಂಬದವರ ಪಾಲನೆಗಾಗಿ ಆ ಊರಿನಲ್ಲಿಯೇ ಒಂದು ಕೆಲಸ ಹಿಡಿಯುತ್ತಾನೆ. ಅವನ ಪೂರ್ತಿ ಜೀವನ ತನ್ನ ಹೆಂಡತಿ ಮಕ್ಕಳಿಗಾಗಿ ಮುಡಿಪಾಗಿಡುತ್ತಾನೆ.

ಅದರಲ್ಲಿಯೂ ತನ್ನ ಮಗನಾದ ರಾಮನಿಗಾಗಿ ಆತ ಬಹಳ ತ್ಯಾಗಗಳನ್ನು ಮಾಡುತ್ತಾನೆ. ಚಿಕ್ಕಂದಿನಿಂದ ಮಗ ಆಸೆ ಪಟ್ಟ ಎಲ್ಲವನ್ನೂ ಕೊಡಿಸುತ್ತಾನೆ. ಆವರೇಜ್ ಸ್ಟೂಡೆಂಟ್ ಆದ ರಾಮ್ ಇಂಜಿನಿಯರಿಂಗ್ ಓದಬೇಕೆಂದಾಗ ಡಬಲ್ ಶಿಫ್ಟಿನಲ್ಲಿ ಕೆಲಸ ಮಾಡಿ ಮಗನನ್ನು ದೊಡ್ಡ ಕಾಲೇಜಿನಲ್ಲಿ ಓದಿಸುತ್ತಾನೆ. ಆದರೆ ಮಗನಿಗೆ ತಂದೆಯ ತ್ಯಾಗ ಅರ್ಥವಾಗದೇ ಮೋಜು-ಮಸ್ತಿಯಲ್ಲಿ ಕಾಲ ಕಳೆಯುತ್ತಿರುತ್ತಾನೆ. ಇಂಟರ್ ವ್ಯೂಗಳಿಗೆ ಹಾಜರಾದರೂ ಅವನು ತೆಗೆದ ನಂಬರುಗಳಿಗೆ ಕೆಲಸ ಸಿಗದೇ ವಾಪಸ್ಸಾಗುತ್ತಿರುತ್ತಾನೆ.

ಹೀಗಿರುವಾಗ ಒಮ್ಮೆ ಅವರ ಮನೆ ಎದುರು ಹೊಸ ಕುಟುಂಬವೊಂದು ವಾಸಕ್ಕೆಂದು ಬರುತ್ತದೆ. ಆ ಮನೆಯ ಆಂಟಿಗೆ ಬುಲೆಟ್ ಓಡಿಸುವುದು ಬಾಲ್ಯದ ಕನಸು ಅಂತ ರಾಮನಿಗೆ ಒಮ್ಮೆ ಗೊತ್ತಾಗುತ್ತದೆ. ಕೂಡಲೇ ಒಂದು ಬುಲೆಟ್ ತಂದು ಆಂಟಿಗೆ ಓಡಿಸುವುದನ್ನು ಕಲಿಸುತ್ತಾನೆ. ಆಗ ಆಂಟಿ ಪಡುವ ಖುಷಿ ನೋಡಿ ಎಲ್ಲರಿಗೂ ಇದೇ ರೀತಿ ಸರಪ್ರೈಸ್ ಕೊಟ್ಟರೆ ಎಷ್ಟು ಖುಷಿ ಪಡ್ತಾರೆ ಅಲ್ವಾ ಅಂತನಿಸಿ ಅದಕ್ಕಾಗಿ ಒಂದು ಕಂಪನಿ ಓಪನ್ ಮಾಡುತ್ತಾನೆ. ಆದರೆ ಆ ಹೊಸ ವ್ಯವಹಾರದಿಂದ ಕೈ ಸುಟ್ಟುಕೊಳ್ಳುವುದಲ್ಲದೇ ಒಂದು ಸಲವಂತೂ ಪೊಲೀಸ್ ಕೇಸ್ ಸಹ ಆಗಿ ಬಿಡುತ್ತದೆ. ಶ್ರೀನಿವಾಸ ರಾವ್ ದೂಸರಾ ಮಾತನಾಡದೇ ಮಗನನ್ನು ಠಾಣೆಯಿಂದ ಬಿಡಿಸಿ ತರುತ್ತಾನೆ.

ಮನೆಯಲ್ಲಿ ಶ್ರೀನಿವಾಸ ರಾವ್ ಮಗಳು ಅಂದರೆ ರಾಮನ ತಂಗಿಗೆ ಗಂಡು ನೋಡಲು ಶುರು ಮಾಡುತ್ತಾರೆ. ಆದರೆ ಬಂದ ಸಂಬಂಧಗಳೆಲ್ಲವೂ ವರದಕ್ಷಿಣೆ, ವರೋಪಚಾರ ಎಂಬ ವಿಪರೀತ ಡಿಮಾಂಡ್ ಹೊತ್ತು ತರುತ್ತಿರುತ್ತವೆ. ಈ ಜನ್ಮದಲ್ಲಿ ಮಗಳ ಮದುವೆ ಮಾಡೋಲ್ಲವೇನೋ ಎಂಬ ಆತಂಕದಲ್ಲಿರುವಾಗ ಒಮ್ಮೆ ಸಿಟಿಯೊಳಗೆ ನಡೆಯುವ ಜಗಳದಲ್ಲಿ ಶ್ರೀನಿವಾಸ ರಾವ್ ಹಾರ್ಟ್ ಅಟ್ಯಾಕಿಗೆ ಒಳಪಡುತ್ತಾನೆ. ಆಗ ರಾಮ್ ತನ್ನ ತಂದೆಯನ್ನು ಮಗುವಿನ ಹಾಗೆ ಜೋಪಾನವಾಗಿ ಆಸ್ಪತ್ರೆಗೆ ಕರೆದೊಯ್ಯುವಾಗ ತಂದೆ ತನಗಾಗಿ ಮಾಡಿದ ತ್ಯಾಗವೆಲ್ಲ ಆತನ ಕಣ್ಮುಂದೆ ಬರುತ್ತದೆ.‌ ಅವರು ತನಗಾಗಿ ಜೀವವನ್ನೇ ಸವೆಸಿದರೂ ತಾನವರಿಗೆ ಯಾವ ರೀತಿಯಲ್ಲಿಯೂ ಸಹಾಯಕವಾಗಿಲ್ಲ ಅಂತ ನೆನೆದು ಅವನಿಗೆ ತನ್ನ ಬಗ್ಗೆ ನಾಚಿಕೆ ಎನಿಸುತ್ತದೆ. ಇನ್ನು ಮುಂದೆ ಕುಟುಂಬದ ಜವಾಬ್ದಾರಿ ತಾನು ಎತ್ತಿಕೊಳ್ಳಬೇಕು ಅಂತ ತೀರ್ಮಾನ ಮಾಡುತ್ತಾನೆ.

ಆದರೆ ಅವನು ಕೈ ಹಾಕಿದ ವ್ಯವಹಾರ ಅವನ ಕೈ ಹಿಡಿಯದೇ ಇದ್ದುದರಿಂದ ಮುಂದೇನು ಮಾಡಬೇಕೆಂದು ಅರ್ಥ ಆಗದೇ ಕುಳಿತಿರುತ್ತಾನೆ. ಆಗ ಎದುರುಮನೆಯ ಆಂಟಿಯ ಮಗಳು ತನ್ನ ಆಫೀಸಿನ ಮಾಲೀಕರ ಬರ್ತಡೇ ಪಾರ್ಟಿಯ ಆರ್ಡರ್ ಕೊಡಿಸುತ್ತೇನೆಂದು ಕರೆದೊಯ್ಯುತ್ತಾಳೆ. ಆ ಇವೆಂಟ್ ಅನ್ನು ಚೆನ್ನಾಗಿ ನಿರ್ವಹಿಸಿದರೆ ಮುಂದೆ ಕಂಪನಿಯ ಎಲ್ಲ ಇವೆಂಟ್ ತಮಗೇ ಸಿಗುತ್ತದೆ ಎನ್ನುವ ಖುಷಿಯಲ್ಲಿ ಅಲ್ಲಿಗೆ ಹೋದರೆ ಅವರ ಕುಟುಂಬದಲ್ಲಿ ಆಸ್ತಿ ವಿವಾದದಿಂದ ಮನೆಯೇ ಒಡೆದು ಹೋಳಾಗುವ ಪರಿಸ್ಥಿತಿಯಲ್ಲಿರುತ್ತದೆ. ಮಾಲೀಕರ ಎರಡನೆಯ ಮಗ ಆಸ್ತಿಯಲ್ಲಿ ಪಾಲು ಕೇಳುತ್ತಿರುತ್ತಾನೆ. ನೊಂದ ಮಾಲೀಕರು ಇವರ ಬಳಿ ಪಾರ್ಟಿ ಬೇಡ ಎಂದು ಕ್ಯಾನ್ಸಲ್ ಮಾಡಿಬಿಡುತ್ತಾರೆ.

ಆದರೆ ರಾಮ್ ಆ ವಿಷಯವನ್ನು ಅಲ್ಲಿಗೇ ಬಿಡದೇ ಎರಡನೆಯ ಮಗನಿಗೆ ಆಸ್ತಿಗಿಂತಲೂ ಮನೆಯವರ ಪ್ರೀತಿ ಮುಖ್ಯ ಅಂತ ಮನವರಿಕೆ ಮಾಡಿಸಿ ಆ ಒಡೆದ ಕುಟುಂಬವನ್ನು ಒಂದು ಮಾಡುತ್ತಾನೆ. ಮುಂದೆ ಆ ಕಂಪನಿಯ‌ ಎಲ್ಲಾ ಇವೆಂಟ್ ಇವನಿಗೇ ಸಿಗಲಾರಂಭಿಸುತ್ತದೆ. ಅಲ್ಲದೇ ಇವನ ತಂಗಿಯನ್ನೂ ಆ ಮಾಲೀಕರು ತಮ್ಮ ಸೊಸೆಯನ್ನಾಗಿಸಿಕೊಳ್ಳುತ್ತಾರೆ. ಯಾವುದೇ ವರದಕ್ಷಿಣೆ, ವರೋಪಚಾರ ಇಲ್ಲದೇ ಮಗಳ ಮದುವೆ ನಡೆದುದ್ದಕ್ಕೆ ಶ್ರೀನಿವಾಸ ರಾವ್ ಚಕಿತನಾಗುತ್ತಾನೆ.

ನಂತರ ರಾಮ್ ದೃಷ್ಟಿ ತಂದೆಯ ಮೇಲೆ ಹರಿಯುತ್ತದೆ. ತಂದೆಗೆ ತಾವು ಕಳೆದುಕೊಂಡ ಜೀವನವನ್ನು ಮರಳಿ ಕೊಡಬೇಕು ಅಂತ ಅಂದುಕೊಂಡು ಅವರಿಗಾಗಿ ಒಂದು ಕ್ಯಾಮೆರಾ ಗಿಫ್ಟ್ ಮಾಡುತ್ತಾನೆ. ಶ್ರೀನಿವಾಸ ರಾವ್ ಚಿಕ್ಕಂದಿನಲ್ಲಿ ಮನೆಯವರಿಗಾಗಿ ಹೂತಿಟ್ಟ ಆಸೆಯನ್ನು ಈ ಇಳಿ ವಯಸ್ಸಿನಲ್ಲಿ ಪೂರ್ತಿ ಮಾಡಿಕೊಳ್ಳಲು ಶುರು ಮಾಡುತ್ತಾನೆ. ಅವನು ತೆಗೆದ ಒಂದು ಫೋಟೋಗೆ ರಾಷ್ಟ್ರಮಟ್ಟದ ಪ್ರಶಸ್ತಿಯೂ ಬರುತ್ತದೆ. ಉಡಾಳನಾಗಿದ್ದ ರಾಮ್ ಸರಿದಾರಿಯಲ್ಲಿ ನಡೆದು ಇಡೀ ಕುಟುಂಬವನ್ನು ದಡ ಸೇರಿಸಿ ಅವರ ಮುಖದಲ್ಲಿ ನಗು ಮೂಡಿಸುತ್ತಾನೆ.

ಈ ಸಿನೆಮಾದಲ್ಲಿ ಮುಚ್ಚಿಟ್ಟು, ಮುಂದೇನಾಯಿತು ಅಂತ ಕುತೂಹಲ ಮೂಡಿಸುವ ಅಂಶ ಯಾವುದೂ ಇಲ್ಲ. ಏಕೆಂದರೆ ಸಿನೆಮಾ ಶುರುವಾಗುವುದೇ ಶ್ರೀನಿವಾಸ ರಾವ್ ಗೆ ನ್ಯಾಷನಲ್ ಅವಾರ್ಡ್ ಸಿಗುವ ಮೂಲಕ. ಇಡೀ ಸಿನೆಮಾ ಒಬ್ಬ ಬಡಪಾಯಿ ತಂದೆಯ ಜರ್ನಿಯಷ್ಟೇ. ಆ ಜರ್ನಿ ನಮ್ಮ ನಿಮ್ಮೆಲ್ಲರ ಮನೆಯಲ್ಲಿಯೂ ನಡೆಯುತ್ತಲಿರಬಹುದು. ತಂದೆ-ತಾಯಿಯರು ತಮಗಾಗಿ ಮಾಡಿರುವ ತ್ಯಾಗವನ್ನು ಮಕ್ಕಳು ಅರ್ಥ ಮಾಡಿಕೊಂಡು, ಅವರುಗಳಿಗೂ ತಮ್ಮ ಆಸೆ-ಕನಸುಗಳನ್ನು ಈಡೇರಿಸಿಕೊಳ್ಳುವ ಅವಕಾಶ ನೀಡಿದರೆ ಎಲ್ಲರ ಬದುಕು ಸಹ ಚೆನ್ನಾಗಿರುತ್ತದೆ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply