ಕನ್ನಡ ಚಿತ್ರರಂಗ ಕಂಡ ವೀರಬಾಹು ನಟ ಎಂ.ಪಿ.ಶಂಕರ್

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ, ೧೯೬೫ ರಲ್ಲಿ ತೆರೆ ಕಂಡ ಸತ್ಯ ಹರಿಶ್ಚಂದ್ರ ಚಿತ್ರದ ಈ ಜನಪ್ರಿಯ ಗೀತೆಯ ಕುರಿತು ತಿಳಿಯದವರು ಯಾರಾದರು ಇದ್ದಾರೆಯೇ? ಈ ಚಿತ್ರದ ಪ್ರಮುಖ ಆಕರ್ಷಣೆಯೇ ವೀರಬಾಹು ಎಂದ ತಕ್ಷಣ ಮೊದಲು ನೆನಪಿಗೆ ಬರುವುದೇ ನಟ ಎಂ.ಪಿ.ಶಂಕರ್. ಇವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಪ್ರತಿಭೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಭೂತಯ್ಯನ ಮಗ ಅಯ್ಯು, ಭೂ ಲೋಕದಲ್ಲಿ ಯಮರಾಜ ದಂತಹ ವಿಭಿನ್ನ ಚಿತ್ರಗಳಲ್ಲಿ ನಟಿಸಿದ್ದರಲ್ಲದೆ ಚಿತ್ರ ರಂಗದಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರಾಗಿಯು ಕೂಡ ಗುರುತಿಸಿಕೊಂಡಿದ್ದರು. ಚಿತ್ರ ರಂಗಕ್ಕೆ ಸಂಬಂಧಿಸಿದ ಪ್ರತಿ ವಿಷಯಗಳನ್ನು ಚೆನ್ನಾಗಿ ತಿಳಿದಿದ್ದರಲ್ಲದೆ ಕಾಡು, ಪರಿಸರ ಸಂರಕ್ಷಣೆ ಮತ್ತು ವನ್ಯ ಜೀವಿಗಳ ರಕ್ಷಣೆಯ ಕುರಿತು ಅಪಾರ ಕಾಳಜಿಯನ್ನು ಹೊಂದಿದ್ದರು ಮತ್ತು ವನ್ಯ ಜೀವಿಗಳಿಗೆ ಸಂಬಂಧಿಸಿದ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದಾರೆ.

     ಅಗಸ್ಟ್ ೨೦, ೧೯೩೫ ರಂದು ಪುಟ್ಟ ಲಿಂಗಪ್ಪ ಮತ್ತು ಗಂಗಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಭರಣಿ ನಕ್ಷತ್ರದಲ್ಲಿ ಜನಿಸಿದ ಇವರ ಪೂರ್ಣ ಹೆಸರು ಮೈಸೂರು ಪುಟ್ಟ ಲಿಂಗಪ್ಪ ಶಂಕರ್. ಆದರೆ ನನಗೆ ಇವರ ಬಾಲ್ಯದ ಮತ್ತು ಶಿಕ್ಷಣದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗದ ಕಾರಣ ಇಲ್ಲಿ ಬರೆಯಲು ಸಾಧ್ಯವಾಗಿಲ್ಲ. ಚಿಕ್ಕಂದಿನಿಂದಲೂ ನಾಟಕಗಳಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದ ಇವರಿಗೆ ಪಾತ್ರವನ್ನು ನಿರ್ವಹಿಸಲು ಅವಕಾಶ ಸಿಗಲಿಲ್ಲ.

 ಮೈಸೂರಿನ ಬನುಮಯ್ಯ ಪ್ರೌಢಶಾಲೆಯಲ್ಲಿ ಶಿಕ್ಷಣವನ್ನು ಪಡೆದಿದ್ದ ಇವರು ತಮ್ಮ ಶಾಲೆಯ ವಾರ್ಷಿಕೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟ ನಾಟಕದಲ್ಲಿ ನಿರ್ವಹಿಸಿದ ಕಾಡು ಕುರುಬನ ಪಾತ್ರದಿಂದ ತಮ್ಮ ಶಾಲೆಯಲ್ಲಿ ನೆಚ್ಚಿನ ವಿದ್ಯಾರ್ಥಿಯಾಗಿ ಪ್ರಸಿದ್ಧಿಯನ್ನು ಪಡೆದಿದ್ದರು. ಆದರೂ ತಮ್ಮ ಜೀವನದ ನಿರ್ವಹಣೆಗೆ ಮೈಸೂರಿನ ವಿದ್ಯುತ್ ಶಕ್ತಿ ಕಛೇರಿಯಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸಕ್ಕೆ ಸೇರಿದ್ದರು. ನಂತರ ೧೯೫೫ ರಲ್ಲಿ ಮೈಸೂರಿನ ರೈಲ್ವೇ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸಿದ್ದರು. ಜೊತೆಗೆ ಬಿಡುವಿನ ವೇಳೆಯಲ್ಲಿ ನಾಟಕಗಳಲ್ಲಿ ಪಾತ್ರವನ್ನು ನಿರ್ವಹಿಸುತ್ತಿದ್ದ ಇವರು ರಂಗಭೂಮಿಯ ಉಳಿಯುವಿಕೆಗಾಗಿ, ಬೆಳವಣಿಗೆಗಾಗಿ ಭರಣಿ ಕಲಾ ತಂಡ ಎಂಬ ನಾಟಕ ಮಂಡಳಿಯನ್ನು ಕಟ್ಟಿದ್ದರು.

ಈ ಕಲಾ ತಂಡದ ಅಡಿಯಲ್ಲಿ ಗೌತಮ ಬುದ್ಧ,ಸೋಹ್ರಾಬ್ ರುಸ್ತುಂ, ಗದಾಯುದ್ಧ ಮತ್ತು ಕನಕದಾಸ ನಾಟಕಗಳನ್ನು ಪ್ರದರ್ಶಿಸಿದ್ದರಲ್ಲದೆ ಪಾತ್ರಗಳನ್ನು ನಿರ್ವಹಿಸಿದ್ದರು. ಆದರೆ ಇವರ ತಂದೆಗೆ ತಮ್ಮ ಮಗ ಚಿತ್ರ ರಂಗವನ್ನು ಪ್ರವೇಶಿಸಬೇಕು ಎಂಬ ಅಪೇಕ್ಷೆ ಮೇರೆಗೆ ೧೯೬೨ ರಲ್ಲಿ ತೆರೆ ಕಂಡ ನಟ ಉದಯ್ ಕುಮಾರ್ ನಟನೆಯ ರತ್ನ ಮಂಜರಿ ಚಿತ್ರದಲ್ಲಿ ನಟಿಸುವುದರ ಮೂಲಕ ಕನ್ನಡ ಚಿತ್ರರಂಗವನ್ನು ನಿಚ್ಚಳವಾಗಿ ಪ್ರವೇಶಿಸಿದರು.

( ಮುಂದುವರೆಯುವುದು )

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply