“ಸಲಗ” ಸಿನಿಮಾ ಹೇಗಿದೆ?

salaga

ಅಂಡರ್ ವರ್ಲ್ಡ್ ಕಥಾವಸ್ತುವನ್ನು ಹೊಂದಿರುವ ಸಿನಿಮಾವೊಂದರಲ್ಲಿ ಅದಕ್ಕೆ ತಕ್ಕ ಪಾತ್ರವರ್ಗ, ಖಡಕ್ ಎನಿಸುವ ಡೈಲಾಗ್ ಗಳು, ಅದಕ್ಕೆ ಸರಿಯಾಗಿ ಹೊಂದಿಕೆಯಾಗುವ ಹಿನ್ನಲೆ ಸಂಗೀತ, ಕಣ್ಣಿಗೆ ಮುದನೀಡುವ ಕ್ಯಾಮರಾಮ್ಯಾನ್ ಕೈಚಳಕ – ಇವೆಲ್ಲಾ ಪರ್ಫೆಕ್ಟ್ ಪ್ರಮಾಣದಲ್ಲಿದ್ದರೆ ಆ ಸಿನಿಮಾ ನೋಡುವ ಮಜಾನೇ ಬೇರೆ ಅಲ್ಲವಾ? ಅಂತಹ ಒಂದು ಪರ್ಫೆಕ್ಟ್ ಮಿಶ್ರಣವೇ “ಸಲಗ”. ಒಂದು ಮಾತಿನಲ್ಲಿ ಹೇಳಬೇಕೆಂದರೆ ಯಾವುದೂ ಹೆಚ್ಚಿರದ, ಯಾವುದೂ ಕಡಿಮೆಯಿರದ, ಎಲ್ಲವೂ ಸಮಪ್ರಮಾಣದಲ್ಲಿ ಬೆರೆಸಿ ತಯಾರಿಸಿರುವ ಬಿರಿಯಾನಿಯಂತೆ.
ಕನ್ನಡ ಸಿನಿಮಾರಂಗದಲ್ಲೇ ರೌಡಿಸಂ ಸಿನಿಮಾಗಳಿಗೆ ಹೊಸ ಭಾಷ್ಯ ಬರೆದ ಸಿನಿಮಾ ಓಂ. ಇನ್ನು ದುನಿಯಾ ವಿಜಯ್ ರವರು ರಜನಿಯ ಅಭಿಮಾನಿ ಕೂಡ. ಹಾಗಾಗಿ ರಜನಿಯ ಶಿವಾಜಿ ಮತ್ತು ಕನ್ನಡದ ಓಂ ನ ಹಿನ್ನಲೆಯೊಂದಿಗೆ ಶುರುವಾಗುವ ಸಿನಿಮಾ ಮೊದಲರ್ಧ ಖಡಕ್ ಡೈಲಾಗ್ ಗಳಿಂದಲೂ ದ್ವಿತೀಯಾರ್ಧ ಅಂಡರ್ ವರ್ಲ್ಡ್ ನ ಕಥಾವಸ್ತುವನ್ನು ಪರಿಚಯಿಸುತ್ತಲೂ ಸಾಗುತ್ತದೆ. ನಟನಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ದುನಿಯಾ ವಿಜಯ್ ರವರು ಡೈರೆಕ್ಟರ್ ಕ್ಯಾಪ್ ಅನ್ನು ಕೂಡ ಈ ಸಿನಿಮಾದ ಮೂಲಕ ಧರಿಸಿ ಗೆದ್ದಿದ್ದಾರೆ. ಪಕ್ಕಾ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾಕ್ಕೆ ಇರಬೇಕಾದ ಎಲ್ಲವೂ ಇದರಲ್ಲಿದೆ. ಈಗಾಗಲೇ ಭೂಗತ ಜಗತ್ತಿನ ಕಥಾವಸ್ತು ಹೊಂದಿರುವ ಅನೇಕ ಸಿನಿಮಾಗಳು ಬಂದಿದ್ದರೂ “ಸಲಗ” ವಿಭಿನ್ನವಾಗಿ ನಿಲ್ಲುವಂತಹ ಚಿತ್ರ.
ಇನ್ನು ಪಾತ್ರವರ್ಗದ ವಿಷಯಕ್ಕೆ ಬಂದರೆ ದುನಿಯಾ ವಿಜಯ್, ಪೊಲೀಸ್ ಆಫೀಸರ್ ಪಾತ್ರದಲ್ಲಿ ಡಾಲಿ ಧನಂಜಯ್ ಇಬ್ಬರೂ ಪೊಲೀಸ್-ಕ್ರಿಮಿನಲ್ ನಡುವಿನ ಈ ಹಾವು-ಏಣಿ ಆಟದಲ್ಲಿ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ದುನಿಯಾ ವಿಜಯ್ ಭೂಗತ ಜಗತ್ತಿಗೆ ಬಂದದ್ದಾದರೂ ಏತಕ್ಕೆ? ಡಾಲಿ ಧನಂಜಯ್ – ವಿಜಯ್ ಇಬ್ಬರಲ್ಲಿ ಕಡೆಯಲ್ಲಿ ಗೆದ್ದಿದ್ಯಾರು? ಇದಕ್ಕೆ ಉತ್ತರ ಬೇಕಾದರೆ ಸಿನಿಮಾ ನೋಡಿ. ಸೀನಿಯರ್ ಪೊಲೀಸ್ ಆಫೀಸ್ ಪಾತ್ರದಲ್ಲಿ ಅಚ್ಯುತ್ ರವರ ಅಭಿನಯವಂತೂ ಬೊಂಬಾಟ್.
ಕಿವಿಗೆ ಇಂಪಾದ ಸಂಗೀತ ಕೊಡುವುದರಲ್ಲಿ ಚರಣ್ ರಾಜ್ ಗೆದ್ದಿದ್ದಾರೆ. ಇನ್ನು ಭೂಗತ ಜಗತ್ತಿನ ಚಿತ್ರೀಕರಣದ ನೆರಳು-ಬೆಳಕಿನಾಟದಲ್ಲಿ ಶಿವಸೇನಾ ಕ್ಯಾಮರಾ ಕೈಚಳಕ ಅದ್ಭುತವಾಗಿ ಕೆಲಸ ಮಾಡಿದೆ. ನಿಜವಾದ ಭೂಗತ ಜಗತ್ತಿನ ರೌಡಿಗಳೇ ಮಾತಾಡುತ್ತಿರುವಷ್ಟು ಸಹಜ ಭಾಷೆಯ ಸಂಭಾಷಣೆ ಬರೆಯಲು ಮಾಸ್ತಿಯವರು ತುಂಬಾ ರಿಸರ್ಚ್ ಮಾಡಿದ್ದಾರೆ ಎಂಬುದಂತೂ ಸತ್ಯ. ಎಲ್ಲ ತಂತ್ರಜ್ಞರ ಕಾಂಬಿನೇಷನ್ ಎಷ್ಟು ಚೆನ್ನಾಗಿ ಕೆಲಸ ಮಾಡಿದೆಯೆಂದರೆ ಕೆಲವು ಸೀನುಗಳಲ್ಲಿ ನೇರ ಎಂಭತ್ತರ ದಶಕಕ್ಕೇ ನಮ್ಮನ್ನು ಕೊಂಡೊಯ್ದಿದ್ದಾರೇನೋ ಎಂದೆನಿಸುತ್ತದೆ. ಕೊರೊನದಿಂದಾಗಿ ವರ್ಷಗಟ್ಟಲೆ ಸಿನಿಮಾ ನೋಡದೆ ಕಾದು ಕುಳಿತಿದ್ದ ಕನ್ನಡ ಸಿನಿ ಪ್ರೇಮಿಗಳಿಗೆ ಅದರಲ್ಲೂ ಮಾಸ್ ಎಂಟರ್ಟೈನ್ಮೆಂಟ್ ಇಷ್ಟಪಡುವವರಿಗಂತೂ “ಸಲಗ” ರಸದೌತಣ.
ಚಿತ್ರೋದ್ಯಮ ರೇಟಿಂಗ್: 7.5/10

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply