ಸಿನೆಮಾ ವಿಮರ್ಶೆ : “Puthiya Niyamam- New Law” (ಮಲಯಾಳಂ)

 

ನಿಮ್ಮ ಬಳಿ ಬಹಳಷ್ಟು ಸಮಯವಿದ್ದರೆ, ನಿಮ್ಮ ಮನಸ್ಸು ಪ್ರಶಾಂತವಾಗಿದ್ದರೆ, ಯಾವುದೇ ರೀತಿಯ ಅವಸರ ಇಲ್ಲದೇ ಒಂದು ತಣ್ಣನೆಯ ಕ್ರೈಂ ವಿರುದ್ಧ ಹೆಣ್ಣೊಬ್ಬಳು ಸೇಡು ತೀರಿಸಿಕೊಳ್ಳುವ ಬಗ್ಗೆ ನೋಡುವ ಆಸಕ್ತಿ ಇದ್ದರೆ, ನಿಜ ಜೀವನದ ಘಟನೆಗಳಂತೆ ಇರುವ ಚಿತ್ರದ ಸಹಜವಾದ ಹರಿವನ್ನು ಸಹಿಸಬಲ್ಲವರಾದರೆ ಈ ಚಿತ್ರ ನೋಡಿ.

ನಾನು ನೆಗೇಟಿವ್ ಆಗಿ ಹೇಳುತ್ತಿಲ್ಲ. ಇದು ಫ್ಯಾಕ್ಟ್!

ಏಕೆಂದರೆ ಇದರಲ್ಲಿ ದೌರ್ಜನ್ಯಕ್ಕೆ ಒಳಗಾದ ಹೆಣ್ಣು ರಕ್ಕಸಿಯಂತೆ ಅಬ್ಬರಿಸುವುದಿಲ್ಲ… ದೊಡ್ಡ ಮೇಧಾವಿಯಂತೆ ಅವರನ್ನು ಸಂಹರಿಸಲು ದೊಡ್ಡ-ದೊಡ್ಡ ಪ್ಲಾನ್ ಮಾಡೋಲ್ಲ.. ಕಾರು ಉಡಾಯಿಸೋದು, ಬಾಂಬ್ ಬಿಸಾಕುವುದು, ಚೇಸಿಂಗ್ ಸೀನುಗಳು ಇಲ್ಲವೇ ಇಲ್ಲ… ನಾಯಕಿಯ ರಕ್ಷಣೆಗೆ ದೇವರು ಅವತರಿಸಿ ಬರುವುದೂ ಇಲ್ಲ..

ಏಕೆಂದರೆ ನಿಜ ಜೀವನದಲ್ಲಿ ಇದು ಯಾವುದೂ ನಡೆಯೋಲ್ಲ!

ನಾಯಕಿ ನಮ್ಮ-ನಿಮ್ಮೆಲ್ಲರಂತೆ ಒಬ್ಬ ಸಾಮಾನ್ಯ ಹೆಣ್ಣು. ಅವಳಲ್ಲಿ ಇರುವುದು ಸಾಧಾರಣ ಬುದ್ಧಿಮತ್ತೆ ಅಷ್ಟೇ. ಆಕೆಯೊಳಗಿರುವ ಒಂದು ಕಲೆ ಎಂದರೆ ಕಥಕ್ಕಳಿ. ಅದೊಂದನ್ನು ಆಕೆ ಕಲಿತಿರುವುದನ್ನು ಬಿಟ್ಟರೆ ಗಂಡ ಮತ್ತು ಮಗಳ ಜೊತೆ ಸಾಮಾನ್ಯ ಜೀವನ ನಡೆಸುತ್ತಾ, ಸಾಮಾನ್ಯ ಜೀವನಕ್ಕೆ ಹೊಂದಿಕೊಳ್ಳುತ್ತಾ ಇದ್ದುಬಿಟ್ಟಿರುತ್ತಾಳೆ.

ಆಗೊಂದು ದುರ್ಘಟನೆ ನಡೆಯುತ್ತದೆ.

ಆಕೆ ಫ್ಲಾಟಿನ ಟೆರೇಸಿನ ಮೇಲೆ ಒಣಗಿ ಹಾಕಿದ್ದ ಬಟ್ಟೆ ತರಲು ಹೋಗಿದ್ದಾಗ ಅದೇ ಫ್ಲಾಟಿನ ಇಬ್ಬರು ಯುವಕರು ಮತ್ತು ಇಸ್ತ್ರಿಯವನು ಸೇರಿಕೊಂಡು ಆಕೆಯ ಮೇಲೆ ಅತ್ಯಾಚಾರ ಎಸಗುತ್ತಾರೆ. ಇದು ಯಾರಿಗೂ ಗೊತ್ತಾಗೋಲ್ಲ. ಏಕೆಂದರೆ ಯಾರೂ ಕಾರಣವಿಲ್ಲದೇ ಟೆರೇಸ್ ಹತ್ತೋಲ್ಲವಲ್ಲ. ಸುಖಾಸುಮ್ಮನೆ ಶ್ರಮಪಡಲು ಯಾರು ಬಯಸುತ್ತಾರೆ? ಇದನ್ನು ನೋಡಿದ ನಂತರ ಒಂದು ರೀತಿ ಟೆರೇಸ್ ಸಹ ಸೇಫ್ ಅಲ್ಲ ಎಂಬ ಭಾವ ನಮ್ಮಲ್ಲಿ ಮೂಡಿದರೆ ಆಶ್ಚರ್ಯವಿಲ್ಲ.

ಈ ಅತ್ಯಾಚಾರದ ದೃಶ್ಯಗಳನ್ನು ಬಹಳ ಸಾವಧಾನವಾಗಿ ತೋರಿಸಲಾಗಿದೆ. ಯಾಕಿಷ್ಟು ಎಳೆಯುತ್ತಿದ್ದಾರೆ ಅಂತ ನನಗೇ ಅಸಹನೀಯವಾಗುವಷ್ಟು ಎಳೆಎಳೆಯಾಗಿ ತೋರಿಸಿದ್ದಾರೆ. ನಿಜ… ನನ್ನಿಂದ ನೋಡಲಾಗಲಿಲ್ಲ.

ಯಾಕಿರಬಹುದು ಹೇಳಿ…

ಸಿನೆಮಾ ಶುರುವಿನಿಂದಲೂ ಆಕೆಯನ್ನು ಒಬ್ಬ ಸಾಮಾನ್ಯ ಸ್ತ್ರೀ ಪ್ರತಿನಿಧಿ ಅಂತ ಮನಸ್ಸು ಒಪ್ಪಿಕೊಂಡಿತ್ತು. ಆಕೆ ಯಾರು ಬೇಕಿದ್ದರೂ ಆಗಬಹುದು. ನಮ್ಮ ಅಕ್ಕ, ತಂಗಿ, ಹೆಂಡತಿ, ಅಮ್ಮ, ಅತ್ತಿಗೆ…. ಕೊನೆಗೆ ನಾವೇ!!!! ಹೀಗಿರುವಾಗ ಆಕೆಯ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಾವು ಹೇಗೆ ಒಪ್ಪಲು ಸಾಧ್ಯ?

ಆದರೂ ಆ ಅತ್ಯಾಚಾರದ ದೃಶ್ಯಗಳನ್ನು ವಿವರವಾಗಿ ತೋರಿಸಿರುವುದು ಏಕೆಂದರೆ… ಅಕಸ್ಮಾತ್ ಆ ರೀತಿಯ ಯೋಚನೆ ಮಾಡಿದವರು ಈ ಸಿನೆಮಾ ನೋಡಿದರೆ ಪಶ್ಚಾತ್ತಾಪ ಪಡುವುದು ಖಂಡಿತಾ. ಇಲ್ಲಿ ಅತ್ಯಾಚಾರವನ್ನು‌ ವಿಜೃಂಭಿಸಿಲ್ಲ. ಬದಲಿಗೆ ಪಾಪಪ್ರಜ್ಞೆ ಮೂಡುವಂತೆ ತೋರಿಸಿದ್ದಾರೆ.

ಈಗೇನು ಮಾಡಬಹುದು ಆಕೆ?

ತನ್ನ ಮೈ ಮೈಲಿಗೆಯಾಗಿದೆ.. ಇನ್ನು ತಾನು ಗಂಡನ ಜೊತೆ ಸಂಸಾರ ಮಾಡುವಂತಿಲ್ಲ.. ಸಾವು ಒಂದೇ ಪರಿಹಾರ ಅಂತ ಯೋಚಿಸುತ್ತಾಳೆ ಅಂತೀರ???

ಹೌದು… ಆಕೆ ಹಾಗೆಯೇ ಯೋಚಿಸುವುದು. ಮಾನವ ಜನಾಂಗ ಎಷ್ಟೇ ಮುಂದುವರೆದರೂ ಹೆಣ್ಣಿನ ಮೇಲಿನ ದೌರ್ಜನ್ಯದ ಕುರಿತಾದ ನಂಬಿಕೆಗಳು ಇಂದಿಗೂ ಹಾಗೆಯೇ ಇದೆ. ಆಕೆ ಇಂದಿಗೂ ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಲೇ ಬಂದಿದ್ದಾಳೆ. ಅದೇ ಈ ತಪ್ಪು ಮಾಡಿದವರು ರಾಜಾರೋಷವಾಗಿ ತಲೆ ಎತ್ತಿ ಓಡಾಡುತ್ತಿದ್ದಾರೆ.

ಯಾವ ಪುಣ್ಯವೋ ನಾಯಕಿ ಸಾವಿನ ಯೋಚನೆ ಬಿಡುತ್ತಾಳೆ. ಹಾಗೇ ಆ ಪಾತಕಿಗಳನ್ನು ಶಿಕ್ಷಿಸಬೇಕು ಎಂದುಕೊಳ್ಳುತ್ತಾಳೆ. ಆದರೆ ಕಾನೂನಿಯ ಸಹಾಯದಿಂದಲ್ಲ ಬದಲಿಗೆ ವೈಯುಕ್ತಿಕವಾಗಿ ತಾನೇ ಕೊಲೆ ಮಾಡಬೇಕು‌ ಎಂದುಕೊಳ್ಳುತ್ತಾಳೆ.

ಕಾರಣ ಸ್ಪಷ್ಟ.

ಕಾನೂನು ಕ್ರಮ ಕೈಗೊಂಡರೆ ತನ್ನ ಮೇಲೆ ದೌರ್ಜನ್ಯ ನಡೆದಿದೆ ಅಂತ ತಾನೇ ಜಗಜ್ಜಾಹೀರು ಮಾಡಿಕೊಂಡಂತಾಗುತ್ತದೆ. ನಂತರ ಸಾಯುವವರೆಗೂ ಸಮಾಜದ ಜನರು ಆಕೆಯನ್ನು “ಒಂದು ರೀತಿ” ನೋಡುತ್ತಾರೆ. ಮತ್ತೊಂದು ಕಾರಣವೇನೆಂದರೆ ಅವರು ತನ್ನ ಮೇಲೆ ದೌರ್ಜನ್ಯ ನಡೆಸಿದ ವಿವರವನ್ನು ಒಂದೂ ಪಾಯಿಂಟ್ ಬಿಡದೇ ನ್ಯಾಯಾಧೀಶರು, ವಕೀಲರ ಮುಂದೆ ಬಿಚ್ಚಿಡಬೇಕು.

ಒಬ್ಬ ಸಾಧಾರಣ ಗೃಹಿಣಿಗೆ ಇದಕ್ಕಿಂತಲೂ ಆತ್ಮಹತ್ಯೆಯೇ ಉತ್ತಮ ಉಪಾಯ ಅನ್ನಿಸುತ್ತದೆ. ಯಾವ ವಿಷಯವನ್ನು ಆಕೆ ನೆನೆಯಲೂ ಇಷ್ಟವಿಲ್ಲವೋ ಅದನ್ನು ಪದೇ ಪದೇ ಆಕೆ ನಿರೂಪಿಸಬೇಕು. ಇದೆಂಥಾ ನ್ಯಾಯವೋ? ಪುರುಷರು ಮಾತ್ರ ಕುಳಿತುಕೊಂಡು ಮಾಡಿರುವ ನಿಯಮಗಳಲ್ಲಿ ಹೆಣ್ಣಿನ ಸೂಕ್ಷ್ಮತೆ ಲೆಕ್ಕಕ್ಕೆ ಇರುವುದಿಲ್ಲ. ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತದೆ. ಆದರೆ ಹೆಣ್ಣಿನ ಮೇಲಿನ ಪೂರ್ವಾಗ್ರಹಗಳಲ್ಲ…..

ಹಾಗಾಗಿ ಶಾಂತ ಮನಸ್ಥಿತಿಯ ಆಕೆ ಆ ದೌರ್ಜನ್ಯ ಸಹಿಸದೇ, ಇತ್ತ ಕಡೆ ಸಾಯಲೂ ಆಗದೇ, ಬದುಕಲೂ ಆಗದೇ ರೊಚ್ಚಿಗೆದ್ದುದರಲ್ಲಿ ತಪ್ಪೇನಿದೆ? ಹಾಗಂತ ಆಕೆ ರೊಚ್ಚಿಗೆದ್ದು ಮನೆಯ ತುಂಬಾ ಥಕಥಕ ಕುಣಿಯೋಲ್ಲ. ತನ್ನ ಮನದ ದುಗುಡ ಯಾರಿಗೂ ಗೊತ್ತಾಗದಂತೆ, ತನ್ನ ಗಂಡ-ಮಗಳಿಗೂ ಗೊತ್ತಾಗದಂತೆ ಎಚ್ಚರಿಕೆ ವಹಿಸುತ್ತಾಳೆ. ಆದರೆ ಆ ದುಷ್ಟರ ವಿರುದ್ಧ ಸೇಡು ತೀರಿಸಿಕೊಳ್ಳುವ ಮಾರ್ಗ ಕಾಣದೇ ಹತಾಶಳಾಗಿರುತ್ತಾಳೆ.

ಆಗವಳಿಗೆ ಆ ಸಿಟಿಗೆ ಹೊಸದಾಗಿ ಬಂದಿರುವ ಲೇಡಿ ಪೊಲೀಸ್ ಕಮೀಷನರ್ ನಂಬರ್ ಅಚಾನಕ್ಕಾಗಿ ಸಿಗುತ್ತದೆ. ಯಾರಿಗೂ ಗೊತ್ತಾಗದಂತೆ ಆ ಆಫೀಸರಿಗೆ ಫೋನ್ ಮಾಡಿ ತನ್ನ ಮನದ ನೋವನ್ನೆಲ್ಲ ಹಂಚಿಕೊಳ್ಳುತ್ತಾಳೆ. ಕಮೀಷನರ್ ಸಹ ನಾಯಕಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳದೇ ವೈಯುಕ್ತಿಕವಾಗಿ ಆ ದುಷ್ಟರನ್ನು ಮಟ್ಟ ಹಾಕಲು ತಾನು ಸಹಾಯ ಮಾಡುವುದಾಗಿ ಅಭಯ ನೀಡುತ್ತಾಳೆ. ಏಕೆಂದರೆ ಆ ಪೊಲೀಸ್ ಅಧಿಕಾರಿಣಿ ಸಹ ಶತಮಾನಗಳ ಹಿಂದಿನ ಸೂಕ್ಷ್ಮತೆ ಇಲ್ಲದ ಕಾನೂನಿನ ವಿರುದ್ಧ ಅಸಮಾಧಾನಗೊಂಡಿರುತ್ತಾಳೆ.

ನಂತರ ನೋಡುವುದೇ ಮಜಾ….

ಆಕ್ಷನ್ ಇಲ್ಲ… ಫೈಟಿಂಗ್ ಇಲ್ಲ.. ಚೇಸಿಂಗ್ ಇಲ್ಲ.. ನಾಯಕಿ ಒಂದು ಚಿಕ್ಕ ಟ್ರಿಕ್ ಪ್ಲೇ ಮಾಡಿ ಆ ಮೂವರನ್ನೂ ಬಲಿ ಪಡೆಯುತ್ತಾಳೆ. ಆ ಟ್ರಿಕ್ಕುಗಳು ಏನಿರಬಹುದು ಅಂತ ಸಿನೆಮಾದಲ್ಲಿ ನೇರವಾಗಿಯೇ ನೋಡಬೇಕು. ದೈಹಿಕ ಸಾರ್ಥ್ಯವಿಲ್ಲದ, ಮಾನಸಿಕವಾಗಿ ಕುಗ್ಗಿರುವ ಒಬ್ಬ ಹೆಣ್ಣುಮಗಳು ತನಗಾದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳುವುದೇ ಈ ಚಿತ್ರದ ಹೈಲೈಟ್.

ಚಿತ್ರದ ಹರಿವು ಬಹಳ ನಿಧಾನ ಗತಿಯಲ್ಲಿದೆ. ಸಾಕಷ್ಟು ಸಹನೆ ಬೇಕು. ಆದರೆ ಆ ನಾಯಕಿಯ ಪಾತ್ರದೊಳಗೆ ತಲ್ಲೀನವಾಗಿ ಆ ದುಷ್ಟರನ್ನು ಶಿಕ್ಷಿಸುವ ಮನಸ್ಥಿತಿ ಬರಲು ಈ ನಿಧಾನಗತಿ ಅನಿವಾರ್ಯವಾಗಿದೆ. ನಯನ ತಾರಾ ಅಂತೂ ಅಭಿನಯದ ಕ್ವೀನ್ ಅಂತಲೇ ಹೇಳಬಹುದು. ಮಾತೇ ಇಲ್ಲದ ಕೇವಲ ನಟನೆಯಿಂದ ನಮ್ಮ ಮನಸ್ಸು ಗೆಲ್ಲುತ್ತಾರೆ. ನಟನೆ ಅಂದ್ರೆ ಇದು ಅಂತ ನಮಗನ್ನಿಸುತ್ತದೆ.

ಹಾಗಂತ ಇದು ಬೋರಿಂಗ್ ಸಿನೆಮಾ ಖಂಡಿತಾ ಅಲ್ಲ. ಇಲ್ಲೊಬ್ಬ ಲವಲವಿಕೆಯ ನಟ ಇದ್ದಾರೆ… ಆಕೆಯ ಗಂಡ. ಚಿತ್ರದಲ್ಲಿ ನಾಯಕನ ಆಯ್ಕೆಯಲ್ಲಿ ಚೂರು ಎಚ್ಚರ ತಪ್ಪಿದ್ದರೂ ಚಿತ್ರ ನೀರಸವಾಗಿಬಿಡುತ್ತಿತ್ತು. ಆದರೆ ಇದರ ನಾಯಕ ತನ್ನ ಲವಲವಿಕೆಯ ಸಂಭಾಷಣೆಗಳಿಂದ ಇಡೀ ಸಿನೆಮಾ ಸಂಭಾಳಿಸುತ್ತಾರೆ. ಒಂದೆಡೆ ತಣ್ಣಗಿನ ನಾಯಕಿ.. ಮತ್ತೊಂದೆಡೆ ಚಟಪಟ ಮಾತನಾಡುತ್ತಾ ಮುದ ನೀಡುವ ನಾಯಕ.. ಎರಡೂ ಬ್ಯಾಲನ್ಸ್ ಆಗಿವೆ.

ಮೊದಲೇ ಹೇಳಿದಂತೆ ಯಾವುದೇ ಮ್ಯಾಜಿಕ್ ಅಥವಾ ಅತಿರಂಜಿತ ದೃಶ್ಯಗಳ ನಿರೀಕ್ಷಣೆ ಇಲ್ಲದೇ ಸಿನೆಮಾ ವೀಕ್ಷಿಸಬೇಕಾಗುತ್ತದೆ. ಒಬ್ಬ ಸಾಧಾರಣ ಮಹಿಳೆಯ ಅಸಾಧಾರಣ ಚಿತ್ರ ಇದು‌.‌ ನೋಡಿದ ನಂತರ ಸೂಕ್ಷ್ಮ ಮನಸ್ಸಿನವರಿಗೆ ಬಹಳ ಕಾಲ ಕಾಡುತ್ತದೆ.

**************
ಕೆ.ಎ.ಸೌಮ್ಯ
ಮೈಸೂರು

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply