“ಸೈತಾನ್” (ತಮಿಳು)

ಸೈತಾನ ಎಂದರೇನು? ಸಿಂಪಲ್… ಮನುಷ್ಯ ಅಲ್ಲದವನೇ ಸೈತಾನ. ಹಾಗಾದರೆ ಮನುಷ್ಯ ಸೈತಾನನಾಗಲು ಏನು ಮಾಡಬೇಕು? ಅದೂ ಸಹ ಸಿಂಪಲ್. ಮನುಷ್ಯತ್ವ ಮರೆತರೆ ಆಯ್ತು. ಆದರೆ ನನಗೆ ಸದಾ ಕಾಡುವ ವಿಚಾರವೆಂದರೆ, ಸೈತಾನ ಯಾಕೆ ಯಾವಾಗಲೂ ಮನುಷ್ಯರ ವಿರುದ್ಧವಾಗಿಯೇ ವರ್ತಿಸುತ್ತಾನೆ, ಮನುಷ್ಯನನ್ನು ತನ್ನ ಶತೃ ಎಂದು ಯಾಕೆ ಎಂದುಕೊಳ್ಳುತ್ತಾನೆ ಅಂತ. ಸೈತಾನನಾದವನು ಮನುಷ್ಯರನ್ನು ಕೊಲ್ಲಲೇಬೇಕು ಎಂಬ ನಿಯಮವಿದೆಯೇ? ಸೈತಾನ ಸಹ ಮನುಷ್ಯನದ್ದೇ ಮತ್ತೊಂದು ರೂಪವಾದ ಮೇಲೆ ಅವನಲ್ಲಿಯೂ ತಾಳ್ಮೆ, ಕ್ಷಮೆ, ಬುದ್ಧಿ, ವಿವೇಚನೆಗಳು ಇರುತ್ತವೆಯಲ್ಲವೇ? ಅಂದ ಮೇಲೆ ಸೈತಾನ ಮನುಷ್ಯನನ್ನು ಕ್ಷಮಿಸಿ ಬಿಟ್ಟುಬಿಡಲು ಸಾಧ್ಯವಿಲ್ಲವೇ….?

ಸಿನೆಮಾದ ಕಥೆ ಹೀಗಿದೆ.

ನಾಯಕನ ಹೆಸರು ದಿನೇಶ್.‌ 

ಅತ್ಯಂತ ಬುದ್ಧಿವಂತನಾದ ದಿನೇಶ್ ನಮಗೂ ಸಹ ಹೊಟ್ಟೆಕಿಚ್ಚು ಬರಿಸುವಷ್ಟು ತಂತ್ರಜ್ಞಾನದಲ್ಲಿ ನಿಷ್ಣಾತ. ಜೊತೆಗೊಬ್ಬ ಅಮ್ಮ ಮತ್ತು ಸುಂದರಿಯಾದ ಹೆಂಡತಿ ಇರುವ ಮುದ್ದಾದ ಸಂಸಾರ ಆತನದ್ದು. ಆತನ ಹೆಂಡತಿ ಐಶ್ವರ್ಯಳನ್ನು ನೋಡಲು ಎರಡು ಕಣ್ಣು ಸಾಲದು ಎನ್ನುವಷ್ಟು ಸುಂದರಿ ಆಕೆ.‌ ಅದನ್ನು ನೋಡುತ್ತಾ, ಆಕೆಯ ಸೌಂದರ್ಯದೊಳಗೆ ಕಳೆದು ಹೋಗುತ್ತಾ ಸಿನೆಮಾದ ಹೆಸರೇ ನಮಗೆ ಮರೆತು ಹೋಗುವಂತಹಾ ಸಮಯದಲ್ಲಿ ಅವನ ಜೀವನ ಹಠಾತ್ ತಿರುವು ಪಡೆಯುತ್ತದೆ.‌

ಇದ್ದಕ್ಕಿದ್ದಂತೆ ದಿನೇಶನಿಗೆ ಯಾರೋ ತನ್ನ ಕಿವಿಯಲ್ಲಿ ಪಿಸುಗುಟ್ಟಿದ ಹಾಗೆ ಒಂದು ಧ್ವನಿ ಕೇಳಲು ಶುರುವಾಗುತ್ತದೆ. ಶಬ್ದ ಮಾತ್ರ ಕೇಳುತ್ತಿರುತ್ತದೆ ಹೊರತೂ ಯಾರೂ ಕಾಣುತ್ತಿರುವುದಿಲ್ಲ. ಪಕ್ಕದಲ್ಲಿ ಯಾರು ಇರಲಿ ಬಿಡಲಿ ಆ ಅಜ್ಞಾತ ಧ್ವನಿ ಇವನೊಂದಿಗೆ ನಿರಂತರ ಸಂವಹಿಸುತ್ತಿರುತ್ತದೆ. ತನ್ನ ಕಂಪೆನಿಯಲ್ಲಿ ಅತ್ಯಂತ ಸಮರ್ಥನಾಗಿದ್ದ ದಿನೇಶ್ ಆ ಕಾಣದ ದೆವ್ವದ ಆಟಕ್ಕೆ ಬೆದರಿ ಹೋಗುತ್ತಾನೆ. ಆತನ ಕಂಪ್ಯೂಟರಿನಿಂದ ಒಂದು ಕೈ ಆಚೆ ಬಂದು ಆತನನ್ನು ತಳ್ಳಿದಂತೆ ಭಾಸವಾಗುತ್ತದೆ. ಟಿವಿಯಲ್ಲಿ ಬೇರೆಯದೇ ದೃಶ್ಯಗಳು ಕಾಣತೊಡಗುತ್ತವೆ. ಕಿಟಕಿಯಿಂದಾಚೆ ಯಾವುದೋ ಭಯಾನಕ ಆಕಾರ ಬಂದ ಹಾಗೆ ಭಾಸವಾಗುತ್ತಿರುತ್ತದೆ. 

ಜೊತೆಗೆ ಆ ಧ್ವನಿ ಸದಾಕಾಲವೂ ದಿನೇಶನಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿರುತ್ತದೆ. ದಿನೇಶನನ್ನು ಟೆರೇಸಿಗೆ ಬರಲು ಹೇಳಿ ನಂತರ ಅಲ್ಲಿಂದ ಕೆಳಗೆ ಜಿಗಿಯಲು ಕೂಡ ಹೇಳುತ್ತದೆ. ಗೊಂಬೆಯಂತೆ ಆ ಧ್ವನಿ ಹೇಳುವುದನ್ನೆಲ್ಲಾ ಮಾಡುತ್ತಿದ್ದವನನ್ನು ಆತನ ಸ್ನೇಹಿತ ರವಿ ಬಂದು ಕಾಪಾಡುತ್ತಾನೆ. ಆದರೆ ಮಾರನೆಯ ದಿನ ರವಿಯೊಡನೆ ಕಾರಿನಲ್ಲಿ ಬರುತ್ತಿರುವಾಗ ಆ ಅಜ್ಞಾತವಾಣಿಯ ಆಜ್ಞೆಯಂತೆ ಕಾರ್ ಅನ್ನು ‘ಯೂ ಟರ್ನ್’ ಮಾಡಲು ಹೋಗಿ, ಇವರು ಕುಳಿತಿದ್ದ ಕಾರು ಆಕ್ಸಿಡೆಂಟಿಗೀಡಾಗಿ ರವಿ ಆ ದುರ್ಘಟನೆಯಲ್ಲಿ ಸತ್ತೇ ಹೋಗುತ್ತಾನೆ. ದಿನೇಶ ಉಳಿದುಕೊಳ್ಳುತ್ತಾನೆ. ಬಹುಶಃ ಆ ದೆವ್ವ ದಿನೇಶನ ಸಾವಿಗಾಗಿ ಬಂದಿರಬಹುದು‌ ಅಂತನ್ನಿಸುತ್ತದೆ ನಮಗೆ. ಅಲ್ಲದೇ ಈ ಸಮಯದಲ್ಲಿ ದಿನೇಶನ ಜೊತೆ ಯಾರಿದ್ದರೂ ಅವರ ಜೀವಕ್ಕೂ ಅಪಾಯ ಅಂತಲೇ ಅನ್ನಿಸತೊಡಗುತ್ತದೆ.‌ ಇದ್ಯಾವುದೋ ದೆವ್ವದ ಕಾಟ ಎಂಬ ತೀರ್ಮಾನಕ್ಕೆ ಬಂದುಬಿಡುತ್ತೇವೆ ನಾವು.

ಆದರೆ ದಿನೇಶ್ ಇದನ್ನೆಲ್ಲ ನಂಬಿಯೂ ನಂಬುವುದಿಲ್ಲ. ತನಗೆ ಹ್ಯಾಲುಸಿನೇಷನ್ ಇರಬೇಕು ಎಂದುಕೊಳ್ತಾನೆ. ಅಂದರೆ ಭ್ರಮೆ. ಅಥವಾ ಇದು ಸ್ಕಿಜೋಫ್ರೇನಿಯಾದ ಲಕ್ಷಣ ಇರಬೇಕು ಅಂದುಕೊಂಡು ಇದನ್ನು ಸರಿಪಡಿಸಿಕೊಳ್ಳಲು ಡಾಕ್ಟರ್ (ಸೈಕಾಲಜಿಸ್ಟ್) ಬಳಿ ಹೋಗುತ್ತಾನೆ.‌ ಸೈಕಾಲಜಿಸ್ಟ್ ಕೇಳುವ ಸಾಧಾರಣ ಪ್ರಶ್ನೆಗಳಿಂದ ಆತನ ಸಮಸ್ಯೆ ಏನು ಅಂತ ಡಾಕ್ಟರಿಗೂ ಸಹ ಗೊತ್ತಾಗುವುದಿಲ್ಲ. ಅದಕ್ಕೆ ಡಾಕ್ಟರ್ ಆತನನ್ನು ಹಿಪ್ನಾಟೈಸ್ ಮಾಡಿ ಆತನ ಹಿಂದಿನ ಜನ್ಮಕ್ಕೆ ಕೊಂಡೊಯ್ಯುತ್ತಾರೆ. ಅಲ್ಲಿ ಆತ ಶರ್ಮ ಎಂಬ ಒಬ್ಬ ಸ್ಕೂಲ್ ಮೇಷ್ಟ್ರಾಗಿದ್ದ ಅಂತ ಗೊತ್ತಾಗುತ್ತದೆ. ಶರ್ಮ, ನಟರಾಜ, ಗೋಪಾಲ ಮತ್ತು ವಿಜಯಲಕ್ಷ್ಮಿ ಎಂಬ ಹೆಸರುಗಳು ಈ ಹಿಪ್ನಾಟಿಸಂನಿಂದಾಗಿ ತಿಳಿದು ಬರುತ್ತದೆ. ಆದರೆ ಅವರು ಯಾರು ಅಂತ ಮಾತ್ರ ಗೊತ್ತಾಗುವುದಿಲ್ಲ. ಅವರುಗಳು ಯಾರು ಎಂದು ತಿಳಿಯುವ ಭರದಲ್ಲಿ ತನಗೇ ಅರಿವಿಲ್ಲದೇ ತಾನು ಹಿಂದಿನ ಜನ್ಮದಲ್ಲಿ ವಾಸಿಸುತ್ತಿದ್ದ ಊರಾದ ತಂಜಾವೂರಿಗೆ ರೈಲಿನ ಮುಖಾಂತರ ತಲುಪುತ್ತಾನೆ. ಅಲ್ಲಿನ ಫೋಟೋ ಮತ್ತು ದಾಖಲೆಗಳಿಂದ ದಿನೇಶ್ ಹೋದ ಜನ್ಮದಲ್ಲಿ ಶರ್ಮ ಎಂಬ ಸ್ಕೂಲ್ ಮೇಷ್ಟ್ರಾಗಿದ್ದ ಎಂಬುದು ತಿಳಿದುಬರುತ್ತದೆ. ಅಷ್ಟೇ ಅಲ್ಲ…. ಹೋದ ಜನ್ಮದ ಜಯಲಕ್ಷ್ಮಿಯೇ ಈ ಜನ್ಮದ ದಿನೇಶನ ಪತ್ನಿ ಐಶ್ವರ್ಯ ಎಂದೂ ಸಹ ತಿಳಿಯುತ್ತದೆ. 

ಕಳೆದ ಜನ್ಮದಲ್ಲಿ ಶರ್ಮ ಮದುವೆಯಾಗದೇ ಗೋಪಾಲ್ ಎಂಬ ಮಗನನ್ನು ದತ್ತು ಪಡೆದು ಸಾಕುತ್ತಿರುತ್ತಾನೆ. ಅಚಾನಕ್ಕಾಗಿ ಆ ಊರಿಗೆ ಕೆಲಸ ಕೇಳಿಕೊಂಡು ಜಯಲಕ್ಷ್ಮಿ ಎಂಬ ಹೆಣ್ಣುಮಗಳು ಬರುತ್ತಾಳೆ. ಶರ್ಮ ತನಗಿಂತಾ ಎರಡರಷ್ಟು ಚಿಕ್ಕ ವಯಸ್ಸಿನವಳಾದ ಆಕೆಯನ್ನು ಮದುವೆಯಾಗುತ್ತಾನೆ. ಅಷ್ಟರಲ್ಲಿ ಆ ಶಾಲೆಗೆ ನಟರಾಜ ಎಂಬ ಯುವಕನೊಬ್ಬ ಬಂದು ಸೇರುತ್ತಾನೆ. ನಂತರ ಜಯಲಕ್ಷ್ಮಿ ಶರ್ಮನನ್ನು ಬಿಟ್ಟು ನಟರಾಜನ ಬಗ್ಗೆ ಆಸಕ್ತಿ ವಹಿಸಲು ತೊಡಗುತ್ತಾಳೆ. ಈ ಮಧ್ಯೆ ಜಯಲಕ್ಷ್ಮಿಗೆ ಹುಟ್ಟುವ ಮಗು ಸಹ ನಟರಾಜನನ್ನು ಹೋಲುತ್ತಿರುತ್ತದೆ. ಆದರೂ ಶರ್ಮ ಏನೂ ಮಾತನಾಡದೇ ಆ ಮಗುವನ್ನು ತನ್ನದೇ ಮಗು ಎಂಬಂತೆ ಸಾಕುತ್ತಿರುತ್ತಾನೆ. ಆದರೆ ಒಮ್ಮೆ ಆತನ ಕೈ ಜಾರಿ ಬಿದ್ದು ಜಯಲಕ್ಷ್ಮಿಯ ಮಗು ಆಕಸ್ಮಿಕ ದುರ್ಮರಣಕ್ಕೀಡಾಗುತ್ತದೆ. ತನ್ನ ಮಗು ಸಾಯಲು ಶರ್ಮನೇ ಕಾರಣ ಎಂದರಿತ ಜಯಲಕ್ಷ್ಮಿ ತನ್ನ ಪ್ರಿಯಕರನ ಜೊತೆ ಹೊರಟು ಹೋಗುತ್ತಾಳೆ. ಎರಡು ವಾರದ ನಂತರ ಶರ್ಮ ಮತ್ತು ಆತನ ಸಾಕುಮಗನ ಶವ ನದೀತೀರದಲ್ಲಿ ಸಿಗುತ್ತದೆ. ಜಯಲಕ್ಷ್ಮಿ ತನ್ನ ಮಗುವನ್ನು ಕೊಂದ ಸೇಡನ್ನು ಶರ್ಮನನ್ನು ಕೊಲ್ಲುವ ಮುಖಾಂತರ ತೀರಿಸಿಕೊಂಡಿರುತ್ತಾಳೆ.

ವಿಷಯ ತಿಳಿದ ದಿನೇಶನ ಮನಸ್ಥಿತಿಯನ್ನು ಹತೋಟಿಗೆ ತರಲಾರದೇ ಮಾನಸಿಕ ಕೇಂದ್ರಕ್ಕೆ ದಾಖಲು ಮಾಡಲಾಗುತ್ತದೆ. ದಿನೇಶನ ಒಳಗಿನ ಶರ್ಮ ಎಚ್ಚರಗೊಂಡು ಹೋದ ಜನ್ಮದಲ್ಲಿ ತನ್ನನ್ನು ಕೊಂದಿದ್ದ ಜಯಲಕ್ಷ್ಮಿಯನ್ನು, ಈ ಜನ್ಮದಲ್ಲಿ ತನ್ನ ಪತ್ನಿಯಾಗಿರುವ ಐಶ್ವರ್ಯಳನ್ನು ಸಾಯಿಸುವ ಪ್ರಯತ್ನ ಮಾಡುತ್ತಾನೆ. ಆಗ ಆತನ ಪತ್ನಿ‌ ಪತ್ರ ಬರೆದಿಟ್ಟು ಆತನಿಂದ ದೂರ ಹೊರಟು ಹೋಗುತ್ತಾಳೆ. ನಿರಂತರ ಚಿಕಿತ್ಸೆಯಿಂದ ದಿನೇಶ ಮೊದಲಿನಂತಾಗುತ್ತಾನೆ. ಆತನಿಗೆ ಚಿಕಿತ್ಸೆ ನೀಡಿದ ಸೈಕಾಲಜಿಸ್ಟ್ ತಂಜಾವೂರಿನ ಪೊಲೀಸರನ್ನು ಸಂಪರ್ಕಿಸಿ ವಿಚಾರಿಸಿದಾಗ ದಿನೇಶ ಶರ್ಮನ ಬಗ್ಗೆ ಹೇಳಿದ್ದೆಲ್ಲ ನಿಜವೆಂದೇ ಗೊತ್ತಾಗುತ್ತದೆ. ಇದರರ್ಥ ಶರ್ಮನ ಮುಂದಿನ ಜನ್ಮವೇ ದಿನೇಶ್.

ದಿನೇಶ್ ಕಾಣೆಯಾದ ತನ್ನ ಹೆಂಡತಿ ಐಶ್ವರ್ಯಳನ್ನು ಹುಡುಕುತ್ತಿದ್ದಾಗ ಅಚಾನಕ್ಕಾಗಿ ಒಂದು ವಿಚಾರ ತಿಳಿದು ಬರುತ್ತದೆ. ಏನೆಂದರೆ ಐಶ್ವರ್ಯ ಒಂದು ಡ್ರಗ್ ಮಾಫಿಯಾ ಕಂಪನಿಗಾಗಿ ಕೆಲಸ ಮಾಡುತ್ತಿದ್ದು, ದಿನೇಶನ ಮೇಲೆ ಆ ಡ್ರಗ್ ಅನ್ನು ಪ್ರಯೋಗಿಸುವ ಸಲುವಾಗಿ ಆತನ ಪತ್ನಿಯಾಗಿ ಆತನ ಮನೆ ಸೇರಿಕೊಂಡಿರುತ್ತಾಳೆ. ಆಕೆ ಮದುವೆಯಾಗುವ ಮೊದಲು ತಾನು ಅನಾಥೆ ಎಂದು ಹೇಳಿ 

ಕೊಂಡಿರುತ್ತಾಳೆ. ದಿನೇಶನೂ ಆಕೆಯ ಅತೀತದ ಬಗ್ಗೆ ಆಸಕ್ತಿ ತೋರಿರುವುದಿಲ್ಲ. ಆದರೆ ದಿನಕಳೆದಂತೆ ಆಕೆ ದಿನೇಶನ ಪ್ರೀತಿಯಿಂದ ಪ್ರಭಾವಿತಳಾಗಿ ಆತನಿಗೆ ಡ್ರಗ್ ನೀಡುವುದನ್ನು ಕಡಿಮೆ ಮಾಡಿರುತ್ತಾಳೆ. ಆ ಡ್ರಗ್ ಸೇವನೆಯಿಂದಾಗಿಯೇ ದಿನೇಶನಿಗೆ ತನ್ನ ಹಿಂದಿನ ಜನ್ಮದ ನೆನಪಾಗಿರುತ್ತದೆ.

ದರೆ ನಿಜಕ್ಕೂ ಆ ಡ್ರಗ್ಗಿನಲ್ಲಿ ಮನುಷ್ಯನನ್ನು ಮೃಗನನ್ನಾಗಿಸುವ ಶಕ್ತಿ ಇರುತ್ತದೆ. ಎಂದರೆ ಸೈತಾನ… ಐಶ್ವರ್ಯ ತನ್ನ ಕಡೆಯಿಂದ ದಿನೇಶನಿಗೆ ಕೊಡುವ ಡೊಸೇಜ್ ಕಡಿಮೆ ಮಾಡಿದ್ದರಿಂದ ಆ ಡ್ರಗ್ಗಿನ ಫಲಿತಾಂಶ ಸಿಕ್ಕಿರುವುದಿಲ್ಲ. ಹಾಗಾಗಿ ತನ್ನ ಹೆಂಡತಿಯನ್ನು ಹುಡುಕಿಕೊಂಡು ದಿನೇಶ ಆ ಮಾಫಿಯಾದೊಳಗೆ ಪ್ರವೇಶಿಸಿದಾಗ ಅವರು ಆತನನ್ನು ಬಂಧಿಸುತ್ತಾರೆ. ನಂತರ ಬಹಳ ದೊಡ್ಡ ಮಟ್ಟದಲ್ಲಿ ಆ ಡ್ರಗ್ ಅನ್ನು ದಿನೇಶನ ಶರೀರದೊಳಗೆ ಸೇರಿಸಿ ಮುಂದೇನಾಗುವುದು ಎಂಬ ಪ್ರತೀಕ್ಷೆಯಲ್ಲಿರುತ್ತಾರೆ. ಅವರು ಅಂದುಕೊಂಡಂತೆಯೇ ಆಗುತ್ತದೆ.

ಔಷಧಿ ಒಳ ಹೋಗುತ್ತಿದ್ದಂತೆಯೇ ದಿನೇಶ ಮೃಗವಾಗುತ್ತಾನೆ… ಅಂದರೆ ಸೈತಾನ!!!

ಸೈತಾನನಿಗೆ ಬೇರೇನೂ ವಿವೇಚನೆ ಇರುವುದಿಲ್ಲವಲ್ಲ. ಕಣ್ಣೆದುರಿಗೆ ಸಿಕ್ಕ ಎಲ್ಲರನ್ನೂ ಸಂಹರಿಸುತ್ತಾ ಮುಂದೆ ನಡೆಯುತ್ತಾನೆ. ಸೈತಾನನ ಜೊತೆ ಜೊತೆಗೆ ಅವನೊಳಗಿನ ಶರ್ಮ ಸಹ ಎಚ್ಚೆತ್ತಿರುತ್ತಾನೆ. ದಿನೇಶನ ಶರೀರದ ಪೂರ್ತಿ ಶರ್ಮನೇ ಆವರಿಸಿಕೊಂಡಿರುತ್ತಾನೆ. ಹಾಗಾಗಿ ಹೋದ ಜನ್ಮದಲ್ಲಿ ತನ್ನ ಕೊಲೆ ಮಾಡಿದ ತನ್ನ ಹೆಂಡತಿಯ ಮರುಜನ್ಮವಾದ ಐಶ್ವರ್ಯಳನ್ನು ಕೊಲ್ಲಲು ಅವಳನ್ನು ಹುಡುಕುತ್ತಾ ಬರುತ್ತಾನೆ. ಅವನ ಉದ್ದೇಶ ಒಂದೇ… ಐಶ್ವರ್ಯ ಅಥವಾ ಜಯಲಕ್ಷ್ಮಿಯನ್ನು ಸಾಯಿಸುವುದು.

ಆದರೆ ಐಶ್ವರ್ಯಳಿಗೆ ಈ ಪುನರ್ಜನ್ಮದ ಕಥೆಯಲ್ಲಾ ಗೊತ್ತಿರುವುದಿಲ್ಲ. ಆಗ ಆಕೆ ತುಂಬು ಬಸುರಿಯಾಗಿರುತ್ತಾಳೆ. ದಿನೇಶನ ಮಗು ಆಕೆಯ ಹೊಟ್ಟೆಯಲ್ಲಿರುತ್ತದೆ. ತನ್ನನ್ನು ಕೊಲ್ಲಲು ಬಂದ ದಿನೇಶನಿಗೆ ತನ್ನ ಮಗುವನ್ನು ಸಾಯಿಸಿ ನಂತರ ತನ್ನನ್ನು ಕೊಲ್ಲಲು ಹೇಳುತ್ತಾಳೆ. ಮಗು ಎಂದ ಕೂಡಲೇ ಶರ್ಮ ಹನಿಗಣ್ಣಾಗುತ್ತಾನೆ. ಕಳೆದ ಜನ್ಮದಲ್ಲಿ ತನ್ನ ತಪ್ಪಿನಿಂದ ಜಯಲಕ್ಷ್ಮಿಯ ಮಗು ಸತ್ತಿರುವುದು ಆತನಿಗೆ ನೆನಪಾಗುತ್ತದೆ. ಆತ ಸೈತಾನನಾಗಿ ಬದಲಾಗಿದ್ದರೂ ಸಹ ಮನುಷ್ಯರಲ್ಲಿರುವ ಕ್ಷಮಾ ಗುಣವನ್ನು ಆವಾಹಿಸಿಕೊಂಡು ಜಯಲಕ್ಷ್ಮಿಯನ್ನು ಕ್ಷಮಿಸಿ ಬಿಡುತ್ತಾನೆ. ಆ ಮತ್ತೌಷಧದಿಂದ ಸೈತಾನನಾಗಿದ್ದರೂ ಸಹ, ಜಯಲಕ್ಷ್ಮಿಯನ್ನು ಕ್ಷಮಿಸುವ ಮೂಲಕ ದೇವರಾಗಿಬಿಡುತ್ತಾನೆ. 

ಈ ವಿಷಯ ಟಿವಿಗಳಲ್ಲಿ ಪ್ರಸಾರವಾಗುತ್ತದೆ. ಕಳೆದ ಜನ್ಮದ ಶರ್ಮನ ಪತ್ನಿ ಜಯಲಕ್ಷ್ಮಿ ಅಸಲಿಗೆ ಸತ್ತಿರುವುದಿಲ್ಲ. ಟಿವಿಯಲ್ಲಿ ವಿಷಯ ನೋಡಿದ ಆಕೆ ಈ ಜನ್ಮದ ದಿನೇಶನನ್ನು ನೋಡಲು ಬಹಳ ದೂರದಿಂದ ಹುಡುಕಿಕೊಂಡು ಬರುತ್ತಾಳೆ. ಆದರೆ ದಿನೇಶನಿಗೆ ಸಿಗುವ ಮೊದಲೇ ವಯೋಸಹಜ ಕಾರಣದಿಂದ ಸಾವನಪ್ಪುತ್ತಾಳೆ. ಆಕೆಯ ಕಳೇಬರವನ್ನು ಕಾಣುವ ದಿನೇಶನಿಗೆ ಆಕೆಯ ಕೈಯಲ್ಲಿ ಮುದುಡಿದ್ದ ಒಂದು ಭಾವಚಿತ್ರ ಸಿಗುತ್ತದೆ. ಅದರಲ್ಲಿ ಶರ್ಮ ಮತ್ತು ಜಯಲಕ್ಷ್ಮಿಯ ಫೋಟೋ ಇರುತ್ತದೆ. ಶರ್ಮ ದಿನೇಶನಂತೆಯೇ ಇರುತ್ತಾನೆ. ಆದರೆ ಜಯಲಕ್ಷ್ಮಿ ಐಶ್ವರ್ಯಳಂತೆ ಇರುವುದಿಲ್ಲ…. ಅದು ಆತನ ಭ್ರಮೆಯಾಗಿರುತ್ತದೆಯಷ್ಟೇ!!! 

ಇಲ್ಲಿ ಮುಖ್ಯವಾಗಿ ಗಮನ ಸೆಳೆಯುವ ಅಂಶವೆಂದರೆ, ದಿನೇಶ ಸೈತಾನನಾಗಿ ಬದಲಾದ ಮೇಲೆಯೂ ಸಹ ಮನುಷ್ಯನ ರೀತಿಯಲ್ಲಿಯೇ ವಿವೇಚನೆಯಿಂದ ಯೋಚಿಸುತ್ತಾನೆ. ತಾಳ್ಮೆಯಿಂದ ಯೋಚಿಸಿ ಐಶ್ವರ್ಯಳಿಗೆ ಏನೂ ತೊಂದರೆ ಕೊಡದೇ ಇದ್ದುದರಿಂದಲೇ ಕಡೆಯಲ್ಲಿ ಆಕೆ ತನ್ನ ಪೂರ್ವಜನ್ಮದ ಹೆಂಡತಿಯಾಗಿರಲಿಲ್ಲ ಎಂದು ಗೊತ್ತಾಗುತ್ತದೆ. ಅಕಸ್ಮಾತ್ ಆತ ವಿವೇಚನಾ ರಹಿತನಾಗಿ ನಡೆದುಕೊಂಡಿದ್ದರೆ ಜೀವನ ಪೂರ್ತಿ ಆ ಅಪರಾಧಿ ಮನೋಭಾವದಿಂದ ಆತ ಬಳಲಬೇಕಾಗುತ್ತಿತ್ತು,. ಯಾವ ತಪ್ಪೂ ಮಾಡಿರದ ತನ್ನ ಹೆಂಡತಿಯನ್ನು ಮಾತ್ರವಲ್ಲದೇ ಆಕೆಯ ಹೊಟ್ಟೆಯಲ್ಲಿದ್ದ ತನ್ನ ಮಗುವನ್ನೂ ಆತ ಕಳೆದುಕೊಳ್ಳಬೇಕಾಗುತ್ತಿತ್ತು.  

ದು “ಕಾದಂಬರಿ ಆಧಾರಿತ ಸಿನೆಮಾ” ಎನ್ನುವುದೊಂದು ದೊಡ್ಡ ಸಂಭ್ರಮದ ವಿಷಯ. ಸೈತಾನನೊಳಗೂ ಕರುಣೆ ಇರುತ್ತದೆ ಎಂದು ತೋರಿಸಲಿಕ್ಕಾಗಿ ಇದನ್ನು ಬರೆದಂತಿದೆ. ಅದಕ್ಕೆ ತಕ್ಕನಾಗಿ ವಿಜಯ ಆಂಟೋನಿಯ ಅಭಿನಯ ನಮ್ಮ ಮನದಾಳಕ್ಕೆ ಇಳಿಯುತ್ತದೆ. ಚಿತ್ರ ನೋಡಿ ಎಷ್ಟು ದಿನಗಳಾದರೂ ಬಹಳ ಕಾಡುವ ಕಥೆ ಇದು. ನೋಡಿಯೇ ಅರಿಯಬೇಕಾದ ಸಿನೆಮಾ ಇದು. ಕಥೆ ಇಲ್ಲಿ ಹೇಳಲ್ಪಟ್ಟಿದ್ದರೂ ಸಹ ಸಿನೆಮಾ ನೋಡುವಾಗ ಬೇರೆಯದೇ ನಿರೂಪಣೆಯಿಂದ ಕುತೂಹಲ ಮೂಡಿಸುತ್ತದೆ. ದಯಮಾಡಿ ಒಮ್ಮೆ ನೋಡಿ. ನನಗೆ ಈಗ ತೋಚಿರದ ಬೇರೆ ಭಾವಗಳು ನಿಮಗೆ ಗೋಚರಿಸಬಹುದು.

***********************

ಕೆ.ಎ.ಸೌಮ್ಯ

ಮೈಸೂರು

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply