‘ಅನು’ ಮತ್ತು ‘ಅರ್ಜುನ್’ ಈ ಸಿನೆಮಾದ ಮುಖ್ಯ ಪಾತ್ರಧಾರಿಗಳು. ಇಬ್ಬರೂ ಹೆಸರಾಂತ ನಟರೇ. ಆದರೆ ಇದರಲ್ಲಿ ಅವರಿಬ್ಬರೂ ಅಕ್ಕ-ತಮ್ಮನ ಪಾತ್ರ ಮಾಡಿದ್ದಾರೆ. ‘ಕಾಜಲ್ ಅಗರವಾಲ್’ (ಅನು) ಅನ್ನು ಹೀರೋಯಿನ್ ಎಂದುಕೊಂಡರೆ ಸಿನೆಮಾದಲ್ಲಿ ಆಕೆಗೆ ನಾಯಕನೇ ಇಲ್ಲ. ಅಲ್ಲದೇ ಆಕೆಗೆ ಮದುವೆಯೂ ಆಗಿ ಗಂಡನದ್ದೂ, ಕಡೆಗೆ ಡಿವೋರ್ಸ್ ಪಡೆಯುತ್ತಾಳೆ.
ಸ್ಟಾರ್ ಡಮ್ ಹಂಗಿಲ್ಲದೆ ನಟಿಸಿರುವ ಸಿನೆಮಾ ಇದು.
ಡಾಕ್ಯುಮೆಂಟರಿಯ ಹಾಗೆ ಸಾಗುತ್ತದೆ ಸಿನೆಮಾ. ಕಥಾ ನಿರೂಪಣೆಯಲ್ಲಿ ಚುರುಕುತನವಿಲ್ಲ. ಚಿತ್ರಕಥೆಯನ್ನು ಮತ್ತಷ್ಟು ಹರಿತಗೊಳಿಸಬಹುದಿತ್ತು. ಇದ್ಯಾಕೆ ಹೀಗಾಯ್ತೋ? ಅದ್ಯಾಕೆ ಹಾಗಾಯ್ತೋ? ಅಂತೆಲ್ಲಾ ನಾವು ಯೋಚಿಸುತ್ತಿರುವಾಗ ಒಂದು ಷಾಕಿಂಗ್ ವಿಷಯ ಗೊತ್ತಾಗುತ್ತದೆ.
ಅದೇನೆಂದರೆ ‘Based on True events’!!!!
ಹೌದು… ಕಥೆಯು ಕೇವಲ ಕಥೆಯಲ್ಲ, ನಿಜ ಘಟನೆಯ ಆಧಾರಿತ ಅಂತ ಗೊತ್ತಾದ ಕೂಡಲೇ ಸಿನೆಮಾಗೆ ಒಂದು ಮಾಫಿ ಸಿಕ್ಕು ಬಿಡುತ್ತದೆ. ಏಕೆಂದರೆ ನಮ್ಮ ನಿಜ ಜೀವನದಲ್ಲಿ ರೋಚಕತೆ ಇರೋಲ್ಲ ಎಂಬ ಅನುಭವ ನಮಗೆ ಇರುತ್ತದಲ್ಲ… ಹಾಗಾಗಿ ‘ನಿಜವಾಗಿ ನಡೆದದ್ದು ಇದು’ ಅಂತ ತಾಳ್ಮೆಯಿಂದ ನೋಡುತ್ತಾ ಕೂರುತ್ತೇವೆ.
ಅನು ಮತ್ತು ಅರ್ಜುನ್ ಅವಳಿಗಳು.
ಹುಟ್ಟಿದಾಗಿನಿಂದ ಕಷ್ಟ-ಕಾರ್ಪಣ್ಯಗಳಲ್ಲಿಯೇ ಜೀವನ ಸವೆಸಿದವರು. ಅವರ ತಂದೆ ಹೇಳಿಕೊಡುವ ನೈತಿಕತೆಯ ಪಾಠ ಅವರ ತಲೆಗೇ ಹೋಗೋಲ್ಲ. ಬದಲಿಗೆ ಸುತ್ತಲಿನ ಸಮಾಜವನ್ನು ನೋಡಿ ‘ದುಡ್ಡಿದ್ದರೆ ಏನು ಬೇಕಾದರೂ ಪಡೆಯಬಹುದು’ ಎಂದು ಅರ್ಥ ಮಾಡಿಕೊಳ್ಳುತ್ತಿರುತ್ತಾರೆ.
ಅದರಂತೆಯೇ ನ್ಯಾಯ ಮಾರ್ಗದಲ್ಲಿದ್ದರೆ ದುಡ್ಡು ಸಂಪಾದಿಸುವುದು ಕಷ್ಟ ಅಂತಾದಾಗ ಅನ್ಯಾಯ ಮಾಡಿದರೂ ಸರಿಯೇ, ಏಳೇಳು ಜನುಮ ಕೂತು ತಿನ್ನುವಷ್ಟು ದುಡ್ಡು ಸಂಪಾದಿಸಬೇಕು ಅಂದುಕೊಳ್ತಾರೆ. ಅವರ ಉದ್ದೇಶ ಒಂದೇ ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅನ್ನುವುದಷ್ಟೇ.
ಅದಕ್ಕಾಗಿ ತೆರಿಗೆ ಹೆಸರಿನಲ್ಲಿ ಅಮೆರಿಕಾ ಪ್ರಜೆಗಳಿಗೆ ನಕಲಿ ಫೋನ್ ಮೂಲಕ ಹೆದರಿಸಿ ಹಣ ಪಡೆಯಲು ಶುರು ಮಾಡುತ್ತಾರೆ. ಅದರ ಮೂಲಕ ತಾವು ಕನಸು ಕಂಡಿದ್ದನ್ನೆಲ್ಲಾ ನನಸು ಮಾಡಿಕೊಳ್ತಾರೆ. ಮನೆ, ಕಾರು, ಗಾಡಿ, ಐಷಾರಾಮಿ ಜೀವನ…. ಕೊರತೆಯೇ ಇಲ್ಲದ ಬದುಕು ಅವರದ್ದಾಗುತ್ತದೆ.
ಆದರೆ ಹಣ ಸಂಪಾದಿಸಿದ ಮಾರ್ಗ ನೈತಿಕವಲ್ಲ!!
ಕಳ್ಳತನ ಮಾಡುವವನಿಗೆ ಯಾವಾಗಲೂ ತಾನು ಸಿಕ್ಕಿಕೊಂಡರೆ ಎಂಬ ಆತಂಕ ಇದ್ದೇ ಇರುತ್ತದೆ. ಅದೇ ರೀತಿ ಇವರೂ ಅಷ್ಟೆಲ್ಲಾ ಹಣವಿದ್ದರೂ ಆತಂಕದಿಂದ ಬಳಲುತ್ತಾರೆ. ಆ ಹಣವನ್ನು ಎಲ್ಲಿ ಬಚ್ಚಿಡುವುದು ಅಂತ ಚಿಂತಾಕ್ರಾಂತರಾಗುತ್ತಾರೆ. ಹಣ ಬರುವ ಮುಂಚೆ ಒಂದು ಚಿಂತೆ ಇದ್ದರೆ, ಹಣ ಬಂದ ಮೇಲೆ ಮತ್ತೊಂದು ಚಿಂತೆ ಶುರುವಾಗುತ್ತದೆ.
ಈ ಮಧ್ಯೆ ಅಮೆರಿಕಾದ ಅಧಿಕಾರಿಗಳಿಗೆ ಇವರು ಮಾಡುತ್ತಿರುವ ವಂಚನೆ ತಿಳಿಯುತ್ತದೆ. ಅವರು ಭಾರತದ ಪೊಲೀಸ್ ಅಧಿಕಾರಿಯೊಂದಿಗೆ ಸೇರಿ ಇವರನ್ನು ಹಿಡಿಯುವ ಟ್ರಾಪ್ ಮಾಡುತ್ತಾರೆ. ಇದರಲ್ಲಿ ಅನು, ಅರ್ಜುನ್ ಸಿಕ್ಕಿಕೊಂಡರಾ…..? ತಪ್ಪಿಸಿಕೊಂಡರಾ….?
ಇದನ್ನು ಸಿನೆಮಾ ನೋಡಿಯೇ ತಿಳಿಯಬೇಕು.
ಮೊದಲಿನಿಂದ ನಿಧಾನಕ್ಕೆ ಸಾಗುವ ಸಿನೆಮಾ ಕಡೆ-ಕಡೆಯಲ್ಲಿ ವೇಗವಾಗಿ ಬಿಡುತ್ತದೆ. ಹಾಗಾಗಿ ಆ ಅಕ್ಕ-ತಮ್ಮ ಏನು ಮಾಡಿದರೆಂದು ತಿಳಿಯಲು ಸಿನೆಮಾ ನೋಡುವುದೇ ಉತ್ತಮ.
ದುಡ್ಡಿಲ್ಲದಿದ್ದಾಗ ನಮ್ಮ ಯೋಚನೆ ಹೇಗಿರುತ್ತದೆ, ಜೀವನ ಶೈಲಿ ಹೇಗಿರುತ್ತದೆ.. ದುಡ್ಡು ಬಂದ ನಂತರ ಹೇಗೆ ಬದಲಾಗುತ್ತದೆ ಅಂತ ಇದನ್ನು ನೋಡಿ ಅರ್ಥ ಮಾಡಿಕೊಳ್ಳಬಹುದು.
ನನಗೆ ಇದು ಬಹಳ ಕಾಡಿತು.
ಏಕೆಂದರೆ ನಾವೂ ಸಹ ಜೀವನದಲ್ಲಿ ಮೇಲೆ ಬರಬೇಕೆಂದರೆ “ಹಣ” ದುಡಿಯಬೇಕು ಅಂತಲೇ ಯೋಚಿಸುತ್ತಿರುತ್ತೇವೆ. ಆದರೆ ಹಣ ಬಂದ ನಂತರ ನೆಮ್ಮದಿ ಮಾಯವಾಗುತ್ತದೆ ಅಂತ ನಮಗೆ ಅರಿವಿರೋಲ್ಲ.
ಅದರಲ್ಲೂ ಕೆಟ್ಟ ಮಾರ್ಗದಲ್ಲಿ ಸಂಪಾದಿಸಿದ ಹಣ ಉಳಿಯುತ್ತದೆಯೇ…???
ಇದು ನಿಜವಾಗಿ ನಡೆದ ಕಥೆ ಆಗಿರುವುದರಿಂದ ನಾವು ಊಹಿಸುವ ಯಾವುದೂ ನಡೆಯದೇ, ಬೇರೆಯದೇ ಆಯಾಮ ಪಡೆಯುತ್ತದೆ. ಕಡೆಗೂ ಒಂದು ಪ್ರಶ್ನೆ ಉಳಿದೇ ಉಳಿಯುತ್ತದೆ.
ಕೆಟ್ಟ ಮಾರ್ಗದಲ್ಲಿ ಸಂಪಾದಿಸುವುದು ಸರಿಯೋ ತಪ್ಪೋ…..?