ಸಿನೆಮಾ ವಿಮರ್ಶೆ : “ಶೇರನಿ” (ಹಿಂದಿ)

ಶೇರನಿ ಅಂದ್ರೆ ಸಿಂಹಿಣಿ. ಶೇರನಿ ಅಂತ ಟೈಟಲ್ ಕೊಟ್ಟು ವಿದ್ಯಾ ಬಾಲನ್ ಫೋಟೋ ಹಾಕಿರುವುದನ್ನು ನೋಡಿ, ಈ ಫಿಲಂ ‘ಹೀರೋಯಿನ್‌’ ಅನ್ನು ಸಿಂಹಿಣಿ ಅಂತ ಕರೆದಿರಬೇಕು‌ ಅಂದ್ಕೊಂಡಿದ್ದೆ. ಆದರೆ ಇದು ಆ ಥರ ಸಿನೆಮಾ ಅಲ್ಲ. “ಶೇರನಿ” ಅನ್ನೋ ಟೈಟಲ್ ನಿಜವಾದ ಹೆಣ್ಣುಹುಲಿಯದ್ದೇ !!

ಈ ಸಿನೆಮಾ ಸ್ಲೋ, ಓಕೆಓಕೆ, ಒಮ್ಮೆ ನೋಡಬಹುದು ಎಂಬಂತಹ ಕಾಮೆಂಟ್ ಮಾಡಿದವರಿಗೆ ನಮ್ಮ ದೇಶದಲ್ಲಿ ನಿಜವಾಗಿ ಏನು ನಡೆಯುತ್ತಿದೆ ಎಂಬುದರ ಅರಿವಿಲ್ಲ ಅಥವಾ ಅವರಿಗದು ಬೇಕಿಲ್ಲ ಎಂದೆನಿಸುತ್ತದೆ. ಸರ್ಕಾರಿ ಅವ್ಯವಸ್ಥೆಯನ್ನು ಈ ಪರಿ ಬಗೆದು ತೋರಿಸುವುದು ಇದರ ನಿರ್ದೇಶಕರು ಮಾತ್ರವೇನೋ? ಆ ಕಛೇರಿಯ ಕಟ್ಟಡ, ಅಲ್ಲಿನ ಅಧಿಕಾರಿಗಳು, ಅವರ ಮನಸ್ಥಿತಿಗಳು…. ಇವನ್ನೆಲ್ಲಾ ನೋಡಿಯೂ ಸಿನೆಮಾ ಡಬ್ಬ ಎನ್ನುವುದಾದರೆ ಮತ್ತೇನು ತೋರಿಸಬೇಕು? ಒಬ್ಬ ಹೀರೋ ನೂರು ಜನರನ್ನು ಹೊಡೆಯುವಂತಹಾ ವೈಭವೀಕರಣವಾ?

ಬಹುಶಃ ಈ ಸಿನೆಮಾ ಬಹಳಷ್ಟು ಜನರಿ್ಗೆಗೆ ಇಷ್ಟವಾಗದೇ ಇರುವುದಕ್ಕೆ ಕಾರಣ ಇದರ ಕಥೆಯೇ ಅನ್ನಿಸುತ್ತದೆ‌. ಪ್ರೀತಿ-ಪ್ರೇಮ-ಮೋಸ-ವಂಚನೆಗಳ ಕಥೆಯಾದರೆ ಇದು ಎಲ್ಲರ ಬದುಕಿನಲ್ಲಿಯೂ ನಡೆದಿರುತ್ತದೆ. ಆದರೆ ಹುಲಿಯನ್ನು ಜನ್ಮದಲ್ಲಿ ಒಮ್ಮೆಯೂ ನೋಡದವರಿಗೆ ಅದರ ರೆಸ್ಕ್ಯೂ ಆಪರೇಷನ್ ಬೋರ್ ಹುಟ್ಟಿಸಬಹುದೇನೋ? ಪ್ರಪಂಚ ಪ್ರಳಯದ ಕಥೆಯ ಸಿನೆಮಾ ಬಂದಾಗ ಜನ ಮುಗಿಬಿದ್ದು ನೋಡಿದರು. ಏಕೆಂದರೆ ಅದರಲ್ಲಿ ಅವರ ಜೀವನವೇ ಅಡಗಿತ್ತು. ಜನರು ಪ್ರತಿಕ್ರಿಯಿಸುವುದು ಅವರಿಗೆ ಸಂಬಂಧ ಇದ್ದಾಗ ಮಾತ್ರ ಅನ್ನಿಸುತ್ತೆ.

ಈ ಕಥೆ ಮಾನವ ಮತ್ತು ಕಾಡುಪ್ರಾಣಿಗಳ ನಡುವಿನ ಸಂಘರ್ಷದ್ದು.

ಜನರು ಮತ್ತು ಕಾಡುಪ್ರಾಣಿಗಳು ಈ ಪ್ರಕೃತಿಯ ಅವಿಭಾಜ್ಯ ಅಂಗ. ಇವೆರೆಡೂ ಒಂದೇ ಕಡೆ ಇರುವಂತಹ ಸೌಹಾರ್ದಯುತವಾದ ವಾತಾವರಣ ನಾವು ನಿರ್ಮಿಸಬೇಕು ಹೊರತೂ, ಹುಲಿಯನ್ನು ಕೊಲ್ಲುವುದು ಅಥವಾ ಜನರನ್ನೆಲ್ಲ ಎತ್ತಂಗಡಿ ಮಾಡಿ ಆ ಜಾಗವನ್ನು ನ್ಯಾಷನಲ್ ಪಾರ್ಕ್ ನಿರ್ಮಾಣ ಮಾಡುವುದು ಈ ಸಮಸ್ಯೆಗೆ ಪರಿಹಾರ ಅಲ್ಲ.

ಒಮ್ಮೆ ಅರಣ್ಯ ಇಲಾಖೆಯವರು ಜನರಿಗೆ ‘ಹುಲಿ’ಯ ಬಗೆಗಿನ ಭಯವನ್ನು ಓಡಿಸಿ, ಹುಲಿಯ ಜೊತೆಗೆ ಹೇಗೆ ಬದುಕಬೇಕು ಮತ್ತು ಅಕಸ್ಮಾತ್ ಕಾಡಿನಲ್ಲಿ ಹುಲಿ ನಮ್ಮ ಎದುರಿಗೆ ಬಂದಾಗ ಏನು ಮಾಡಬೇಕು ಎಂಬ ತಿಳುವಳಿಕೆ ನೀಡುತ್ತಿರುತ್ತಾರೆ. ಜನರೂ ಆಸಕ್ತಿಯಿಂದ ಕೇಳುತ್ತಿರುತ್ತಾರೆ.

ಆಗೇನಾಗುತ್ತದೆ……??

ಅಲ್ಲಿ ಜನ ಸೇರಿದ್ದಾರೆ ಎಂಬ ಏಕೈಕ ಕಾರಣಕ್ಕೆ ಯಾವುದೇ ಆಹ್ವಾನ ಇರದಿದ್ದರೂ, ಜನಪ್ರತಿನಿಧಿಯೊಬ್ಬ ಆ ವೇದಿಕೆಯನ್ನು ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಾನೆ. ಜನರು ಅರಣ್ಯ ಇಲಾಖೆಯವರು ಇಷ್ಟರವರೆಗೂ ಮಾಡಿದ ಪಾಠ ಮರೆತು ಆ ರಾಜಕೀಯ ನಾಯಕನಿಗೆ ಜೈಕಾರ ಹಾಕುತ್ತಾರೆ. ಈಗ ಅರಣ್ಯ ಇಲಾಖೆ ನಡೆಸಿದ್ದ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತಾಗಲಿಲ್ಲವೇ? ಜನರ ಜೀವನ ಮತ್ತು ಸರ್ಕಾರದ ಕಾರ್ಯಾಂಗ ಎರಡಕ್ಕೂ ರಾಜಕೀಯ ಅನ್ನುವುದು ಮಗ್ಗುಲ ಮುಳ್ಳಾಗಿದೆ ಅಂತ ಜನ ಅರ್ಥ ಮಾಡಿಕೊಳ್ಳುವುದು ಯಾವಾಗ?

ಇನ್ನೊಂದು ಸಮಸ್ಯೆ ಹೀಗಿದೆ:

ಒಂದು ಕಾಡು… ಕಾಡಿನ ಪಕ್ಕದಲ್ಲಿ ಒಂದು ಹಳ್ಳಿ ಇದೆ. ಈಗ ಆ ಕಾಡಿನೊಳಗೆ ಶೇರನಿ ಇದ್ದಾಳೆ. ಹಳ್ಳಿಯ ಜನ ಹಸು-ಕುರಿ ಮೇಯಿಸುವಾಗ ಬಂದು ಅಟ್ಯಾಕ್ ಮಾಡುತ್ತಾಳೆ. ಹಾಗೆ ಆಗಬಾರದು ಎಂದರೆ ಜನರು ತಮ್ಮ ಕುರಿ ಮೇಯಿಸಲು ಕಾಡಿಗೆ ಹೋಗಬಾರದು.

ಇದು ಒಂದು ಕಡೆ ಇರಲಿ.

ಮತ್ತೊಂದು ಕಡೆ ಕುರಿಗಳು ಮೊದಲು ಸ್ವಚ್ಛಂದವಾಗಿ ಮೇಯುತ್ತಿದ್ದ ಜಾಗದಲ್ಲಿ ಈಗ ‘ಅರಣ್ಯೀಕರಣ’ ಅಂತ ಗಿಡ ನೆಟ್ಟು ಹಸು-ಕುರಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಗಿಡ-ಮರ ನೆಡುವುದು ಮತ್ತು ಸಂರಕ್ಷಣೆ ಮಾಡುವುದೂ ಸಹ ನಮ್ಮ ಕರ್ತವ್ಯವೇ ಆಗಿದೆ. ಹೀಗಿರುವಾಗ ಜನ ತಮ್ಮ ಪ್ರಾಣಿಗಳನ್ನು ಮೇಯಿಸಲು ಎಲ್ಲಿ ಹೋಗಬೇಕು? ಮತ್ತದೇ ಕಾಡಿಗೆ ಹೋಗಬೇಕು. ಅಲ್ವಾ?

ಕಾಡಿಗೆ ಹೋಗದಿದ್ರೆ ಮೇವು ಸಿಗೋಲ್ಲ, ಹೋದ್ರೆ ಸಿಂಹಿಣಿ ಬಿಡೋಲ್ಲ…… !!!!

ಸಿನೆಮಾ ಮುಂದುವರೆಯುತ್ತಿದ್ದ ಹಾಗೆ ನಾವೇನು, ನೀವೇನು ನೋಡುತ್ತಿರುವ ಎಲ್ಲರೂ ಹುಲಿ ವಿಷಯ ಮರೆತೇ ಬಿಡುತ್ತೇವೆ. ಮುಂದಿನ ದೃಶ್ಯಗಳು ಪಕ್ಕಾ ರಾಜಕೀಯವಾಗಿ ಹೋಗುತ್ತವೆ. ಎಷ್ಟರಮಟ್ಟಿಗೆ ಎಂದರೆ ಜನರು ಹುಲಿಯಿಂದಲ್ಲ, ಈ ರಾಜಕಾರಿಣಿಗಳಿಂದ ಬಚಾಯಿಸಿಕೊಂಡರೆ ಸಾಕು ಅನ್ನುವಂತಾಗಿಬಿಡುತ್ತದೆ.

ವಿಪರ್ಯಾಸ!! ಎಲ್ಲರನ್ನೂ ಸೃಷ್ಟಿ ಮಾಡಿದ ಆ ದೇವರು ರಾಜಕಾರಿಣಿಗಳನ್ನು ಮಾತ್ರ ಹೃದಯ-ಮೆದುಳಿಲ್ಲದೇ ಸೃಷ್ಟಿ ಮಾಡಿರಬಹುದೇ? ಅಂತ ಅನುಮಾನವಾಗುತ್ತದೆ. ಅವರುಗಳಿಗೆ ಆ ಹುಲಿಯ ಬಗ್ಗೆಯೂ ಕರುಣೆ ಇಲ್ಲ, ಜನರ ಬಗ್ಗೆಯೂ ಕರುಣೆ ಇಲ್ಲ. ಅವರದ್ದು ಕೇವಲ ಸ್ವಂತ ಹಿತಾಸಕ್ತಿ. ಇದಕ್ಕೆ ಬಲಿಯಾಗುವವರು ಮಾತ್ರ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳು.

ಈ ನಿರ್ದೇಶಕರ ಸಿನೆಮಾ ಇರುವುದೇ ಹೀಗೆ.

ಸರ್ಕಾರಿ ಅಧಿಕಾರಿಗಳಾಗಿ ವ್ಯವಸ್ಥೆಯ ನೋವು ಅನುಭವಿಸಿರುವವರಿಗೆ ಇದು ಬೇಗನೇ ಹೃದಯಕ್ಕೆ ನಾಟುತ್ತದೆ. ಉಳಿದವರಿಗೆ ಇದು ಬಕ್ವಾಸ್ ಎನ್ನಿಸಬಹುದು. ಆದರೆ ನಮ್ಮ ದೇಶ ಇರುವುದೇ ಹೀಗೆ, ಇದೇ ವಾಸ್ತವ, ಇದನ್ನೇ ನಾವು ಬದಲಾಯಿಸಬೇಕಾಗಿರುವುದು, ಹುಲಿಯ ವಿಷಯ ಒಂದು ನೆಪವಷ್ಟೇ, ಸರ್ಕಾರಿ ಅವ್ಯವಸ್ಥೆ ಎಲ್ಲಾ ಕ್ಷೇತ್ರದಲ್ಲಿಯೂ ಹೀಗೇ ಇರುವುದು ಅಂತ ಅರ್ಥ ಮಾಡಿಕೊಂಡರೆ ನಿರ್ದೇಶಕರ ಶ್ರಮ ಸಾರ್ಥಕವಾಗುತ್ತದೆ.

ಸಿನೆಮಾವನ್ನು ನೋಡುವ ದೃಷ್ಟಿ ಬದಲಾಯಿಸಿಕೊಳ್ಳಬೇಕಿದೆ. ಸಿನೆಮಾ ಕೇವಲ ಮನರಂಜನೆ ನೀಡುವುದಿಲ್ಲ. ಅರಿವನ್ನೂ ನೀಡುತ್ತದೆ. ಆ ಅರಿವನ್ನು ಗ್ರಹಿಸಿಕೊಂಡು ನಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳುವುದು ನಮ್ಮ ಕೈಲಿದೆ.

ಇಂತಹಾ ಸಿನೆಮಾದಲ್ಲಿ ಅಭಿನಯಿಸುವುದರಲ್ಲಿ ಒಂದು ಪ್ಲಸ್ ಪಾಯಿಂಟ್ ಇದೆ. ಏನೆಂದರೆ ಇದರಲ್ಲಿ ನಾಯಕಿ ಎಂದರೆ ಗ್ಲಾಮರ್ ಬೊಂಬೆಯಲ್ಲ. ಹಾಗಾಗಿ ಅಂದ, ಚಂದ, ವಯಸ್ಸು, ಮೇಕಪ್ ಯಾವುದರ ಬಗ್ಗೆ ಚಿಂತಿಸದೇ ಆರಾಮಾಗಿ ಅಭಿನಯಿಸಬಹುದು. ರಿಯಲ್ ವಿದ್ಯಾ ಬಾಲನ್ ಸಾಕಷ್ಟು ಇಷ್ಟವಾಗ್ತಾರೆ.

ಹುಲಿ ಹೇಗೆ ಹಿಡಿಯುತ್ತಾರೆ ಎನ್ನುವುದೇ ಕಥೆ. ಅದಕ್ಕಾಗಿ ಸಿನೆಮಾ ನೋಡಬೇಕು.


ಕೆ.ಎ.ಸೌಮ್ಯ
ಮೈಸೂರು

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply