“ನಮ್ ಆಟೋ ಮೇಲೆ ನಂಬರ್ ಪ್ಲೇಟ್ ಇಲ್ಲಾ ಅಂದ್ರೂ ನಡಿಯುತ್ತೆ ಆದ್ರೆ ಶಂಕ್ರಣ್ಣನ ಫೋಟೋ ಇಲ್ಲ ಅಂದ್ರೆ ಗಾಡಿ ಸ್ಟಾರ್ಟ್ ಮಾಡೋಕೆ ಮನ್ಸು ಬರಲ್ಲಾ ಸಾರ್”.
ಶಿವಮೊಗ್ಗದ ಆಟೋ ಡ್ರೈವರ್ ಒಬ್ಬಾತ ನನಗೆ ಹೇಳಿದ್ದ ಮಾತಿದು. ನಮಗೆಲ್ಲ ಗೊತ್ತಿರುವಂತೆ ಶಂಕರ್ ನಾಗ್ ಒಬ್ಬ ಸಿನಿಮಾ ನಟ. ಆದರೆ ನಮ್ಮಿಂದ ಮರೆಯಾಗಿ ಸುಮಾರು ಮೂವತ್ತು ವರ್ಷಗಳ ಬಳಿಕವೂ ಪ್ರತಿದಿನ ಅವರಿಗೆ ಸಿಗುತ್ತಿರುವ ಮರ್ಯಾದೆ-ಗೌರವಗಳು ಅವರು ಕೇವಲ ಸಿನಿಮಾ ನಟರಾಗಿದ್ದರು ಎಂಬ ಒಂದೇ ಕಾರಣದಿಂದಲೇ? ಯಾವುದೇ ಊರಲ್ಲಿ ಆಟೋ ನಿಲ್ದಾಣವೊಂದಿದೆ ಎಂದರೆ ಅದರ ಹೆಸರು ಖಂಡಿತ “ಶಂಕರ್ ನಾಗ್ ಆಟೋ ನಿಲ್ದಾಣ” ವೇ ಆಗಿರುತ್ತದೆ ಎಂಬಷ್ಟು ನಂಬಿಕೆ ನಮಗೆ. ಬರೀ ಬೆಂಗಳೂರು ನಗರವೊಂದರಲ್ಲೇ ಎಷ್ಟು ಶಂಕರ್ ನಾಗ್ ಆಟೋ ನಿಲ್ದಾಣಗಳಿರಬಹುದು? ಒಟ್ಟು ಕರ್ನಾಟಕದಲ್ಲಿ ಎಷ್ಟಿರಬಹುದು? ನೂರೇ? ಸಾವಿರವೇ? ಹತ್ತು ಸಾವಿರವೇ? ಲಕ್ಷವೇ? ಹಾಗಾದರೆ ಈ ಗೌರವಕ್ಕೆ ಕೇವಲ ಸಿನಿಮಾ ನಟನೆಂಬ ಒಂದೇ ಕಾರಣವಂತೂ ಖಂಡಿತಾ ಆಗಿರಲಾರದು. ಆ ಹೆಸರಿಗೆ ಇನ್ನೇನೋ ಬೇರೆ ಪವರ್ ಇರಬಹುದಲ್ಲವೇ? ಏನದು?
ಶಂಕ್ರಣ್ಣನ ಬಾಲ್ಯದ ಹೆಸರು ಭವಾನಿ ಶಂಕರ್. ಹುಟ್ಟಿದ್ದು ಹೊನ್ನಾವರ ಬಳಿಯ ಮಲ್ಲಾಪುರದಲ್ಲಿ. ಸ್ವಾತಂತ್ರ್ಯ ಬಂದು ಐದೋ ಆರೋ ವರ್ಷವಾಗಿತ್ತಷ್ಟೇ. ಈಗಿನಂತೆ ವಿಜ್ಞಾನ,ತಂತ್ರಜ್ಞಾನ, ವಾಹನ ಸೌಕರ್ಯ, ವಿದ್ಯುತ್ ಸೌಕರ್ಯಗಳು ಆಗಿರಲಿಲ್ಲ. ತಂದೆ ಸದಾನಂದರು ಕೊಂಕಣಿ, ಕನ್ನಡ ಹಾಗು ಮರಾಠಿ ಭಾಷೆಗಳಲ್ಲಿ ಮಾತಾಡಬಲ್ಲವರಾಗಿದ್ದರು. ಹಾಗಾಗಿ ಶಂಕ್ರಣ್ಣನಿಗೆ ಕನ್ನಡ ಹಾಗು ಮರಾಠಿ ಭಾಷೆಯ ಮೇಲೆ ಚಿಕ್ಕಂದಿನಲ್ಲೇ ಹಿಡಿತ ಸಾಧ್ಯವಾಯ್ತು.
ಮುಂಬಯಿಯ ಕಾಲೇಜು ದಿನಗಳಲ್ಲಿ ಶಂಕ್ರಣ್ಣನಿಗೆ ನಾಟಕದ ಪ್ರೇಮ ಶುರುವಾಯ್ತು. ಪ್ರೇಮಕ್ಕಿಂತ ಬಹುಷಃ ನಾಟಕದ ಹುಚ್ಚು ಅಂತಾನೇ ಹೇಳಬಹುದು. ಹೇಗೋ ಮಾಡಿ ಕಡೆಗೂ ಮರಾಠಿ ನಾಟಕವೊಂದರ ಚಿಕ್ಕ ಪಾತ್ರಕ್ಕೆ ಬಣ್ಣ ಹಚ್ಚುವ ಅವಕಾಶವನ್ನು ಸಾಧಿಸಿಯೇಬಿಟ್ಟರು. ಅಂದು ಹಚ್ಚಿದ ಬಣ್ಣ ಮಲ್ಲಾಪುರದ ಭವಾನಿ ಶಂಕರನನ್ನು ಶಂಕರ್ ನಾಗ್ ಎಂಬ ಪರ್ವತವಾಗಿಸಿದ್ದು ಇತಿಹಾಸ.
ನಮಗೆಲ್ಲ ತಿಳಿದಿರುವಂತೆ ಗಿರೀಶ್ ಕಾರ್ನಾಡರ ನಿರ್ದೇಶನದ ಒಂದಾನೊಂದು ಕಾಲದಲ್ಲಿ ಶಂಕ್ರಣ್ಣನ ಮೊದಲ ಸಿನಿಮಾ. ಆದರೆ ಅದಕ್ಕೂ ಮುಂಚೆಯೇ ಶಂಕ್ರಣ್ಣ ಮರಾಠಿಯ ಸಿನಿಮಾವೊಂದರಲ್ಲಿ ಅಭಿನಯಿಸಿದ್ದರು. ಗಿರೀಶ್ ಕಾರ್ನಾಡರ ಕಣ್ಣಿಗೆ ಬಿದ್ದು ಒಂದಾನೊಂದು ಕಾಲದಲ್ಲಿ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮರುಘಳಿಗೆಯಿಂದ ನಡೆದದ್ದೆಲ್ಲಾ ವಿಸ್ಮಯ. ಕನ್ನಡಕ್ಕೆ ಕಾಲಿಟ್ಟು ಅಭಿನಯಿಸಿದ ಮೊದಲ ಚಿತ್ರ “ಒಂದಾನೊಂದು ಕಾಲದಲ್ಲಿ” ಯ ನಟನೆಗೆ ರಾಷ್ಟ್ರ ಪ್ರಶಸ್ತಿ ಬಾಚಿದ ಗಟ್ಟಿಗ ನಮ್ಮ ಶಂಕ್ರಣ್ಣ.
ಒಂದಾನೊಂದು ಕಾಲದಲ್ಲಿ ಬಿಡುಗಡೆಯಾಗಿದ್ದು ೧೯೭೮ ರಲ್ಲಿ. ಶಂಕರ್ ನಾಗ್ ಕೊನೆಯುಸಿರೆಳೆದಿದ್ದು ೧೯೯೦ ರಲ್ಲಿ. ಅಂದರೆ ಶಂಕ್ರಣ್ಣ ಚಿತ್ರ ರಂಗದಲ್ಲಿ ಇದ್ದದ್ದು ಕೇವಲ ಹನ್ನೆರಡೇ ವರ್ಷ. ಈ ಹನ್ನೆರಡು ವರ್ಷದಲ್ಲಿ ಅಭಿನಯಿಸಿದ ಚಿತ್ರಗಳ ಸಂಖ್ಯೆ ಎಷ್ಟಿರಬಹುದು? – ಹತ್ತು? ಇಪ್ಪತ್ತು? ಐವತ್ತು? ಉಹೂ, ಇದಾವುದೂ ಸರಿ ಉತ್ತರ ಅಲ್ಲ. ಶಂಕ್ರಣ್ಣ ಹನ್ನೆರಡು ವರ್ಷದಲ್ಲಿ ಅಭಿನಯಿಸಿದ, ಐ ರಿಪೀಟ್ ಎಗೈನ್ ” ಶಂಕ್ರಣ್ಣ ಹನ್ನೆರಡು ವರ್ಷದಲ್ಲಿ ಅಭಿನಯಿಸಿದ” ಚಿತ್ರಗಳ ಸಂಖ್ಯೆ ಬರೋಬ್ಬರಿ ತೊಂಭತ್ತು. ಅಂದರೆ ವರ್ಷವೊಂದಕ್ಕೆ ಏಳೂವರೆ ಚಿತ್ರಗಳು. ಜೊತೆಗೆ ಒಂಭತ್ತು ಸಿನಿಮಾಗಳ ನಿರ್ದೇಶನ, ಮಾಲ್ಗುಡಿ ಡೇಸ್ ನಂತಹ ಪ್ರಯೋಗದ ನಿರ್ದೇಶನ, ಜೊತೆಗೆ ರಂಗಭೂಮಿಯ ಪ್ರಯೋಗಗಳು…ಒಮ್ಮೆ ಯೋಚಿಸಿ – ಸರಿಸುಮಾರು ಒಂದೂವರೆ ತಿಂಗಳಿಗೆ ಒಂದು ಸಿನಿಮಾ ನಟನೆಯ ಜೊತೆಗೆ ಇಷ್ಟು ಕೆಲಸಗಳು – ಅದೂ ಇಂಟರ್ನೆಟ್, ತಂತ್ರಜ್ಞಾನ ಮುಂದುವರೆಯದೆ ಇದ್ದ ಕಾಲದಲ್ಲಿ. ಇನ್ನೆಂತಹ ಸ್ಪೀಡ್ ಇರಬೇಕು ಆ ಮನುಷ್ಯ? ಇನ್ನೊಂದು ವಿಚಾರ – ೧೯೮೪. ಈ ಒಂದೇ ವರ್ಷದಲ್ಲಿ ಶಂಕ್ರಣ್ಣ ಅಭಿನಯಿಸಿದ ಚಿತ್ರಗಳ ಸಂಖ್ಯೆ ಹದಿಮೂರು. ಅಂದರೆ – ಹನ್ನೆರಡು ತಿಂಗಳಲ್ಲಿ ಹದಿಮೂರು ಸಿನಿಮಾಗಳು. ಜೊತೆಗೆ ಆಕ್ಸಿಡೆಂಟ್ ಸಿನಿಮಾದ ನಿರ್ದೇಶನ ಕೂಡ. ಹಾಗಂತ ಕಾಸಿಗೆ ತಕ್ಕ ಕಜ್ಜಾಯ ವೆಂಬಂತೆ ಕೆಲಸ ಮಾಡಿದ್ದಲ್ಲ. ನೆನಪಿಡಿ – ಹನ್ನೆರಡು ತಿಂಗಳಲ್ಲಿ ಹದಿಮೂರು ಸಿನಿಮಾಗಳಲ್ಲಿ ನಟಿಸಿದ್ದಷ್ಟೇ ಅಲ್ಲದೆ, ಇಂತಹ ಬ್ಯುಸಿ ಶೆಡ್ಯೂಲ್ ನಲ್ಲೂ ಇವರು ನಿರ್ದೇಶಿಸಿದ ಆಕ್ಸಿಡೆಂಟ್ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು ಎಂದರೆ ಕೆಲಸದ ಮೇಲಿನ ಶ್ರದ್ಧೆ ಮತ್ತು ಕೆಲಸದ ಕ್ವಾಲಿಟಿಯನ್ನು ಒಮ್ಮೆ ಊಹಿಸಿ. ಇದರಲ್ಲಿ ಇನ್ನೂ ಒಂದು ವಿಶೇಷವೆಂದರೆ ಈ ಹದಿಮೂರಕ್ಕೆ ಹದಿಮೂರೂ ವಿಭಿನ್ನ ಪಾತ್ರಗಳು. ನಿನ್ನೆ ಕಳ್ಳನ ಪಾತ್ರವಾದರೆ ಇಂದು ಪೊಲೀಸ್. ನಾಳೆ ಪ್ರೇಮಿ. ನಾಡಿದ್ದು ಹಳ್ಳಿ ಹೈದ. ಎಷ್ಟೋ ಸಾರಿ ನಿರ್ಮಾಪಕನ ಸಮಯ ನನ್ನಿಂದಾಗಿ ಹಾಳಾಗುವುದು ಬೇಡ ಎಂದು ಒಂದು ಸಿನಿಮಾಗೂ ಇನ್ನೊಂದು ಸಿನಿಮಾಕ್ಕೂ ಮಧ್ಯೆ ಕಾರಿನಲ್ಲಿ ಹೋಗುವಾಗಲೇ ಇವರು ಮುಂದಿನ ಶೂಟಿಂಗಿಗೆ ಬೇಕಾಗುವ ಬಟ್ಟೆಯನ್ನು ಬದಲಾಯಿಸಿದ್ದೂ ಇದೆಯಂತೆ.
ಇನ್ನು ಶಂಕ್ರಣ್ಣನ ಇನ್ನೊಂದು ವಿಶೇಷವೆಂದರೆ ಹೊಸ ರೀತಿಯ ಪ್ರಯೋಗಗಳು. ಅಣ್ಣಾವ್ರು ಅಭಿನಯದ ಒಂದು ಮುತ್ತಿನ ಕತೆ ಸಿನಿಮಾದ ಕ್ಯಾಪ್ಟನ್ ಆಫ್ ದಿ ಶಿಪ್ ನಮ್ಮ ಶಂಕ್ರಣ್ಣ. ಈ ಸಿನಿಮಾದ ಶೂಟಿಂಗಿಗಾಗಿ ಕೆನಡಾದಿಂದ ವಿಶೇಷ ಕ್ಯಾಮೆರಾ ಒಂದನ್ನು ತರಿಸಿದ್ದರಂತೆ. ಭಾರತದ ಹಳ್ಳಿಗಳ ಸಂಸ್ಕೃತಿಯನ್ನು ಸಾರುವ ಆರ್.ಕೆ. ನಾರಾಯಣ್ ಅವರ ಮಾಲ್ಗುಡಿ ಡೇಸ್ ಅನ್ನು ಯಾಕೆ ಕಿರುತೆರೆಗೆ ಅಳವಡಿಸಬಾರದು ಎಂಬ ಸಣ್ಣ ಯೋಚನೆ ಒಂದು ಶಂಕ್ರಣ್ಣನ ತಲೆಗೆ ಬಿತ್ತು. ಅದರ ಫಲಿತಾಂಶ ನಮಗೆಲ್ಲಾ ಗೊತ್ತೇ ಇದೆ. ಮಾಲ್ಗುಡಿ ಡೇಸ್ ಎಂಬ ವಿಶಿಷ್ಟ ಸದಭಿರುಚಿಯ ಧಾರವಾಹಿ ದೇಶದ ಮನೆ ಮನೆಗಳನ್ನೂ ಕಿರುತೆರೆಯ ಮೂಲಕ ಮುಟ್ಟಿತು.
ಅರುಂಧತಿ ನಾಗ್ ಶಂಕ್ರಣ್ಣ ಪತ್ನಿಯಷ್ಟೇ ಅಲ್ಲ, ಒಳ್ಳೆ ಸ್ನೇಹಿತೆ, ಹಿತೈಷಿ ಹಾಗು ಶಂಕ್ರಣ್ಣನ ಬಿಡುವಿರದ ಕೆಲಸಗಳ ಪಾರ್ಟ್ನರ್ ಕೂಡ. ಶಂಕ್ರಣ್ಣನ ಐಡಿಯಾಗಳ ಮೊದಲ ಕೇಳುಗ, ಇವರ ನಾಟಕಗಳ, ಸಿನಿಮಾ ಕತೆಗಳ ಮೊದಲ ಓದುಗ ಕೂಡ ಆರುಂಧತಿ ನಾಗ್ ಎಂದರೆ ತಪ್ಪಿಲ್ಲ. ರಂಗಭೂಮಿಯ ಪ್ರಯೋಗಕ್ಕೆ ಒಂದು ಸುಸಜ್ಜಿತ ರಂಗಮಂದಿರ ನಿರ್ಮಿಸಬೇಕೆಂಬ ಶಂಕ್ರಣ್ಣನ ಕನಸನ್ನು ತಾವೇ ಹೊತ್ತು ಹೋರಾಡಿ ಕಡೆಗೂ ಬೆಂಗಳೂರಿನ ಜೆ ಪಿ ನಗರದಲ್ಲಿ ರಂಗಶಂಕರ ವನ್ನು ನಿರ್ಮಿಸಿಯೇ ಬಿಟ್ಟರು.
ಇಷ್ಟಾಗಿ ಶಂಕ್ರಣ್ಣ ತಮ್ಮ ಕ್ರಿಯಾತ್ಮಕತೆಯನ್ನು ಕೇವಲ ಸಿನಿಮಾ, ಅಥವಾ ರಂಗಭೂಮಿಗಷ್ಟೇ ಸೀಮಿತವಾಗಿಡಲಿಲ್ಲ. ಸಾಮಾನ್ಯ ಜನರಿಗಾಗಿ ಏನಾದರೂ ಮಾಡಲೇಬೇಕೆಂಬ ತುಡಿತವಿತ್ತು. ಶಂಕ್ರಣ್ಣ ವಿಶೇಷವಾಗಿ ನಿಲ್ಲುವುದೇ ಇಲ್ಲಿ.
೧. ಮುಂದೆ ಒಂದು ದಿನ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗುತ್ತದೆ ಎಂಬುದನ್ನು ಮನಗಂಡು, ಬೆಂಗಳೂರಿಗೆ ಮೆಟ್ರೋ ರೈಲ್ ಅನ್ನು ತರುವ ಬಗ್ಗೆ ಯೋಚಿಸಿದ್ದರಂತೆ. ಕೇವಲ ಯೋಚಿಸಿದ್ದರಂತೆ ಅಷ್ಟೇ ಅಲ್ಲ ಆದಾಯಕ್ಕಾಗಿ ನಿರಂತರ ಸಂಶೋಧನೆ ಮಾಡಿ ಮೆಟ್ರೋ ಪ್ರಾಜೆಕ್ಟ್ ಗೆ ಸಂಬಂಧಿಸಿದ ಸಂಪೂರ್ಣ ಬ್ಲೂ ಪ್ರಿಂಟ್ ಅನ್ನು ತಯಾರಿಸಿದ್ದರಂತೆ.
೨. ಬಡವರಿಗಾಗಿ ಕೈಗೆಟುಕುವ ದರದಲ್ಲಿ ಮನೆ ಕಟ್ಟುವ ಐಡಿಯಾ ಒಮ್ಮೆ ಇವರ ತಲೆಗೆ ಬಂತು. ಅಷ್ಟೇ- ಮರು ದಿನವೇ ಪೆನ್ನು ಪೇಪರ್ ಹಿಡಿದು ಕುಳಿತರು. ಆಗಲೇ ಹೇಳಿದಂತೆ ಈಗಿನಂತೆ ತಂತ್ರಜ್ಞಾನ ಮುಂದುವರೆಯದೆ ಇದ್ದ ಕಾಲ ಅದು. ಹತ್ತಾರು ಪುಸ್ತಕಗಳನ್ನು ಓದಿ, ನೂರಾರು ತಜ್ಞರ ಜೊತೆ ಮಾತಾಡಿ, ಹೇಗೋ ಅದಕ್ಕೆ ಬೇಕಾದ ಜ್ಞಾನವನ್ನೆಲ್ಲ ಕಲೆಹಾಕಿ “ಕಡಿಮೆ ದರದಲ್ಲಿ ಮನೆ ಕಟ್ಟುವ” ಐಡಿಯಾ ದ ಬ್ಲೂ ಪ್ರಿಂಟ್ ಅನ್ನು ಪೇಪರ್ ಮೇಲೆ ತಯಾರಿಸಿಯೇಬಿಟ್ಟರು.
೩. ಮುಂದೊಂದು ದಿನ ಬೆಂಗಳೂರಿಗರಿಗೆ ನಂದಿ ಬೆಟ್ಟ ಫೇವರಿಟ್ ಪ್ರವಾಸಿ ತಾಣವಾಗುತ್ತದೆ ಎಂದು ಮನಗಂಡು ನಂದಿ ಬೆಟ್ಟಕ್ಕೆ ರೋಪ್ ವೆ ಮಾಡುವ ಪ್ಲಾನ್ ನ ಬ್ಲೂ ಪ್ರಿಂಟ್ ಕೂಡ ಮಾಡಿದ್ದರಂತೆ.
೪. ಕರ್ನಾಟಕಕ್ಕೆ ಒಂದು ಒಳ್ಳೆಯ ಆಡಿಯೋ ಸ್ಟುಡಿಯೋ ಬೇಕು ಅಂತ ಪ್ಲಾನ್ ಮಾಡಿ ಸಂಕೇತ್ ಸ್ಟುಡಿಯೋ ವನ್ನು ಕಟ್ಟೇಬಿಟ್ಟರು.
ನಟನೆ, ನಿರ್ದೇಶನ, ರಂಗಭೂಮಿ, ಕಿರುತೆರೆ, ಕತೆ, ಈ ರೀತಿಯ ಸಾಮಾಜಿಕ ಕಾರ್ಯಗಳಷ್ಟೇ ಅಲ್ಲದೆ ಶಂಕ್ರಣ್ಣ ಹಾರ್ಮೋನಿಯಂ, ಕೊಳಲು, ತಬಲಾ ಇಂತಹ ವಾದ್ಯಗಳನ್ನು ನುಡಿಸುವಿದರಲ್ಲೂ ಎತ್ತಿದ ಕೈ ಅಂತೆ.
ಉಫ್. ಒಬ್ಬ ಮನುಷ್ಯ ನಿಜವಾಗಿಯೂ ಇಷ್ಟು ಸ್ಪೀಡ್ ಆಗಿ ಇರಬಲ್ಲನಾ? ಇಷ್ಟು ಚೆನ್ನಾದ ಕ್ವಾಲಿಟಿ ಕೆಲಸ ಮಾಡಬಲ್ಲನಾ? ಸಿನಿಮಾದಲ್ಲಿದ್ದು ಸಮಾಜಮುಖಿಯಾಗಿ ಚಿಂತಿಸಬಲ್ಲನ? ಒಳ್ಳೆ ತಂತ್ರಜ್ಞಾನದ ಪ್ರಯೋಗಗಳನ್ನು ಮಾಡಬಲ್ಲನಾ? ಊಹಿಸಲೂ ಅಸಾಧ್ಯ. ಪ್ರತಿ ಕೆಲಸದಲ್ಲೂ ಶಂಕ್ರಣ್ಣನ ಸೂತ್ರ ಒಂದೇ ಆಗಿತ್ತು ಅದೇ ಸ್ಪೀಡ್. ಹೌದು. ಇಂತಹ ಶಂಕ್ರಣ್ಣ ಸಾವಲ್ಲೂ ಕೂಡ ಸ್ಪೀಡ್ ಅನ್ನು ಪಾಲಿಸಿಬಿಟ್ಟರು. ಆ ದೇವರಿಗೂ ಕೂಡ ಒಳ್ಳೆಯವರೇ ಬೇಕಿತ್ತೇನೋ – ಜೋಕುಮಾರ ಸ್ವಾಮಿ ಸಿನಿಮಾ ಶೂಟಿಂಗ್ ಸಮಯದಲ್ಲೇ ದಾವಣಗೆರೆ ಬಳಿ ಕಾರು ಅಪಘಾತದ ಮೂಲಕ ಆ ದೇವರು ಶಂಕ್ರಣ್ಣನನ್ನು ನಮ್ಮಿಂದ ಕರೆದುಕೊಂಡು ಹೋಗೇಬಿಟ್ಟ.
ಇದು ಪುಸ್ತಕವೊಂದರ ಮುನ್ನುಡಿಗಾಗುವಷ್ಟು ಬರಹವಷ್ಟೇ. ಶಂಕ್ರಣ್ಣನ ಬಗ್ಗೆ ಬರೆಯಲು ಕೂತರೆ ಬಹುಶಃ ಸಾವಿರ ಪುಟದ ಗ್ರಂಥವಾಗಬಹುದೇನೋ? ಇದಿಷ್ಟನ್ನು ಬರೆಯುವ ಹೊತ್ತಿಗೆ ಆ ಆಟೋ ಡ್ರೈವರ್ ಹೇಳಿದ ಮಾತಿಗೆ ಎದ್ದಿದ್ದ ನನ್ನ ಪ್ರಶ್ನೆಗೆ ತಕ್ಕ ಮಟ್ಟಿನ ಉತ್ತರ ದೊರಕಿತ್ತು.