ಇದೊಂದು ವಿಶಿಷ್ಠ ರೀತಿಯ ಸಿನೆಮಾ. “ಡೇವಿಡ್ ಕಿಮ್”ನ 16 ವರ್ಷದ ಮಗಳು “ಮಾರ್ಗೊಟ್” ರಾತ್ರಿ ಗೆಳೆಯರ ಮನೆಗೆ ಗ್ರೂಪ್ ಸ್ಟಡೀಸ್’ಗೆಂದು ಹೊರಟವಳು ವಾಪಸ್ಸು ಮನೆಗೆ ಬರುವುದಿಲ್ಲ. ಎಲ್ಲ ಕಡೆಯಲ್ಲಿಯೂ ವಿಚಾರಿಸಿ ಅವಳ ಪತ್ತೆಯಾಗದ ಕಾರಣ ಅನಿವಾರ್ಯವಾಗಿ ಪೋಲೀಸರಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸುತ್ತಾನೆ “ಡೇವಿಡ್”. ಆ ಕೇಸಿನ ಇನ್ವೆಸ್ಟಿಗೇಶನ್ ಅನ್ನು “ರೋಸ್’ಮೇರಿ ವಿಕ್” ಎನ್ನುವ ಮಹಿಳಾ ಪೋಲೀಸ್ ಅಧಿಕಾರಿಯು ವಹಿಸಿಕೊಳ್ಳುತ್ತಾಳೆ. ಅಲ್ಲಿಂದ ಶುರುವಾಗುತ್ತದೆ ನಾಪತ್ತೆಯಾದ ಮಗಳನ್ನು ಹುಡುಕುವ ತಂದೆಯ ಕಥೆ “ಸರ್ಚಿಂಗ್”.
ಕ್ಷಣ-ಕ್ಷಣಕ್ಕೆ ಬೇರೆಯದೇ ತಿರುವನ್ನು ಪಡೆಯುತ್ತ ಸಾಗುವ ಇಂತಹ ಮಿಸ್ಟರಿ ಥ್ರಿಲ್ಲರ್ ಕಥೆಯುಳ್ಳ ಹಲವು ಸಿನೆಮಾಗಳು ಬಂದಿವೆಯಾದರೂ ಈ ಸಿನೆಮಾದ ವೈಶಿಷ್ಟ್ಯತೆ ಇರುವುದು ಚಿತ್ರಕಥೆ ಹಾಗೂ ಅದನ್ನು ಪ್ರಸ್ತುತ ಪಡಿಸಿರುವ ರೀತಿಯಲ್ಲಿ. ಮೊದಲೇ ಹೇಳಿದಂತೆ ಇದೊಂದು ವಿಶಿಷ್ಠ ರೀತಿಯ ಸಿನೆಮಾ. ಸಿನೆಮಾದುದ್ದಕ್ಕೂ ಯಾವುದೇ ಪಾತ್ರಗಳು ಅಥವಾ ದೃಶ್ಯಗಳು ನೇರವಾಗಿ ಕಾಣಿಸಿಕೊಳ್ಳುವುದಿಲ್ಲ. ಒಂದು ಮುಕ್ಕಾಲು ಗಂಟೆಯ ಇಡೀ ಸಿನೆಮಾ “ಡೇವಿಡ್”ನ ಲ್ಯಾಪ್’ಟಾಪ್ ಪರದೆಯ ಮೇಲೆಯೇ ಸಾಗುತ್ತದೆ. ಒಂದಿಡೀ ಸಿನೆಮಾವನ್ನು ವೀಡೀಯೋ ಕಾಲ್, ಮೆಸೇಜ್, ಯೂಟ್ಯೂಬ್ ವೀಡೀಯೋಸ್, ಪೇಸ್ಬುಕ್, ಇನ್ಸ್ಟಾಗ್ರಾಮ್’ನಂತಹ ಸೋಶಿಯಲ್ ಮೀಡಿಯಾ ಪೋಸ್ಟ್’ಗಳನ್ನು ಉಪಯೋಗಿಸಿ ಕಟ್ಟಿಕೊಟ್ಟಿರುವ ರೀತಿ ಅದ್ಭುತವಾದದ್ದು.
“ಮಾರ್ಗೊಟ್” ಕಾಣೆಯಾಗಿದ್ದರ ಹಿನ್ನೆಲೆಯೇನು? ಮಗಳ ಹುಡುಕಾಟದಲ್ಲಿ ತನ್ನೊಳಗೆ ಕಾಣೆಯಾಗಿರುವ ಅಪ್ಪನನ್ನೂ ಕಂಡುಕೊಳ್ಳುವ “ಡೇವಿಡ್” ಮಗಳನ್ನು ಹುಡುಕುವಲ್ಲಿ ಸಫಲನಾದನೇ?
ಸಿನೆಮಾದ ಕಥೆ ಹೇಳಿದರೂ ರಸಭಂಗವಾಗದ ಅದ್ಭುತ ಚಿತ್ರಕಥೆಯೇ ಈ ಸಿನೆಮಾದ ಜೀವಾಳ. ನಾವು ಸಿನೆಮಾವನ್ನು ನೋಡುತ್ತಿದ್ದೇವೆ ಎಂದು ಅನಿಸುವ ಬದಲು ಲ್ಯಾಪ್’ಟಾಪಿನಲ್ಲಿ “ಮಾರ್ಗೊಟ್”ಳನ್ನು ಹುಡುಕುತ್ತಿರುವ ಅನುಭವವುಂಟಾಗುತ್ತದೆ.
ಇನ್ನೊಂದು ಖುಶಿಯ ವಿಚಾರವೆಂದರೆ ಈ ಸಿನೆಮಾದ ನಿರ್ದೇಶಕ “ಅನೀಶ್ ಚಗಂಟಿ” ಇವರು ಆಂಧ್ರಪ್ರದೇಶ ಮೂಲದವರು.
ಮಸ್ಟ್ ವಾಚಬಲ್ ಮಾಸ್ಟರ್’ಪೀಸ್ ಸಿನೆಮಾ.
ನಮಸ್ಕಾರ 🙏
Author: Santhosh
ಓಹ್… ಇದು ಇತ್ತೀಚೆಗೆ ಬಂದಿರುವ ಮಲಯಾಳಂ ಚಿತ್ರ C U SOON ಕಥೆಯನ್ನು ಹೋಲುವಂತಿದೆ.. ಬಹುಶಃ ಮಲಯಾಳಂ ನವರು ಇಲ್ಲಿಂದಲೇ ಸ್ಪೂರ್ತಿ ಪಡೆದಿರಬೇಕು.. ಧನ್ಯವಾದಗಳು ಒಂದು ಹೊಸ ರೀತಿಯ ಚಿತ್ರ ಪರಿಚಯಿಸಿದ್ದಕ್ಕೆ 😊😊