ಸೌರವ್ ಗಂಗೂಲಿ ಮಾಡಿದ್ದು ಸರಿಯೇ?

Ganguly

ಶ್ರೀ ರಾಮಕೃಷ್ಣ ಪರಮಹಂಸರ ಬಳಿಗೆ ಮಹಿಳೆಯೊಬ್ಬಳು ತನ್ನ ಮಗನನ್ನು ಕರೆತಂದು ಹೇಳಿದಳಂತೆ : ಸ್ವಾಮಿಗಳೇ, ಇವನಿಗೆ ಸಿಹಿ ತಿಂಡಿಗಳ ಮೇಲೆ ಅತಿಯಾದ ಮೋಹ. ಸಿಹಿ ತಿಂಡಿಗಳನ್ನು ತಿಂದು ತಿಂದು ಈ ವಯಸ್ಸಿಗಾಗಲೇ ಹಲ್ಲುಗಳೆಲ್ಲ ಹುಳುಕಾಗಿವೆ. ಇವನಿಗೆ ಬುದ್ಧಿ ಹೇಳಿ ಅಂದಳಂತೆ. ಅದನ್ನು ಕೇಳಿದ ರಾಮಕೃಷ್ಣರು ಹದಿನೈದು ದಿನಗಳ ನಂತರ ಬಾ ತಾಯಿ ಈಗ ಸಾಧ್ಯವಿಲ್ಲ ಅಂದರಂತೆ. ಆಮೇಲೆ ಹದಿನೈದು ದಿನಗಳ ನಂತರ ಆ ಮಹಿಳೆ ತನ್ನ ಮಗನ ಜೊತೆ ಬಂದಾಗ, ಆ ಹುಡುಗನನ್ನು ತೊಡೆಯ ಮೇಲೆ ಕೂಡಿಸಿಕೊಂಡು ಸಿಹಿ ತಿಂಡಿಯನ್ನು ತಿನ್ನದಂತೆ, ಪ್ರೀತಿಯಿಂದ ಬುದ್ಧಿ ಹೇಳಿದರಂತೆ.ಅಲ್ಲ ಸ್ವಾಮಿಗಳೇ. ಹದಿನೈದು ದಿನದ ಹಿಂದೆ ನಾನು ಬಂದಿದ್ದಾಗಲೇ ನೀವು ಇವನಿಗೆ ಈ ರೀತಿ ಹೇಳಬಹುದಿತ್ತಲ್ಲ?

ಅಂತ ಕೇಳಿದ ಮಹಿಳೆಗೆ ರಾಮಕೃಷ್ಣರು ನಗುತ್ತಾ ಉತ್ತರಿಸಿದರಂತೆ: ನಿಜ ಹೇಳಬೇಕೆಂದರೆ ನನಗೂ ಕೂಡ ಅತಿಯಾದ ಮೋಹ – ಸಿಹಿ ತಿನಿಸುಗಳ ಮೇಲೆ. ನಾನೇ ಸಿಹಿತಿನಿಸನ್ನು ತಿನ್ನುವಾಗ, ಇದನ್ನು ತಿನ್ನಬೇಡಿ ಎಂದು ಬೇರೆಯವರಿಗೆ ಹೇಗೆ ಹೇಳಲಿ? ಹಾಗಾಗಿ ಈ ಹದಿನೈದು ದಿನ ಅಭ್ಯಾಸ ಮಾಡಿ, ಸಿಹಿ ತಿಂಡಿಗಳನ್ನು ತಿನ್ನದಂತೆ ನಾನು ಮೊದಲು ನನ್ನ ಮನಸ್ಸಿಗೆ ಬುದ್ಧಿ ಹೇಳಿದೆ. ನಾನು ಎಷ್ಟೇ ದೊಡ್ಡ ವ್ಯಕ್ತಿಯೇ ಆಗಿರಲಿ, ನಾನು ಅದನ್ನು ಮೊದಲು ಪಾಲಿಸಿ ಆಮೇಲೆಯೇ ಬೇರೆಯವರಿಗೆ ಹೇಳಲು ಸಾಧ್ಯವಲ್ಲವೇ ತಾಯಿ? ಎಂದರಂತೆ.

ಇಂತಹ ಉನ್ನತ ಮನೋಭಾವದ ರಾಮಕೃಷ್ಣರು ಹುಟ್ಟಿದ ನಾಡಲ್ಲೇ ಹುಟ್ಟಿದ್ದು – ಈ ಸೌರವ್ ಗಂಗೂಲಿ ಎಂಬ ಮಹಾನುಭಾವ. ಇಡೀ ದೇಶಕ್ಕೆ ದೇಶವೇ ಕೊರೋನಾ ಹೆಮ್ಮಾರಿಗೆ ಸಿಕ್ಕು ನಲುಗುತ್ತಿರುವಾಗ, ಕೋಟ್ಯಂತರ ಜನ ಅಭಿಮಾನಿಗಳನ್ನು ಹೊಂದಿರುವ ಈ ಸೌರವ್ ಎಂಬ ವ್ಯಕ್ತಿಯ ಜವಬ್ದಾರಿ ಎಷ್ಟಿರಬೇಕು? ಮಂಡಲ ಪಂಚಾಯ್ತಿಯ ಸದಸ್ಯನಿಂದ ಹಿಡಿದು ರಾಷ್ಟ್ರಪತಿಯವರೆಗೆ ಪ್ರತಿಯೊಬ್ಬರೂ, ರಸ್ತೆ ರಸ್ತೆಗಳಲ್ಲಿ ಕೂಗಿ ಹೇಳುತ್ತಿರುವ ಮಾತು ಒಂದೇ – ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ, ಸುರಕ್ಷಿತವಾಗಿರಿ! ಒಬ್ಬ ಶ್ರೀ ಸಾಮಾನ್ಯ ಕೂಡ ಇಂದು ಮಾಸ್ಕ್ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಓಡಾಡದೆ ಇರುವಷ್ಟು ತಿಳುವಳಿಕೆ ಹೊಂದಿದ್ದಾನೆ. ಅಂತಹ ಸಂದರ್ಭದಲ್ಲಿ, ಉನ್ನತ ಹುದ್ದೆಯಲ್ಲಿರುವ, ಕೋಟ್ಯಂತರ ಜನ ನನ್ನನ್ನು ನೋಡಿ ನನ್ನನ್ನೇ ಫಾಲೋ ಮಾಡುತ್ತಾ ಇರುತ್ತಾರೆಂಬ ಅರಿವಿರುವ ಸೌರವ್ ಗಂಗೂಲಿ ಎಂಬ ವ್ಯಕ್ತಿ ನಿನ್ನೆ ಚೆನ್ನೈ ನ ಚಿದಂಬರಂ ಸ್ಟೇಡಿಯಂ ನಲ್ಲಿ ಯಾವುದೇ ಮಾಸ್ಕ್ ಧರಿಸದೇ RCB VS MI ಪಂದ್ಯ ನೋಡುತ್ತಾ ಕುಳಿತಿದ್ದರು.

ಸ್ಟೇಡಿಯಂ ಒಳಗೆ ಉನ್ನತ ರೀತಿಯ ವೈದ್ಯರು, ನಿಯಮಿತ ಕೋವಿಡ್ ಟೆಸ್ಟ್ ಮುಂತಾದ ಎಲ್ಲಾ ವ್ಯವಸ್ಥೆಗಳೂ ಇರಬಹುದು. ಅವರಿಗೆ ರೋಗ ಹರಡದಂತೆ ತಡೆಯುವ ವ್ಯವಸ್ಥೆಯೂ ಕೂಡ ಇದ್ದಿರಬಹುದು. ಆದರೂ, ಮಾಸ್ಕ್ ಧರಿಸಿ ಎಂಬ ಮೆಸೇಜ್ ಅನ್ನು ಜನರಿಗೆ ತಲುಪಿಸುವುದಕ್ಕಾದರೂ, ಔಪಚಾರಕ್ಕಾದರೂ ಒಂದು ಮಾಸ್ಕ್ ಧರಿಸಿದ್ದರೆ ತಪ್ಪೇನು? ಒಂದು ವೇಳೆ ಸೌರವ್ ಗಂಗೂಲಿ ಗೆ ನಾಳೆ ಕೋವಿಡ್ ಬಂದರೆ ಇವರ ಆಸ್ಪತ್ರೆ ಖರ್ಚು ಭರಿಸಿವುದು ಕೂಡ ನಾನು – ನೀವು ಕಟ್ಟಿರುವ ಟ್ಯಾಕ್ಸ್ ಹಣದಿಂದಲೇ ಅಲ್ಲವೇ? ಅಥವಾ ಗಂಗೂಲಿಯನ್ನೇ ಫಾಲೋ ಮಾಡುವ ಅವನ ಕೋಟ್ಯಂತರ ಅಭಿಮಾನಿಗಳು – “ಅಯ್ಯೋ ಹೋಗಪ್ಪ, ನಮ್ ದಾದಾನೆ ಮಾಸ್ಕ್ ಹಾಕ್ಕೊಳಲ್ಲ, ನಾನ್ಯಾಕೆ ಹಾಕಲಿ?” ಅಂತ, ಮಾಸ್ಕ ಹಾಕದೆ, ಗಂಗೂಲಿಯ ತರಹವೇ ನಿರ್ಲಕ್ಷ್ಯವಾಗಿ ಎಲ್ಲೆಡೆ ಓಡಾಡಿ, ಆ ಕೋಟ್ಯಂತರ ಜನರಿಗೆ ಕೊರೋನಾ ರೋಗ ಬಂದರೆ ಅದಕ್ಕೆ ಉತ್ತರಿಸುವವರು ಯಾರು? ಅದಕ್ಕೇ ರಾಮಕೃಷರು ಹೇಳಿದ್ದು – ನಾನು ಎಷ್ಟೇ ದೊಡ್ಡವನಾದರೂ, ನಾನು ಅದನ್ನು ಪಾಲಿಸದೆ, ಬೇರೆಯವರಿಗೆ ಪಾಲಿಸುವಂತೆ ಹೇಗೆ ಹೇಳಲಿ ತಾಯಿ ಎಂದು.

Sourav Ganguly


ದೊಡ್ಡತನಕ್ಕೆ ಬೆಲೆ ಬರುವುದು ಅವರು ಜನಗಳ ಮೇಲೆ, ತನ್ನ ಜನರ ಮೇಲೆ, ತನ್ನ ದೇಶದ ಮೇಲೆ ತೋರುವ ಪ್ರೀತಿ ಮತ್ತು ಅವರ ಸಾಮಾಜಿಕ ಕಳಕಳಿಗಳಿಂದ. ಅಣ್ಣಾವ್ರು ಭೌತಿಕವಾಗಿ ನಮ್ಮಿಂದ ದೂರವಾಗಿ ಹತ್ತಾರು ವರ್ಷಗಳೇ ಕಳೆದಿವೆ. ಆದರೂ, ಇಂದಿಗೂ ಅವರನ್ನು ಜನ ಮರೆತಿಲ್ಲವೇಕೆ? ಎಂದರೆ ಅದಕ್ಕೆ ಉತ್ತರ – ಅವರಿಗೆ ಇದ್ದ ಸಾಮಾಜಿಕ ಕಳಕಳಿ, ತನ್ನ ಜವಾಬ್ದಾರಿಗಳನ್ನು ಕಾಯಾ, ವಾಚಾ, ಮನಸಾ ನಿಭಾಯಿಸುತ್ತಿದ್ದರಷ್ಟೇ. ಹೇ, ಅಣ್ಣಾವ್ರೇ ಈ ರೀತಿ ಮಾಡುತ್ತಿದ್ದಾರೆ ಅಂದರೆ ನಾವೂ ಮಾಡೋಣ ಅನ್ನುವ ಭಾವನೆ ಜನರಿಗೆ ಉಂಟಾಗುತ್ತಿತ್ತು. ಮೋದಿಯವರು ತಾನೇ ಪೊರಕೆ ಹಿಡಿದು ರಸ್ತೆ ಗುಡಿಸಿದ್ದೂ ಕೂಡ ಇದೇ ಕಾರಣಕ್ಕೇ ಅಲ್ಲವೇ? ದೇಶದ ಪ್ರಧಾನಿಯೇ ಪೊರಕೆ ಹಿಡಿದು ಕಸ ಗುಡಿಸುವಾಗ, ನಾವೇಕೆ ಮಾಡಬಾರದು ಎಂಬ ಮನಸ್ಥಿತಿ ಪ್ರಜೆಗಳಲ್ಲಿ ಉಂಟಾಗುತ್ತಿತ್ತು. ನೀವೆಷ್ಟೇ ದೊಡ್ಡವರಾದರೂ – ಕೊರೋನಾ ಮುಂದೆ ನಿಮ್ಮ ಆಟ ಸಾಗದು. ಸುರಕ್ಷಿತವಾಗಿರಿ. ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿಟ್ಟುಕೊಳ್ಳಿ. ನಿಮ್ಮ ಸಮಾಜ, ಊರು, ದೇಶ ಅದಾಗದೇ ಸುರಕ್ಷಿತವಾಗಿರುತ್ತದೆ.

ದಯವಿಟ್ಟು ಕೊರೋನಾವನ್ನು ಗಂಗೂಲಿ ತರಹ ನಿರ್ಲಕ್ಷಿಸಬೇಡಿ. ಪರೀಕ್ಷೆ ಮಾಡಿಸಿ. ಸೂಕ್ತ ವೈದ್ಯಕೀಯ ನೆರವನ್ನು ಪಡೆದುಕೊಳ್ಳಿ. ಆರೋಗ್ಯವಾಗಿರಿ.

ಅಂತೂ ಮೊದಲ ಪಂದ್ಯ ಗೆದ್ದು RCB ಶುಭಾರಂಭ ಮಾಡಿದೆ. ಈಸಲ ಕಪ್ ನಮ್ದೇ !!!

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply