ರಾಜ್ ಮತ್ತು ಪುಟ್ಟಣ್ಣ ಅವರ ಕೋಂಬೋದ ಮೂರನೆಯ ಮತ್ತು ಕೊನೆಯ ಚಿತ್ರ.(1971)
ಈ ಸಲ ಸಿನಿಮಾ ನೋಡುವಂತೆ ನೋಡಿದೆ. ಅಂದರೆ ಒಳ್ಳೆಯ ಜನರಿಗೆ ಕೆಟ್ಟದಾದರೆ ದುಃಖಿಸದೇ ಕೊನೆಯಲ್ಲಿ ಕೆಟ್ಟವರಿಗೆ ಕೆಟ್ಟದಾದಾಗ ಖುಷಿ ಪಡದೇ ನೋಡಿದೆ.
ಆದರೂ ಪೃಥ್ವಿರಾಜ್ ಕಪೂರ್ ಮತ್ತು ರಾಜ್‌ಕುಮಾರ್ ಅನೇಕ ಕಡೆ ಕಣ್ಣು ಒದ್ದೆ ಮಾಡುವುದರಲ್ಲಿ ಯಶ ಕಂಡಿದ್ದಾರೆ…
ಉಮಾ (ಜಮುನ) ಮತ್ತು ಮಹೇಶ (ರಾಜ್‍ಕುಮಾರ್) ಮದುವೆ ಆಗಲೆಂಬುದು ಭೂಪಾಲ್ (ಪೃಥ್ವಿರಾಜ್) ಮತ್ತು ಅಜ್ಜಯ್ಯನ (ಆರ್ ನಾಗೇಂದ್ರ ರಾವ್) ಅಭಿಲಾಷೆ. ಮಹೇಶ ಮತ್ತು ಉಮಾ ಒಲವು ಎಂದರೆ ಜೀವನ ಸಾಕ್ಷಾತ್ಕಾರ ಎಂದು ನಂಬಿದ ಜೋಡಿ. ಆದರೆ ತಾಯಿಗೆ (ಬಿ. ಜಯಮ್ಮ) ಇಷ್ಟ ಇಲ್ಲ. ಆಕೆಯ ಅಣ್ಣ ಲಕ್ಷ್ಮಣನಿಗೆ (ಬಾಲಕೃಷ್ಣ) ಈ ಅಗಾಧ ಎಸ್ಟೇಟ್ ಮೇಲೆ ಕಣ್ಣು. ಈಗಾಗಲೇ ತನ್ನ ಮಗನಿಗೆ (ನರಸಿಂಹರಾಜು) ಮಹೇಶನ ತಂಗಿಯನ್ನು (ಸುರೇಖಾ) ತಂದುಕೊಂಡಿರುತ್ತಾನೆ. ಈಗ ತನ್ನ ಮಗಳು ಸುಮಳನ್ನು ಮಹೇಶ್ ಮದುವೆ ಆಗಲಿ ಎಂದು ಆಶಿಸಿ ಪುರೋಹಿತನಿಗೆ ಹಣ ನೀಡಿ ಉಮಾಳಿಗೆ ಅಂಗಾರಕ ದೋಷ ಇದೆ ಎಂದು ಹೇಳಿ ಮನ, ಮನೆ ಎಲ್ಲವನ್ನೂ ಮುರಿಯುತ್ತಾನೆ.
(ಇಲ್ಲಿ ಬಾಲಕೃಷ್ಣ ಅವರ ಬಗೆಗೆ ಒಂದು ಮಾತು. ಅವರಿಗೆ ಕಿವಿ ಕೇಳಿಸುತ್ತಲೇ ಇರಲಿಲ್ಲವಂತೆ. ಆದರೆ ಅವರ ಪಾತ್ರ ನಿರ್ವಹಣೆ, ಪಾತ್ರ ಪೋಷಣೆ ಉಳಿದವರೆಲ್ಲರನ್ನು ಆಪೋಶನ ತೆಗೆದುಕೊಂಡು ಬಿಡುವಂತೆ ಇರುತ್ತಿತ್ತು. ಪಾತ್ರದ ಗಾತ್ರ, ಉದ್ದ, ಗುಣ ಮತ್ತು ವರ್ತನೆಗಳು ಅವರಿಗೆ ನಗಣ್ಯ. ಆ ಪಾತ್ರ ತಾನಾಗಿಬಿಡುವ ತಾದ್ಯಾತ್ಮ. ನನಗಂತೂ ಅವರು ಅಭಿನಯದಲ್ಲಿ ಸಾಮ್ರಾಟರು ಎನ್ನಿಸಿಬಿಟ್ಟಿತು).
ಆದರೂ ದೇಹದಲ್ಲಿ ಕೊನೆ ಉಸಿರು ಇರುವವರೆಗೆ ಒಲವು ಒಲವು ಎನ್ನುತ್ತಾರೆ ಉಮಾ ಮತ್ತು ಮಹೇಶ.
ವಜ್ರಮುನಿ ದುಷ್ಟ ಪಾತ್ರದಲ್ಲಿ ಮಿಂಚಿದ್ದಾರೆ. ಬಿ. ಜಯಮ್ಮ ಇದ್ದಾರೆ.
ಪಿ. ಸುಶೀಲ ಹಾಡಿರುವ ಗೀತೆಗಳು ಅಮರ. ಫಲಿಸಿತು ಒಲವಿನ ಪೂಜಾಫಲ…. ಒಲವೇ ಜೀವನ ಸಾಕ್ಷಾತ್ಕಾರ… ಕಾದಿರುವಳೋ ಕೃಷ್ಣಾ ರಾಧೇ.. ಪಿ. ಸುಶೀಲ ಮತ್ತು ಪಿಬಿಎಸ್ ಹಾಡಿರುವ ಒಲವೇ ಜೀವನ ಸಾಕ್ಷಾತ್ಕಾರ ಕೂಡ ಅದ್ಭುತ ಗೀತೆ. ಪಿಬಿಎಸ್ ಅವರ ಜನ್ಮ ಜನ್ಮದ ಅನುಬಂಧ ಕೂಡ ಸುಂದರ ಗೀತೆ ಚಂದದ ಚಿತ್ರಣ. ಪಿಬಿಎಸ್ ಪಠಿಸಿರುವ ಅನೇಕ ಶ್ಲೋಕಗಳು ಕೂಡ ಶ್ರವಣ ಯೋಗ್ಯ.
ದುಷ್ಟರ ದುರಂತ ಅಂತ್ಯಗಳು ಒಂದು ರೀತಿ ಕಾವ್ಯ ನ್ಯಾಯ ಅನಿಸುತ್ತದೆ.ರಾಜ್ ಅದ್ಭುತ ನಟನೆ. ಒಲವಿನ ಮೇಲ್ ಸ್ತರ ಮುಟ್ಟುವಾಗಿನ ಅವರ ಮುಖಭಾವ ಬಲು ಸುಂದರ.