ಸೂಪರ್ ಡಿಲಕ್ಸ್

ಕಥೆ – ಒಂದು

ಪತಿ ಮನೆಯಲ್ಲಿ ಇಲ್ಲದಿದ್ದ ಸಮಯ ನೋಡಿಕೊಂಡು ತನ್ನ ಕಾಲೇಜು ದಿನಗಳ ಬಾಯ್’ಫ್ರೆಂಡ್’ನನ್ನು ಮೊದಲ ಬಾರಿಗೆ ತನ್ನ ಮನೆಗೆ ಕರೆಸಿಕೊಂಡು ಕಾಮಕೇಳಿ ನಡೆಸುತ್ತಾಳೆ ವೇಂಬು (ಸಮಂತಾ ಅಕ್ಕಿನೇನಿ). ಮಂಚದ ಮೇಲಿರುವಾಗಲೇ ಆ ಪ್ರಿಯಕರ ಸಾವನ್ನಪ್ಪುತ್ತಾನೆ. ಅದೇ ಸಮಯಕ್ಕೆ ಸರಿಯಾಗಿ ಹೊರಗೆ ಹೋಗಿದ್ದ ಅವಳ ಗಂಡ ವಾಪಸ್ಸು ಮನೆಗೆ ಬರುತ್ತಾನೆ.

ಕಥೆ – ಎರಡು

ಶಾಲೆಗೆ ಚಕ್ಕರ್ ಹೊಡೆದು ಗೆಳೆಯನೊಬ್ಬನ ಮನೆಯಲ್ಲಿ ಸೇರಿಕೊಂಡು ವಯಸ್ಕರ ಸಿನೆಮಾದ ಸಿಡಿಯೊಂದನ್ನು ತಂದು ನೋಡುತ್ತಿರುತ್ತಾರೆ ಐದು ಜನ ಹದಿಹರೆಯದ ಹುಡುಗರು. ಆ ಸಿನೆಮಾದಲ್ಲಿ ಕಂಡ ನಟಿ ತನ್ನ ತಾಯಿಯಂತೆ ಕಾಣಿಸಿದಾಗ ಕೋಪಗೊಂಡ ಅವರಲ್ಲೊಬ್ಬ ಹುಡುಗ “ಸೂರಿ” ಕೋಲ್ಡ್ರಿಂಕ್ಸ್ ಬಾಟಲಿಯಿಂದ ಟಿವಿಯನ್ನು ಒಡೆದು ಹಾಕಿ ಹುಚ್ಚನಂತೆ ಅರಚುತ್ತ ಹೊರಗೋಡುತ್ತಾನೆ.

ಕಥೆ – ಮೂರು

ತಾನು ಹುಟ್ಟಿದಾಗಲೇ ಮನೆಯನ್ನು ಬಿಟ್ಟು ಹೋಗಿದ್ದ ಅಪ್ಪ ಏಳು ವರುಷಗಳ ನಂತರ ಇಂದು ಮನೆಗೆ ಬರುತ್ತಿದ್ದಾನೆಂದು ಕಾಯುತ್ತಿರುವ ಪುಟ್ಟ ಬಾಲಕ “ರಾಸುಕುಟ್ಟಿ” ಹಾಗೂ ಅವನ ತಾಯಿ ಮತ್ತು ಕುಟುಂಬದವರು. ತನ್ನಪ್ಪ ಬರುತ್ತಾನೆ ಎಂದು ತವಕದಿಂದ ಕಾಯುತ್ತಿದ್ದ ರಾಸುಕುಟ್ಟಿಗೆ ಕಾಣಿಸಿದ್ದು ತನ್ನಪ್ಪನ ಬದಲಾಗಿ ಟ್ಯಾಕ್ಸಿಯಿಂದ ಇಳಿದ ಸೀರೆಯುಟ್ಟ ಹೆಂಗಸು.

ಕಥೆ – ನಾಲ್ಕು

ಕೋಪದಿಂದ ಅರಚುತ್ತ ಹೊರಗೋಡಿದ ಸೂರಿಯನ್ನು ಸಮಾಧಾನಗೊಳಿಸಲು ಅವನ ಹಿಂದೆಯೇ ಓಡುತ್ತಾನೆ ಮೋಹನ. ಸೂರಿ ತನ್ನ ತಾಯಿ ಲೀಲಾ (ರಮ್ಯಕೃಷ್ಣ) ಮೇಲೆ ಕೋಪಗೊಂಡು ಅವಳನ್ನು ಸಾಯಿಸುತ್ತೇನೆಂದು ಸ್ಕ್ರೂಡ್ರೈವರ್ ಹಿಡಿದು ಓಡುತ್ತಿರುವಾಗ ಮೆಟ್ಟಿಲ ಬಳಿ ಕಾಲು ಎಡವಿ ಬಿದ್ದು ಆಕಸ್ಮಿಕವಾಗಿ ಸ್ಕ್ರೂಡ್ರೈವರ್ ಅವನ ಹೊಟ್ಟೆಗೇ ಚುಚ್ಚಿಕೊಳ್ಳುತ್ತದೆ.

ನಾಲ್ಕು ಬೇರೆ ಬೇರೆ ಕಥೆಗಳು ಸಮಾನಾಂತರವಾಗಿ ಒಂದೇ ಸಮಯದಲ್ಲಿ ಸಾಗುತ್ತಿರುತ್ತವೆ.

ಒಳಗೆ ಬಂದಾಗ ತನ್ನ ಹೆಂಡತಿಯ ಪ್ರಿಯಕರ ಅವಳೊಂದಿಗೆ ಮಂಚದ ಮೇಲಿದ್ದಾಗಲೇ ಸತ್ತು ಹೋಗಿದ್ದು ಅವನ ಹೆಣ ಈಗ ಮನೆಯಲ್ಲಿದೆ. ದ್ವಂದ್ವ ಪರಿಸ್ಥಿತಿಯಲ್ಲಿರುವ “ವೇಂಬು”ವಿನ ಗಂಡ ಯಾರಿಗೂ ಗೊತ್ತಾಗದ ಹಾಗೆ ಹೆಣವನ್ನು ಬೇರೆಡೆಗೆ ಸಾಗಿಸಲು ತೀರ್ಮಾನಿಸುತ್ತಾನೆ. ಗಂಡ-ಹೆಂಡತಿ ಇಬ್ಬರೂ ಕಾರ್ಯೋನ್ಮುಖರಾಗುತ್ತಾರೆ.

ಇತ್ತ ಮನೆಯ ಟಿವಿ ಒಡೆದು ಹೋಗಿರುವ ವಿಷಯ ತನ್ನಪ್ಪನಿಗೆ ಗೊತ್ತಾದರೆ ತನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿದ “ತೂಯವನ್” ಉಳಿದ ಇಬ್ಬರು ಸ್ನೇಹಿತರೊಡನೆ ಸೇರಿ ಹೇಗಾದರೂ ಸಂಜೆಯೊಳಗೆ ರೂ. 28,000/- ಅನ್ನು ಸಂಪಾದಿಸಿ ಹೊಸ ಟಿವಿಯನ್ನು ತರಲು ನಿರ್ಧರಿಸುತ್ತಾನೆ. ಅದರಂತೆ ಕೇಡಿಯೊಬ್ಬನನ್ನು ಸಂಪರ್ಕಿಸಿ ಅವನು ವಹಿಸುವ ಕೆಲಸ ಮಾಡಿಕೊಟ್ಟು ಹಣ ಸಂಪಾದಿಸಲು ಹೋಗುತ್ತಾರೆ.

ತನ್ನೊಳಗೆ ಆಗುತ್ತಿದ್ದ ಬದಲಾವಣೆಯಿಂದಾಗಿ ಮುಂಬಯಿಗೆ ಹೋಗಿ ಆಪರೇಷನ್ ಮಾಡಿಸಿಕೊಂಡು ಹೆಣ್ಣಾಗಿ ಬಂದಿರುತ್ತಾನೆ ಮಾಣಿಕನ್ ಉರುಫ್ ಶೀಲಾ (ವಿಜಯ್ ಸೇತುಪತಿ).  ಅವನ ಹೆಂಡತಿ ತುಂಬಾ ನೊಂದುಕೊಳ್ಳುತ್ತಾಳೆ ತನ್ನ ಮುಂದಿನ ಜೀವನವನ್ನು ನೆನೆಸಿಕೊಂಡು. ಆದರೆ ಇದ್ಯಾವುದನ್ನು ಅರಿಯದ ವಯಸ್ಸಿನ ರಾಸುಕುಟ್ಟಿ ತನ್ನ ಅಪ್ಪನನ್ನು ತನ್ನ ಶಾಲೆಯ ಸಹಪಾಠಿಗಳಿಗೆ ತೋರಿಸಲು ಕರೆದುಕೊಂಡು ಹೋಗುತ್ತಾನೆ.

ಗಾಯಗೊಂಡ ಸೂರಿಯನ್ನು ಮೋಹನನ ಸಹಾಯದೊಂದಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾಳೆ ಅವಳ ತಾಯಿ ಲೀಲಾ. ಆದರೆ ಆಸ್ಪತ್ರೆಯಲ್ಲಿ ಅವನಿಗೆ ತುರ್ತಾಗಿ ಆಪರೇಷನ್ ಮಾಡಿಸಬೇಕೆಂದು ಹೇಳಿ ಅದಕ್ಕೆ ದೊಡ್ಡ ಮೊತ್ತದ ಫೀಸ್ ಕಟ್ಟಲು ಹೇಳುತ್ತಾರೆ. ಆದರೆ ಅಷ್ಟೊಂದು ಹಣ ಅವಳ ಬಳಿ ಇದ್ದಿರುವುದಿಲ್ಲ.

ಹೀಗೆ ಸಿನೆಮಾ ನಾಲ್ಕು ಪ್ರಮುಖ ಕಥೆಗಳನ್ನು ಒಳಗೊಂಡಿದ್ದು ಅದು ಇನ್ನೂ ಹಲವು ಕೊಂಡಿ ಹಾಗೂ ತಿರುವುಗಳನ್ನು ಪಡೆಯುತ್ತ ಸಾಗುತ್ತದೆ. ವಿಜಯ್ ಸೇತುಪತಿ, ಸಮಂತಾ ಅಕ್ಕಿನೇನಿ, ರಮ್ಯಾಕೃಷ್ಣ, ಬಾಲನಟರು ಹೀಗೆ ಎಲ್ಲ ಕಲಾವಿದರನ್ನು ನಿರ್ದೇಶಕರು ಅಚ್ಚುಕಟ್ಟಾಗಿ ದುಡಿಸಿಕೊಂಡಿದ್ದಾರೆ. ಶೀಲಾಳಾಗಿ ವಿಜಯ್ ಸೇತುಪತಿ ನೀಡಿರುವ ಅಭಿನಯ ಅವರು ಎಂತಹ ದೈತ್ಯ ಪ್ರತಿಭೆ ಎಂಬುದನ್ನು ತೋರಿಸುತ್ತದೆ. ರಾಸುಕುಟ್ಟಿಯಾಗಿ ಅಭಿನಯಿಸಿರುವ ಆ ಪುಟ್ಟ ಬಾಲಕ ಅಭಿನಯದಲ್ಲಿ ವಿಜಯ್ ಸೇತುಪತಿಗೆ ಸೆಡ್ಡು ಹೊಡೆಯುವ ಅಭಿನಯ ನೀಡಿದ್ದಾನೆ. ಆ ಬಾಲಕನ ಅಭಿನಯ ನೋಡುವುದಕ್ಕಾಗಿಯಾದರೂ ಸಿನೆಮಾವನ್ನು ಎರಡು ಬಾರಿ ನೋಡಬಹುದು.

ಗಂಡ-ಹೆಂಡತಿಯರಿಬ್ಬರೂ ಆ ಹೆಣವನ್ನು ಸಾಗಿಸಿದರೇ?

ಮೂವರು ಗೆಳೆಯರು ಹೊಸ ಟಿವಿಯನ್ನು ತಂದರೇ?

ಶೀಲಾಳನ್ನು ಅವನ ಹೆಂಡತಿ ಮತ್ತು ಮಗ ಮತ್ತೆ ಸ್ವೀಕರಿಸಿದರೇ?

ಸೂರಿ ಆಪರೇಷನ್ ನಡೆಯಿತೇ?

ನಿರ್ದೇಶಕರ ಉದ್ದೇಶ ಕೇವಲ ಈ ನಾಲ್ಕು ಪ್ರಶ್ನೆಗಳನ್ನು ಉತ್ತರಿಸುವುದಲ್ಲ ಬದಲಿಗೆ ಜೀವನದ ನೂರು ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ನಾಲ್ಕು ವಿಭಿನ್ನ ಕಥೆಗಳು ಒಂದು ಸಣ್ಣ ತಂತುವಿನಲ್ಲಿ ಬೆಸೆದುಕೊಂಡರೂ ಒಂದಕ್ಕೊಂದು ಬೆರೆಯದಂತೆ ವಿಭಿನ್ನವಾಗಿಯೇ ನಿಲ್ಲುವ ನಿರ್ದೇಶಕರ ಜಾಣ್ಮೆ ಮೆಚ್ಚುವಂತಂದ್ದು. ಎಲ್ಲರೂ ನೋಡಲೇಬೇಕಾದ ಸಿನೆಮಾ.

ಲೇಖಕರು : ಸಂತೋಷ್ ಖಾರ್ವಿ…ವೃತ್ತಿ – ಕಾಲೇಜಿನಲ್ಲಿ ಶಿಕ್ಷಕೇತರ ಸಿಬ್ಬಂದಿ…ಪ್ರವೃತ್ತಿ – ಹವ್ಯಾಸಿ ಬರಹಗಾರ…ಹವ್ಯಾಸಗಳು – ಓದುವುದು, ಸಿನೆಮಾ ವೀಕ್ಷಣೆ

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply