ನ್ಯಾಚುರಲ್ ಆಕ್ಟಿಂಗ್ ಅಂತೇನಾದರೂ ಇದ್ದರೆ ಈ ಸಿನೆಮಾ ನಟರನ್ನು ಹೆಸರಿಸಬಹುದು. ಅಂತಹಾ ಅಪ್ಪಟ ಕಲಾವಿದರನ್ನು ಒಳಗೊಂಡ ಸಿನೆಮಾ ಇದು. ಯಾರೂ ನಟಿಸಿಯೇ ಇಲ್ಲ… ಎಲ್ಲರೂ ಅನುಭವಿಸಿ ಅನುಭಾವಿಸಿದ್ದಾರೆ. ಅವರೊಳಗಿನ ಪಕ್ವತೆ ಸಿನೆಮಾ ಉದ್ದಕ್ಕೂ ಎದ್ದು ಕಾಣುತ್ತದೆ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಅಲ್ಲವೇ?
ಕೇವಲ ಐದಾರು ಪಾತ್ರಧಾರಿಗಳನ್ನು ಇಟ್ಟುಕೊಂಡು, ಒಂದೇ ಲೋಕೇಷನ್ನಿನಲ್ಲಿ ಒಂದು ಚೂರೂ ಬೇಸರ ಬರದಂತೆ ಸಿನೆಮಾ ತೆಗೆಯುವುದು ಎಂದರೆ ತಮಾಷೆಯಲ್ಲ. ಅದಕ್ಕಾಗಿ ಒಂದು ಚಂದದ ಚಿತ್ರಕಥೆ ಬೇಕಾಗುತ್ತದೆ. ಕಥೆಯ ಒಳಗಿನ ಟ್ವಿಸ್ಟುಗಳನ್ನೂ ಸಹ ನಮಗೆ ಗೊತ್ತೇ ಆಗದಂತೆ ತರಬೇಕಿರುತ್ತದೆ.
ಅಂದುಕೊಂಡಿದ್ದು ಯಾವುದೂ ಆಗೋಲ್ಲ ಇಲ್ಲಿ!!! ಹಾಗಾದರೆ ಆಗೋದೇನು??
ಸಾಮಾನ್ಯವಾಗಿ ಮಿಡಲ್ ಕ್ಲಾಸ್ ದಂಪತಿಗಳ ನಡುವೆ ನಡೆಯುವ ಜಗಳವೇ ಇಲ್ಲಿಯೂ ನಡೆಯುವುದು. ಇದು ನಮ್ಮ-ನಿಮ್ಮೆಲ್ಲರ ಕಥೆಯೇ ಆಗಿರುವುದರಿಂದ ಅವರಿಬ್ಬರ ಜಗಳವನ್ನು ನಾವು ಮನಸಾರೆ ಎಂಜಾಯ್ ಮಾಡುತ್ತೇವೆ. ಜೊತೆಗೆ ಕೊರೋನಾ ಎಂಬ ವಿಷಯ ಕೂಡ ಸೇರಿಕೊಂಡಿದೆ. ಅದೇ ಮುಖ್ಯ ಕೂಡ ಇಲ್ಲಿ.
ನಾಯಕಿ ಯಾವ ಪ್ರಸಾದನದ ಮೊರೆ ಹೋಗದೇ ಮೇಕಪ್ಪಿಲ್ಲದ ಮುಖದಲ್ಲಿ ನಟಿಸಿರುವುದು ಕನ್ನಡ ಚಿತ್ರರಂಗ ಬದಲಾಗುತ್ತಿರುವ ಸೂಚನೆ ಕೊಡುತ್ತದೆ. ನಾಯಕನೂ ಅಷ್ಟೇ ನ್ಯಾಚುರಲ್ಲಾಗಿ ಚೆನ್ನಾಗಿ ನಟಿಸಿದ್ದಾರೆ. ಇದರ ನಾಯಕ ನಾಯಕಿಗೆ ಮಾತ್ರ ಇಷ್ಟವಿಲ್ಲ ಹೊರತೂ ನಮಗೆಲ್ಲಾ ಆತ ಬಹಳ ಇಷ್ಟವಾಗುತ್ತಾರೆ.
ಒಂದು ಪುಟ್ಟ ಮನೆಯೊಳಗೆ ಪಾತ್ರಧಾರಿಗಳು ತಮಗೆ ಕೊಟ್ಟ ಪಾತ್ರ ನಿಭಾಯಿಸುತ್ತಾ ಅತ್ತಿಂದಿತ್ತ ಓಡಾಡುತ್ತಾ ಧಾವಿಸುತ್ತಿದ್ದರೆ, ಅದನ್ನು ಯಾವುದೇ ಚ್ಯುತಿ ಬರದ ಹಾಗೆ ಸೆರೆ ಹಿಡಿದ ಛಾಯಾಗ್ರಾಹಕನಿಗೆ ಮೊದಲ ಕ್ರೆಡಿಟ್ ಹೋಗುತ್ತದೆ.

ಬೇಕಿದ್ದರೆ ಸಿನೆಮಾ ನೋಡುವಾಗ ಗಮನಿಸಿ;
ಗಂಡ ದಿನಸಿ ತರಲು ಹೊರ ಹೋದಾಗ ನಾಯಕಿ ರೂಮಿನಲ್ಲಿ ಬಟ್ಟೆ ಮಡಚುತ್ತಿರುತ್ತಾಳೆ. ಆಗ ‘dude ಮಗ’ ನಾಯಕಿಗೆ ಕಾಣಿಸಿಕೊಳ್ಳುತ್ತಾನೆ. ಆ ಸಮಯದಲ್ಲಿ ಕ್ಯಾಮೆರಾಮನ್ ನಾಯಕಿಯ ಕೊಠಡಿಯ ಕನ್ನಡಿಯಲ್ಲಿ ಕ್ಯಾಮೆರಾ ಕಾಣಿಸದಂತೆ ಒಳ ಹೋಗುತ್ತಾನೆ. ಇದೊಂದು ಅದ್ಭುತ ಟ್ರಿಕ್ ಎನಿಸಿತು ನನಗೆ.
ಉಳಿದಂತೆ ನನಗೆ ಇಷ್ಟವಾದದ್ದು ಕಥೆಯ ನಿರೂಪಣೆ.
ಕಳ್ಳ ಬಂದಿದ್ದಾನೆ ಅಂತ ನಾಯಕ ಊಹಿಸುವ ದೃಶ್ಯಗಳಂತೂ ಅದ್ಭುತವಾಗಿ ಮೂಡಿ ಬಂದಿದೆ. ಹಾಗೆಯೇ ನಾಯಕಿಯೂ ಕೆಲವು ವಿಷಯಗಳನ್ನು ಕಲ್ಪಿಸಿಕೊಳ್ಳುವಾಗ ಚಿತ್ರಿಸಿರುವ ರೀತಿ ಅನನ್ಯವಾಗಿದೆ. ಕೊರೋನಾ ಟೆಸ್ಟ್ ಮಾಡುವವರು ಮನೆಯೊಳಗೆ ಎಂಟ್ರಿ ಆದ ಸೀನ್ ಅನ್ನು ಚಿತ್ರೀಕರಿಸಿರುವ ಆಂಗಲ್ ಬಹಳ ಸೊಗಸಾಗಿದೆ. ಏನೇ ಮಾಡಿರಲಿ, ಮಾಡಿರುವುದನ್ನು ಎಲ್ಲರೂ ಬಹಳ ಶ್ರದ್ಧೆಯಿಂದ ಮಾಡಿದ್ದಾರೆ. ಅದೇ ನಮ್ಮ ಹೃದಯ ಗೆದ್ದಿರುವುದು.
ಈ ಎಲ್ಲಾ ಕಡೆ ಗಮನ ಸೆಳೆಯುವುದು ಹಿನ್ನೆಲೆ ಸಂಗೀತ ಮತ್ತು ಸಿನೆಮಾಟೋಗ್ರಫಿ. ಬಿ.ಜಿ.ಎಂ ನೂರಕ್ಕೆ ನೂರು ಸೊಗಸಾಗಿದೆ. ಇರುವ ಎರಡು- ಮೂರು ಹಾಡುಗಳು ಸಿನೆಮಾ ಜೊತೆಯೇ ಸಾಗುವುದರಿಂದ ಸಂಭಾಷಣೆ ಬೇರೆ, ಹಾಡು ಬೇರೆ ಎಂಬ ವ್ಯತ್ಯಾಸವೇ ಕಾಣಿಸೋಲ್ಲ. ಹಾಡನ್ನು ಸಕತ್ ಎಂಜಾಯ್ ಮಾಡುತ್ತೇವೆ.
ಸಿನೆಮಾಟೋಗ್ರಾಫರ್ ಮತ್ತು ಸಂಗೀತ ನಿರ್ದೇಶಕರಿಗೆ ಉಜ್ವಲ ಭವಿಷ್ಯವಿದೆ. ಹಾಂ… ಇವರಿಗೆ ಡೈರೆಕ್ಷನ್ ಕೊಟ್ಟ ಡೈರೆಕ್ಟರುಗಳನ್ನು ಹೇಗೆ ಮರೆಯಲಿ? ಅದ್ಭುತ ನಿರ್ದೇಶನ. ಒಂದು ಸಣ್ಣ ಕಥೆಗೆ ಒಂದು ಉಪಕಥೆ, ಅದಕ್ಕೊಂದು ತಿರುವು, ಅದಕ್ಕೊಂದು ಪುಟ್ಟ ಕಥೆ ಸೇರಿಸಿ ಮಾಡಿರುವ “ಇಕ್ಕಟ್” ಮನರಂಜನೆಗೆ ಹೇಳಿ ಮಾಡಿಸಿದ ಸಿನೆಮಾ.
ಸ್ಟಾರ್‌ಗಿರಿಯಿಂದ ಹೊರತಾದ ಈ ಸಿನೆಮಾವನ್ನು ಯಾವುದೇ ನಿರೀಕ್ಷೆಗಳಿಲ್ಲದೇ ನೋಡಬೇಕಿದೆ. ಹಾಗೆ ನೋಡಿದಾಗಲೇ ಕಲಾವಿದರ ನಟನೆ ಮತ್ತು ನಿರ್ದೇಶಕರ ಸೃಜನಶೀಲತೆ ಹೃದಯ ಮುಟ್ಟುತ್ತದೆ.