“ವಿಲನ್” (ಮಲಯಾಳಂ)

ನಾ ನೋಡಿದ ಮೊಟ್ಟಮೊದಲ ಮಲಯಾಳಿ ಸಿನೆಮಾ ಇದು. ಹಾಗಾಗಿ ನೇಟಿವಿಟಿ ಅರ್ಥವಾಗಲು ತುಸು ಹೊತ್ತು ಹಿಡಿಯಿತು. ನಂತರ ನಿಧಾನವಾಗಿ ಒಂದೊಂದೇ ಸತ್ಯವನ್ನು ತೆರೆದುಕೊಳ್ಳುತ್ತಾ ಸಾಗುವ ಕಥೆ ಆಪ್ತ ಎನ್ನಿಸಲು ಶುರುವಾಯಿತು. 


ಪ್ರೀತಿ ದೊಡ್ಡದೋ? ದ್ವೇಷ ದೊಡ್ಡದೋ? ಎಂಬ ಪ್ರಶ್ನೆಗಳನ್ನು ನಮ್ಮೊಳಗೆ ಹುಟ್ಟುಹಾಕುತ್ತಾ ಸಾಗುವ ಚಿತ್ರ ಇದು.

ತನ್ನ ಕುಟುಂಬವನ್ನು ಇನ್ನಿಲ್ಲದಂತೆ ಪ್ರೀತಿಸುವ ನಾಯಕ.. ಅವನ ಎದುರಿನಲ್ಲಿ ಸಮಾಜವನ್ನು ಇನ್ನಿಲ್ಲದಂತೆ ದ್ವೇಷಿಸುವ ಪ್ರತಿನಾಯಕ…. ಇವರಿಬ್ಬರ ನಡುವೆ ನಡೆಯುವ ಸಂಘರ್ಷದೊಳಗೆ ಪ್ರೇಕ್ಷಕ ಮೂಕವಾಗುತ್ತಾನೆ. 

ಏಕೆಂದರೆ ನಾಯಕನೇ ಹೇಳುವ ಹಾಗೆ ಪ್ರತೀ ನಾಯಕನಲ್ಲಿಯೂ ಒಬ್ಬ ವಿಲನ್ ಇರುತ್ತಾನೆ ಮತ್ತು ಪ್ರತೀ ವಿಲನ್ ನಲ್ಲಿಯೂ ಒಬ್ಬ ನಾಯಕ ಇರುತ್ತಾನೆ. ಅಪರಾಧಿಗಳು ಅಪರಾಧ ಎಸಗಿಯೂ ಕಾನೂನಿನಿಂದ ತಪ್ಪಿಸಿಕೊಂಡು ಸಮಾಜದಲ್ಲಿ ರಾಜಾರೋಷವಾಗಿ ಇರುತ್ತಾರೆ. ಇದು ಈಗಿನ ವಿಪರ್ಯಾಸ. ಇಂಥವರಿಗೆ ಸರಿಯಾದ ಶಿಕ್ಷೆ ಕೊಡುವುದು ತಪ್ಪು ಅಂತ ಹೇಳಲು ನಮ್ಮಿಂದ ಆಗುವುದೇ ಇಲ್ಲ. ಬದಲಿಗೆ ಅವರಿಗೆ ಸರಿಯಾದ ಶಿಕ್ಷೆ ಆಯ್ತು ಅಂತ ಮನಸ್ಸಿಗೆ ನೆಮ್ಮದಿ ಎನಿಸುತ್ತದೆ. ಹಾಗಾಗಿ ವಿಲನ್ ಅವರುಗಳಿಗೆ ಶಿಕ್ಷೆ ಕೊಟ್ಟಾಗ ನಮ್ಮ ಹೃದಯ ತಂಪಾಗುತ್ತದೆ.

ಎಲ್ಲಾ ಭಾಷೆಗಳಲ್ಲಿಯೂ ಸಮಾಜದ್ರೋಹಿಗಳಿಗೆ ನಾಯಕ ಪಾಠ ಕಲಿಸುವ ಅದೆಷ್ಟೋ ಸಿನೆಮಾಗಳು ಬಂದಿವೆ. ಇವುಗಳಲ್ಲಿ ಹೀರೋ ಈ ಕೆಲಸ ಮಾಡುತ್ತಾನೆ. ಹಾಗಾಗಿ ಇದು ಸರಿಯಾದ ದಾರಿ ಅಂತ ಅನಿಸುತ್ತದೆ. ಆದರೆ “ವಿಲನ್” ಸಿನೆಮಾದಲ್ಲಿ ವಿದ್ರೋಹಿಗಳಿಗೆ ಶಿಕ್ಷೆ ಕೊಡುವವನನ್ನು ಪ್ರತಿನಾಯಕನ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಹಾಗಾಗಿ ಈ ಕೆಲಸ ತಪ್ಪು ಅಂತ ನಮಗೆ ಮನವರಿಕೆ ಮಾಡಬೇಕಾದ ಅವಶ್ಯಕತೆ ಎಂದಿಗಿಂತಲೂ ಹೆಚ್ಚಿದೆ. 
ತನ್ನ ಕುಟುಂಬವನ್ನು ಸರ್ವನಾಶ ಮಾಡಿದವನು ಯಾರು ಅಂತ ಗೊತ್ತಾದ ಮೇಲೆಯೂ ನಾಯಕ ಅವನ ವಿರುದ್ಧ ಸೇಡು ತೀರಿಸಿಕೊಳ್ಳುವುದಿಲ್ಲ.

ಬದಲಾಗಿ ಅಪಘಾತದ ನಂತರ ಕ್ಷಣಕ್ಷಣವೂ ನೋವು ತಿನ್ನುತ್ತಿರುವ, ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಹೆಂಡತಿ್ಗೆಗೆ ದಯಾಮರಣ ನೀಡುತ್ತಾನೆ. “ಸಾವು” ಎಂಬುದು ಜೀವನದ ಕೊನೆಯಲ್ಲ, ಪ್ರೀತಿಯ ಕಡೆಯ ನಿಲ್ದಾಣವೇ ಸಾವು ಎಂದು ನಾಯಕ ಒಮ್ಮೆ ಹೇಳುತ್ತಾನೆ. ಇದರ ಅರ್ಥ ಪ್ರೀತಿಸುವವರನ್ನು ಸಾಯಿಸಿದ ಮಾತ್ರಕ್ಕೆ ಪ್ರೀತಿ ಸಾಯುವುದಿಲ್ಲ. ಹಾಗೆಯೇ ದ್ವೇಷಿಸುವವರನ್ನು ಸಾಯಿಸಿದ ಮಾತ್ರಕ್ಕೆ ದ್ವೇಷ ಹೊರಟು ಹೋಗುವುದಿಲ್ಲ. ಕೊನೆಗೆ ಆ ದ್ವೇಷ ನಮ್ಮನ್ನೇ ಬಲಿ‌ ಪಡೆಯುತ್ತದೆ. 

ಕೊನೆಯಲ್ಲಿ ನೀನೂ ಕೊಲೆ ಮಾಡಿದೆ, ನಾನೂ ಕೊಲೆ ಮಾಡಿದೆ, ಹಾಗಾಗಿ ನಾವಿಬ್ಬರೂ ಒಂದೇ ರೀತಿ ಅಂತ ವಿಲನ್ ಸಮಝಾಯಿಷಿ ಕೊಡಲು ನೋಡುತ್ತಾನೆ. ಆದರೆ ನೀನು ದ್ವೇಷಕ್ಕಾಗಿ ಕೊಲೆ ಮಾಡಿದೆ, ತಾನು ಪ್ರೀತಿಗಾಗಿ ಕೊಲೆ ಮಾಡಿದೆ, ಹಾಗಾಗಿ ನಾವಿಬ್ಬರು ಒಂದೇ ಅಲ್ಲ ಎನ್ನುತ್ತಾನೆ ನಾಯಕ. ಕೈಯಲ್ಲಿ ಪಿಸ್ತೂಲ್ ಇದ್ದರೂ, ಸಾಯಿಸುವ ಎಲ್ಲಾ ಅವಕಾಶವಿದ್ದರೂ ಸಂಯಮದಿಂದ ವರ್ತಿಸಿ ಎಲ್ಲರನ್ನೂ ಪೊಲೀಸ್ ಸುಪರ್ದಿಗೆ ಒಪ್ಪಿಸುತ್ತಾನೆ. ಏಕೆಂದರೆ ಸಾಯಿಸುವುದು ಚಟ ಆಗಬಾರದು ಎನ್ನುವುದು ಅವನ ನಿಲುವು. ಅವರು ತನ್ನ ಹೆಂಡತಿ ಮಕ್ಕಳನ್ನು ಕೊಂದವರಾದರೂ ಸರಿ ಅಥವಾ ಬೇರೆಯವರನ್ನು ಕೊಂದವರಾದರೂ ಸರಿ. 

ಚಿತ್ರದ ಕೊನೆಯಲ್ಲಿ ಎಲ್ಲವನ್ನೂ ಮರೆತು ತನ್ನ ಹೆಂಡತಿಯ ಕನಸಿಗೆ ಜೀವ ಕೊಡುವ ದಾರಿಯಲ್ಲಿ ಸಾಗುತ್ತಾನೆ. ನಮಗೊಂದು ಸಣ್ಣ ನೋವಾದರೂ ಅದನ್ನು ಸಹಿಸದೇ ಆ ನೋವು ಮಾಡುವವರಿಗೆ ಪ್ರತೀಕಾರ ತೀರಿಸಲು ನೋಡುವ ನಾವೆಲ್ಲಿ? ಪ್ರತೀಕಾರದ ಉಸಿರೇ ಎತ್ತದೇ ಅದನ್ನು ತನ್ನೊಳಗೇ ಅಡಗಿಸಿಟ್ಟು ಏನೂ ನಡೆದಿಲ್ಲ ಎನ್ನುವ ರೀತಿ ಬದುಕುವ ನಾಯಕನೆಲ್ಲಿ? 

“ವಿಲನ್” ಯಾರು ಅಂತ ಸಿನೆಮಾ ಮುಗಿದ ಮೇಲೆಯೂ ಕಾಡುತ್ತದೆ…

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply