DRDO ದ ಹಿರಿಯ ವಿಜ್ಞಾನಿ ಶ್ರೀ ಸುಧೀಂದ್ರ ಹಾಲ್ದೊಡ್ಡೇರಿಯವರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕನ್ನಡದಲ್ಲಿ ವಿಜ್ಞಾನಿ ಲೇಖನಗಳನ್ನು ಬರೆಯುವವರಲ್ಲಿ ಸುಧೀಂದ್ರವರದ್ದು ಎತ್ತಿದ ಕೈ. ಚಿತ್ರೋದ್ಯಮದ ಚಿತ್ತಾರಗಳು – 1 ಪುಸ್ತಕ ಬಿಡುಗಡೆಯಾದಾಗ ಖುದ್ದು ಸುಧೀಂದ್ರ ಹಾಲ್ದೊಡ್ಡೇರಿ ಅವರ ಮನೆಗೆ ಹೋಗಿ ಪುಸ್ತಕವನ್ನು ಕೊಟ್ಟು ಅವರ ಆಶೀರ್ವಾದ ಪಡೆದು ಬಂದಿದ್ದೆವು. ತುಂಬಾ ಚನ್ನಾಗಿ ಮನಸಾರೆ ಮಾತಾಡಿಸಿದ್ದರು. ಚಿತ್ರೋದ್ಯಮದ ಚಿತ್ತಾರಗಳು -2 ಪುಸ್ತಕದ ಹಿಂಭಾಗದಲ್ಲಿ ನಮ್ಮ ಪುಸ್ತಕವನ್ನು ಓದಿ ಹರಸಿದ ಒಂದಷ್ಟು ಹಿರಿಯ ಸೆಲೆಬ್ರಿಟಿಗಳ ಫೋಟೋಗಳನ್ನು ಹಾಕಿದ್ದೇವೆ. ಸುಧೀಂದ್ರ ಅವರ ನಗುಮುಖದ ಫೋಟೋ ಅದರಲ್ಲಿ ಎದ್ದು ಕಾಣುತ್ತಿತ್ತು. ಕಳೆದ ಹದಿನೈದು ದಿನಗಳ ಹಿಂದಷ್ಟೇ ನನ್ನ ಸ್ನೇಹಿತರಾದ ನಿವೃತ್ತ ಸೈನಿಕ ಜಯರಾಮ್ ಅವ್ರು ಕೂಡ ಇವರೊಡನೆ ಸ್ವಲ್ಪ ಹೊತ್ತು ಫೋನಿನಲ್ಲಿ ಮಾತಾಡಿದ್ದರು. ಇವತ್ತು ಅಕಸ್ಮಾತ್ತಾಗಿ ದೊರೆತ ಸುದ್ದಿ – ಸುಧೀಂದ್ರ ಹಾಲ್ದೊಡ್ಡೇರಿಯವರು ನಮ್ಮೊಡನೆ ಇಲ್ಲ ಎಂಬುದು ಜೀರ್ಣಿಸಿಕೊಳ್ಳಲು ಕೂಡ ಆಗುತ್ತಿಲ್ಲ.
ಸುಧೀಂದ್ರ ಹಾಲ್ದೊಡ್ಡೇರಿ ಅವರ ಪರಿಚಯವಾದದ್ದೇ ಒಂದು ಪವಾಡ. ನನ್ನ ಕಾದಂಬರಿಯೊಂದು ಸೆಲ್ಫ್ ಪಬ್ಲಿಶ್ ಅಡಿಯಲ್ಲಿ ಪ್ರಕಟವಾಗಿತ್ತು. ಸುಧೀಂದ್ರ ಅವರ ನೂರಾರು ಲೇಖನಗಳನ್ನು ಸೆಲ್ಫ್ ಪಬ್ಲಿಶ್ ಅಡಿಯಲ್ಲಿ ಪುಸ್ತಕವಾಗಿ ಪಬ್ಲಿಶ್ ಮಾಡಬೇಕೆಂಬ ಅಸೆ ಅವರಿಗಿತ್ತು. ಸೆಲ್ಫ್ ಪಬ್ಲಿಷಿಂಗ್ ಮಾಡುವುದು ಹೇಗೆ ಎಂದು ಅವರು ನನ್ನನ್ನು ಕೇಳಿದ್ದರು. ಆಗ ಅವರೊಡನೆ ಫೋನಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಮಾತಾಡಿ ನನಗೆ ತಿಳಿದಿದ್ದ ಒಂದಷ್ಟು ಮಾಹಿತಿಯನ್ನು ಅವರಿಗೆ ಕೊಟ್ಟಿದ್ದೆ. ಆ ರೀತಿ ಶುರುವಾದ ನಮ್ಮ ಸ್ನೇಹ ಅವರ ಫೋಟೋವೊಂದು ನನ್ನ ಚಿತ್ರೋದ್ಯಮದ ಚಿತ್ತಾರಗಳು -2 ಪುಸ್ತಕದ ಮೇಲೆ ಪ್ರಿಂಟ್ ಆಗುವವರೆಗೂ ಬೆಳೆದಿತ್ತು. ಮುಂದಿನ ವಾರ ಮತ್ತೊಮ್ಮೆ ಅವರ ಮನೆಗೆ ಹೋಗಿ ಭಾಗ – 2 ಪುಸ್ತಕವನ್ನು ಕೊಟ್ಟು ಬರಬೇಕೆಂಬ ಯೋಚನೆ ಇತ್ತು. ಹತ್ತಾರು ಸಂಶೋಧನೆಗಳನ್ನು ಮಾಡಿದ್ದ, ಸಾವಿರಾರು ವಿಜ್ಞಾನ ಲೇಖನಗಳನ್ನು ಬರೆದಿದ್ದ ಅವರ ಮೆದುಳು ನಿಷ್ಕ್ರಿಯಗೊಂಡು ಅವರು ಭೌತಿಕವಾಗಿ ಇಲ್ಲವೆಂಬ ಸುದ್ದಿಯನ್ನು ಅರಗಿಸಿಕೊಳ್ಳಲೂ ಆಗುತ್ತಿಲ್ಲ.
ನಿಮ್ಮ ಅತಿ ಜನಪ್ರಿಯ ಅಂಕಣ “ನೆಟ್ ನೋಟ” ದ ಮೂಲಕ ನೀವು ಎಂದೆಂದೂ ನಮ್ಮೊಡನೆ ಇಲ್ಲೇ ಇರ್ತೀರ ಸರ್. ಲವ್ ಯು ಫಾರ್ ಎವರ್ ಸರ್.