ವರನಟ,ನಟ ಸಾರ್ವಭೌಮ,ರಸಿಕರ ರಾಜ, ಗಾನಗಂಧರ್ವ,ಕಲಾತಪಸ್ವಿ, ಅಭಿಮಾನಿಗಳ ಆರಾಧ್ಯ ದೈವ, ಕನ್ನಡಿಗರ ಕಣ್ಮಣಿ ಎಂದು ಅಸಂಖ್ಯಾತ ಅಭಿಮಾನಿಗಳಿಂದ ಕರೆಯಲ್ಪಡುತ್ತಿದ್ದ ನಟ ಡಾ.ರಾಜಕುಮಾರ್ ಕುರಿತು ತಿಳಿಯದವರು ಭಾರತ ಚಿತ್ರರಂಗದ ಇತಿಹಾಸದಲ್ಲಿ ಯಾರೂ ಇಲ್ಲ. ವರ್ಣಿಸಲು ಸಾಲದಂತಹ ವ್ಯಕ್ತಿತ್ವವಿದ್ದು ನನಗೆ ಯಾವ ರೀತಿ ವರ್ಣಿಸಬೇಕೆಂದು ತಿಳಿಯುತ್ತಿಲ್ಲ.
ಸುಮಾರು ೨೦೪ ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿದ್ದು ತಮ್ಮ ಚಿತ್ರರಂಗದ ಜೀವನದಲ್ಲಿ ಪರಭಾಷೆಯ ದಿಗ್ಗಜ ನಟರು ತಮ್ಮ ಚಿತ್ರಗಳಲ್ಲಿ ನಟಿಸಲು ಆಹ್ವಾನಿಸಿದರೂ ನಯವಾಗಿ ನಿರಾಕರಿಸಿದ್ದರಲ್ಲದೆ ಎಂದಿಗೂ ಪರಭಾಷೆಯ ಚಿತ್ರಗಳಲ್ಲಿ ನಟಿಸಲಿಲ್ಲ. ಇದು ಇವರು ನಮ್ಮ ಕನ್ನಡ ಭಾಷೆಯ ಮೇಲೆ ಹೊಂದಿದ್ದ ಗೌರವ, ಪ್ರೀತಿ, ಅಭಿಮಾನಕ್ಕೆ ಇದಕ್ಕಿಂತಲೂ ಒಳ್ಳೆಯ ಉದಾಹರಣೆ ಇರಲಿಕ್ಕಿಲ್ಲ ಎಂಬುದು ನನ್ನ ಅನಿಸಿಕೆಯಾಗಿದೆ.

ನನ್ನ ಅಭಿಮಾನಿಗಳಿಗೆ ತಪ್ಪು ಸಂದೇಶವನ್ನು ಕೊಡಬಾರದು ಎನ್ನುವ ಉದ್ದೇಶದಿಂದ ಪಾತ್ರಗಳ ಆಯ್ಕೆಯಲ್ಲಿ ಇವರು ತೊಡಗಿಸಿಕೊಳ್ಳುತ್ತಿದ್ದ ರೀತಿ ಸಾಮಾನ್ಯವಾಗಿರಲಿಲ್ಲ. ಇವರ ಅಭಿನಯದ ಪ್ರತಿ ಚಿತ್ರಗಳಲ್ಲಿ ಮಧ್ಯಪಾನ, ಧೂಮಪಾನ, ಮತ್ತು ದುಶ್ಚಟಗಳಿಗೆ ಪ್ರಚೋದನೆ ನೀಡುವಂತಹ ಒಂದು ದೃಶ್ಯ ಕೂಡ ಇಲ್ಲ. ಅಲ್ಲದೇ ಇವರ ಅಭಿನಯದ ಪ್ರತಿ ಚಿತ್ರಗಳು ಒಂದಲ್ಲ ಒಂದು ಸಂದೇಶವನ್ನು ಹೊಂದಿವೆ. ಉದಾಹರಣೆಗೆ ಚಲನಚಿತ್ರ ಬಂಗಾರದ ಮನುಷ್ಯ. ಪಟ್ಟಣದಿಂದ ಹಳ್ಳಿಗೆ ಆಗಮಿಸಿ ಅಲ್ಲಿ ಬರಡು ಭೂಮಿಯಲ್ಲಿ ಬೆಳೆಗಳನ್ನು ಬೆಳೆದು ಯಶಸ್ವಿಯಾಗುವ ರೈತನ ಪಾತ್ರವನ್ನು ಕನ್ನಡಿಗರಾದ ನಾವು ಮರೆಯಲು ಸಾಧ್ಯವಿಲ್ಲ.
ಈ ಪಾತ್ರದಿಂದ ಪ್ರೇರಿತರಾಗಿ ಅದೆಷ್ಟೋ ಯುವ ಪೀಳಿಗೆ ಪಟ್ಟಣವನ್ನು ತೊರೆದು ತಮ್ಮ ಹಳ್ಳಿಗೆ ಆಗಮಿಸಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಈ ಚಿತ್ರದ ಮೂಲಕ ನಮ್ಮ ಅಣ್ಣಾವ್ರು ಕೃಷಿಯಲ್ಲಿ ಇರುವ ಮಹತ್ವವನ್ನು ತಮ್ಮ ರಾಜೀವ್ ಎಂಬ ರೈತನ ಪಾತ್ರದ ಮೂಲಕ ತಿಳಿಸಿದ್ದರು. ಇದು ಒಂದು ಉದಾಹರಣೆ ಮಾತ್ರ. ಇನ್ನೊಂದು ರೈತನ ಬದುಕಿನಲ್ಲಿ ಎಂತೆಂತಹ ಕಷ್ಟಗಳು ಬರುತ್ತವೆ ಎನ್ನುವುದನ್ನು ಇವರು ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ರೈತನ ಪಾತ್ರವನ್ನು ನಿರ್ವಹಿಸುವುದರ ಮೂಲಕ ತೋರಿಸಿದ್ದರು.
ಇವರ ಚಿತ್ರಗಳನ್ನು ವೀಕ್ಷಿಸಿದರೆ ಇಂತಹ ಅಸಂಖ್ಯಾತ ಉದಾಹರಣೆಗಳು ಸಿಗುತ್ತವೆ. ತಮ್ಮ ಚಿತ್ರರಂಗದ ಜೀವನದಲ್ಲಿ ಸದಭಿರುಚಿಯ ಚಿತ್ರಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಆರಾಧ್ಯ ದೈವರಾಗಿ ಅಭಿಮಾನಿಗಳೇ ದೇವರು ಎಂದು ಹೇಳಿದ ಕಲಾತಪಸ್ವಿ ತಮ್ಮ ಜೀವನದುದ್ದಕ್ಕೂ ಆದರ್ಶಗಳನ್ನು ಪಾಲಿಸಿದ್ದು ಪ್ರತಿ ಕನ್ನಡಿಗರಿಗೂ ಇಂದಿಗೂ ಆದರ್ಶವಾಗಿದ್ದಾರೆ.
ತಮ್ಮ ಖಾಸಗಿ ಜೀವನದಲ್ಲಿ ಕೂಡ ಅಷ್ಟೇ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿದ್ದರು. ತಮ್ಮ ದಿನ ನಿತ್ಯದ ಜೀವನವನ್ನು ಶಿಸ್ತು ಬದ್ಧವಾಗಿ ನಿರ್ವಹಿಸುತ್ತಿದ್ದ ಇವರು ಯೋಗ ಸಾಧನೆಯಲ್ಲಿ ತೊಡಗಿಸಿಕೊಂಡಿದ್ದ ದೃಶ್ಯಗಳನ್ನು ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ. ಇವರ ಯೋಗ ಸಾಧನೆಗೆ ಎಂತವರಾದರೂ ನಾಚಿ ನೀರಾಗುತ್ತಾರೆ. ಕನ್ನಡದ ಉಳಿವಿಗಾಗಿ ಇವರು ಮಾಡಿದ ಹೋರಾಟ ಯಾವ ಸ್ವಾತಂತ್ರ್ಯ ಹೋರಾಟಗಾರನಿಗಿಂತಲೂ ಕಡಿಮೆಯಿಲ್ಲದಂತೆ ಹೋರಾಡಿದ್ದು ತಮ್ಮ ಜೀವಿತಾವಧಿಯವರೆಗೂ ಕನ್ನಡವೇ ನನ್ನ ಉಸಿರು ಎಂದು ಹೇಳಿದ್ದರು. ಅಲ್ಲದೇ ನುಡಿದಂತೆ ನಡೆದ ಹುಟ್ಟು ಕನ್ನಡಿಗ ಕೂಡ ಆಗಿದ್ದರು.
ಒಂದು ಸಲ ಸಂದರ್ಶನದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ರಾಜಕುಮಾರ್ ಏನಾದರೂ ಬಾಲಿವುಡ್ ಚಿತ್ರರಂಗದಲ್ಲಿ ಇದ್ದಿದ್ದರೆ ನಾವ್ಯಾರೂ ಇಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದರು. ಇದು ನಮ್ಮ ಅಣ್ಣಾವ್ರ ನಟನೆಯಲ್ಲಿದ್ದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಬರೆಯಲು ಪುಟಗಳೇ ಸಾಲದಷ್ಟು ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿರುವ ಇವರ ಬಗ್ಗೆ ಇನ್ನೂ ಎಷ್ಟು ಬರೆಯಬೇಕು ಎಂದು ಕೂಡ ತಿಳಿಯುತ್ತಿಲ್ಲ. ವ್ಯಕ್ತಿಗೆ ಮರಣವಿದ್ದರೂ ಆದರ್ಶಗಳಿಗೆ ವ್ಯಕ್ತಿತ್ವಕ್ಕೆ ಮರಣವಿಲ್ಲ ಎಂಬುದಕ್ಕೆ ನಮ್ಮ ಅಣ್ಣಾವ್ರೇ ಸಾಕ್ಷಿ. ಇಂದು ಭೌತಿಕವಾಗಿ ಇಲ್ಲದಿದ್ದರೂ ಮಾನಸಿಕವಾಗಿ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಚಿರಂಜೀವಿಯಾಗಿರುವ ನಮ್ಮ ಅಣ್ಣಾವ್ರನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ.