ಸಾವಿತ್ರಿದೇವಿ ಯಶ್ವಂತ ಕೊಲಕಾರ ರವರಿಗು ನನ್ನ ಅನಂತ ನಮನಗಳು.

ಯಶವಂತ್ ದುರಗಪ್ಪ ಕೋಲ್ಕಾರ್ – ಕರ್ನಾಟಕ ಈ ದೇಶಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆ. 12/08/1965 ರಂದು ಬೆಳಗಾವಿಯ ಹಳ್ಳಿಯಲ್ಲಿ ಹುಟ್ಟಿದ ಯಶವಂತ್ ಕೊಲ್ಕರ್ ಗೆ ನಾಲ್ಕು ಜನ ಅಣ್ಣ ತಮ್ಮಂದಿರು. ಅಕ್ಕತಂಗಿಯರು ಐದನೇ ತರಗತಿಯವರೆಗೆ. ಐದನೇ ತರಗತಿಯವರೆಗೆ ಹಳ್ಳಿಯಲ್ಲಿಯೇ ವಿದ್ಯಾಭ್ಯಾಸ ಮುಗಿಸಿ, ಹಳ್ಳಿಯ ಹತ್ತಿರವಿದ್ದ ಮದನಭಾವಿ ಯಲ್ಲಿ ಹಾಸ್ಟೆಲಿನಲ್ಲಿ ಇದ್ದುಕೊಂಡು ಎಸ್ಸೆಸ್ಸೆಲ್ಸಿ ವರೆಗೂ ಓದಿದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಇವರ ಮನೆಯ ಬಡತನ ಎಷ್ಟಿತ್ತೆಂದರೆ ಇವರಿಗೆ ಕಾಲಿಗೆ ಹಾಕಿಕೊಳ್ಳಲು ಒಂದು ಹವಾಯಿ ಚಪ್ಪಲಿ ಕೂಡ ಇರಲಿಲ್ಲ. ಹಾಗಾಗಿ ಹೈಸ್ಕೂಲಿನಿಂದ ಮನೆಗೆ 5 ಕಿಲೋಮೀಟರ್ ಬರಿಗಾಲಲ್ಲಿ ನಡೆದು ಬರುತ್ತಿದ್ದರು. ಹೀಗೆ ಕಷ್ಟದಲ್ಲೇ ಬೆಳೆದ ಯಶವಂತ್ ಕೋಲ್ಕಾರ್ ಅತಿ ಚಿಕ್ಕ ವಯಸ್ಸಿಗೇ ಸೇನೆಯ ಕ್ಯಾಪ್ ಧರಿಸಿ ಕಾಶ್ಮೀರದ ಕಡೆ ಹೊರಟುಬಿಟ್ಟರು.

ನಾನು ಸಾವಿತ್ರಿ ಕೋಲ್ಕಾರ್. ಬೆಳಗಾವಿಯ ನೇಸರ್ಗಿ ನನ್ನೂರು. ನನ್ನ ಸೋದರಮಾವನೇ ಯಶವಂತ್ ಕೋಲ್ಕಾರ್. ನನ್ನ ಹದಿನಾಲ್ಕು ವರ್ಷಕ್ಕೆ ಅವರ ಜೊತೆ ನನ್ನ ಮದುವೆಯಾಯಿತು. ಮದುವೆಯಾಗಿ ಒಂದು ವರ್ಷ ಹಳ್ಳಿಯಲ್ಲಿದ್ದು ಆಮೇಲೆ ನಮ್ಮನ್ನು ಕಾಶ್ಮೀರಕ್ಕೆ ಕರೆದುಕೊಂಡು ಹೋದರು. ಆಗ ಅವರ ಪೋಸ್ಟಿಂಗ್ ಕಾಶ್ಮೀರದಲ್ಲಿ. ಕಾಶ್ಮೀರ ಹೋಗುವುದು ಎಂದರೆ ಎಲ್ಲರಿಗೂ ಖುಷಿ. ಅದು ಭೂಲೋಕ ಸ್ವರ್ಗ. ಅದೂ ಅಲ್ಲದೆ ನಾನು ಬೆಳಗಾವಿಯ ಹಳ್ಳಿಯಲ್ಲೇ ಹುಟ್ಟಿ ಬೆಳೆದವಳು ಅಂದಮೇಲೆ ಕೇಳಬೇಕೆ? ಕಾಶ್ಮೀರಕ್ಕೆ ಹೋಗುವುದು ಎಂದು ನೆನದಾಗಲೇ ಆ ಸಣ್ಣ ವಯಸ್ಸಿನ ನನ್ನಲ್ಲಿ ಅನೇಕ ಆಸೆಗಳು ನೂರಾರು ಭಾವನೆಗಳು ಮನೆಮಾಡಿತ್ತು. ನಾನು ನನ್ನ ಗಂಡ ಕಾಶ್ಮೀರದ ಹಿಮಾಲಯದಲ್ಲಿ ಹಿಮದ ಮೇಲೆ ಜಾರುತ್ತ ಆಟವಾಡುತ್ತಾ ಇರುವಹಾಗೆ, ನಾನು ನನ್ನ ಗಂಡ ಕೈ ಕೈ ಹಿಡಿದುಕೊಂಡು ಕಾಶ್ಮೀರದ ಹತ್ತಾರು ಜಾಗಗಳನ್ನು ಸುತ್ತಾಡುತ್ತಿದ್ದ ಹಾಗೆ ನೂರಾರು ಕನಸುಗಳನ್ನು ಹೊತ್ತು ನಾನು ನಮ್ಮ ಅತ್ತೆಯೊಡನೆ ಕಾಶ್ಮೀರದ ರೈಲು ಹತ್ತಿದೆ. ಕಾಶ್ಮೀರಕ್ಕೆ ಹೋಗಿ ಎರಡು ದಿನ ಆ ಹೊಸ ಜಾಗದ ಖುಷಿ ಇತ್ತಾದರೂ ಕೆಲವೇ ದಿನಕ್ಕೆ ಅದು ಬೇಸರವೆನಿಸತೊಡಗಿತ್ತು. ಫೈರಿಂಗ್ ಮತ್ತು ನೈಟ್ ಡ್ಯೂಟಿ ಎಂದು ಅವರು ಮನೆ ಬಿಟ್ಟು ಹೋದರೆ ಮತ್ತೆ ಯಾವಾಗ ವಾಪಸ್ ಬರುತ್ತಾರೋ ಗೊತ್ತಿಲ್ಲ. ಮನೆಯಲ್ಲಿ ನಾನು ನಮ್ಮ ಅತ್ತೆ ಇಬ್ಬರೇ. ಅದೂ ಅಲ್ಲದೆ ಅಲ್ಲಿನ ಭಾಷೆಯಾದ ಹಿಂದಿ ಮತ್ತು ಕಾಶ್ಮೀರ ಇವೆರಡರ ಗಂಧಗಾಳಿಯೂ ನಮಗೆ ತಿಳಿಯದು. ನಮ್ಮ ಅತ್ತೆಯೂ ವಿದ್ಯಾವಂತೆ ಅಲ್ಲ. ನಾನಂತೂ ಕೇವಲ 5ನೇ ತರಗತಿವರೆಗೆ ಓದಿದ್ದ ಹುಡುಗಿ. ಅಲ್ಲಿನ ಭಾಷೆ ನಮಗೆ ಬಾರದು. ಕನ್ನಡಿಗರು ಅಲ್ಲಿ ಯಾರೂ ನಮಗೆ ಕಾಣರು. ಹಾಗಾಗಿ ದಿನದ 24 ಗಂಟೆಯೂ ಬಾಗಿಲು ಹಾಕಿಕೊಂಡು ಮನೆಯಲ್ಲಿಯೇ ಇರುವಂತೆ ಆಗಿತ್ತು. ಇವರ ಡ್ಯೂಟಿ ಯಾವಾಗ ಮುಗಿಯುತ್ತಿತ್ತೋ ಮತ್ತೆ ಯಾವಾಗ ಶುರು ಆಗುತ್ತಿತ್ತೋ ಆ ದೇವರೇ ಬಲ್ಲ. ಫೈರಿಂಗ್ ಡ್ಯೂಟಿ ಇದ್ದಾಗಲಂತೂ ಹದಿನೈದು ಇಪ್ಪತ್ತು ದಿನ ಅವರ ಮುಖ ದರ್ಶನವೇ ಇಲ್ಲದಂತಾಗುತ್ತಿತ್ತು.

ಈಗಿನಂತೆ ಆಗ ನೂರಾರು ಟೀವಿ ಚಾನಲ್ಲುಗಳೂ ಇರಲಿಲ್ಲ. ಮನೆಯಲ್ಲಿದ್ದದ್ದು ಒಂದು ಹಳೆಯ ಟಿವಿ. ಅದರಲ್ಲಿ ಬರುತ್ತಿದ್ದ ದೂರದರ್ಶನವಷ್ಟೇ ನಮ್ಮ ಕಾಲಕ್ಷೇಪದ ದಾರಿ. ಹಳ್ಳಿಯೇ ಚಂದವಿತ್ತು, ಹಳ್ಳಿಯ ತುಂಬಾ ಪರಿಚಯಸ್ಥರು. ಮಾತು-ಕತೆ, ಮದುವೆ, ಮುಂಜಿ, ಗೃಹಪ್ರವೇಶ – ಹೀಗೆ ನಿತ್ಯ ಜನರ ಜೊತೆ ಬೆರೆತು ನಗುತ್ತಾ ಇರಬಹುದಿತ್ತು. ಒಬ್ಬರ ಜೊತೆ ನೇರವಾಗಿ ಮುಖ ಕೊಟ್ಟು ಮಾತಾಡಿ ಎಷ್ಟು ದಿವಸವಾಗಿದೆಯೋ ಎಂಬಂತಿತ್ತು ನಮ್ಮ ಸ್ಥಿತಿ. ಅಷ್ಟರಲ್ಲಿ ನಾನು ಗರ್ಭಿಣಿ ಆಗಿದ್ದೆ. ಕಡೆಗೂ ನನ್ನ ಹಠಕ್ಕೆ ಸೋತು ಅವರು ಕಾಶ್ಮೀರದ ಪ್ರಸಿದ್ಧ ವೈಷ್ಣೋ ಮಾತ ದೇವಾಲಯಕ್ಕೆ ಕರೆದುಕೊಂಡು ಹೋದರು. ತುಂಬು ಗರ್ಭಿಣಿಯಾದ ನನಗೆ ಅಲ್ಲಿನ ಮೆಟ್ಟಿಲು ಹತ್ತಿ ಮೇಲೆ ಹೋಗಲು ಸಾಧ್ಯವಾಗದು ಎಂದುಕೊಂಡೆ. ಜೊತೆಯಲ್ಲಿ ಕೊರೆಯುವ ಚಳಿ ಬೇರೆ. ಒಂದು ಹೆಜ್ಜೆ ಎತ್ತಿಡಲೂ ಮಯ್ಯಲ್ಲಿನ ಶಕ್ತಿಯನ್ನೆಲ್ಲ ಸಂಚಯಿಸಿ ಪ್ರಯಾಸಪಡಬೇಕಿತ್ತು. ಇವರೇ ಧೈರ್ಯ ತುಂಬಿ ಮೇಲಿನ ತನಕ ಕರೆದುಕೊಂಡು ಹೋಗಿ ತಾಯಿಯ ದರ್ಶನ ಮಾಡಿಸಿದರು. ಇಂತಹ ಪರಿಸ್ಥಿತಿಯಲ್ಲಿ ಯೋಧರು ದಿನದ 24 ಗಂಟೆಯೂ ಅದು ಹೇಗೆ ಡ್ಯೂಟಿ ಮಾಡುತ್ತಾರೆ? ವರ್ಷಾನುಗಟ್ಟಲೆ ಈ ಕೊರೆವ ಛಳಿಯ ಹಿಮದ ಗದ್ದೆಗಳ ನಡುವೆ ಎಷ್ಟು ಕಷ್ಟ ಪಟ್ಟಿದ್ದಾರೆ? ಎಂದು ಕಾಶ್ಮೀರದ ಯೋಧರನ್ನು ನೆನೆದು, ಇಂತಹ ಹೆಮ್ಮೆಯ ಪತಿಯನ್ನು ಕೊಟ್ಟಿದ್ದಕ್ಕಾಗಿ ಖುಷಿ ತಡೆಯಲಾರದೆ ವೈಷ್ಣಾಮಾತಾ ಮುಂದೆ ಗಳಗಳನೆ ಕಣ್ಣೀರು ಹಾಕಿದ್ದೆ.

ವೈಷ್ಣೋ ಮಾತ ದರ್ಶನ ಮುಗಿಸಿ ಸ್ವಲ್ಪ ದಿನ ಕಾಶ್ಮೀರದಲ್ಲಿ ಇದ್ದು ಹೆರಿಗೆಗೆ ಹಳ್ಳಿಗೆ ಹೋಗುತ್ತೇನೆ ಎಂದು ಹೇಳಿ ರಿಸರ್ವೇಶನ್ ಮಾಡಿಸಿ ಮತ್ತೆ ಹಳ್ಳಿಗೆ ಬಂದು ಬಿಟ್ಟೆವು. ಕೆಲ ದಿನಕ್ಕೆ ಮಗಳು ಹುಟ್ಟಿದಳು. ಆಮೇಲೆ ಸುಮಾರು ಮೂರು ವರ್ಷ ಹಳ್ಳಿಯಲ್ಲೇ ಇದ್ದೆವು. ನಾವು ಹಳ್ಳಿಯಲ್ಲಿದ್ದರೂ ಇವರೇ ಆಗಾಗ ಬಂದು ಮಾತಾಡಿಸಿಕೊಂಡು ಒಂದಷ್ಟು ದಿನ ಇದ್ದು ಹೋಗುತ್ತಿದ್ದರು. ಆಗೆಲ್ಲ ನಮ್ಮ ಸಂಪರ್ಕ ಸಾಧನಗಳೆಂದರೆ ಕೇವಲ ಪತ್ರಗಳೇ. ಈಗಿನಂತೆ ಫೋನು, ವಿಡಿಯೋ ಕಾಲ್ ಯಾವುದೂ ಇರಲಿಲ್ಲ. ನಾವು ಪತ್ರವೊಂದನ್ನು ಬರೆದು ಅದು ಅವರ ಕೈಸೇರಿ ಮತ್ತೆ ಅವರು ಉತ್ತರ ಬರೆದು ಆ ಉತ್ತರ ನಮ್ಮ ಕೈ ಸೇರುವಷ್ಟರಲ್ಲಿ ಒಮ್ಮೊಮ್ಮೆ ಒಂದೂವರೆಯಿಂದ ಎರಡು ತಿಂಗಳಾಗುತ್ತಿತ್ತು. ಒಮ್ಮೊಮ್ಮೆ ಅವರು ಬರೆದ ಪತ್ರ ನಮ್ಮ ಕೈ ಸೇರುವುದಕ್ಕಿಂತ ಮುಂಚೆ ಅವರೇ ಊರಿಗೆ ಬಂದದ್ದೂ ಇದೆ. ಆ ಅವಧಿಯಲ್ಲಿಯೇ ಇನ್ನೊಬ್ಬ ಮಗ ಕೂಡ ಹುಟ್ಟಿದ. ಮಗ ಹುಟ್ಟಿದ ಐದಾರು ತಿಂಗಳಿಗೆ ಮತ್ತೆ ಇವರು ಬಂದು ಕಾಶ್ಮೀರದ ಪಠಾಣ್ ಕೋಟ್ ಗೆ ಕರೆದುಕೊಂಡು ಹೋದರು.

ಸೈನಿಕರಿಗೆ ಕಾಶ್ಮೀರದ ಡ್ಯೂಟಿ ಎಂದರೆ ಅದು ನಾವೆಣಿಸಿದಷ್ಟು ಸುಲಭವಲ್ಲ. ಕ್ವಾಟರ್ಸ್ ಸಿಕ್ಕರಷ್ಟೇ ಸೈನಿಕರು ತಮ್ಮ ಸಂಸಾರವನ್ನು ಕರೆದುಕೊಂಡು ಹೋಗಬಹುದು. ಇಲ್ಲವಾದರೆ ತುಂಬಾ ರಿಸ್ಕ್. ಒಂದುವೇಳೆ ಕ್ವಾಟರ್ಸ್ ಸಿಗದೇ ಬಾಡಿಗೆ ಮನೆಯೊಂದನ್ನು ಮಾಡಿ ಅದರಲ್ಲಿ ತನ್ನ ಕುಟುಂಬವನ್ನು ಇಟ್ಟರೆ ಉಗ್ರವಾದಿಗಳಿಂದ ತೊಂದರೆ ಕಟ್ಟಿಟ್ಟ ಬುತ್ತಿ. ಹೀಗಾಗಿ ಕ್ವಾಟ್ರಸ್ ಗೆ ಅಪ್ಲೈ ಮಾಡಿ, ಅದಕ್ಕೆ ಪರ್ಮಿಷನ್ ಸಿಗುವ ತನಕ ಕಾದಿದ್ದು ನಮ್ಮನ್ನು ಕರೆದುಕೊಂಡು ಮತ್ತೆ ಪಠಾನ್ಕೋಟ್ ಗೆ ಹೋದರು. ಇದಾದ ಐದಾರು ತಿಂಗಳಲ್ಲಿ ನಾವು ಊರಿಗೆ ಬರಬೇಕು ಎಂದು ಪ್ಲಾನ್ ಮಾಡಿದೆವು. ಇವರೂ ಕೂಡ ಒಂದಷ್ಟು ದಿನ ರಜೆ ಹಾಕಿ ಊರಿಗೆ ಬಂದು ಊರಲ್ಲಿ ಸಮಯ ಕಳೆಯಬೇಕು ಎಂದು ಪ್ಲಾನ್ ಮಾಡಿ ನಮ್ಮೆಲ್ಲರಿಗೂ ಬೆಳಗಾವಿಗೆ ಟ್ರೈನ್ ರೆಸೆರ್ವಶನ್ ಮಾಡಿಸಿಕೊಂಡು ಬಂದಿದ್ದರು. ನಾನು ಮತ್ತು ಅತ್ತೆ ಪ್ಯಾಕಿಂಗ್ ನಲ್ಲಿ ಬಿಜಿಯಾಗಿದ್ದೆವು. ಆಗ ಮತ್ತೊಮ್ಮೆ ಇವರಿಗೆ ಫೈರಿಂಗ್ ಡ್ಯೂಟಿಯ ಕರೆ ಬಂತು. ಕರೆಬಂತು ಎಂದು ಹೋದವರು ಒಂದು ತಿಂಗಳಾದರೂ ಬರಲಿಲ್ಲ. ಎರಡು ತಿಂಗಳಾದರೂ ಅವರ ಕಡೆಯಿಂದ ಯಾವುದೇ ಪತ್ರವಿಲ್ಲ. ಅವರ ಕಡೆಯಿಂದ ಆಗಾಗ ಬರುತ್ತಿದ್ದ ಪತ್ರವು ಕೂಡ ನಿಂತುಹೋಯಿತು. ಆದರೂ ನಮ್ಮ ಕ್ಷೇಮ ಸಮಾಚಾರವನ್ನು ಅಲ್ಲಿನ ಅಧಿಕಾರಿಗಳು ಬಹಳ ಚನ್ನಾಗಿ ನೋಡಿಕೊಳ್ಳುತ್ತಿದ್ದರು. ನಾನು ಅಷ್ಟೊತ್ತಿಗೆ ಆಗಲೇ ಅಲ್ಪಸ್ವಲ್ಪ ಹಿಂದಿ ಕಲಿತಿದ್ದೆ. ಆಗ ನನಗೆ ತಿಳಿದದ್ದೇನೆಂದರೆ ಅಷ್ಟೊತ್ತಿಗಾಗಲೇ ಕಾರ್ಗಿಲ್ ಯುದ್ಧ ಶುರುವಾಗಿ ಇವರು ಕಾರ್ಗಿಲ್ ಯುದ್ಧದ ಡ್ಯೂಟಿಯ ಮೇಲೆ ಹೋಗಿದ್ದಾರೆ ಎಂದು.

ಸರಿ ಡ್ಯೂಟಿ ಮುಗಿಸಿಕೊಂಡು ಬರಲಿ. ಅದಾದ ಮೇಲೆಯೇ ಊರಿಗೆ ಹೋದರಾಯಿತು ಎಂದು ನಾನು, ಮಕ್ಕಳು ಮತ್ತು ನಮ್ಮ ಅತ್ತೆ ಹಾಗೆಯೇ ಕಾಲ ತಳ್ಳುತ್ತಿದ್ದೆವು. ಅದಾದ ಸ್ವಲ್ಪ ದಿನಕ್ಕೆ ಅಧಿಕಾರಿಯೊಬ್ಬರು ಬಂದು “ಮೇಡಂ! ನಿಮ್ಮ ಮಾವನವರಿಗೆ ಹುಷಾರಿಲ್ಲ ಹಾಗಾಗಿ ನೀವು ತಕ್ಷಣ ಊರಿಗೆ ಹೋಗಬೇಕಂತೆ. ಯಶವಂತ್ ಸರ್ ಸ್ವಲ್ಪ ದಿನದ ಬಳಿಕ ಬಂದು ನಿಮ್ಮನ್ನು ಸೇರಿಕೊಳ್ಳುತ್ತಾರೆ . ನೀವು ಹೊರಡಿ. ಯಶವಂತ್ ಸರ್ ಮುಂದಿನವಾರ ಇನ್ನೊಂದು ಹತ್ತು-ಹದಿನೈದು ದಿವಸದಲ್ಲಿ ಬರುತ್ತಾರೆ” ಎಂದು ಹೇಳಿ ಅವರ ಜೊತೆಗೆ ಸಹಾಯಕ್ಕೆಂದು ಕನ್ನಡ ಮರಾಠಿ ಗೊತ್ತಿದ್ದ ಜವಾನ್ ಒಬ್ಬರನ್ನು ನಮ್ಮ ಜೊತೆಯಲ್ಲಿ ಕಳಿಸಿ ಬೆಳಗಾವಿಯ ರೈಲು ಹತ್ತಿಸಿದರು. ಮೂರು ನಾಲ್ಕು ದಿನದ ರೈಲಿನ ಪ್ರಯಾಣದ ಬಳಿಕ ಕಡೆಗೂ ಬೆಳಗಾವಿಗೆ ಬಂದು ಸೇರಿದೆವು. ರೈಲು ನಿಲ್ದಾಣ ಸೇರಿದೊಡನೆ ಅಲ್ಲಿ ಮಾರುತ್ತಿದ್ದ ಮಲ್ಲಿಗೆ ಹೂ ಕಂಡು ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ಚಿಕ್ಕಂದಿನಿಂದಲೂ ನನಗೆ ಮಲ್ಲಿಗೆ ಹೂವೆಂದರೆ ಪ್ರಾಣ. ರೈಲು ಇಳಿದ ಕೂಡಲೇ ನಾಲ್ಕು ಮೊಳ ಹೂ ತೆಗೆದುಕೊಂಡು ತಲೆ ತುಂಬಾ ಮುಡಿದುಕೊಂಡೆ. ಊರಿಗೆ ಹೋಗ್ತಾ ಇದೀವಲ್ವಾ ಅಕ್ಕ? ಇವಗ್ಯಾಕೆ ತಗೊಂಡ್ರಿ ಎಂದು ನಮ್ಮ ಜೊತೆ ಬಂದಿದ್ದ ಜವಾನ್ ಹೇಳಿದ ಸೂಕ್ಷ್ಮ ನನಗೆ ಅರ್ಥವೇ ಆಗಲಿಲ್ಲ. ಬೆಳಗಾವಿ ಊರಿನ ತುಂಬೆಲ್ಲ ಎಲ್ಲಿ ನೋಡಿದರೂ ಸೈನಿಕರ ಪೋಸ್ಟರುಗಳು ಮತ್ತು ಕಟೌಟ್ ಗಳು. ಅದನ್ನು ನೋಡಿ ನನಗೆ ಒಂದು ಕಡೆ ಸಂತೋಷವಾದರೆ ಇನ್ನೊಂದು ಕಡೆ ದುಃಖ ಆಗುತ್ತಿತ್ತು. ಅವು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಫೋಟೋಗಳು ಎಂದು ನನಗೆ ತಿಳಿಯಲಿಲ್ಲ. ನಾನಂದುಕೊಂಡದ್ದು ಏನೆಂದರೆ ಯುದ್ಧದಲ್ಲಿ ಭಾಗವಹಿಸಿದ್ದ ಯೋಧರಿಗೆ ಸನ್ಮಾನ ಮಾಡಲು ಹಾಕಿರುವ ಫೋಟೋಗಳು ಅವು ಎಂದು ತಿಳಿದು ನಾನು ಕೂಡ ಒಬ್ಬ ಯೋಧನ ಪತ್ನಿಯಾಗಿದ್ದಕ್ಕೆ ತುಂಬಾ ಖುಷಿಯಾಯಿತು. ಆದರೆ ನನ್ನ ಗಂಡನ ಫೋಟೋ ಫೋಟೋ ಅಲ್ಲಿ ಇಲ್ಲದ್ದನ್ನು ಕಂಡು ಸ್ವಲ್ಪ ದುಃಖವಾಯಿತು. ಬೆಳಗಾವಿಯಿಂದ ನೇಸರ್ಗಿ ಸುಮಾರು 30 ಕಿಲೋಮೀಟರ್.

ನಾವು ಬರುತ್ತಿದ್ದಾಗ ಪ್ರತಿ ಊರಿನಲ್ಲೂ ನಮ್ಮ ಕಾರನ್ನು ನಿಲ್ಲಿಸಿ ಅದಕ್ಕೆ ಹೂವಿನ ಹಾರ ಹಾಕಿ ಸನ್ಮಾನ ಮಾಡುತ್ತಿದ್ದರು. ತಲೆತುಂಬಾ ಹೂವನ್ನು ಮುಡಿದು ನಗುನಗುತ್ತಾ ಎಲ್ಲರ ಜೊತೆ ಮಾತಾಡುತ್ತಿದ್ದ ನನ್ನನ್ನು ಕಂಡು ಎಲ್ಲರೂ ಪಿಸುಪಿಸು ಮಾತಾಡಿಕೊಳ್ಳುತ್ತಿದ್ದರು. ಯೋಧನ ಹೆಂಡತಿಯಾಗಿದ್ದಕ್ಕೆ ನನಗೆ ಮಾಡುತ್ತಿರುವ ಮರ್ಯಾದೆ ಇದು ಎಂದು ತಿಳಿದು ನಾನು ರೆಕ್ಕೆ ಬಿಚ್ಚಿ ಆಕಾಶಕ್ಕೆ ಹಾರುತ್ತಿದ್ದಂತೆ ಭಾಸವಾಗುತ್ತಿತ್ತು. ಅಲ್ಲಿ ನಡೆಯುತ್ತಿದ್ದ ಮರ್ಯಾದೆ, ಗೌರವ, ಸನ್ಮಾನ ಕಂಡು ಒಳಗೊಳಗೆ ತುಂಬಾ ಖುಷಿಯಾಗುತ್ತಿತ್ತು. ಹಿಂದಿಯನ್ನೇ ಕೇಳಿ ಕೇಳಿ ಬೇಜಾರಾಗಿದ್ದ ನನ್ನ ಕಿವಿಗಳಿಗೆ ನಮ್ಮ ಕನ್ನಡ ಅದರಲ್ಲೂ ಬೆಳಗಾವಿಯ ಕನ್ನಡವನ್ನು ಕೇಳಿ ಆನಂದವಾಗುತ್ತಿತ್ತು. ಖುಷಿಯಿಂದ ಬರುತ್ತಿದ್ದ ನನಗೆ ಗೊತ್ತಿರದಿದ್ದ ವಿಷಯವೇನೆಂದರೆ ನನ್ನ ಪತಿ ಕಾರ್ಗಿಲ್ ಯುದ್ಧದಲ್ಲಿ ವೀರಮರಣವನ್ನಪ್ಪಿದ್ದರು. ನನಗೆ ಗೊತ್ತಿರದಿದ್ದ ಇನ್ನೊಂದು ಸಂಗತಿಯೆಂದರೆ ನಾನು ಬರುತ್ತಿದ್ದ ಕಾರಿನ ಹಿಂದೆಯೇ ಅವರ ಪಾರ್ಥಿವ ಶರೀರ ಕೂಡ ಬರುತ್ತಿತ್ತಂತೆ. ಇದು ನನಗೆ ಗೊತ್ತೇ ಇರಲಿಲ್ಲ. ಅಂತೂ ನನ್ನ ತವರುಮನೆಯಾದ ನೇಸರ್ಗಿಗೆ ಬಂದರೆ ಮನೆಯಲ್ಲಿ ಯಾರೂ ಇಲ್ಲ. ಎಲ್ಲರೂ ಎಲ್ಲಿ ಹೋಗಿದ್ದಾರೆ ಎಂದು ಕೇಳಿದರೆ ಯಾರೂ ಸರಿಯಾದ ಉತ್ತರವನ್ನೇ ಕೊಡುತ್ತಿರಲಿಲ್ಲ ಯಾರನ್ನು ಎಷ್ಟೇ ಮಾತನಾಡಿಸಿದರೂ ಕೂಡ ಏನೋ ಒಂದು ಹಾರಿಕೆಯ ಉತ್ತರವಷ್ಟೇ ಬರುತ್ತಿತ್ತು.ಕಡೆಗೂ ಹೇಗೋ ನನ್ನ ಪತಿ ಕಾರ್ಗಿಲ್ ಕದನದಲ್ಲಿ ಹುತಾತ್ಮರಾಗಿ ಅವರ ಪಾರ್ಥಿವ ಶರೀರ ಹಳ್ಳಿಗೆ ಬರುತ್ತಿದ್ದ ವಿಷಯ ಕೇಳಿದ ತಕ್ಷಣ ನನಗೆ ಜಂಘಾಬಲವೇ ಹುದುಗಿಹೋಯ್ತು. ಒಂದು ಬಾರಿ ಮೈನರ್ ಹಾರ್ಟ್ ಅಟ್ಯಾಕ್ ಆಯಿತು. ಅಲ್ಲಿದ್ದವರೆಲ್ಲ ನನಗೆ ಸಮಾಧಾನಪಡಿಸಿದರು. ಪ್ರಥಮ ಚಿಕಿತ್ಸೆ ಪಡೆದು ನಾನು ಮತ್ತೆ ಹಿಂದಿರುಗಿ ಬರುವಷ್ಟರಲ್ಲಿ ನನ್ನ ಪತಿಯ ಅಂತ್ಯಕ್ರಿಯೆಯೆಲ್ಲವೂ ಮುಗಿದೇ ಹೋಗಿತ್ತು. ಹುತಾತ್ಮರಾದ ಬಳಿಕವೂ ನನ್ನ ಪತಿಯ ಮುಖ ನಾನು ನೋಡಲು ಸಾಧ್ಯವಾಗಲೇ ಇಲ್ಲ. ನನ್ನ ಗಂಡನ ಪಾರ್ಥಿವ ಶರೀರವು ಸಕಲ ಸರ್ಕಾರೀ ಗೌರವಗಳೊಡನೆ ಪಂಚಭೂತಗಳಲ್ಲಿ ಲೀನವಾಗಿತ್ತು.

ನನ್ನ ಗಂಡ ನನ್ನೊಡನೆ ಇಲ್ಲ ಎಂದು ತಿಳಿದಾಗ ಈಗಲೂ ದುಃಖವಾಗುತ್ತದೆ. ಕೆಲವೊಮ್ಮೆ ಅಳು ಒತ್ತರಿಸಿ ಬರುತ್ತದೆ. ಆದರೆ ಅದರ ಮರುಕ್ಷಣವೇ “ನೂರು ಕೋಟಿ ಜನರ ಧೈರ್ಯದ ಸಂಕೇತವಾಗಿದ್ದರು ನನ್ನ ಪತಿ. ಭಾರತದ ವೀರಯೋಧರಾಗಿದ್ದರು ನನ್ನ ಪತಿ. ಭಾರತಾಂಬೆಯ ತಲೆಯಾದ ಕಾರ್ಗಿಲ್ ಅನ್ನು ಉಳಿಸಲು ಪ್ರಾಣಕೊಟ್ಟರು ನನ್ನ ಪತಿ. ಕೋಟಿಗೊಬ್ಬರು ನನ್ನ ಪತಿ” ಎಂದು ತಿಳಿದು ಅಂತಹ ವೀರಯೋಧನ ಪತ್ನಿಯಾಗಿದ್ದಕ್ಕೆ ಹೆಮ್ಮೆಯಾಗುತ್ತದೆ. ಬರುತ್ತಿದ್ದ ಅಳು ಮಾಯವಾಗಿ ಮುಖದ ಮೇಲೆ ಕಿರುನಗೆ ಮೂಡುತ್ತದೆ. ನನ್ನ ಗಂಡ ಕೇವಲ ವ್ಯಕ್ತಿಯಲ್ಲ, ದೇವರು ಎಂದು ತಿಳಿದಾಗ ಧನ್ಯತಾ ಭಾವ ಮೂಡುತ್ತದೆ. ನನ್ನ ಪತಿಯಂತೆ ಮಗನೂ ದೇಶ ಕಾಯುವ ವೀರ ಯೋಧನಾಗಲಿ. ಭಾರತ ಮಾತೆಯ ಮಡಿಲಲ್ಲಿ ಇಂತಹ ಸಾವಿರಾರು ವೀರಯೋಧರು ಹುಟ್ಟಿಬರಲಿ ಎಂದು ಸಮಾಧಾನವಾಗುತ್ತದೆ.

ನಾಲ್ಕು ಬಾರಿ ರಕ್ಷಾಕವಚ ಪ್ರಶಸ್ತಿ ಪಡೆದಿದ್ದ ವೀರಯೋಧ ಯಶವಂತ್ ಕೋಲ್ಕಾರ್ ಮತ್ತೊಮ್ಮೆ ಹುಟ್ಟಿಬರಲಿ. ಭಾರತಾಂಬೆಯ ಸೇವೆ ಮತ್ತೆ ಮಾಡುವಂತಾಗಲಿ. ಜೈ ಹಿಂದ್.

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply